ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವ, ತುಡಿತದ ಗಂಟುಮೂಟೆ

Last Updated 11 ಜೂನ್ 2019, 11:42 IST
ಅಕ್ಷರ ಗಾತ್ರ

‘ಗಂಟುಮೂಟೆ’ ಎಂದರೆ ಸಾಮಾನು ಸರಂಜಾಮು ಎಂದರ್ಥ. ಆದರೆ, ಜನರಿಗೆ ಪಂಗನಾಮ ಹಾಕಿ ಗಂಟುಮೂಟೆ ಕಟ್ಟುವವರ ಸಂಖ್ಯೆ ಸಮಾಜದಲ್ಲಿ ದಿನೇ ದಿನೇ ಹೆಚ್ಚುತ್ತಿದೆ. ಇದೇ ಹೆಸರಿನ ಕನ್ನಡ ಚಿತ್ರವೊಂದುನ್ಯೂಯಾರ್ಕ್‌ ಇಂಡಿಯನ್ ಚಲನ ಚಿತ್ರೋತ್ಸವದಲ್ಲಿ ‘ಬೆಸ್ಟ್‌ ಸ್ಕ್ರೀನ್‌ ಪ್ಲೇ’ ಪ್ರಶಸ್ತಿ ಪಡೆದಿರುವುದು ಹೊಸ ಸುದ್ದಿ.

ಈ ಕುರಿತು ಮಾಹಿತಿ ಹಂಚಿಕೊಳ್ಳಲು ನಿರ್ದೇಶಕಿ ರೂಪ ರಾವ್‌ ಚಿತ್ರತಂಡದ ಸಮೇತ ಸುದ್ದಿಗೋಷ್ಠಿಗೆ ಹಾಜರಾಗಿದ್ದರು. ಸಿನಿಮಾದ ಮೇಲಿನ ಮೋಹದಿಂದ ಅವರು ಸಾಫ್ಟ್‌ವೇರ್‌ ಉದ್ಯೋಗವನ್ನೇ ತೊರೆದಿದ್ದಾರಂತೆ. ಸಿನಿಮಾ ಸಂಬಂಧ ವಿದೇಶದಲ್ಲಿ ತರಬೇತಿಯನ್ನೂ ಪಡೆದಿದ್ದಾರೆ. ಚಿತ್ರದ ಟೈಟಲ್‌ನಲ್ಲಿನ ಹಲವು ಅರ್ಥಸಾಧ್ಯತೆಯ ಮೂಲಕವೇ ಸಿನಿಮಾ ಬಗ್ಗೆ ಮಾಹಿತಿ ನೀಡಲು ಯತ್ನಿಸಿದರು.

‘ಎಸ್ಸೆಸ್ಸೆಲಿ ಓದುತ್ತಿರುವ ಹದಿನಾರರ ಹುಡುಗಿಯ ದೃಷ್ಟಿಕೋನದಲ್ಲಿ ಹೆಣೆದ ನವಿರಾದ ಕಥೆ ಇದು. ತೀವ್ರತೆಯಿಂದ ಕೂಡಿದ ಭಾವ, ತುಡಿತಗಳ ಸಮ್ಮಿಲನವೇ ಇದರ ಜೀವಾಳ. ವಿದ್ಯಾಭ್ಯಾಸದ ವೇಳೆಯಲ್ಲಿನ ಒತ್ತಡ, ಶಾಲಾ ವಾತಾವರಣ, ಅಂಕ ಗಳಿಕೆಗಾಗಿ ಸ್ಪರ್ಧೆ, ತರಲೆ, ಇದರ ನಡುವೆ ಕಾಡುವ ಉತ್ಕಟ ಪ್ರೇಮ ಹೀಗೆ ಈ ಎಲ್ಲಾ ಸನ್ನಿವೇಶಗಳು ಸಿನಿಮಾದಲ್ಲಿ ಮೇಳೈಸಿವೆ’ ಎಂದರು ರೂಪ ರಾವ್.

‘ತೊಂಬತ್ತರ ದಶಕದಲ್ಲಿ ಅಂತರ್ಜಾಲ ವ್ಯವಸ್ಥೆ, ಮೊಬೈಲ್‌ ಇರಲಿಲ್ಲ. ಪ್ರಸ್ತುತ ಬಣ್ಣದ ಲೋಕದ ಬದುಕಿನಂತೆ ಯುವ ಮನಸ್ಸುಗಳು ಭ್ರಮೆಯಲ್ಲಿಯೇ ದಿನದೂಡುವುದು ಉಂಟು. ಆದರೆ, ತೆರೆಯ ಮೇಲಿನ ಬದುಕಿನಂತೆ ನೈಜ ಜೀವನ ಇರುವುದಿಲ್ಲ ಎನ್ನುವುದು ವಾಸ್ತವ. ಇದನ್ನೇ ಚಿತ್ರದಲ್ಲಿ ಹೇಳಿದ್ದೇವೆ’ ಎಂದು ವಿವರಿಸಿದರು.

ಬೆಂಗಳೂರು ಮತ್ತು ಮೈಸೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ‘ಟೆಂಟ್ ಸಿನಿಮಾ’ದ ವಿದ್ಯಾರ್ಥಿ ತೀರ್ಥಹಳ್ಳಿ ಮೂಲದ ನಿಶ್ಚಿತ್‍ ಕೊರೋಡಿ ಹಾಗೂ ಹಿರಿಯ ನಟ ಪ್ರಕಾಶ್‍ ಬೆಳವಾಡಿ ಅವರ ಕಿರಿಯ ಪುತ್ರಿ ತೇಜು ಬೆಳವಾಡಿ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಅಪರಾಜಿತ್‌ ಸ್ರಿಸ್‌ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಸಹದೇವ್‍ ಕೆಲವಡಿ ಅವರದು. ಭಾರ್ಗವ್‍ ರಾಜು, ಸೂರ್ಯ ವಸಿಷ್ಠ, ಶರತ್‍ ಗೌಡ, ಶ್ರೀರಂಗ, ಅರ್ಚನಾ ಶ್ಯಾಮ್, ಚಂದನ, ನಮಿತ್ ತಾರಾಗಣದಲ್ಲಿದ್ದಾರೆ. ಓಟ್ಟೊವದ ಇಂಡಿಯನ್ ಫಿಲ್ಮ್ ಫೆಸ್ವಿವಲ್‌ನ ಪ್ರದರ್ಶನಕ್ಕೂ ಈ ಚಿತ್ರ ಆಯ್ಕೆಯಾಗಿದೆ. ಅಮೇಯುಕ್ತಿ ಸ್ಟುಡಿಯೊಸ್‌ನಡಿ ಸಿನಿಮಾ ನಿರ್ಮಿಸಲಾಗಿದೆ. ಮುಂದಿನ ತಿಂಗಳು ಜನರ ಮುಂದೆ ಬರಲು ಚಿತ್ರತಂಡ ಯೋಜನೆ ರೂಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT