ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ದೇಶನಕ್ಕಿಂತ ನಟನೆಯೇ ಕಷ್ಟ: ಗೀತು ಮೋಹನ್‌ದಾಸ್‌

Last Updated 23 ಅಕ್ಟೋಬರ್ 2019, 6:02 IST
ಅಕ್ಷರ ಗಾತ್ರ

ಬೋಲ್ಡ್‌ ಮಾತು, ನೈಜ ನಟನೆ ಮೂಲಕ ಜನಪ್ರಿಯರಾದವರು ಮಲಯಾಳ ನಟಿ, ನಿರ್ದೇಶಕಿ ಗೀತು ಮೋಹನ್‌ದಾಸ್‌. ಇವರ ನಿರ್ದೇಶನದ ಹೊಸ ಚಿತ್ರ ‘ಮೂತ್ತೋನ್’ ಇತ್ತೀಚೆಗೆ ಮುಂಬೈನಲ್ಲಿ ನಡೆದ ‘ಮಾಮಿ’ ಚಿತ್ರೋತ್ಸವದಲ್ಲಿ ಆರಂಭದ ಸಿನಿಮಾ ಆಗಿ ಪ್ರದರ್ಶನಗೊಂಡಿತು. ಈ ಸಿನಿಮಾದಲ್ಲಿ ತನ್ನ ಹಿರಿಯ ಸಹೋದರನನ್ನು ಹುಡುಕಿಕೊಂಡು ಮುಂಬೈಗೆ ಹೋಗುವ ವ್ಯಕ್ತಿಯ ಕತೆಯನ್ನು ಈ ಚಿತ್ರ ಒಳಗೊಂಡಿದ್ದು, ಸಾಮಾಜಿಕ ರಾಜಕೀಯ ಅಂಶ, ಮುಂಬೈನ ರೆಡ್‌ಲೈಟ್‌ ಏರಿಯಾದ ಬದುಕಿನ ಚಿತ್ರಣ ಇದರಲ್ಲಿದೆ. ಈ ಸಿನಿಮಾ ಬಗ್ಗೆ ಗೀತು ಮೋಹನ್‌ದಾಸ್‌ ಇಲ್ಲಿ ಮಾತನಾಡಿದ್ದಾರೆ.

ಮೂತ್ತೋನ್ ಕತೆ ಹುಟ್ಟಿಕೊಂಡಿದ್ದು

ನಾವು ಬರೆದ ಕತೆಗಳು ನಮ್ಮ ಭಾವನೆಗಳಿಗೆ ಹತ್ತಿರವಾಗಿರುತ್ತದೆ. ಅದರ ಒಂದು ಭಾಗವೇ ನಾವೇ ಆಗಿರುತ್ತೇವೆ. ‘ಮೂತ್ತೋನ್’ ಕತೆಯ ಒಂದು ಎಳೆ ನನ್ನನ್ನು ಸಿನಿಮಾ ಮಾಡುವಂತೆ ಮಾಡಿದೆ. ಈ ಸಿನಿಮಾದಲ್ಲಿ ಹುಡುಕಾಟ ಇದೆ. ಒಬ್ಬ ವ್ಯಕ್ತಿ ತನ್ನ ಸಹೋದರನನ್ನು ಹುಡುಕಿಕೊಂಡು ಹೋಗುವುದು ಸಿನಿಮಾ ಕತೆಯಾದರೂ, ಅಲ್ಲಿ ಅವನಿಗೆ ಬೇರೆ ಬೇರೆ ಪ್ರಪಂಚದ ಪರಿಚಯವಾಗುತ್ತದೆ. ಲಕ್ಷದ್ವೀಪದಿಂದ ಹೊರಟ ಆತ, ಮುಂಬೈನಂತಹ ಜಗತ್ತನ್ನು ಹೇಗೆ ನೋಡುತ್ತಾನೆ ಎಂಬುದು ಈ ಸಿನಿಮಾದಲ್ಲಿದೆ.

ಮುಖ್ಯಪಾತ್ರಕ್ಕೆ ನಿವಿನ್‌ ಆಯ್ಕೆ

ನಿವಿನ್‌ ಒಬ್ಬ ಅದ್ಭುತ ನಟ. ಅವರ ನಟನೆಯ ಎಲ್ಲಾ ಚಿತ್ರಗಳನ್ನು ನಾನು ನೋಡಿದ್ದೇನೆ. ನಾನು ಅವರ ಜೊತೆ ಕೆಲಸ ಮಾಡಬೇಕು ಎಂದು ಅಂದುಕೊಳ್ಳುತ್ತಿದ್ದೆ. ಅವರು ಅಷ್ಟು ದೊಡ್ಡ ನಟರಾದರೂ, ಚಿತ್ರೀಕರಣಕ್ಕೆ ಮೊದಲೇ ಮುಂಬೈಗೆ ಬಂದು ನನ್ನ ಜೊತೆ ಸಿನಿಮಾ ಬಗ್ಗೆ ಮಾತನಾಡಿದರು. ಸಿನಿಮಾ ಪಾತ್ರಕ್ಕೆ ಹೇಗೆ ತಯಾರಾಗಬೇಕು ಎಂದು ನನ್ನ ಸಲಹೆ ಕೇಳುತ್ತಿದ್ದರು. ಅವರು ನಿರ್ದೇಶಕರ ನಟ. ಸಿನಿಮಾದ ನಟನಾ ಕಾರ್ಯಾಗಾರಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಆ ಕಾರ್ಯಾಗಾರಗಳಿಂದ ಅವರು ಏನು ಎಂಬುದು ನನಗೆ ಗೊತ್ತಾಯಿತು. ಪೂರ್ವ ತಯಾರಿಯಲ್ಲಿಯೇ ನಟರು ತಯಾರಿ ಮಾಡಿಕೊಂಡರೆ ಸಿನಿಮಾದ ಅರ್ಧ ಕೆಲಸ ಮುಗಿದಂತೆ. ನಿವಿನ್‌ ಅವರಲ್ಲಿ ಆ ಗುಣ ಇದೆ.

ನಿರ್ದೇಶನದ ಸವಾಲು

ಮಹಿಳೆಯಾಗಿದ್ದರಿಂದ ನಿರ್ದೇಶನದಲ್ಲಿ ತೊಂದರೆ, ಸವಾಲುಗಳನ್ನು ಅನುಭವಿಸಿದೆ ಎಂದು ನಾನು ಹೇಳುವುದಿಲ್ಲ. ‘ಮೂತ್ತೋನ್’ ಸಿನಿಮಾದಲ್ಲಿ ಚಿತ್ರೀಕರಣ ಸ್ಥಳದ ಸವಾಲು ಎದುರಿಸಬೇಕಾಯಿತು. ಸಿನಿಮಾದ ಮೊದಲ ಹಂತದ ಚಿತ್ರೀಕರಣ ಲಕ್ಷದ್ವೀಪದಲ್ಲಿ ನಡೆಯಬೇಕಿತ್ತು. ಆದರೆ ಅಲ್ಲಿ ಹವಾಮಾನ ವೈಪರೀತ್ಯದಿಂದ ಚಿತ್ರೀಕರಣವನ್ನು ಕೆಲ ತಿಂಗಳುಗಳ ಕಾಲ ಮುಂದೂಡಬೇಕಾಯಿತು. ನಟಿ ಶೋಭಿತಾ ಧುಲಿಪಾಲ ಇದರಲ್ಲಿ ಸೆಕ್ಸ್‌ ವರ್ಕರ್‌ ಮಹಿಳೆ ಪಾತ್ರ ಮಾಡಿದ್ದಾರೆ. ಮುಂಬೈನ ಸೆಕ್ಸ್‌ ವರ್ಕರ್‌ಗಳ ಜೀವನದ ಬಗ್ಗೆ ಕಾಮಾಟಿಪುರದಲ್ಲಿ ಚಿತ್ರೀಕರಣ ಮಾಡಿರುವುದು. ಅಲ್ಲಿನ ಜನರು ಆತ್ಮೀಯವಾಗಿದ್ದರೂ ಚಿತ್ರೀಕರಣ ಸ್ನೇಹಿ ವಾತಾವರಣ ಇರಲಿಲ್ಲ. ಜನರೇಟರ್‌, ವಿದ್ಯುತ್‌ ಸಮಸ್ಯೆ ಇತ್ತು. ಸಣ್ಣ ಕ್ಯಾಮೆರಾಗಳಲ್ಲಿ ಚಿತ್ರೀಕರಣ ನಡೆಸಬೇಕಾಗಿತ್ತು. ಇನ್ನು ನಿರ್ದೇಶನಕ್ಕಿಂತಲೂ ನಟನೆ ತುಂಬ ಕಷ್ಟ ಎಂಬುದು ನನ್ನ ಭಾವನೆ. ನಟ– ನಟಿಯರ ಮೇಲೆ ಒತ್ತಡ, ಜವಾಬ್ದಾರಿ ಇರುತ್ತದೆ. ನಮಗೆ ತೃಪ್ತಿಯಾಗುವಂತೆ ನಟಿಸುವುದು ಅವರಿಗೂ ಸವಾಲು. ಚಿತ್ರೀಕರಣಕ್ಕೆ ಎರಡು ವರ್ಷ ತೆಗೆದುಕೊಂಡಿದ್ದೇನೆ

ನಟನೆಯಿಂದ ನಿರ್ದೇಶನಕ್ಕೆ...

ನಾನು 20ಕ್ಕೂ ಹೆಚ್ಚು ಮಲಯಾಳ ಚಿತ್ರಗಳಲ್ಲಿ ನಟಿಸಿದ್ದೇನೆ. ಎಷ್ಟು ಜನ ಆ ಸಿನಿಮಾಗಳನ್ನು ನೋಡಿ ಆನಂದಿಸಿದ್ದಾರೋ ಗೊತ್ತಿಲ್ಲ, ಆದರೆ ನನಗಂತೂ ನಾನು ನಟಿಯಾಗಿ ಯಾವತ್ತೂ ಇಷ್ಟವಾಗಲ್ಲ. ನನಗೆ ನಿರ್ದೇಶನದಲ್ಲೇ ಆಸಕ್ತಿ ಇತ್ತು. ನನಗೆ ನಿರ್ದೇಶಕಿಯಾಗಿ ನನ್ನದೇ ಆದ ಒಂದು ಕತೆಯನ್ನು ಹೇಳಬೇಕು ಎಂದು ಆಸೆ ಇತ್ತು. ಈಗ ಅದು ಈಡೇರಿದೆ. ನಾನು ನಟಿಯಾಗಿದ್ದೆ ಎಂಬುದನ್ನೇ ಈಗ ಮರೆತಿದ್ದೇನೆ.

ಅನುರಾಗ್‌ ಕಶ್ಯಪ್‌ ಜೊತೆ ಕೆಲಸ ಮಾಡಿದ ಅನುಭವ

‘ಮೂತ್ತೋನ್’ ಚಿತ್ರದ ಹಿಂದಿ ವರ್ಷನ್‌ಗೆ ಅನುರಾಗ್‌ ಕಶ್ಯಪ್‌ ಸಂಭಾಷಣೆ ಬರೆದಿದ್ದಾರೆ. ಅವರು ಹಾಗೂ ನಾನು ತುಂಬ ವರ್ಷಗಳಿಂದ ಪರಿಚಯ. ಅವರ ತುಂಬ ಸಿನಿಮಾಗಳಲ್ಲಿ ನನ್ನ ಪತಿ ರವಿ ಕೆಲಸ ಮಾಡಿದ್ದಾರೆ. ಅನುರಾಗ್‌ಗೆ ಸ್ಕ್ರಿಪ್ಟ್ ರೆಡಿ ಮಾಡಿ, ನೀಡಿದೆ. ಅವರು ಅದಕ್ಕೆ ಸಂಭಾಷಣೆ ಬರೆದರು. ‘ಮೈ ಮೂತ್ತೋನ್’ ಎಂದು ಹೇಳುತ್ತಾ ಅಷ್ಟೇ ಪ್ರೀತಿಯಿಂದ ಕೆಲಸ ಮಾಡಿದ್ದಾರೆ.

ಮುಂದಿನ ಸಿನಿಮಾ

‘ಗ್ಯಾಂಗ್‌ಸ್ಟರ್‌’ ಸಿನಿಮಾ ಮಾಡುತ್ತಿದ್ದೇನೆ. ಚಿತ್ರಕತೆ ಹಂತದಲ್ಲಿದೆ. ನವೆಂಬರ್‌ನಲ್ಲಿ ‘ಮೂತ್ತೋನ್’ ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ನಂತರ ಹೊಸ ಚಿತ್ರದ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡುತ್ತೇನೆ

ಸಿನಿಮಾದ ಕಮರ್ಷಿಯಲ್ ಗೆಲುವು ಅಥವಾ ಪ್ರಶಸ್ತಿ ಗೆಲ್ಲುವುದು ಮುಖ್ಯನಾ?

ಎರಡೂ ಮುಖ್ಯ. ಯಾವುದೇ ರೀತಿಯ ಪ್ರಶಂಸೆ, ಬಹುಮಾನಗಳು ನಮ್ಮ ಪರಿಶ್ರಮವನ್ನು ಸಾರ್ಥಕ ಮಾಡುತ್ತೆ. ನಮ್ಮನ್ನು ಮುಂದಿನ ಕೆಲಸಕ್ಕೆ ಹುರಿದುಂಬಿಸುತ್ತದೆ. ಒಬ್ಬ ನಿರ್ದೇಶಕಿಗೆ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಹಿಟ್‌ ಆಗುವುದು ಈಗಿನ ಕಾಲಕ್ಕೆ ತುಂಬ ಮುಖ್ಯವಾಗುತ್ತದೆ. ಅದರಿಂದ ಹೆಚ್ಚು ಗುರುತು ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT