ಸೋಮವಾರ, ಮೇ 17, 2021
23 °C

ಗಿಮಿಕ್ ಸಿನಿಮಾ ವಿಮರ್ಶೆ: ಗಾಂಧಿನಗರದ ಹಳೇ ದೆವ್ವದ ಕಾಟ!

ಕೆ.ಎಚ್. ಓಬಳೇಶ್‌ Updated:

ಅಕ್ಷರ ಗಾತ್ರ : | |

Prajavani

ಚಿತ್ರ: ಗಿಮಿಕ್
ನಿರ್ಮಾಪಕ: ದೀಪಕ್‌ ಸಾಮಿ
ನಿರ್ದೇಶನ: ನಾಗಣ್ಣ
ತಾರಾಗಣ: ಗಣೇಶ್‌, ರೋನಿಕಾ ಸಿಂಗ್‌, ಗುರುದತ್, ಸುಂದರರಾಜ್‌, ರವಿಶಂಕರ್‌ ಗೌಡ, ಶೋಭ್‌ರಾಜ್, ಮಂಡ್ಯ ರಮೇಶ್‌, ವಿಜಯ್‌ ಚೆಂಡೂರ್

ಆಕೆ ಲಾವಣ್ಯವತಿಯಾಗಿರಬೇಕು. ರಾಜನೇ ಅವಳನ್ನು ಮೋಹಿಸಬೇಕು. ಇದಕ್ಕೆ ಅವಳಿಂದ ವಿರೋಧ ಇರಬೇಕು. ಆಕೆಗೊಬ್ಬ ಪ್ರಿಯಕರನಿರಬೇಕು. ಈ ಗುಟ್ಟು ತಿಳಿದು ಇಬ್ಬರನ್ನೂ ರಾಜ ಹತ್ಯೆ ಮಾಡಿಸಬೇಕು. ಅವಳು ಪ್ರೇತಾತ್ಮವಾಗಿ ಅಲೆದಾಡುತ್ತಿರಬೇಕು. ಅವಳಿಂದ ಜನರಿಗೂ ತೊಂದರೆಯಾಗುತ್ತಿರಬೇಕು. ಆಗಲೇ ಹಾರರ್‌ ಕಥಾನಕ ಗರಿಗೆದರುವುದು. ಲಾಗಾಯ್ತಿನಿಂದಲೂ ಕನ್ನಡದ ಪ್ರೇಕ್ಷಕರು ಇಂತಹ ಚಿತ್ರಗಳನ್ನು ನೋಡಿಕೊಂಡೇ ಬರುತ್ತಿದ್ದಾರೆ.

‘ಗಿಮಿಕ್’ ಚಿತ್ರದ್ದು ಇದೇ ಕಥೆ. ಇದು ತಮಿಳಿನ ‘ದಿಲ್ಲುಕು ದುಡ್ಡು’ ಚಿತ್ರದ ಕನ್ನಡ ಅವತರಣಿಕೆ. ಗಾಂಧಿನಗರ ಮತ್ತು ಸ್ತ್ರೀ ದೆವ್ವಗಳಿಗೆ ಬಿಡಿಸಲಾಗದ ನಂಟು. ರಿಮೇಕ್‌ ಚಿತ್ರಗಳಲ್ಲೂ ಹದವಾಗಿ ಮಿಶ್ರಿಣಗೊಳ್ಳುತ್ತದೆ ಈ ಅಂಟು! ಕನ್ನಡದಲ್ಲಿ ದೆವ್ವ ಕೇಂದ್ರಿತ ಪ್ರಯೋಗಗಳಿಗೆ ಕೊರತೆಯಿಲ್ಲ. ಅದನ್ನು ಹಾಸ್ಯಕ್ಕೆ ಒಗ್ಗಿಸುವ ಪ್ರಯತ್ನಗಳೂ ಸಾಕಷ್ಟು ನಡೆದಿವೆ. ಹಾಗಾಗಿ, ವಸ್ತುವಿನ ದೃಷ್ಟಿಯಿಂದ ಗಿಮಿಕ್‌ನಲ್ಲಿ ಹೊಸತನ ಇಲ್ಲ. 

ಮೂಲ ಚಿತ್ರವನ್ನು ಯಥಾವತ್ತಾಗಿ ಕನ್ನಡಕ್ಕೆ ಭಟ್ಟಿ ಇಳಿಸದೆ ಸ್ವಂತಿಕೆ ಉಳಿಸಿಕೊಂಡಿರುವುದೇ ನಿರ್ದೇಶಕ ನಾಗಣ್ಣ ಅವರ ಹೆಗ್ಗಳಿಕೆ. ಹಾರರ್‌ ಸನ್ನಿವೇಶದ ಜೊತೆಗೆ ಪ್ರೀತಿ, ಕನ್ನಡದ ಮೇಲಿನ ಅಭಿಮಾನವನ್ನು ತೆರೆಯ ಮೇಲೆ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಬಡ ಮಧ್ಯಮ ವರ್ಗದ ಬದುಕು ಮಿಳಿತಗೊಂಡಿರುವ ಕಥನದೊಟ್ಟಿಗೆ ಹಾಸ್ಯ ಬೆರೆಸಿ ಸಿನಿಮಾದ ಓಟದ ದಿಕ್ಕು ಬದಲಿಸಲು ಪ್ರಯತ್ನಿಸಿದ್ದಾರೆ. 

ರಾಣಿಯ ಅಪ್ಪ ಆಗರ್ಭ ಶ್ರೀಮಂತ. ಅವಳ ಪ್ರಿಯಕರನೇ  ಗಣಿ. ಆಕೆಯನ್ನು ಮದುವೆಯಾಗಲು ಮುಂದಾಗುತ್ತಾನೆ. ಇದಕ್ಕೆ ಅವಳ ಅಪ್ಪನಿಂದ ವಿರೋಧ. ಕೊನೆಗೆ, ಆತ ಪುರಾತನ ಬಂಗಲೆಯಲ್ಲಿ ಮದುವೆ ಮಾಡಿಕೊಡುವ ನಾಟಕವಾಡಿ ಗಣಿಯನ್ನು ಕೊಲ್ಲಿಸಲು ಯತ್ನಿಸುತ್ತಾನೆ. ಅಲ್ಲಿ ನಕಲಿ ಮತ್ತು ಅಸಲಿ ದೆವ್ವಗಳ ನಡುವೆ ಕಾದಾಟ ನಡೆಯುತ್ತದೆ.

ಮೊದಲಾರ್ಧ ನಾಯಕ ಮತ್ತು ನಾಯಕಿಯ ನಡುವಿನ ಪ್ರೇಮಕ್ಕೆ ಮೀಸಲು. ಇದರ ನಿರೂಪಣೆಯೂ ಸೊರಗಿದೆ. ದ್ವಿತೀಯಾರ್ಧದಲ್ಲಿ ದೆವ್ವದ ಪ್ರವೇಶದೊಂದಿಗೆ ಕಥೆಗೊಂದು ಲಯ ಸಿಗುತ್ತದೆ. ಕೊನೆಗೆ, ಆತ್ಮಶಕ್ತಿಯ ಕಥೆ ಹೇಳುವುದರೊಂದಿಗೆ ಮೌಢ್ಯದ ವೃತ್ತದಿಂದ ಆಚೆ ಜಿಗಿಯುವ, ಪ್ರೇಕ್ಷಕರಿಗೆ ಹೊಸ ಸಂದೇಶ ನೀಡದೆ ಸಿನಿಮಾ ಕೊನೆಯಾಗುತ್ತದೆ.

ನಟ ಗಣೇಶ್‌ ಅವರ ಕಾಮಿಡಿ ಟೈಮಿಂಗ್‌ ಇಲ್ಲಿಯೂ ಮುಂದುವರಿದಿದೆ. ಅದಕ್ಕೆ ತಕ್ಕಂತೆ ರೋನಿಕಾ ಸಿಂಗ್‌ ನಟನೆಯೂ ಸೊಗಸಾಗಿದೆ. ಅಪ್ಪನಾಗಿ ಗುರುದತ್‌ ಇಷ್ಟವಾಗುತ್ತಾರೆ. ಹಾಸ್ಯದ ಪಾಲಿನಲ್ಲಿ ಸುಂದರರಾಜ್‌, ರವಿಶಂಕರ್‌ ಗೌಡ, ಶೋಭ್‌ರಾಜ್, ವಿಜಯ್‌ ಚೆಂಡೂರ್‌, ಮಂಡ್ಯ  ರಮೇಶ್‌ ಪಾಲು ದೊಡ್ಡದು. ವಿಘ್ನೇಶ್‌ ಛಾಯಾಗ್ರಹಣ ಚೆನ್ನಾಗಿದೆ. ಅರ್ಜುನ್‌ ಜನ್ಯ ಸಂಯೋಜನೆಯ ಒಂದು ಹಾಡು ಗುನುಗುವಂತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು