ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಟುಮೂಟೆ: ಮುಗ್ಧ ಪ್ರೀತಿಯ ಕಥೆ

Last Updated 17 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

‘ದಿ ಅದರ್ ಲವ್ ಸ್ಟೋರಿ’ ವೆಬ್ ಸರಣಿಯ ನಿರ್ದೇಶಕಿ ರೂಪಾ ರಾವ್ ನಿರ್ದೇಶಿಸಿರುವ ಮೊದಲ ಸಿನಿಮಾ ‘ಗಂಟುಮೂಟೆ’. ಹದಿನಾರು ವರ್ಷ ವಯಸ್ಸಿನ ಹುಡುಗಿಯ ಪ್ರೀತಿಯ ಕಥೆ ಇದು. ಪ್ರೀತಿಯ ಕಥೆಯನ್ನು ಹೆಣ್ಣಿನ ದೃಷ್ಟಿಯಿಂದ ಹೇಳಿರುವ ಸಿನಿಮಾ ಕೂಡ ಹೌದು ಇದು.

ಈ ಚಿತ್ರವು ಶುಕ್ರವಾರ (ಅ. 18) ತೆರೆಗೆ ಬರುತ್ತಿದೆ. ‘ಈ ಬಗೆಯ ಕತೆ, ಹುಡುಗಿಯ ದೃಷ್ಟಿಕೋನದಿಂದ ಈವರೆಗೂ ತೆರೆಯ ಮೇಲೆ ಬಂದಿಲ್ಲ. ಈ ಚಿತ್ರವನ್ನು ನಾನು ನಿರ್ದೇಶಿಸಿದ್ದೇನೆ ಎಂಬ ಕಾರಣಕ್ಕೆ ಹೀಗೆ ಹೇಳಿಕೊಳ್ಳುತ್ತಿಲ್ಲ. ನಾನು ಸಿನಿಮಾ ಮಾಡುವುದಕ್ಕಿಂತ ಮೊದಲು ಬಹಳಷ್ಟು ಸಿನಿಮಾಗಳನ್ನು ನೋಡಿರುವವಳು. ಪ್ರೌಢಶಾಲೆಯ ಹಂತದಲ್ಲಿ ನಡೆಯುವ ಈ ಬಗೆಯ ಪ್ರೇಮಕಥೆ ಭಾರತದಲ್ಲಿ ಬಂದಿಲ್ಲ. ಇದೇ ನಮ್ಮ ವಿಶೇಷ’ ಎಂದು ಹೇಳುತ್ತಾರೆ ರೂಪಾ.

ಈ ಚಿತ್ರದ ಇನ್ನೊಂದು ವಿಶೇಷವೆಂದರೆ, ಈ ಕಥೆ ನಡೆಯುವ ಕಾಲಘಟ್ಟ. ಇದು 90ರ ದಶಕದಲ್ಲಿ ನಡೆದಿರುವಂತೆ ಚಿತ್ರಿಸಲಾಗಿದೆ. ರೂಪಾ ಅವರು ಆ ಕಾಲಘಟ್ಟವನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಒಂದಿಷ್ಟು ಕಾರಣಗಳಿವೆ. ‘ನವಿರು ಭಾವಗಳನ್ನು ಜೀವಂತಗೊಳಿಸಲು ನಾವು ಆ ಕಾಲಘಟ್ಟಕ್ಕೇ ಹೋಗಬೇಕು. ಈಗ ಮೊಬೈಲ್‌ ಫೋನ್‌ಗಳ ಕಾರಣದಿಂದಾಗಿ, ಇಂಟರ್ನೆಟ್‌ ಕಾರಣದಿಂದಾಗಿ ಆ ರೀತಿಯ ಮುಗ್ಧ ಭಾವ ಕಾಯ್ದುಕೊಳ್ಳುವುದು ಬಹಳ ಕಷ್ಟ’ ಎನ್ನುವುದು ರೂಪಾ ನೀಡುವ ವಿವರಣೆ. ‘ನಾವು ಈ ಸಿನಿಮಾದಲ್ಲಿ ಶಿಕ್ಷಣ ವ್ಯವಸ್ಥೆಯ ಬಗ್ಗೆಯೂ ಸಣ್ಣದಾಗಿ ಪ್ರತಿಕ್ರಿಯಿಸುತ್ತಿದ್ದೇವೆ. ಆ ವ್ಯವಸ್ಥೆ ಆಗ ಇತ್ತು, ಈಗ ಬದಲಾಗಿದೆ. 90ರ ದಶಕವನ್ನು ಆಯ್ಕೆ ಮಾಡಿದ್ದಕ್ಕೆ ಅದೂ ಒಂದು ಕಾರಣ. ಆ ಕಾಲದಲ್ಲಿ ಶಾಲೆ, ಕಾಲೇಜು ಜೀವನ ಅನುಭವಿಸಿದವರಿಗೆ ಈ ಸಿನಿಮಾ ನೆನಪುಗಳ ಮೂಟೆಯನ್ನೇ ಹೊತ್ತು ತರಲಿದೆ’ ಎನ್ನುತ್ತಾರೆ.

ಇಂಥದ್ದೊಂದು ಕಥೆಯನ್ನು ಕಟ್ಟಲು ರೂಪಾ ಅವರಿಗೆ ಎರಡು ಪ್ರಮುಖ ಕಾರಣಗಳು ಇದ್ದವು. ‘ಮೊದಲನೆಯದು ನನ್ನ ಹಾಗೂ ನನ್ನ ಸುತ್ತಲಿನವರ ಜೀವನ. ಕಥೆ ಹೇಳಲೆಂದೇ ಸಿನಿಮಾ ರಂಗಕ್ಕೆ ಬಂದವಳು ನಾನು. ಆದರೆ, ನಾನು ನನ್ನ ಸುತ್ತ ಕಾಣುತ್ತಿದ್ದ ಕಥೆಗಳು ತೆರೆಯ ಮೇಲೆ ಕಾಣಿಸುತ್ತಿರಲಿಲ್ಲ. ಅಂತಹ ಕಥೆಗಳಿಗೆ ಪ್ರಾತಿನಿಧ್ಯ ಸಿಗುತ್ತಿಲ್ಲ ಅನಿಸಿತು. ಹಾಗಾಗಿ ಈ ಸಿನಿಮಾ’ ಎನ್ನುತ್ತಾರೆ ಅವರು. ‘ಅಷ್ಟೇ ಅಲ್ಲ, ಈಗ ಬರುತ್ತಿರುವ ಕಥೆಗಳೆಲ್ಲ ಹುಡುಗರ ದೃಷ್ಟಿಯಿಂದ ಜೀವ ತಳೆದಿವು. ಹೆಣ್ಣನ್ನು ಕೇಂದ್ರವಾಗಿ ಇರಿಸಿಕೊಂಡು ಏಕೆ ಸಿನಿಮಾ ಮಾಡುತ್ತಿಲ್ಲ? ಹೆಣ್ಣು ಕೂಡ ಒಂದು ಮನುಷ್ಯ ಜೀವ ಅಲ್ಲವೇ? ಹಾಗೆ ಆಲೋಚಿಸುತ್ತಿದ್ದಾಗ, ನನ್ನ ಸುತ್ತಮುತ್ತ ನಡೆಯುವ ಕಥೆಗಳು ನನ್ನನ್ನು ಕಾಡಿದವು. ಈ ಕಾಡುವಿಕೆ ಕೂಡ ಗಂಟುಮೂಟೆ ಸಿನಿಮಾ ರೂಪುಗೊಳ್ಳಲು ಕಾರಣವಾಯಿತು’ ಎಂದರು. ನಿಶ್ಚಿತ್ ಕೊರೊಡಿ ಮತ್ತು ತೇಜು ಬೆಳವಾಡಿ ಇದರ ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ.

‘ಮೊದಲು ವೆಬ್‌ ಸರಣಿ ನಿರ್ದೇಶಿಸಿ, ಈಗ ಸಿನಿಮಾ ಮಾಧ್ಯಮಕ್ಕೆ ಬಂದಿದ್ದಕ್ಕೆ ಕಾರಣ ಏನು’ ಎಂಬ ಪ್ರಶ್ನೆಗೆ: ‘ದಿ ಅದರ್ ಲವ್ ಸ್ಟೋರಿ ಕಥೆಯನ್ನು ವೆಬ್ ಮಾಧ್ಯಮದಲ್ಲಿ ಹೇಳಿದೆ, ಸಿನಿಮಾ ರೂಪದಲ್ಲಿ ಹೇಳಿದ್ದರೆ, ಅದನ್ನು ನೋಡಲು ಚಿತ್ರಮಂದಿರಕ್ಕೆ ಹೆಚ್ಚಿನವರು ಬರುತ್ತಿರಲಿಲ್ಲ. ಅದು ಬಹಳ ಬೋಲ್ಡ್ ಕತೆ. ಅಲ್ಲದೆ, ಆ ವೆಬ್ ಸರಣಿಯು ನನಗೊಂದು ಪ್ರಯೋಗ ಕೂಡ ಆಗಿತ್ತು. ನಾನು ಕಥೆ ಹೇಳಬಲ್ಲೆನಾ, ವೀಕ್ಷಕರನ್ನು ಹಿಡಿದು ಕೂರಿಸಬಲ್ಲೆನಾ ಎಂಬ ಪರೀಕ್ಷೆಗೆ ನನ್ನನ್ನು ಆ ಸರಣಿಯ ಮೂಲಕ ಒಡ್ಡಿಕೊಂಡಿದ್ದೆ’ ಎಂದರು. ಹಲವು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿರುವುದು, ನ್ಯೂಯಾರ್ಕ್‌ ಇಂಡಿಯನ್‌ ಸಿನಿಮೋತ್ಸವದಲ್ಲಿ ‘ಅತ್ಯುತ್ತಮ ಚಿತ್ರಕಥೆ’ ಪ್ರಶಸ್ತಿ ಬಾಚಿಕೊಂಡಿರುವುದು ಈ ಚಿತ್ರದ ಹೆಚ್ಚುಗಾರಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT