ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗರಾಜ್‌ ಭಟ್ಟರ ಇನ್ನೊಂದು ‘ಗಾಳಿಪಟ’

Last Updated 19 ಜನವರಿ 2019, 8:58 IST
ಅಕ್ಷರ ಗಾತ್ರ

ಬೆಂಗಳೂರು:ನಿರ್ದೇಶಕ ಯೋಗರಾಜ್‌ ಭಟ್‌ ಅವರು ಇನ್ನೊಂದು ‘ಗಾಳಿಪಟ’ ಹಾರಿಸಲು ಸಜ್ಜಾಗಿದ್ದಾರೆ.

ಅವರದೇ ನಿರ್ದೇಶನದ ‘ಗಾಳಿಪಟ’ ಚಿತ್ರ ಬಿಡುಗಡೆಯಾಗಿ 11 ವರ್ಷಗಳ ಬಳಿಕ ಅವರು ‘ಗಾಳಿಪಟ2’ ಚಿತ್ರ ನಿರ್ದೇಶಿಸುತ್ತಿದ್ದಾರೆ. ಆದರೆ, ಹಳೆಯ ಗಾಳಿಪಟದಲ್ಲಿದ್ದ ತಾರಾಗಣ ಇದರಲ್ಲಿಲ್ಲ. ಬದಲಿಗೆ ಶರಣ್‌, ರಿಷಿ ಹಾಗೂ ಲೂಸಿಯಾ ಪವನ್‌ ಮುಖ್ಯ ಪಾತ್ರದಲ್ಲಿ ಕಾಣಿಸಲಿದ್ದಾರೆ.

ಶರ್ಮಿಳಾ ಮಾಂಡ್ರೆ ಹಾಗೂ ಸೋನಲ್‌ ಮಾಂಥೆರೊ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಇಬ್ಬರು ನಾಯಕಿಯರು ಚಿತ್ರದಲ್ಲಿ ಇರಲಿದ್ದು, ಕತೆಯ ಪ್ರಕಾರ ಒಬ್ಬಾಕೆ ಚೀನಾ ದೇಶದವಳು, ಇನ್ನೊಬ್ಬಳು ಅಂತರರಾಷ್ಟ್ರೀಯ ಮಾಡೆಲ್‌. ಚೀನಾದಿಂದಲೇ ನಟಿಯೊಬ್ಬಳನ್ನು ತರುವ ಪ್ರಯತ್ನ ನಡೆಯುತ್ತಿದೆ ಎಂಬ ಮಾಹಿತಿಯನ್ನೂ ಭಟ್‌ ನೀಡಿದರು.

‘ಗಾಳಿಪಟ 2’ರ ಕತೆಯನ್ನು ಬಿಟ್ಟುಕೊಡದ ಭಟ್ಟರು, ‘ಅದಿನ್ನೂ ಪರಿಷ್ಕರಣೆಯ ಹಂತದಲ್ಲಿದೆ’ ಎಂದರು. ಜೊತೆಗೇ ‘ಹಳೆಯ ಗಾಳಿಪಟದ ಯಾವ ಎಲಿಮೆಂಟ್‌ಗಳೂ ಈ ಸಿನಿಮಾದಲ್ಲಿ ಇರುವುದಿಲ್ಲ. ಇದು ಹೊಚ್ಚ ಹೊಸ ಕತೆ. ರಾಜ್ಯದ ಬೇರೆಬೇರೆ ಭಾಗಗಳನ್ನು ಪ್ರತಿನಿಧಿಸುವ ಯುವಕರ ಕತೆ. ಇಂದಿನ ಯುವ ಸಮುದಾಯದ ಕನಸುಗಳು, ಹತಾಶೆ ಎಲ್ಲವನ್ನೂ ಬಿಚ್ಚಿಡುವ ಕತೆ. ಒಂಬತ್ತು ಹಾಡುಗಳು ಚಿತ್ರದಲ್ಲಿವೆ. ಅವುಗಳ ರೆಕಾರ್ಡಿಂಗ್‌ ನಡೆಯುತ್ತಿದೆ’ ಎಂದರು.

ಚಿತ್ರದಲ್ಲಿ ಅನಂತ ನಾಗ್‌ ಮತ್ತು ರಂಗಾಯಣ ರಘು ಅವರು ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುವರು. ಗುಜರಾತ್‌ನಲ್ಲಿ ಗಳಿಕೆಯಲ್ಲಿ ದಾಖಲೆ ಸೃಷ್ಟಿಸಿದ ‘ಶು ತಾಯು?’ ಎಂಬ ಚಿತ್ರವನ್ನು ನಿರ್ಮಿಸಿರುವ, ಬೆಳಗಾವಿ ಮೂಲದ ಮಹೇಶ್‌ ದಾನಣ್ಣವರ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮಲೇಷ್ಯಾ ಹಾಗೂ ಯುರೋಪ್‌ ರಾಷ್ಟ್ರಗಳಲ್ಲಿ ಒಂದಷ್ಟು ಭಾಗ ಚಿತ್ರೀಕರಣ ನಡೆಯಲಿದೆ ಎಂದೂ ಭಟ್‌ ತಿಳಿಸಿದರು.

ಚಿತ್ರಕ್ಕೆ ಜಯಂತ್‌ ಕಾಯ್ಕಿಣಿ ಅವರು ಸಾಹಿತ್ಯ ಮತ್ತು ಅರ್ಜುನ್‌ ಜನ್ಯ ಸಂಗೀತ ನೀಡಿದ್ದಾರೆ. ಅದ್ವೈತ್‌ ಗುರುಮೂರ್ತಿ ಛಾಯಾಗ್ರಹಣ ಮಾಡಲಿದ್ದಾರೆ. ಬರುವ ಅಕ್ಟೋಬರ್‌ 4ರಂದು ಚಿತ್ರ ಬಿಡುಗಡೆ ಮಾಡಲೇಬೇಕು ಎಂಬ ಗುರಿಯನ್ನೂ ಇಟ್ಟುಕೊಂಡಿದ್ದೇವೆ ಎಂದರು.

ಯೋಗರಾಜ್‌ ಭಟ್‌ ಅವರ ಸಾಹಿತ್ಯ, ಅರ್ಜುನ್‌ ಜನ್ಯ ಸಂಗೀತ ಹಾಗೂ ಶರಣ್‌ ನಟನೆ ಇರುವ ಅನೇಕ ಹಾಡುಗಳು ಈಗಾಗಲೇ ಹಿಟ್‌ ಆಗಿವೆ. ಆದರೆ ಈವರೆಗೆ ಈ ಮೂವರು ಒಂದೇ ಚಿತ್ರದಲ್ಲಿ ಕಾಣಿಸಿಕೊಂಡಿದ್ದಿಲ್ಲ. ‘ಗಾಳಿಪಟ2’ರಲ್ಲಿ ಇವರು ಜೊತೆಯಾಗಿದ್ದರಿಂದ ಕುತೂಹಲ ಇನ್ನಷ್ಟು ಹೆಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT