ಬುದ್ಧಿಜೀವಿಗಳಿಗೆ ಡಿಶ್ಯೂಂ ಡಿಶ್ಯೂಂ...

ಬುಧವಾರ, ಮಾರ್ಚ್ 20, 2019
26 °C

ಬುದ್ಧಿಜೀವಿಗಳಿಗೆ ಡಿಶ್ಯೂಂ ಡಿಶ್ಯೂಂ...

Published:
Updated:
Prajavani

‘ಬುದ್ಧಿಜೀವಿಗಳನ್ನೆಲ್ಲ ದೇಶ ಬಿಟ್ಟು ಓಡಿಸಬೇಕು’
– ಯೋಧನ ಮನೆ ಭೇಟಿ ನೀಡಿ ಬಂದ ‘ಬೆಲ್‌ಬಾಟಂ’ ಹೀರೊ ರಿಷಬ್‌ ಶೆಟ್ಟಿ ಹೀಗೆ ಪತ್ತೆದಾರಿ ದಿವಾಕರನ ಶೈಲಿಯಲ್ಲಿ ಡಿಶ್ಕ್ಯಾವ್‌ ಡಿಶ್ಕ್ಯಾವ್‌ ಎಂದು ಪುಂಖಾನುಪುಂಖವಾಗಿ ಮಾತುಗಳನ್ನು ಹೊರಚೆಲ್ಲುತ್ತಿರುವಾಗ ಹಿಂದೆಲ್ಲೋ ನಿಂತಿದ್ದ ಸೂಕ್ಷ್ಮ ಸಂವೇದನೆಯ ನಿರ್ದೇಶಕ ಜಯತೀರ್ಥ ಮನಸ್ಸಿನಲ್ಲಿಯೇ ‘ಕಟ್‌ ಕಟ್..’ ಎಂದು ಹೇಳಿರಬೇಕು. ಪ್ರಗತಿಪರ ಆಲೋಚನೆಗಳ ಮೂಲಕವೇ ಗುರ್ತಿಸಿಕೊಂಡಿರುವ, ಈ ಚಿತ್ರಕ್ಕೆ ಕಥೆ ಬರೆದಿರುವ ಟಿ.ಕೆ. ದಯಾನಂದ, ತಮ್ಮ ಸಿನಿಮಾ ಹೀರೊ ‘ಸ್ವಂತಬುದ್ಧಿ’ಯಿಂದ ಡೈಲಾಗ್‌ಗಳನ್ನು ಕಟ್ಟಿ ಕುಟ್ಟಲು ಶುರುಮಾಡಿದ್ದಕ್ಕೆ ಅಚ್ಚರಿಪಡಬೇಕೋ ಅಥವಾ ಅವರ ಮಾತಿನ ದಾಳಿ ತನ್ನನ್ನೇ ಉದ್ದೇಶಿಸಿ ಇರುವಂತೆನಿಸಿ ಖೇದಪಡಬೇಕೋ ಗೊತ್ತಾಗದೆ ಕೈ ಕೈ ಹಿಸುಕಿಕೊಳ್ಳುತ್ತಿರಬೇಕು. ಬೆಲ್‌ಬಾಟಂ ಪ್ಯಾಂಟಿನ ಹೊಲಿಗೆ ನಿಧಾನಕ್ಕೆ ಬಿಚ್ಚಿಹೋಗುತ್ತಿರುವ ಹಾಗೆ ಅನಿಸಿರಲಿಕ್ಕೂ ಸಾಕು.

ಇತ್ತೀಚೆಗೆ ಹೀಗೆ ಸಾರ್ವಜನಿಕವಾಗಿ ‘ಬುದ್ಧಿಜೀವಿ’ಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿ ತಾವು ಸುಭಗ ಎನಿಸಿಕೊಳ್ಳುವ ಸರ್ಕಸ್‌ಗಿಳಿದಿದ್ದು ರಿಷಬ್‌ ಒಬ್ಬರೇ ಅಲ್ಲ. ‘ನಾತಿಚರಾಮಿ’ ಸಿನಿಮಾ ನಿರ್ದೇಶಕ ಮಂಸೋರೆ ಕೂಡ ತಮ್ಮ ಫೇಸ್‌ಬುಕ್‌ ಫೋಸ್ಟ್‌ನಲ್ಲಿ, ಪುಲ್ವಾಮಾದಲ್ಲಿ ಸೈನಿಕರ ಮೇಲೆ ನಡೆದ ಉಗ್ರಗಾಮಿ ದಾಳಿಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿರುವ ಚರ್ಚೆಗಳ ಕುರಿತು ತಮ್ಮ ಅಭಿಪ್ರಾಯ ದಾಖಲಿಸಿದ್ದರು. ಪರ–ವಿರೋಧ ಎರಡೂ ಗುಂಪುಗಳಿಗೆ ಅರ್ಧರ್ಧ ಕೆ.ಜಿ. (ತಕ್ಕಡಿಯಲ್ಲಿ ತೂಕ ಮಾಡಿ) ಬೈಯುವುದರ ಮೂಲಕ ತಮ್ಮ ‘ಕರೆಕ್ಟ್‌’ ನಿಲುವಿಗೆ ಪುರಾವೆಗಳನ್ನು ಕೊಟ್ಟುಕೊಂಡಿದ್ದರು. ‘ಬುದ್ಧಿಜೀವಿ ನೂರಾರು ಜನರ ಮೆದುಳಿಗೆ ಕೈ ಹಾಕಿ ಅವರ ಮನಸ್ಥಿತಿಯನ್ನು ಕರಪ್ಟ್‌ ಮಾಡಿ ಸೈನಿಕರ ಬಗ್ಗೆ ದ್ವೇಷ ಹುಟ್ಟಿಸುತ್ತಾನೆ’ ಎಂಬುದು ಅವರ ಆಕ್ರೋಶಕ್ಕೆ ಕಾರಣ.

ಈ ಇಬ್ಬರೂ ಅಥವಾ ಇಂಥ ಹಲವರು, ಫೇಸ್‌ಬುಕ್‌ನಲ್ಲಿ ನಿಯಮಿತವಾಗಿ ಸ್ಟೇಟಸ್‌ ಹಾಕುವವರಷ್ಟೇ ಬುದ್ಧಿಜೀವಿಗಳು, ಅವರು ಹಾಕುವ ಮೂರು ಸಾಲುಗಳ ಸ್ಟೇಟಸ್‌ ಮಹಾ ವಿಶ್ಲೇಷಣೆ ಎಂದು ನಂಬಿದಂತಿದೆ. ಇಬ್ಬರ ‘ಬುದ್ಧಿದ್ವೇಷ’ಕ್ಕೂ ಕಾರಣ ಅವರು ಮಾಡಿದ ಸಿನಿಮಾಗಳಲ್ಲಿಯೇ ಸಿಗುತ್ತದೆ ಬಿಡಿ. ಆದರೆ ‘ತಮ್ಮ ಬಂಡವಾಳ ಜನರಿಗೆ ಇನ್ನೂ ಅರ್ಥವಾಗಿಲ್ಲ. ಅವರು ತಮ್ಮಷ್ಟೇ ಬುದ್ಧಿಕೃಶರು’ ಎಂದು ಬಲವಾಗಿ ನಂಬಿದಂತಿರುವ ಇವರು ಮತ್ತೆ ಮತ್ತೆ ಸಾರ್ವಜನಿಕ ವೇದಿಕೆಗಳಲ್ಲಿ ಪ್ರದರ್ಶಿಸುತ್ತಿರುವುದು ಮಾತ್ರ ಇನ್ನೊಂದು ಕಾಮಿಡಿ ಸಿನಿಮಾಗೆ ವಸ್ತುವಾಗಬಲ್ಲದು.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !