ಹುಡುಗಿ ‘ಕಪ್ಪು’ ಅಂತ ಪ್ರೀತಿಯಿಂದ ಕಾಲೆಳೆಯುತ್ತಿದ್ದರು!

7

ಹುಡುಗಿ ‘ಕಪ್ಪು’ ಅಂತ ಪ್ರೀತಿಯಿಂದ ಕಾಲೆಳೆಯುತ್ತಿದ್ದರು!

Published:
Updated:

ದುಂಡು ಮುಖ, ಆಕರ್ಷಕ ಬಟ್ಟಲು ಕಂಗಳ ಹುಡುಗಿ ಬಿಂದು ರಕ್ಷಿದಿ ‘ಪಡ್ಡಾಯಿ’ ಸಿನಿಮಾದ ನಾಯಕನಟಿ. ರಂಗಭೂಮಿ ಬಗ್ಗೆ ಅದಮ್ಯ ಒಲವು ಬೆಳೆಸಿಕೊಂಡಿರುವ ಇವರು ಉಸಿರಾಡುವುದು ಬಣ್ಣದ ಬದುಕನ್ನೇ; ಧ್ಯೇನಿಸುವುದು ನಟನೆಯನ್ನೇ. ಅಭಿನಯದಿಂದಲೇ ಎಲ್ಲರ ಮನಗೆದ್ದಿರುವ ಈ ಕೃಷ್ಣ ಸುಂದರಿ ಮೊದಲ ಚಿತ್ರ ‘ಪಡ್ಡಾಯಿ’ ತನ್ನ ಬದುಕಿನಲ್ಲಿ ಏನೆಲ್ಲಾ ಬದಲಾವಣೆಗಳನ್ನು ತಂದಿತು ಎಂಬುದನ್ನು ಆಪ್ತವಾಗಿ ಹೇಳಿಕೊಂಡಿದ್ದಾರೆ. ಅಂದಹಾಗೆ, ‘ಪಡ್ಡಾಯಿ’ ಸಿನಿಮಾ ಇಂದಿನಿಂದ (ಜುಲೈ 13) ಕರಾವಳಿಯಲ್ಲಿ ಪ್ರದರ್ಶನಗೊಳ್ಳುತ್ತಿದೆ.

ನನ್ನ ಅಪ್ಪ– ಅಮ್ಮ ಇಬ್ಬರೂ ಕೂಡ ಹವ್ಯಾಸಿ ರಂಗ ಕಲಾವಿದರು. ಹಾಗಾಗಿ, ನನಗೆ ಚಿಕ್ಕಂದಿನಿಂದಲೇ ರಂಗಭೂಮಿಯ ಸಖ್ಯ ದೊರೆಯಿತು. ಬಿಡುವು ಸಿಕ್ಕಾಗಲೆಲ್ಲಾ ನಾಟಕಗಳನ್ನು ನೋಡುತ್ತಿದ್ದೆ. ಆಗ, ರಂಗಭೂಮಿಯ ದಿಗ್ಗಜ ಕಲಾವಿದರ ಜತೆಗೆ ಬೆರೆಯುವ ಅವಕಾಶವೂ ಸಿಗುತ್ತಿತ್ತು. ಬೆಳೆಯುತ್ತಾ ಹೋದಂತೆ ನನ್ನದೆಯೊಳಗೆ ಹಬೆಯಾಡುತ್ತಿದ್ದ ರಂಗಭೂಮಿ ಮೇಲಿನ ಒಲವೂ ಕೂಡ ವಿಸ್ತಾರಗೊಂಡಿತು. ರಂಗದ ಬಗ್ಗೆ ಆಸಕ್ತಿ ಹೆಚ್ಚಿದ ಕಾರಣದಿಂದಲೇ ನಾನು ಪದವಿ ಮುಗಿಸಿದ ತಕ್ಷಣ ನೀನಾಸಂಗೆ ಸೇರಿಕೊಂಡೆ.

ನಾನು 2012–13ನೇ ಸಾಲಿನ ನೀನಾಸಂ ವಿದ್ಯಾರ್ಥಿನಿ. ನನ್ನೊಳಗಿನ ನಟಿಯನ್ನು ತಿದ್ದಿ ತೀಡಿದ್ದು ಅದೇ ರಂಗಸ್ಥಳ. ತರಬೇತಿ ಮುಗಿಸಿದ ನಂತರ ಮೂರು ವರ್ಷಗಳ ಕಾಲ ‘ನೀನಾಸಂ ತಿರುಗಾಟ’ದಲ್ಲಿ ತೊಡಗಿಸಿಕೊಂಡೆ. ಅದೊಂದು ಭಿನ್ನ ಅನುಭವಗಳ ಮೂಟೆ. ಎಂದಿಗೂ ಖಾಲಿಯಾಗದ ಅಕ್ಷಯ ಪಾತ್ರೆ. ಭಿನ್ನ ನಾಟಕಗಳು, ವಿಭಿನ್ನ ಕಲಾವಿದರ ಜತೆಗಿನ ಒಡನಾಟ ನನ್ನ ಅಭಿನಯ ಪ್ರತಿಭೆಗೆ ಮತ್ತಷ್ಟು ಸಾಣೆ ಹಿಡಿಯಿತು. ತಿರುಗಾಟ ಮುಗಿಸಿದ ಮೇಲೆ ಬೇರೆ ಬೇರೆ ರಂಗ ತಂಡಗಳ ಜತೆಗೆ ಕೆಲಸ ಮಾಡಿದೆ. ಒಂದಷ್ಟು ನಾಟಕಗಳನ್ನು ಮಾಡಿದೆ. ಅಷ್ಟರಲ್ಲಾಗಲೇ ಜನರು ನನ್ನ ಅಭಿನಯವನ್ನು ನೋಡಿ ಮೆಚ್ಚಿ, ಪ್ರಶಂಸಿಸುತ್ತಿದ್ದರು. ಆಗೆಲ್ಲಾ ತುಂಬ ಖುಷಿ ಆಗುತ್ತಿತ್ತು.

ಅದೇ ವೇಳೆಗೆ ನಿರ್ದೇಶಕ ಅಭಯ ಸಿಂಹ ಅವರು ‘ಮ್ಯಾಕ್‌ಬೆತ್’ ನಾಟಕ ಆಧರಿಸಿದ ಸಿನಿಮಾ ಮಾಡುತ್ತಿದ್ದಾರೆ ಎಂಬುದು ತಿಳಿಯಿತು. ಸಿನಿಮಾಗಳಲ್ಲಿ ನಟಿಸಬೇಕು ಎಂಬ ಆಲೋಚನೆ ಏನೂ ನನಗೆ ಮೊದಲಿನಿಂದಲೂ ಇರಲಿಲ್ಲ. ಅವಕಾಶ ಸಿಕ್ಕಿದ್ದರಿಂದ ಸಿನಿಮಾದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡೆ. ಅದು ನನ್ನ ವೃತ್ತಿ ಜೀವನದ ಮತ್ತೊಂದು ಮಜಲು. ‘ಪಡ್ಡಾಯಿ’ ಸಿನಿಮಾಕ್ಕಾಗಿ ದುಡ್ಡಿದಿದ್ದು ನನ್ನ ಜೀವನದಲ್ಲಿ ಎಂದಿಗೂ ಮರೆಯಲಾರದ ಕ್ಷಣ. ಅದೊಂದು ಸುಂದರ ಪಯಣ.

ನಾನು ‘ಮ್ಯಾಕ್‌ಬೆತ್’ ಅನ್ನು ಸಾಕಷ್ಟು ಬಾರಿ ಓದಿಕೊಂಡಿದ್ದರೂ ಕೂಡ ಅದನ್ನು ಅಭಿನಯಿಸಬೇಕಿರುವಾಗ ಬೇರೆಯದ್ದೇ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಚಿತ್ರೀಕರಣಕ್ಕೂ ಮುನ್ನ ಚಿತ್ರತಂಡವರೆಲ್ಲರೂ ಕೂಡಿ ಅಭಿನಯಕ್ಕೆ ಪೂರಕವಾಗಿ ಎರಡು ನಿಮಿಷದ ಒಂದು ವಿಡಿಯೊ ಮಾಡಿದೆವು. ಇದರ ಜತೆಗೆ ‘ಮ್ಯಾಕ್‌ಬೆತ್’ಗೆ ಸಂಬಂಧಿಸಿದಂತಹ ಇಂಗ್ಲಿಷ್‌ ಸಿನಿಮಾಗಳನ್ನು ನೋಡಿದೆ. ಎಲ್ಲ ಕಲಾವಿದರೂ ಕೂಡ ಪ್ರತಿನಿತ್ಯವೂ ತಮ್ಮತಮ್ಮ ಕ್ಯಾರೆಕ್ಟರ್ ಸ್ಟಡಿ ಮಾಡುತ್ತಿದ್ದೆವು. ಬೇರೆ ಬೇರೆ ಊರುಗಳಿಗೆ ಹೋದಾಗ ಅಲ್ಲಿನ ಯಾವುದಾದರೂ ಸನ್ನಿವೇಶ/ವ್ಯಕ್ತಿ ನಮ್ಮ ಪಾತ್ರಕ್ಕೆ ಹೊಂದುತ್ತದೆಯೇ ಎಂದು ಸೂಕ್ಷ್ಮವಾಗಿ ಗಮನಿಸುತ್ತಿದ್ದೆವು. ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದರಿಂದ ನನಗೆ ಇವೆಲ್ಲವೂ ತಿಳಿಯುತ್ತಿದ್ದವು. ಇಷ್ಟೆಲ್ಲಾ ತಯಾರಿ ಆದ ನಂತರ ಸ್ಕ್ರಿಪ್ಟ್ ಕೆಲಸ ಶುರು ಆಯಿತು.

ಮೊದಲಿಗೆ ಒರಿಜಿನಲ್ ಸ್ಕ್ರಿಪ್ಟ್ ಅನ್ನು ಕನ್ನಡದಲ್ಲಿಯೇ ಓದಿದೆವು. ನಂತರ ನಮ್ಮ ನಿರ್ದೇಶಕರು ರೂಪಾಂತರಗೊಳಿಸಿದ ಸ್ಕ್ರಿಪ್ಟ್ ಅನ್ನೂ ಓದಿದೆವು. ಅದೂ ಕೂಡ ಕನ್ನಡದಲ್ಲೇ ಇತ್ತು. ಆಮೇಲೆ ಅದರ ತುಳು ರೂಪಾಂತರ ಓದಿದೆವು. ನಂತರ ಮಲ್ಪೆ ತುಳು ಸ್ಕ್ರಿಪ್ಟ್ ಓದಿಕೊಂಡೆವು. ಏಕೆಂದರೆ, ಮಂಗಳೂರು ತುಳು, ಉಡುಪಿ ತುಳು ಹಾಗೂ ಮಲ್ಪೆ ತುಳು ಭಾಷೆಯ ಸ್ಲ್ಯಾಂಗು ಬೇರೆಬೇರೆಯಾಗಿರುತ್ತದೆ. ಒರಿಜಿನಲ್ ಸ್ಕ್ರಿಪ್ಟ್ ಒಂದು ಮೊಗವೀರರ ಬದುಕಿನ ಸ್ಕ್ರಿಪ್ಟ್‌ ಆಗಿ ಬರುವಾಗ ಎಂಟು ಹಂತಗಳನ್ನು ಪೂರೈಸಿತ್ತು. ಆಮೇಲೆ ಚಿತ್ರದ ಚಿತ್ರೀಕರಣ ಶುರುವಾಯಿತು.

ಈ ಸಿನಿಮಾಕ್ಕೆ ‘ಪಡ್ಡಾಯಿ’ ಅಂತ ಹೆಸರಿಡುವ ಯೋಚನೆ ಇರಲಿಲ್ಲ. ‘ಕಡಲ್’ ಎಂದು ಶೀರ್ಷಿಕೆ ಇಡಬೇಕು ಎಂಬುದು ನಿರ್ದೇಶಕರ ಇಂಗಿತವಾಗಿತ್ತು. ಆದರೆ, ಚಿತ್ರದ ಹೆಸರಿನ ನೋಂದಣಿ ಸಮಯದಲ್ಲಿ ಶೀರ್ಷಿಕೆ ಬದಲಾಯಿತು. ಕೊನೆಗೆ ‘ಪಡ್ಡಾಯಿ’ ಅಂತಲೇ ಹೆಸರು ಇಡಲಾಯಿತು.

‘ಪಡ್ಡಾಯಿ’ ಮ್ಯಾಕ್‌ಬೆತ್ ನಾಟಕದ ರೂಪಾಂತರ. ಮ್ಯಾಕ್‌ಬೆತ್ ಬಗ್ಗೆ ನಮಗೆ ಓದಿ ಗೊತ್ತಿದೆ. ಆದರೆ, ಮೊಗವೀರರು ಹೇಗಿರುತ್ತಾರೆ. ಅವರ ಬದುಕು ಬವಣೆ ಎಂತಹದ್ದು ಎಂಬುದನ್ನು ತಿಳಿಯಬೇಕಿತ್ತು. ಅದಕ್ಕಾಗಿ ನಾನು ಅವರೊಟ್ಟಿಗೆ ಕಲೆತು, ಅರಿತುಕೊಳ್ಳುವ ಪ್ರಯತ್ನ ಮಾಡಿದೆ. ಮದುವೆಯಾದ ಹೆಂಗಸಿನಂತೆ ಸೀರೆಯುಟ್ಟು, ಹಣೆಗೆ ಬೊಟ್ಟು ಇಟ್ಟುಕೊಂಡು ಅವರೊಡನೆ ಜೀವಿಸತೊಡಗಿದೆ. ಆಗೆಲ್ಲಾ ಅವರು ಮಾತನಾಡುವ ರೀತಿ, ಕೂರುವ ರೀತಿ, ವ್ಯವಹರಿಸುವ ರೀತಿ, ಮೊಗವೀರರ ಮಡದಿಯರ ಗಡುಸುತನ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೆ. ಆ ಹೆಂಗಸರು ತುಂಬ ಪೋಲಿ ಮಾತುಗಳನ್ನೂ ಆಡುತ್ತಾರೆ. ಆದರೆ, ಅಷ್ಟೇ ಹೃದಯವಂತರು ಕೂಡ ಹೌದು. ನೇರ ನುಡಿಯುವ ಗಟ್ಟಿಗಿತ್ತಿಯರು. ನನ್ನ ವೇಷಭೂಷಣಗಳನ್ನು ನೋಡಿ ಇವಳು ಕೂಡ ನಮ್ಮ ತರಹವೇ ಇದ್ದಾಳಲ್ಲಾ. ಇವಳ ಕಲರ್ ಕೂಡ ನಮ್ಮ ರೀತಿಯೇ ಇದೆ, ಈಕೆ ಹೀರೊಹಿನ್ನಾ? ಎಂದು ನನ್ನ ಕಾಲೆಳೆಯುತ್ತಿದ್ದ ಕಿಲಾಡಿಗಳು ಅವರು! ಹತ್ತು ದಿನ ಮಲ್ಪೆಯಲ್ಲಿ ಇದ್ದೆ. ಅಷ್ಟೂ ದಿನವೂ ನನ್ನನ್ನು ಪ್ರೀತಿಯಿಂದ ನೋಡಿಕೊಂಡರು.

ಇನ್ನು ಸಿನಿಮಾದಲ್ಲಿನ ನನ್ನ ಪಾತ್ರದ ಬಗ್ಗೆ ಹೀಗೆ ಹೇಳಬಹುದು: ಮ್ಯಾಕ್‌ಬೆತ್ ನಾಟಕವನ್ನು ಮೊಗವೀರರ ಬದುಕಿಗೆ ಹೋಲಿಸುತ್ತಾ ಹೋದರೂ ಕೂಡ ಅಲ್ಲಿನ ಲೇಡಿ ಮ್ಯಾಕ್‌ಬೆತ್‌ಗೂ ಇಲ್ಲಿನ ಸುಗಂಧಿ ಪಾತ್ರಕ್ಕೂ ತುಂಬ ವ್ಯತ್ಯಾಸವಿದೆ. ಇದರ ಸಾಮ್ಯತೆ ಇರುವುದು ಆಸೆ, ಅತಿಯಾಸೆ ಎಂಬುದರಲ್ಲಿ. ಅದು ಎಲ್ಲ ಕಡೆಯೂ ಇದ್ದದ್ದೇ ಅಲ್ಲವೇ? ಅಲ್ಲಿ ಲೇಡಿ ಮ್ಯಾಕ್‌ಬೆತ್‌ಗೆ ಬೇರೆ ಹೆಸರಿಲ್ಲ. ಆದರೆ, ಇಲ್ಲಿನ ಸುಗಂಧಿ ಹೆಸರಿಗೂ, ಅವಳ ವ್ಯಕ್ತಿತ್ವಕ್ಕೂ ತುಂಬ ಸಾಮ್ಯತೆ ಇದೆ. ಮಲ್ಪೆಯ ವಾಸನೆಗೂ ಅವಳು ಮನದಲ್ಲಿ ಬಯಸುವ ವಾಸನೆಗೂ ತುಂಬ ರಿಲೇಟ್ ಆಗುತ್ತದೆ. ಗಂಧಿ, ಗಂಧ, ಸುವಾಸನೆ ಎಂಬುದು ಸುಗಂಧಿ ಹೆಸರಿಗೆ ತುಂಬ ಹೋಲಿಕೆಯಾಗುತ್ತದೆ.

ಮೀನುಗಾರರು ಧಕ್ಕೆಗೆ ಹೋಗಿ ಬಂದ ನಂತರ ಅದೇ ಬಟ್ಟೆಯಲ್ಲಿ ಮನೆಯೊಳಗೆ ಓಡಾಡುವುದಿಲ್ಲ, ಅಷ್ಟು ವಾಸನೆ ಇರುತ್ತದೆಯಲ್ಲಾ! ಅದಕ್ಕಾಗಿಯೇ ಸ್ನಾನ ಮಾಡಿಯೇ ಒಳಕ್ಕೆ ಹೋಗುತ್ತಾರೆ. ಆದರೆ, ಸುಗಂಧಿ ಮಾತ್ರ ಅದನ್ನೂ ಮೀರಿದ ಅಂದರೆ, ಸಿರಿತನದ ವಾಸನೆಯನ್ನು ಬಯಸುತ್ತಿರುತ್ತಾಳೆ. ಆಕೆಯ ಮನಸ್ಸು ಯಾವಾಗಲೂ ನಮಗೂ ಯಾವಾಗ ಶ್ರೀಮಂತರ ಘಮಲು ಬರುತ್ತದೆ ಎಂಬುದನ್ನೇ ಚಿಂತಿಸುತ್ತಿರುತ್ತದೆ. ಹಾಗಾಗಿ, ಅವಳ ವ್ಯಕ್ತಿತ್ವಕ್ಕೂ ಅವಳ ಹೆಸರಿಗೂ ತುಂಬ ಸೂಟ್ ಆಗುತ್ತದೆ. ಸುಗಂಧಿ ಅಂದರೆ ಮೀನಿನ ವಾಸನೆಯೂ ಆಯಿತು, ಒಂದು ರೀತಿಯ ಸಿರಿತನದ ಘಮಲನ್ನು ಬಯಸುವ ಪಾತ್ರವೂ ಆಯಿತು. ಈ ಹಂತದಲ್ಲಿ ಏನೆಲ್ಲಾ ನಡೆಯುತ್ತಾ ಹೋಗುತ್ತವೆ ಎಂಬುದೇ ಸಿನಿಮಾ. ಲೇಡಿ ಮ್ಯಾಕ್‌ಬೆತ್ ಕೂಡ ಅದೇರೀತಿ ಅಲ್ಲವೇ? ಅವಳಿಗೆ ಅಧಿಕಾರ, ಆಸ್ತಿ ಎಲ್ಲವೂ ಇರುತ್ತದೆ. ಆದರೂ ಇನ್ನೂ ಜಾಸ್ತಿ ಬೇಕು ಎನ್ನುವ ಆಸೆ ಇರುತ್ತದೆ. ಆ ಕಂಟೆಂಟ್ ಇಲ್ಲೂ ಕೂಡ ಇದೆ.
ಚಿತ್ರದ ಪ್ರತಿಯೊಂದು ಪಾತ್ರವೂ ಕೂಡ ತುಂಬ ಸ್ಟ್ರಾಂಗ್ ಆಗಿ ಮೂಡಿಬಂದಿದೆ. ಚಿತ್ರೀಕರಣದ ಸಂದರ್ಭದಲ್ಲಿ ಎಲ್ಲರೂ ಕಲೆತು, ವಿಚಾರ ವಿನಿಮಯ ಮಾಡಿಕೊಂಡು ಕೆಲಸ ಮಾಡಿದ್ದರಿಂದ ಸಿನಿಮಾ ಅಷ್ಟು ಅದ್ಭುತವಾಗಿ ಮೂಡಿಬಂತು. ಹಿರಿಯರಾದ ಚಂದ್ರಹಾಸ್ ಮತ್ತು ಗೋಪಿನಾಥ್ ಸರ್ ತುಂಬ ಸಲಹೆಗಳನ್ನು ನೀಡಿದರು. ನಾನು ಮ್ಯಾಕ್‌ಬೆತ್ ಅನ್ನು ಓದಿಕೊಂಡಿದ್ದೆ ಅಷ್ಟೇ, ಅವರೆಲ್ಲರೂ ಮ್ಯಾಕ್‌ಬೆತ್ ನಾಟಕದಲ್ಲಿ ಅಭಿನಯಿಸಿದ ಅನುಭವಿಗಳು.

‘ಪಡ್ಡಾಯಿ’ ಸಿನಿಮಾ ಮಾಡಿ ಮುಗಿಸಿದ ನಂತರ ನನ್ನ ಬದುಕಿನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಎಲ್ಲೇ ಹೋದರೂ ಜನ ನನ್ನನ್ನು ಗುರುತು ಹಿಡಿಯುತ್ತಾರೆ. ಮೆಚ್ಚಿಕೊಳ್ಳುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳ ಪ್ರಭಾವ, ಶಕ್ತಿಯನ್ನು ಕಂಡು ನಾನು ಅಕ್ಷರಶಃ ಬೆರಗಾಗಿ ಹೋಗಿದ್ದೇನೆ. ಇವರೆಲ್ಲರ ಸಹಾಯದಿಂದಲೇ ನನಗೊಂದು ಸೆಲಬ್ರಿಟಿ ಎಂಬ ಐಡೆಂಟಿಟಿ ಸಿಕ್ಕಿದೆ.

‘ಪಡ್ಡಾಯಿ’ ನನ್ನ ಮೊದಲ ಸಿನಿಮಾ. ಅವಕಾಶ ಸಿಕ್ಕಿತು. ನಟಿಸಿದೆ. ನನ್ನ ಕೆಲಸ ಮುಗಿಯಿತು ಅಂತೆಲ್ಲಾ ಅಂದುಕೊಂಡಿದ್ದೆ. ಆದರೆ, ಅದಷ್ಟೇ ಅಲ್ಲ ಎಂದು ಆಮೇಲೆ ತಿಳಿಯಿತು. ಪಡ್ಡಾಯಿ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ದೊರಕಿದ ನಂತರ ನನ್ನ ಜವಾಬ್ದಾರಿ ಕೂಡ ತುಂಬ ಹೆಚ್ಚಿತು. ಇಡೀ ತಂಡದ ಶ್ರಮದಿಂದಾಗಿ ‘ಪಡ್ಡಾಯಿ’ ಸಿನಿಮಾ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿತು. ಇಷ್ಟೆಲ್ಲಾ ಆಗಿದ್ದು ಟೀಂ ವರ್ಕ್‌ನಿಂದ ಅಂತ ನನ್ನ ಭಾವನೆ.

 

Tags: 

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !