ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಟೆನ್‌ಬರೊ ‘ಗಾಂಧಿ’ಗೆ 36

Last Updated 19 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರದ್ದು ಈಗ 150ನೇ ಜನ್ಮದಿನದ ವರ್ಷಾಚರಣೆ ಸಂಭ್ರಮವಾದರೆ, ಹಾಲಿವುಡ್‌ನ ರಿಚರ್ಡ್‌ ಅಟೆನ್‌ಬರೊ ನಿರ್ದೇಶನದಲ್ಲಿ ತೆರೆ ಕಂಡ ‘ಗಾಂಧಿ’ ಚಲನಚಿತ್ರಕ್ಕೆ 36ನೇ ವರ್ಷದ ಸಡಗರ.

ಒಟ್ಟು 3.11 ಗಂಟೆಯ ದೀರ್ಘ ಅವಧಿಯ ಚಲನಚಿತ್ರವು ಗಾಂಧೀಜಿಯವರ ಬದುಕಿನ ಪ್ರಮುಖ ಘಟ್ಟಗಳು ಮತ್ತು ಸ್ವಾತಂತ್ರ್ಯ ಚಳವಳಿ ಮೇಲೆ ಬೆಳಕು ಚೆಲ್ಲಿತು. ಅಷ್ಟೇ ಅಲ್ಲ, ಗಾಂಧೀಜಿ ತಮ್ಮೊಳಗೆ ಪುನರ್ಜನ್ಮ ಹೊತ್ತಂತೆ ಅಭಿನಯಿಸಿದ ಗಾಂಧೀಜಿ ಪಾತ್ರಧಾರಿ ಇಂಗ್ಲಿಷ್ ನಟ ಬೆನ್ ಕಿಂಗ್‌ಸ್ಲೆ ಎಲ್ಲರನ್ನೂ ಬೆರಗುಗೊಳಿಸಿದರು. ಪ್ರತಿಷ್ಠಿತ 8 ಆಸ್ಕರ್ ಪ್ರಶಸ್ತಿ ಪಡೆದಿದ್ದು ಅಲ್ಲದೇ ಈಗಲೂ ಅಷ್ಟೇ ಪ್ರಭಾವಶಾಲಿಯಾದ ಗಾಂಧಿ ಚಲನಚಿತ್ರ ಒಂದೆರಡು ವರ್ಷಗಳಲ್ಲಿ ನಿರ್ಮಾಣಗೊಳ್ಳಲಿಲ್ಲ. ಇದಕ್ಕೆ 20 ವರ್ಷಗಳ ಇತಿಹಾಸವಿದೆ.

ಹಾಲಿವುಡ್‌ನವರು ಗಾಂಧಿ ಜೀವನ ಆಧರಿಸಿ ಚಲನಚಿತ್ರ ನಿರ್ಮಿಸಲು ಇಚ್ಛಿಸಿದ್ದಾರೆ ಎಂಬ ವಿಷಯ ಗೊತ್ತಾದಾಗ, ದೇಶದ ಪ್ರಮುಖ ರಾಜಕಾರಣಿಗಳು ಮತ್ತು ಸಂಘಸಂಸ್ಥೆಗಳ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದರು. ಗಾಂಧೀಜಿಯವರನ್ನು ವಿದೇಶಿಯರು ಕೆಟ್ಟದಾಗಿ ಚಿತ್ರಿಸುತ್ತಾರೆ ಎಂಬ ವಾದ ಒಂದೆಡೆಯಿದ್ದರೆ, ಮತ್ತೊಂದೆಡೆ ಚಿತ್ರ ನಿರ್ಮಾಣಗೊಂಡು ತೆರೆ ಕಂಡಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪ್ರಭಾವಿ ನಾಯಕರು ಬೆದರಿಕೆ ಒಡ್ಡಿದರು. ಇಂತಹ ಪರಿಸ್ಥಿತಿಯಲ್ಲಿ ರಿಚರ್ಡ್‌ ಅಟೆನ್‌ಬರೊ ನಿರ್ದೇಶಿಸುವುದಿರಲಿ, ಬೆನ್ ಕಿಂಗ್‌ಸ್ಲೆ ಅಭಿನಯಿಸುವ ನಿರೀಕ್ಷೆಯೂ ಇರಲಿಲ್ಲ.

‘ಗಾಂಧಿ’ ಚಿತ್ರವು 1982ರ ನವೆಂಬರ್ 30ರಂದು ತೆರೆ ಕಂಡಿತು. ಅತ್ಯುತ್ತಮ ಚಲನಚಿತ್ರ, ನಿರ್ದೇಶನ, ನಟ, ಚಿತ್ರಕತೆ, ವಸ್ತ್ರಾಲಂಕಾರ, ಪ್ರಸಧನ ಸೇರಿದಂತೆ ವಿವಿಧ ವಿಭಾಗಗಳಲ್ಲಿ 8 ಆಸ್ಕರ್‌ ಪ್ರಶಸ್ತಿಗಳನ್ನು ಗಳಿಸಿತು. 22 ಮಿಲಿಯನ್ ಡಾಲರ್ ವೆಚ್ಚದಲ್ಲಿ ನಿರ್ಮಿಸಲಾದ ಈ ಚಲನಚಿತ್ರಕ್ಕೆ ಆಗಿನ ಕೇಂದ್ರ ಸರ್ಕಾರವು ಸಹ ಆರ್ಥಿಕ ನೆರವು ನೀಡಿತು.

**

1980ರಲ್ಲಿ ಇನ್ನೇನೂ ಭಾರತಕ್ಕೆ ಬಂದು ಚಿತ್ರೀಕರಣದ ಸಿದ್ಧತೆ ಶುರು ಮಾಡಬೇಕು ಎನ್ನುವ ವೇಳೆಗೆ ಗಾಂಧೀಜಿ ಪಾತ್ರಕ್ಕೆ ಸೂಕ್ತ ನಟನನ್ನು ಆಯ್ಕೆ ಮಾಡುವುದು ರಿಚರ್ಡ್‌ ಅಟೆನ್‌ಬರೊಗೆ ಸವಾಲು ಆಗಿ ಕಾಡತೊಡಗಿತು. ಗಾಂಧೀಜಿಯವರ ಚಹರೆಗೆ ಹೋಲಿಕೆಯುಳ್ಳ ಹಲವು ಜನರ ಸ್ಕ್ರೀನ್ ಟೆಸ್ಟ್ ನಡೆಯಿತು. ಹುಡುಕಾಟ ನಡೆಯಿತು. ಯಾರೂ ಸಿಗಲಿಲ್ಲ. ಎಲ್ಲಾ ಪ್ರಯತ್ನಗಳು ವಿಫಲವಾದಾಗ, ರಿಚರ್ಡ್‌ ಅವರಿಗೆ ಕಾಣಸಿಕ್ಕಿದ್ದು, ಇಂಗ್ಲಿಷ್ ನಟ ಬೆನ್ ಕಿಂಗ್‌ಸ್ಲೆ. ಗಾಂಧೀಜಿ ತರಹದ್ದೇ ಹೋಲಿಕೆಯುಳ್ಳ ಅವರ ಕಣ್ಣು, ಮೂಗು, ಕಿವಿ ಎಲ್ಲವನ್ನೂ ಸೂಕ್ಷ್ಮವಾಗಿ ಕಂಡರು. ಮತ್ತೆ ಹುಡುಕಾಟ ಮುಂದುವರೆಸಲಿಲ್ಲ.

ಬೆನ್ ಕಿಂಗ್‌ಸ್ಲೆ ಇಂಗ್ಲೆಂಡ್‌ನವರಾದರೂ ಮೂಲತಃ ಗುಜರಾತಿ ಎಂಬುದು ವಿಶೇಷ. ಇಂಗ್ಲೆಂಡ್‌ನ ಯಾರ್ಕಶೈರ್‌ನ ಸ್ಕಾರಬರೊದಲ್ಲಿ 1943ರ ಡಿಸೆಂಬರ್ 31ರಂದು ಜನಿಸಿದ ಬೆನ್ ಕಿಂಗ್‌ಸ್ಲೆ ಅವರ ಮೂಲ ಹೆಸರು ಕೃಷ್ಣ ಭಾನಜಿ. ಕೀನ್ಯಾದ ಗುಜರಾತಿ ಕುಟುಂಬದಲ್ಲಿ ಜನಿಸಿದ ವೈದ್ಯ ರಹೀಮತ್‌ಉಲ್ಲಾ ಹಾರ್ಜಿ ಭಾನಜಿ ಬೆನ್‌ನ ತಂದೆಯಾದರೆ, ತಾಯಿ ಇಂಗ್ಲಿಷ್ ನಟಿ ಅನ್ನಾ ಲಿನಾ ಮೇರಿ. ರಂಗಭೂಮಿಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ಬೆನ್ 1960ರಲ್ಲೇ ವಿವಿಧ ನಾಟಕಗಳಲ್ಲಿ ಅಭಿನಯಿಸಿತೊಡಗಿದರು. ಚಲನಚಿತ್ರದಲ್ಲಿ ಅಭಿನಯಿಸುವ ಉಮೇದು ಅವರಿಗೆ ಇತ್ತಾದರೂ ಅದುಸಾಧ್ಯವಾಗಿರಲಿಲ್ಲ.

‘ಗಾಂಧೀಜಿ ಯಾರು ಎಂಬುದು ಪುಸ್ತಕಗಳಲ್ಲಿ ಓದಿದ್ದೆ, ಅವರ ತತ್ವ-ಚಿಂತನೆಗಳನ್ನು ಅರಿತಿದ್ದೆ. ಅವರ ಬಿರುಸಾದ ನಡಿಗೆಯ ದೃಶ್ಯಗಳನ್ನು ವಿಡಿಯೋದಲ್ಲಿ ನೋಡಿದ್ದೆ. ಇಷ್ಟೆಲ್ಲಾ ಆಳ ಅಧ್ಯಯನ ಮಾಡಿದರೂ ಗಾಂಧೀಜಿ ಅವರನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಆಗಲಿಲ್ಲ. ಮೈಮೇಲೆ ಬರೀ ಒಂದು ಬಿಳಿ ಬಟ್ಟೆ ಹಾಕಿಕೊಂಡು, ಲಾಠಿ ಹಿಡಿದು ಬೀದಿಗೆ ಇಳಿದಾಗಲೇ ನಿಜವಾದ ಗಾಂಧಿ ಯಾರು ಎಂಬುದು ಜನರಿಂದ ನನಗೆ ಅರಿವಿಗೆ ಬಂತು.

ಗಾಂಧೀಜಿಯವರಲ್ಲಿ ಜನರು ಕಾಣುತ್ತಿದ್ದ ಆಶಾಭಾವ, ಪ್ರೀತಿ-ವಿಶ್ವಾಸ ಎಲ್ಲವೂ ಗೋಚರವಾಯಿತು. ಕೆಲವರಂತೂ ನಿಜವಾದ ಗಾಂಧೀಜಿ ಪುನಃ ಜನ್ಮತಾಳಿದ್ದಾರೆ ಎಂದು ಭಾವಿಸಿ, ಕೈಕಾಲು ನಮಿಸಲು ಸಹ ಮುಂದಾದರು’ ಎಂದು ಬೆನ್ ಕಿಂಗ್‌ಸ್ಲೆ ನೆನಪಿಸಿಕೊಳ್ಳುತ್ತಾರೆ.

ಬೆನ್ ಪ್ರತಿ ದಿನವೂ ಬೆಳಿಗ್ಗೇನೆ ಏಳಬೇಕಿತ್ತು. ಯೋಗ ಮತ್ತು ಧ್ಯಾನದಿಂದಲೇ ದಿನದ ಆರಂಭ ಆಗುತಿತ್ತು. ಗಾಂಧೀಜಿಯಂತೆ ಮಾತನಾಡುತ್ತ, ಚರಕ ತಿರುಗಿಸುವುದು ರೂಢಿಸಿಕೊಂಡರು. ಚಿತ್ರೀಕರಣ ಪೂರ್ಣಗೊಳ್ಳುವ ವೇಳೆಗೆ ಅವರ ಮೇಲೆ ಗಾಂಧೀಜಿ ವಿಚಾರಗಳು ಗಾಢ ಪ್ರಭಾವ ಬೀರಿದವು. ಎಷ್ಟೋ ವರ್ಷ ಅವರಿಗೆ ಗಾಂಧಿಪಾತ್ರದ ಗುಂಗಿನಿಂದ ಹೊರಬರಲು ಸಾಧ್ಯವಾಗಲಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT