ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಲ್ ಟೈಟ್ ಪ್ಯಾತೆ ಮತ್ತು ಬಿರಾದಾರ

Last Updated 17 ಜನವರಿ 2019, 19:45 IST
ಅಕ್ಷರ ಗಾತ್ರ

‘ಫುಲ್‌ ಟೈಟ್‌’ ಪಾತ್ರಗಳಲ್ಲಿ ಬಿರಾದಾರ ಅವರ ನಟನೆಯನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಕಷ್ಟದ ಕೆಲಸವಲ್ಲ. ಏಕೆಂದರೆ, ‘ಟೈಟ್’ ಪಾತ್ರಗಳನ್ನು ಅವರು ನಿಭಾಯಿಸುವ ರೀತಿಯೇ ಹಾಗಿರುತ್ತದೆ. ಅವರ ಹಾವ–ಭಾವ, ಅವರ ಮಾತಿನ ಶೈಲಿ ಸ್ಮೃತಿಪಟಲದಲ್ಲಿ ಅಚ್ಚೊತ್ತಿರುತ್ತದೆ.

ಈಗ ಬರೀ ‘ಟೈಟ್’ ಪಾತ್ರಗಳನ್ನು ಮಾಡುವುದಷ್ಟೇ ಅಲ್ಲ ಎಂದು ಬಿರಾದಾರ ಅವರು ‘ಫುಲ್ ಟೈಟ್’ ಸಿನಿಮಾವೊಂದರಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಹೆಸರು ‘ಫುಲ್ ಟೈಟ್ ಪ್ಯಾತೆ’.

‘ಇದರಲ್ಲಿ ಇರುವುದು ಮಂಡ್ಯ ಜಿಲ್ಲೆಯ ಮಳವಳ್ಳಿಯ ಭಾಷೆ. ನನ್ನ ಊರು ಬೀದರ್. ಸಿನಿಮಾ ಸಂಭಾಷಣೆಯಲ್ಲಿ ಮಳವಳ್ಳಿಯ ಭಾಷೆಯನ್ನೇ ಬಳಸಬೇಕು ಎಂದು ನಿರ್ದೇಶಕರು ಹೇಳಿದ್ದರು’ ಎಂದು ಬಿರಾದಾರ್ ತಿಳಿಸಿದರು. ಚಿತ್ರದ ಬಗ್ಗೆ ಮಾಹಿತಿ ನೀಡಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮೊದಲು ಮಾತನಾಡಿದ್ದೇ ಬಿರಾದಾರ್.

‘ಈ ಸಿನಿಮಾದಲ್ಲಿ ಪಾತ್ರದ ಅಗತ್ಯಗಳಿಗೆ ತಕ್ಕಂತೆ ಕಲಾವಿದರ ಆಯ್ಕೆ ನಡೆದಿದೆ. ತಂದೆ–ಮಗನಿಗೆ ಆಗಿಬರದ ಕಥೆಯ ಎಳೆ ಚಿತ್ರದಲ್ಲಿದೆ’ ಎಂದರು. ಚಿತ್ರದ ನಿರ್ಮಾಪಕರು ‘ನಾವೇ’! ಹಾಗಂತ ಚಿತ್ರದ ಪೋಸ್ಟರ್‌ನಲ್ಲಿ ಬರೆಯಲಾಗಿದೆ. ‘ನಾವೇ’ ಅಂದರೆ ಚಿತ್ರತಂಡದ ಹಲವು ಸದಸ್ಯರು. ಅವರೆಲ್ಲ ಅಷ್ಟಿಷ್ಟು ಹಣ ಹಾಕಿದ್ದಾರೆ.

ಚಿತ್ರದ ಕಥೆ ಸಿಕ್ಕ ಬಗೆಯನ್ನು ವಿವರಿಸಿದರು ನಿರ್ದೇಶಕ ಎಸ್.ಎಲ್.ಜಿ. ಪುಟ್ಟಣ್ಣ. ‘ನಮ್ಮ ಅಜ್ಜಿಯ ಊರಿನಲ್ಲಿ ವ್ಯಕ್ತಿಯೊಬ್ಬರು ಯಾವಾಗಲೂ ಕುಡಿದು ಹಾಸ್ಯ ಮಾಡುತ್ತಿರುತ್ತಾರೆ. ಅವರು ಜೀವನದಲ್ಲಿ ಬಹಳ ನೊಂದಿದ್ದರೂ, ಅವರಲ್ಲಿ ಹಾಸ್ಯಕ್ಕೆ ಕೊರತೆ ಇರುವುದಿಲ್ಲ. ಅವರ ಬಳಿ ಹೋಗಿ, ಅವರಿಂದಲೇ ಕಥೆ ಕೇಳಿಸಿಕೊಂಡಿದ್ದೇವೆ’ ಎಂದರು ಪುಟ್ಟಣ್ಣ.

ತಮ್ಮ ಕಥೆ ಹೇಳಿದ್ದಕ್ಕಾಗಿ ಪುಟ್ಟಣ್ಣ ಮತ್ತು ತಂಡ ಅವರಿಗೆ ‘ಎಣ್ಣೆ’ಗೆ ಒಂಚೂರು ಕಾಸನ್ನು ಸಹ ಕೊಟ್ಟಿದೆಯಂತೆ. ‘ಫುಲ್ ಟೈಟ್...’ ಚಿತ್ರೀಕರಣ ಮಂಡ್ಯ, ಬೆಂಗಳೂರಿನಲ್ಲಿ ನಡೆದಿದೆ. ಚಿತ್ರದ ಸೆನ್ಸಾರ್ ಕೆಲಸ ಇನ್ನೂ ಆಗಿಲ್ಲ.

ಕುಡಿತದಿಂದ ಯಾವ ಸಮಸ್ಯೆಯೂ ಪರಿಹಾರ ಆಗುವುದಿಲ್ಲ ಎಂಬುದು ಚಿತ್ರದ ಒಂದು ಸಾಲಿನ ಸಾರಾಂಶ ಎಂದು ತಂಡ ಹೇಳಿಕೊಂಡಿದೆ. ಮಹೇಶ್ ಶ್ರೀಧರ್ ಛಾಯಾಗ್ರಹಣ, ರೇಂಜು ಎಂ.ಎವಿ ಮತ್ತು ಸಂಜೀವ್ ಸಂಗೀತ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT