ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಗೂ ಆಯ್ತು ಗಣಪನ ಮದುವೆ

Last Updated 7 ಜುಲೈ 2018, 20:31 IST
ಅಕ್ಷರ ಗಾತ್ರ

ಹೊಸ ತಲೆಮಾರಿನ ಯುವಕರು ತಮ್ಮ ಸಂಗಾತಿಯನ್ನು ಆರಿಸಿಕೊಳ್ಳುವಾಗ ಪಡುವ ಗೊಂದಲ, ಪಡಿಪಾಟಲು ಅಷ್ಟಿಷ್ಟಲ್ಲ. ಕೈ ತುಂಬಾ ಸಂಬಳ ಬರುವ ಕೆಲಸ, ಇರಲೊಂದು ಪುಟ್ಟ ಮನೆ, ಆದರೆ ಒಬ್ಬಂಟಿ ಜೀವನ... ಊರಿನಲ್ಲಿರುವ ‍ಅಪ್ಪ–ಅಮ್ಮನಿಗೆ ಇರುವ ಒಬ್ಬನೇ ಮಗನಿಗೆ ಆದಷ್ಟು ಬೇಗ ಮದುವೆ ಮಾಡಿ ಸೊಸೆಯನ್ನು ಮನೆ ತುಂಬಿಸಿಕೊಳ್ಳುವ ತವಕ. ಅದಕ್ಕಾಗಿ ತಾವೇ ಮಗನಿಗೆ ಹೊಂದುವಂತಹ ಹುಡುಗಿಗಾಗಿ ಹುಡುಕಾಟ ನಡೆಸುತ್ತಿರುತ್ತಾರೆ.

ಈ ರೀತಿಯ ಕಥಾವಸ್ತುವನ್ನೆ ಇಟ್ಟುಕೊಂಡು ಹೆಣ್ಣು ನೋಡುವ ಕಾರ್ಯಕ್ರಮದ ಸುತ್ತ ‘ಗಣಪನ ಮದುವೆ’ ಕಿರುಚಿತ್ರ ನಿರ್ಮಾಣವಾಗಿದ್ದು, ಮಿಥಿಲಾ ಪ್ರಕಾಶನ ಬ್ಯಾನರ್‌ನಡಿ ಯಶಸ್ವಿಯಾಗಿ ಬಿಡುಗಡೆಗೊಂಡಿದೆ.

ಕೆಲವೇ ನಿಮಿಷಗಳ ಮೀಟಿಂಗ್‌ನಲ್ಲಿ ಹುಡುಗಿಯನ್ನು ಅರ್ಥ ಮಾಡಿಕೊಳ್ಳುವಂತಹ ಅಗ್ನಿಪರೀಕ್ಷೆಗೆ ಗಣಪ ಅಣಿಯಾಗುತ್ತಾನೆ. ಭೇಟಿ ಸಮಯದಲ್ಲಿ ಕೊನೆಯ ಕ್ಷಣದವರೆಗೂ ಅವಳನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನಗಳು ಜೋರಾಗಿಯೆ ಇರುತ್ತವೆ. ಆದರೂ ಹುಡುಗಿಯರು ಮುಂದಿಡುವ ಬೇಡಿಕೆಗಳು, ಷರತ್ತುಗಳು ಅವನನ್ನು ಮಂಕಾಗುವಂತೆ ಮಾಡುತ್ತವೆ.

ಮಲೆನಾಡಿನ ಹುಡುಗಿ ಲಚ್ಚಿಯೊಂದಿಗೆ ಹೊಂದಿಕೊಳ್ಳುವಂಥ ಸಮಯದಲ್ಲಿ ಕತೆಯ ಮುಖ್ಯ ಪಾತ್ರ ಲಚ್ಚಿಯ ಸ್ನೇಹಿತೆ ಪರಧಿ ಬರುತ್ತಾಳೆ.

ಪರಧಿ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ಹುಡುಗಿ. ಇವಳಿಗೆ ಲಚ್ಚಿಯೇ ಪ್ರಪಂಚ. ಲಚ್ಚಿಯನ್ನು ಮದುವೆ ಮಾಡಿಕೊಂಡು ಅವಳ ಪ್ರಪಂಚದಿಂದ ಹೊರಕ್ಕೆ ಕರೆದೊಯ್ಯುಲು ಬಂದವನೇ ಗಣಪನೆಂದು ಭಾವಿಸಿ ಅವನ ಮೇಲೆ ಸಿಟ್ಟು ಮಾಡಿಕೊಳ್ಳುತ್ತಾಳೆ.

ಈ ಮೂವರಲ್ಲಿ ಮದುವೆಗೆ ತಯಾರಾಗುವರು ಯಾರು ಎಂಬುದೇ ಚಿತ್ರಕತೆ.

ಹೆಣ್ಣು ನೋಡಲು ಹೋದಾಗ ನಡೆಯುವ ಸನ್ನಿವೇಶಗಳನ್ನು ಸಾಕಷ್ಟು ಜನ ಹುಡುಗರು ಮುಕ್ತವಾಗಿ ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಅಂತಹ ಕತೆಯ ಎಳೆಯನ್ನು ಚಿತ್ರ ಹೊಂದಿದ್ದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

ಮಲೆನಾಡಿನ ಹಸಿರ ಸಿರಿಯನ್ನು ಜೇಬಿನ್‌ ಟಿ ಮತ್ತು ಸಂದೀಪ್‌ ಎಂ.ಥಾಮಸ್‌ಕ್ಯಾಮೆರಾದಲ್ಲಿ ಸುಂದರವಾಗಿ ಸೆರೆ ಹಿಡಿದಿದ್ದು, ಚಿತ್ರ ನಿರ್ಮಾಣದಲ್ಲಿ ಅವರಿಗಿರುವ ಶಿಸ್ತನ್ನು ತೋರಿಸುತ್ತದೆ.

ಮಲೆನಾಡಿನ ಭಾಷಾ ಶೈಲಿಯಲ್ಲಿ ಪೋಷಕರ ಭಾವನೆಯನ್ನು ಅಭಿವ್ಯಕ್ತಗೊಳಿಸುವಲ್ಲಿ ಚಿತ್ರತಂಡ ಯಶ ಕಂಡಿದೆ. ವಯಸ್ಸಾದ ಕಾಲಕ್ಕೆ ತಂದೆ–ತಾಯಿ ಪಡುವಂತಹ ವ್ಯಥೆಯನ್ನು ಸೂಕ್ಷ್ಮವಾಗಿ ನಿರೂಪಿಸಲಾಗಿದೆ. ಚಿತ್ರ ನೋಡುತ್ತಿದ್ದರೆ ಹುಡುಗರಂತೂ
ಅವರ ಪೋಷಕರನ್ನೊಮ್ಮೆ ನೆನಪಿಸಿಕೊಳ್ಳದೆ ಇರುವುದಿಲ್ಲ.

ಈ ಕಿರುಚಿತ್ರದ ನಿರ್ದೇಶಕ ವಿನಾಯಕ ಕೋಡ್ಸರ. ಇದು ಇವರ ಎರಡನೇ ಕಿರುಚಿತ್ರ. ಸಿನಿಮಾ ಮಾಡುವ ಒಲವಿರಿಸಿಕೊಂಡಿರುವ ಇವರು ಅದಕ್ಕೆ ಅಡಿಪಾಯ ಎಂಬಂತೆ ಕಿರುಚಿತ್ರಗಳನ್ನು ಮಾಡುತ್ತಿದ್ದಾರೆ. ಮೊದಲ ಕಿರುಚಿತ್ರದ ಮೇಕಿಂಗ್‌ ಹಾಗೂ ಇನ್ನೂ ಕೆಲ ವಿಷಯಗಳಲ್ಲಿ ಅವರು ಎಡವಿದ್ದರು. ಆ ಕಾರಣಕ್ಕೆ ಗಣಪನ ಮದುವೆಗೆ ಸಾಕಷ್ಟು ತಯಾರಿ ನಡೆಸಿ ಚಿತ್ರ ಬಿಡುಗಡೆ ಮಾಡಿದ್ದಾರೆ. ಈ ಕಿರುಚಿತ್ರವನ್ನು ಈಗಾಗಲೇ 50,000 ಮಂದಿ ವೀಕ್ಷಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಮದುವೆ ಎಂಬ ಪರಿಕಲ್ಪನೆಯನ್ನು ಇರಿಸಿಕೊಂಡು ವಿಡಂಬನೆ, ಹಾಸ್ಯ ಹಾಗೂ ಸಂದೇಶ ಒಳಗೊಂಡಂತಹ ಸುಂದರ ಕಿರುಚಿತ್ರ ಇದು ಎನ್ನಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT