ಲೋಕಲ್‌ ಗಿರ್‌ ಗಿಟ್ಲೆ

7

ಲೋಕಲ್‌ ಗಿರ್‌ ಗಿಟ್ಲೆ

Published:
Updated:

ವೇದಿಕೆ ಮೇಲೆ ಕುರ್ಚಿಗಳ ಸಂಖ್ಯೆಗಿಂತ ಮಾತನಾಡಲು ಸಿದ್ಧರಿದ್ದ ಚಿತ್ರತಂಡದ ಸದಸ್ಯರೇ ಹೆಚ್ಚಿದ್ದರು. ಅವರೆಲ್ಲರೂ ಏನು ಮಾತನಾಡುತ್ತಾರೆ ಎನ್ನುವ ಕುತೂಹಲ ಮಾಧ್ಯಮದವರ ತಲೆಯಲ್ಲಿ ಗಿರ್‌ಗಿಟ್ಲೆ ಹೊಡೆಯುವುದಕ್ಕೆ ಶುರುವಾಯಿತು.

ನಿರ್ದೇಶಕ ರವಿಕಿರಣ್‌, ‘ಚಿತ್ರದಲ್ಲಿ ಆ್ಯಕ್ಷನ್‌ ಇದೆ. ಮಾನವೀಯ ಮೌಲ್ಯದ ಬಗ್ಗೆಯೂ ಹೇಳಿದ್ದೇವೆ’ ಎಂದು ಹೇಳಿ ಕ್ಷಣಕಾಲ ಮೌನಕ್ಕೆ ಜಾರಿದರು. ಬಳಿಕ ಸಾವರಿಸಿಕೊಂಡ ಅವರು, ‘ಗಿರ್‌ಗಿಟ್ಲೆ’ ಚಿತ್ರದಲ್ಲಿ ನಾವು ಹೇಳಲು ಹೊರಟಿರುವ ವಿಷಯ ಸಾಕಷ್ಟು ಚರ್ಚೆಯಾಗಲಿದೆ. ಕ್ಲೈಮ್ಯಾಕ್ಸ್‌ ಎಲ್ಲರ ಎದೆಗೆ ನಾಟಲಿದೆ’ ಎಂದು ಕಥೆಯ ಬಗ್ಗೆ ಕುತೂಹಲ ಮೂಡಿಸಿದರು.

ಸ್ನೇಹಿತರ ಜೊತೆಗೆ ಅಸ್ಸಾಂ ಪ್ರವಾಸಕ್ಕೆ ಹೋದ ವೇಳೆ ಗೆಳೆಯ ಹೇಳಿದ ಘಟನೆಯ ಒಂದು ಎಳೆಯನ್ನೂ ಆಧರಿಸಿ ಚಿತ್ರಕಥೆ ಹೆಣೆಯಲಾಗಿದೆಯಂತೆ. ಭೂಗತ ಲೋಕದ ಚಿತ್ರಣವೂ ಸಿನಿಮಾದಲ್ಲಿದೆ. 

‘ಸಮಾಜದಲ್ಲಿ ಮೋಸ ಮಾಡುವವರು ಹತ್ತಾರು ಮುಖವಾಡ ಧರಿಸಿರುತ್ತಾರೆ. ಇದನ್ನು ಜನರಿಗೆ ಹೇಳುವ ಪ್ರಯತ್ನ ಮಾಡಿದ್ದೇವೆ. ಭಾರತದಲ್ಲಿ ಭಿಕ್ಷುಕರ ಸಂಖ್ಯೆ ಒಂದು ಕೋಟಿಯಷ್ಟಿದೆ. ಅಪರಾಧ ಜಗತ್ತು ಸೃಷ್ಟಿಗೆ ಈ ಮಾಫಿಯಾದ ಕೈವಾಡವೂ ಇದೆ. ಇದನ್ನೂ ಹೇಳಿದ್ದೇವೆ’ ಎನ್ನುವುದು ಚಿತ್ರತಂಡದ ವಿವರಣೆ.

ರಂಗಾಯಣ ರಘು ಅವರು ಸೈಕೊ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗುರು, ಪ್ರದೀಪ್ ಮತ್ತು ಚಂದ್ರು ಮೊದಲ ಬಾರಿಗೆ ನಾಯಕರಾಗಿ ಬಣ್ಣಹಚ್ಚಿದ್ದಾರೆ. ವೈಷ್ಣವಿ ಮತ್ತು ಅದ್ವಿತಿ ಈ ಚಿತ್ರದ ನಾಯಕಿಯರು. 

ಎನ್‌. ಗಿರೀಶ್‌, ಟಿ.ವಿ. ತಿಮ್ಮರಾಜು, ಎಸ್‌. ವೆಂಕಟೇಶ್‌ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಮೂರು ಹಾಡುಗಳಿಗೆ ಲಿಯೊ ಪೀಟರ್ ಸಂಗೀತ ಸಂಯೋಜಿಸಿದ್ದಾರೆ. ಎಸ್‌. ಸುರೇಶ್ ಅವರ ಛಾಯಾಗ್ರಹಣವಿದೆ. 

ಚಿತ್ರದ ಆಡಿಯೊ ಬಿಡುಗಡೆಗೊಳಿಸಿದ ನಟ ವಿನೋದ್‌ ಪ್ರಭಾಕರ್‌, ‘ರವಿಕಿರಣ್‌ ಅವರು ನನಗೊಂದು ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಗಿರ್‌ಗಿಟ್ಲೆ ಚಿತ್ರವೂ ಯಶಸ್ಸು ಗಳಿಸಲಿ’ ಎಂದು ಶುಭ ಕೋರಿದರು. 

ಖಳನಟ ಉದಯ್‌ ಈ ಚಿತ್ರದಲ್ಲಿ ನಟಿಸಿದ್ದಾರೆ. ಇದು ಅವರು ಡಬ್ಬಿಂಗ್‌ ಮಾಡಿದ ಕೊನೆಯ ಚಿತ್ರ. ಸತ್ಯಪ್ರಕಾಶ್‌, ಕೋಟೆ ಪ್ರಭಾಕರ್, ಪೆಟ್ರೋಲ್‌ ಪ್ರಸನ್ನ, ಓಂಪ್ರಕಾಶ್‌, ರಾಕ್‌ಲೈನ್‌ ಸುಧಾಕರ್‌, ಮಿತ್ರ ತಾರಾಗಣದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !