‘ಕೋಠೆವಾಲಿ’ಯತ್ತ ಬನ್ಸಾಲಿ ಕಣ್ಣು

7

‘ಕೋಠೆವಾಲಿ’ಯತ್ತ ಬನ್ಸಾಲಿ ಕಣ್ಣು

Published:
Updated:
Deccan Herald

‘ಪದ್ಮಾವತ್‌’ ಸಿನಿಮಾದ ಬಳಿಕ ಕೆಲವು ತಿಂಗಳು ಬ್ರೇಕ್ ತೆಗೆದುಕೊಂಡಿದ್ದ ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಕಣ್ಣು ಮುಂಬೈನ ಕುಖ್ಯಾತ ಮಹಿಳಾ ಗ್ಯಾಂಗ್‌ಸ್ಟರ್ ಗಂಗೂಬಾಯಿ ಕೋಠೆವಾಲಿಯತ್ತ ಬಿದ್ದಿದೆ.

‘ಹೀರಾ ಮಂಡಿ’ ತನ್ನ ಮುಂದಿನ ಸಿನಿಮಾ ಎಂದು ಹೇಳಿಕೊಂಡಿರುವ ಬನ್ಸಾಲಿ, ಅದರ ಕಥೆಯ ಬಗ್ಗೆಯೂ ಈಚೆಗೆ ಹೇಳಿಕೊಂಡಿದ್ದರು. ಈ ಸಿನಿಮಾದ ಪ್ರಮುಖ ಪಾತ್ರಕ್ಕೆ ಪ್ರಿಯಾಂಕಾ ಚೋಪ್ರಾ ಅವರನ್ನು ಕರೆತರುವ ಪ್ರಯತ್ನದಲ್ಲಿ ಅವರಿದ್ದು, ಚಿತ್ರೀಕರಣಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

ಒಂದು ಕಾಲದಲ್ಲಿ ಗಂಗೂಬಾಯಿ ಕೋಠೆವಾಲಿ ಹೆಸರು ಮುಂಬೈನಲ್ಲಿ ಹೆಚ್ಚಾಗಿ ಕೇಳಿಬರುತ್ತಿತ್ತು. ಆಕೆಯನ್ನು ಕಾಮಾಟಿಪುರದ ಮೇಡಂ ಎಂದೂ ಕರೆಯಲಾಗುತ್ತಿತ್ತು. ಆಕೆ ಮೃತಪಟ್ಟು ಸಾಕಷ್ಟು ವರ್ಷಗಳೇ ಉರುಳಿದರೂ ಕಾಮಾಟಿಪುರದ ಹಲವು ಪ್ರದೇಶಗಳಲ್ಲಿ ಆಕೆಯ ಪ್ರತಿಮೆಗಳು ಪ್ರತಿಷ್ಠಾಪನೆಗೊಳ್ಳುತ್ತಿದ್ದವು. ಬದುಕಿದ್ದ ವೇಳೆ ಆಕೆ ಸಾಕಷ್ಟು ವೇಶ್ಯಾವಾಟಿಕೆ ಅಡ್ಡೆಗಳನ್ನು ನಡೆಸುತ್ತಿದ್ದರು. ಗಂಗೂಬಾಯಿಯ ಹೆಸರಿನ ಪ್ರಭಾವದಿಂದಲೇ ಆಕೆಯ ಚೇಲಾಗಳು ಸಾಕಷ್ಟು ವೇಶ್ಯವಾಟಿಕೆ ಅಡ್ಡೆಗಳನ್ನು ನಡೆಸುತ್ತಿದ್ದಾರೆ.

ಇಂತಹ ಹಿನ್ನೆಲೆ ಹೊಂದಿರುವ ಮಹಿಳೆ ಬಗ್ಗೆ ಬನ್ಸಾಲಿ ಸಿನಿಮಾ ಮಾಡಲು ಹೊರಟಿರುವುದು ಒಂದು ರೀತಿಯಲ್ಲಿ ವಿಶೇಷವೇ ಸರಿ. ಹಲವು ತಿಂಗಳುಗಳಿಂದ ಆಕೆಯ ಬಗೆಗಿನ ಸ್ವಾರಸ್ಯಕರ ವಿಚಾರಗಳನ್ನು ತಿಳಿದುಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿರುವ ಅವರು ಅದಕ್ಕಾಗಿ ಆಕೆಯ ಕುರಿತ ಸಮಗ್ರ ಮಾಹಿತಿ ಕಲೆಹಾಕುತ್ತಿದ್ದಾರಂತೆ.

ಗಂಗೂಬಾಯಿಯ ಜೀವನ, ಆಕೆಯ ದಾದಾಗಿರಿಯಿಂದ ಉಂಟಾದ ಪರಿಣಾಮದ ಬಗ್ಗೆ ‘ಹೀರಾ ಮಂಡಿ’ ಸಿನಿಮಾದಲ್ಲಿ ಹೇಳಲಾಗುತ್ತದೆ ಅಂತೆ. ಅವರ ಬಹುತೇಕ ಸಿನಿಮಾಗಳು ವಿವಾದದ ಸುಳಿಗೆ ಸಿಲುಕಿವೆ. ಈ ಹಿಂದೆ ತೆರೆಕಂಡ ಪದ್ಮಾವತ್ ಸಿನಿಮಾಗೂ ಒಂದು ಸಮುದಾಯದಿಂದ ವಿರೋಧದ ಬಿಸಿ ತಟ್ಟಿತು. ಅದು ಸುಖಾಂತ್ಯ ಕಂಡಿತಾದರೂ ವಿವಾದಗಳಿಗೆ ಸಿಲುಕುವ ಅವರ ಬಹುತೇಕ ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಕೋಟಿಗಟ್ಟಲೆ ಹಣ ಗಳಿಸಿದ್ದವು.

‘ಹೀರಾ ಮಂಡಿ’ಯಿಂದಲೂ ಸಾಕಷ್ಟು ವಿರೋಧ ಬರಬಹುದು ಎಂಬ ನಿರೀಕ್ಷೆಗಳಿವೆ. ಬನ್ಸಾಲಿ ಅವರಿಗೆ ಅಭ್ಯಾಸವಾಗಿದೆಯಷ್ಟೆ!

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !