ದೆವ್ವದ ‘ಟ್ರಂಕ್’

7

ದೆವ್ವದ ‘ಟ್ರಂಕ್’

Published:
Updated:
ರಿಷಿಕಾ ಶರ್ಮ

‘ನನಗೂ ದೆವ್ವಗಳು ಇರುವ ಅನುಭವವಾಗಿದೆ. ಆದರೆ ಇದು ಸುಳ್ಳೋ, ಸತ್ಯವೋ ಗೊತ್ತಿಲ್ಲ. ಹೆದರಿಕೆಯಲ್ಲೂ ಪ್ರೇಕ್ಷಕರಿಗೆ ರಂಜನೆ ನೀಡುವುದಷ್ಟೇ ನನ್ನ ಕೆಲಸ’

–ಹೀಗೆಂದು ಹೇಳುತ್ತಾ ಮೌನಕ್ಕೆ ಜಾರಿದರು ರಿಷಿಕಾ ಶರ್ಮ. ಪತ್ರಿಕೋದ್ಯಮ ಪದವಿ ಪೂರೈಸಿ ವೆಬ್‌ ತಾಣದೊಂದಿಗೆ ಕೆಲಸ ಮಾಡಿದ ಬಳಿಕ ನಟನೆ, ನಿರ್ದೇಶನದ ಬದುಕಿಗೆ ಕಾಲಿಟ್ಟಿರುವ ಅವರ ಮಾತುಗಳಲ್ಲಿ ಪ್ರೇಕ್ಷಕರ ನಾಡಿಮಿಡಿತ ಅರಿಯುವ ತುಡಿತವಿತ್ತು.

‘ಚರಣದಾಸಿ’, ‘ಭಾರತಿ’, ‘ಸರಸ್ವತಿ’ ಧಾರಾವಾಹಿಯಲ್ಲಿ ನಟಿಸಿರುವ ಅವರು ‘ವಾಸ್ಕೋಡಿಗಾಮ’, ‘ನಡುವೆ ಅಂತರವಿರಲಿ’ ಹಾಗೂ ‘ಸೈಕೋ ಶಂಕ್ರ’ ಸಿನಿಮಾದಲ್ಲೂ ಬಣ್ಣ ಹಚ್ಚಿದ್ದಾರೆ. ಅಭಿನಯದ ಜೊತೆಗೆ ಸಹಾಯಕ ನಿರ್ದೇಶಕಿಯಾಗಿಯೂ ಕೆಲಸ ಮಾಡಿದ್ದಾರೆ. ಮೊದಲ ಬಾರಿಗೆ ಅವರು ನಿರ್ದೇಶಿಸಿರುವ ಹಾರರ್‌ ಚಿತ್ರ ‘ಟ್ರಂಕ್’ ಈಗ ಬಿಡುಗಡೆಯ ಹೊಸ್ತಿಲಿನಲ್ಲಿದೆ. ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ಈ ಚಿತ್ರ ಚಂದನವನದಲ್ಲಿ ತಮಗೆ ಭದ್ರನೆಲೆ ಒದಗಿಸಲಿದೆ ಎನ್ನುವ ವಿಶ್ವಾಸದಲ್ಲಿದ್ದಾರೆ.  

ರಿಷಿಕಾ ಅವರು ಹಿರಿಯ ನಿರ್ದೇಶಕ ದಿವಂಗತ ಜಿ.ವಿ. ಅಯ್ಯರ್‌ ಅವರ ಮೊಮ್ಮಗಳು. ತಾತನ ಚಿತ್ರಗಳನ್ನು ನೋಡುತ್ತಲೇ ಬಣ್ಣದಲೋಕದ ನಂಟು ಬೆಳೆಸಿಕೊಂಡರು. ಅವರ ಹೆಸರನ್ನು ಉಳಿಸುವ ಜವಾಬ್ದಾರಿಯೂ ತಮ್ಮ ಹೆಗಲ ಮೇಲಿದೆ ಎಂಬ ಅರಿವು ಅವರಿಗಿದೆ. ‘ನನ್ನ ತಾತ ನಿರ್ದೇಶಿಸಿರುವ ಚಿತ್ರಗಳೇ ನನಗೆ ಸ್ಫೂರ್ತಿ. ಅವರ ಚಿತ್ರಗಳಲ್ಲಿ ಮುಖ್ಯ ಪಾತ್ರಗಳ ಸುತ್ತವೇ ಕಥೆ ಇರುವುದನ್ನು ಕಾಣಬಹುದು. ಅವರ ಕೆಲವು ಸೂತ್ರಗಳನ್ನು ನನ್ನ ಸಿನಿಮಾದಲ್ಲೂ ಅಳವಡಿಸಿಕೊಂಡಿದ್ದೇನೆ’ ಎಂದು ಹೇಳಲು ಅವರು ಹಿಂಜರಿಯುವುದಿಲ್ಲ.

‘ಟ್ರಂಕ್’ ಉತ್ತರ ಕರ್ನಾಟಕದ ಮನೆಯೊಂದರಲ್ಲಿ ನಡೆಯುವ ಕಥನ. ಘಟನೆಯ ಒಂದು ಎಳೆ ಇಟ್ಟುಕೊಂಡು ಕಥೆ ಹೊಸೆಯಲಾಗಿದೆ. ಟ್ರಂಕ್‌ ತೆರೆದಾಗ ಯಾರೆಲ್ಲರ ಬದುಕಿನಲ್ಲಿ ಪರಿಣಾಮ ಬೀರುತ್ತದೆ ಎಂಬುದನ್ನು ಹೇಳಿದ್ದೇವೆ. ವಿ.ಎಫ್‌.ಎಕ್ಸ್‌ ಇಲ್ಲದೆ ಸಹಜವಾಗಿ ಸೌಂಡ್‌ ಅಳವಡಿಸಿದ್ದೇವೆ’ ಎಂದು ವಿವರಿಸುತ್ತಾರೆ. ‘ಟ್ರಂಕ್’ ಕಥೆ ಒಂದು ಚಿತ್ರಕ್ಕಷ್ಟೇ ಸೀಮಿತಗೊಳ್ಳುವುದಿಲ್ಲವಂತೆ. ಅದರ ಮುಂದುವರಿದ ಭಾಗವೂ ಬರಲಿದೆಯಂತೆ.

‘ನಾವು ಪ್ರಕೃತಿಯ ಮಧ್ಯೆ ಇದ್ದೇವೆ. ನಮ್ಮ ಎಡ, ಬಲದಲ್ಲಿ ಅಗೋಚರ ಶಕ್ತಿಗಳಿವೆ. ಒಳ್ಳೆಯ ಕೆಲಸದಲ್ಲಿ ದೇವರನ್ನು ಕಾಣುತ್ತೇವೆ. ಕೆಟ್ಟ ಕೆಲಸದಲ್ಲಿ ರಾಕ್ಷಸ ‍ಪ್ರವೃತ್ತಿ ಇರುತ್ತದೆ. ಹಾಗಾಗಿಯೇ, ನಾವು ದೈವ ಮತ್ತು ದೆವ್ವ ಎಂದು ಹೆಸರಿಟ್ಟಿದ್ದೇವೆ. ನಂಬಿಕೆ ಜನರಿಗೆ ಬಿಟ್ಟ ವಿಚಾರ. ಚಿತ್ರದಲ್ಲಿ ಜನರ ಕಣ್ಣೊರೆಸುವ ಕೆಲಸ ಮಾಡಿಲ್ಲ’ ಎನ್ನುವುದು ಅವರ ಸ್ಪಷ್ಟೋಕ್ತಿ.

‘ಮನುಷ್ಯ ಸತ್ತಾಗ ಎಲ್ಲಿಗೆ ಹೋಗುತ್ತಾನೆ. ಬೇರೆ ರೂಪದಲ್ಲಿ ಮರಳಿ ಬರುತ್ತಾನೆಯೇ ಎನ್ನುವುದು ಜಿಜ್ಞಾಸೆ. ದುಡ್ಡು ಕೊಟ್ಟ ವೀಕ್ಷಕರಿಗೆ ಮನರಂಜನೆ ನೀಡುವುದಷ್ಟೇ ನಿರ್ದೇಶಕಿಯಾದ ನನ್ನ ಜವಾಬ್ದಾರಿ. ಅದನ್ನು ಅಚ್ಚುಕಟ್ಟಾಗಿ ಮಾಡಿರುವ ಖುಷಿ ಇದೆ’ ಎಂದರು.‌

ಈ ಚಿತ್ರ ನಿರ್ದೇಶನಕ್ಕೂ ಮೊದಲು ಅವರು ಆತ್ಮಗಳ ಸಂಶೋಧಕರೊಟ್ಟಿಗೆ (ಗೋಸ್ಟ್‌ ಹಂಟರ್ಸ್‌) ಉತ್ತರ ಕರ್ನಾಟಕದ ಕೆಲವು ಸ್ಥಳಗಳಿಗೆ ಅಧ್ಯಯನಕ್ಕಾಗಿ ತೆರಳಿದ್ದರಂತೆ. ಚಿತ್ರೀಕರಣ ನಡೆದ ಮನೆಯ ಮುಂಭಾಗ ಅಳವಡಿಸಿದ್ದ ಸಿ.ಸಿ. ಕ್ಯಾಮೆರಾಗಳಲ್ಲಿ ನಿಗೂಢ ದೃಶ್ಯಗಳು ಸೆರೆಯಾಗಿವೆಯಂತೆ. ಆದರೆ, ಅವುಗಳಿಗೆ ಆಕಾರವಿಲ್ಲ. ಆ ವಿಡಿಯೊಗಳನ್ನು ಬಿಡುಗಡೆ ಮಾಡಲು ಅವರು ಸಿದ್ಧತೆ ನಡೆಸಿದ್ದಾರೆ.

‘ಬ್ರಿಟಿಷ್‌ ಪ್ಯಾರನಾರ್ಮಲ್‌ ಸೊಸೈಟಿಯಿಂದ ಪ್ರಮಾಣ ಪತ್ರ ಪಡೆದ ಆತ್ಮಗಳ ಸಂಶೋಧಕರು ಬೆಂಗಳೂರಿನಲ್ಲಿದ್ದಾರೆ. ನಿರ್ದಿಷ್ಟ ಉಪಕರಣಗಳು, ಲೈಟಿಂಗ್‌ ಬಳಸಿ ಅವರು ಆತ್ಮಗಳ ಸಂಶೋಧನೆ ನಡೆಸುತ್ತಾರೆ. ಅವರ ಪ್ರಶ್ನೆಗಳಿಗೆ ಆತ್ಮಗಳು ವಸ್ತುಗಳನ್ನು ಅಲುಗಾಡಿಸುವ ರೂಪದಲ್ಲಿ ಉತ್ತರ ನೀಡಿದ್ದನ್ನು ಕಣ್ಣಾರೆ ಕಂಡಿದ್ದೇನೆ. ಇದು ನಂಬಿಕೆಯ ವಿಚಾರವಷ್ಟೇ’ ಎನ್ನುತ್ತಾರೆ. 

‘ಹಿಂದೆ ಊರಿಂದ ಊರಿಗೆ ಜನರ ತಂಡ ಕಟ್ಟಿಕೊಂಡು ತೆರಳಿ ನಾಟಕಗಳನ್ನು ಪ್ರದರ್ಶಿಸಲಾಗುತ್ತಿತ್ತು. ನನ್ನ ಸಿನಿಮಾ ನಿರ್ದೇಶನದ ಪಯಣವೂ ರಂಗ ಸಂಚಾರದಂತೆ ಇತ್ತು. ಈ ಪರಂಪರೆ ಮುಂದುವರಿಸುವುದು ನನ್ನಾಸೆ. ಚಿತ್ರದಲ್ಲಿ ಕೇವಲ ಸಸ್ಪೆನ್ಸ್‌, ಹಾರರ್‌ ಇಲ್ಲ. ಪ್ರೀತಿ, ಸೆಂಟಿಮೆಂಟ್‌ ಕೂಡ ಮಿಳಿತವಾಗಿದೆ’ ಎನ್ನುತ್ತಾರೆ ಅವರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !