ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರುಡಗಮನ ವೃಷಭವಾಹನ ಅಂದರೆ ಏನು ಶೆಟ್ರೆ?!

Last Updated 13 ಮಾರ್ಚ್ 2020, 19:30 IST
ಅಕ್ಷರ ಗಾತ್ರ

‘ಒಂದು ಮೊಟ್ಟೆಯ ಕಥೆ’ ನಂತರ ವೀಕ್ಷಕರಿಗೆ ಮತ್ತೆ ರುಚಿಕರ ಸಿನಿಮಾ ಊಟ ಬಡಿಸಲು ಸಿದ್ಧವಾಗಿರುವ ನಟ, ನಿರ್ದೇಶಕ ರಾಜ್‌ ಬಿ. ಶೆಟ್ಟಿ ‘ಗರುಡಗಮನ ವೃಷಭವಾಹನ’ ಸಿನಿಮಾ ಸಿದ್ಧ‍ಪಡಿಸುತ್ತ ಇದ್ದಾರೆ. ಇದು ಜೂನ್‌ ವೇಳೆಗೆ ತೆರೆಯ ಮೇಲೆ ಕಾಣಿಸಿಕೊಳ್ಳುವಂತೆ ಆಗಬೇಕು ಎನ್ನುವುದು ರಾಜ್ ಅವರ ಉದ್ದೇಶ.

ಅಂದಹಾಗೆ, ಈ ಚಿತ್ರದ ಶೀರ್ಷಿಕೆಯ ಅರ್ಥ ಏನು ಎಂದು ಪ್ರಶ್ನಿಸಿದರೆ ರಾಜ್ ಅವರು ಹೇಳುವುದು ಶಿವ ಮತ್ತು ಮಹಾವಿಷ್ಣುವಿನ ಹೆಸರನ್ನು!

‘ಗರುಡಗಮನ ಅಂದರೆ, ಗರುಡ ಪಕ್ಷಿಯನ್ನು ವಾಹನವನ್ನಾಗಿಸಿಕೊಂಡಿರುವ ವಿಷ್ಣು. ವೃಷಭವಾಹನ ಅಂದರೆ ನಂದಿಯ ಮೇಲೇರಿ ಬರುವ ಶಿವ. ಈ ಚಿತ್ರದ ಶೀರ್ಷಿಕೆಯಲ್ಲಿ ಇರುವುದು ವಿಷ್ಣು ಮತ್ತು ಶಿವನ ಹೆಸರು’ ಎನ್ನುತ್ತಾರೆ ರಾಜ್.

ರೌಡಿಸಂ ಕಥೆ ಇರುವ ಚಿತ್ರಕ್ಕೂ ವಿಷ್ಣು ಮತ್ತು ಶಿವನಿಗೂ ಇರುವ ಸಂಬಂಧ ಏನು ಎಂದು ಪ್ರಶ್ನಿಸಿದರೆ, ಇನ್ನೊಂದು ಸುತ್ತಿನ ವಿವರಣೆ ನೀಡುತ್ತಾರೆ. ‘ಸಿನಿಮಾದ ಎರಡು ಮುಖ್ಯ ಪಾತ್ರಗಳು ವಿಷ್ಣು ಮತ್ತು ಶಿವ ಪ್ರತಿನಿಧಿಸುವ ತತ್ವಗಳನ್ನು ಆಧರಿಸಿವೆ. ವಿಷ್ಣು ಬ್ರಹ್ಮಾಂಡದ ಸ್ಥಿತಿಪಾಲಕ. ಶಿವನು ಲಯಕರ್ತ’ ಎಂದು ಹೇಳುತ್ತಾರೆ. ಸಿನಿಮಾದ ಮುಖ್ಯ ಪಾತ್ರಗಳನ್ನು ಈ ತತ್ವಕ್ಕೆ ಹತ್ತಿರವಾಗಿ ಸೃಷ್ಟಿಸಲಾಗಿದೆಯಂತೆ.

ಎರಡೂ ಮುಖ್ಯ ಪಾತ್ರಗಳು ರೌಡಿಗಳು. ಹಾಗಾಗಿ, ಅವರು ವಿಷ್ಣುವಿನಂತೆಯೂ ಶಿವನಂತೆಯೂ ಹೇಗೆ ಕಾಣಿಸಿಕೊಳ್ಳುತ್ತಾರೆ ಎಂಬ ಗುಟ್ಟನ್ನು ಗುಟ್ಟಾಗಿಯೇ ಇರಿಸಿದ್ದಾರೆ ರಾಜ್.‌

‘ಗರುಡಗಮನ ವೃಷಭವಾಹನ’ ಚಿತ್ರದ ಚಿತ್ರೀಕರಣವು ಪೂರ್ತಿಯಾಗಿ ಮಂಗಳೂರಿನಲ್ಲಿ ನಡೆದಿದೆ. ಚಿತ್ರದ ಸಂಕಲನ ಕೆಲಸ ನಡೆಯುತ್ತಿದ್ದು, ಅದು ಕೂಡ ಬಹುತೇಕ ಪೂರ್ಣಗೊಂಡಿದೆ. ‘ಚಿತ್ರವನ್ನು ಜೂನ್‌ನಲ್ಲಿ ತೆರೆಗೆ ತರಬೇಕು’ ಎಂದು ಅವರು ಹೇಳುತ್ತಾರೆ.

ರಾಜ್ ಮತ್ತು ರಿಷಬ್ ಶೆಟ್ಟಿ ಈ ಚಿತ್ರದ ಪ್ರಮುಖ ಪಾತ್ರಧಾರಿಗಳು. ಇವರಿಬ್ಬರು ನಿರ್ದೇಶಕರೂ ಹೌದಾಗಿರುವ ಕಾರಣ, ಯಾರ ಪ್ರಭಾವ ಯಾರ ಮೇಲೆ ಎಷ್ಟರಮಟ್ಟಿಗೆ ಇತ್ತು ಎನ್ನುವ ಪ್ರಶ್ನೆ ಮೂಡಬಹುದು. ‘ಸಿನಿಮಾ ಕೆಲಸಗಳಲ್ಲಿ ಯಾರ ಪ್ರಭಾವವೂ ಯಾರ ಮೇಲೆಯೂ ಆಗಿಲ್ಲ. ಕೆಲಸದ ವಿಚಾರದಲ್ಲಿ ನನ್ನ ಹಾಗೂ ರಿಷಬ್ ಶೈಲಿ ಸಂಪೂರ್ಣ ಭಿನ್ನ’ ಎಂದು ಆ ಪ್ರಶ್ನೆಗೆ ಉತ್ತರಿಸಿದರು.

ಈ ಚಿತ್ರದಲ್ಲಿ ಕರಾವಳಿಯ ಹುಲಿವೇಷದ ಸನ್ನಿವೇಶಗಳು ಬರುತ್ತವೆ. ಆದರೆ ಇದನ್ನು ಮನರಂಜನೆಯ ಉದ್ದೇಶಕ್ಕೆ ಮಾತ್ರ ಬಳಸಿಕೊಂಡಿಲ್ಲ. ‘ಉಳಿದವರು ಕಂಡಂತೆ’ ಚಿತ್ರದಲ್ಲಿ ಇರುವಂತೆ ಇದರಲ್ಲೂ, ಹುಲಿವೇಷ ಬಹುಮುಖ್ಯ ಅಂಶ. ಕರಾವಳಿಯ ಸಂಸ್ಕೃತಿಯ ಭಾಗವಾಗಿರುವ ಕಾರಣ, ಇದು ಚಿತ್ರದ ಚೌಕಟ್ಟಿನ ಅವಿಭಾಜ್ಯ ಭಾಗ ಎನ್ನುವುದು ಚಿತ್ರತಂಡದ ಹೇಳಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT