ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲಯಾಳಂ ಚಿತ್ರಕ್ಕೆ ಎರಡು ಪ್ರಶಸ್ತಿ

ಪಣಜಿ: ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ತೆರೆ
Last Updated 28 ನವೆಂಬರ್ 2018, 20:30 IST
ಅಕ್ಷರ ಗಾತ್ರ

ಪಣಜಿ: ಮಲಯಾಳಂ ಭಾಷೆಯ ಚಿತ್ರ ‘ಈ. ಮ.ಯವ್‌’ (ಈಶೋ ಮರಿಯಂ ಯೌಸೇಪ್‌), ಬುಧವಾರ ಮುಕ್ತಾಯಗೊಂಡ 49ನೆಯ ಭಾರತದ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಎರಡು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತು.

ನಿರ್ದೇಶಕ ಲಿಜೋ ಜೋಸ್‌ ಪೆಲ್ಲಿಷೇರಿ ಅವರು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದರೆ, ನಟ ಚೆಂಬನ್‌ ವಿನೋದ್‌ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾದರು. ಲಿಜೊ ಜೋಸ್‌ ಅವರಿಗೆ ₹ 15 ಲಕ್ಷ ನಗದು ಮತ್ತು ರಜತ ಮಯೂರ ಫಲಕ ನೀಡಿ ಗೌರವಿಸಲಾಯಿತು. ನಟ ಚೆಂಬನ್‌ ವಿನೋದ್‌ ಅವರಿಗೆ ₹ 10 ಲಕ್ಷ ನಗದು ಮತ್ತು ರಜತ ಮಯೂರ ಫಲಕ ನೀಡಿ ಗೌರವಿಸಲಾಯಿತು.

ಚಿತ್ರೋತ್ಸವದ ಅತ್ಯುತ್ತಮ ಚಿತ್ರ ಪ್ರಶಸ್ತಿ ಉಕ್ರೇನ್‌ ದೇಶದ ‘ಡಾನ್‌ಬಾಸ್‌’ ಚಿತ್ರದ ಪಾಲಾಯಿತು. ಈ ಚಿತ್ರದ ನಿರ್ದೇಶಕ ಸೆರ್ಗಿಯಿ ಲೊಝೆನಿಟ್ಸ್. ಚಿತ್ರಕ್ಕೆ ₹ 40 ಲಕ್ಷ ನಗದು ಪುರಸ್ಕಾರ ಮತ್ತು ಸ್ವರ್ಣ ಮಯೂರ ಫಲಕ ನೀಡಲಾಯಿತು. ಪ್ರಶಸ್ತಿ ಮೊತ್ತವನ್ನು ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ಹಿನೊ ಡೆಕೆರ್ಟ್ ಅವರು ಸಮಾನವಾಗಿ ಪಡೆಯಲಿದ್ದಾರೆ.

ಅತ್ಯತ್ತಮ ನಟಿ ಪ್ರಶಸ್ತಿ ಉಕ್ರೇನ್‌ ದೇಶದ ‘ವೆನ್‌ ಟ್ರಿ ಫಾಲ್ಸ್‌’ ಚಿತ್ರದ ನಾಯಕಿ ಅನಸ್ತಿಯಾ ಪುಸ್ಟೊವಿಚ್‌ ಅವರ ಪಾಲಾಯಿತು. ಅವರಿಗೆ ₹ 10 ಲಕ್ಷ ನಗದು ಹಾಗೂ ರಜತ ಮಯೂರ ಫಲಕವನ್ನು ನೀಡಿ ಗೌರವಿಸಲಾಯಿತು.

ವಿಶೇಷ ಜ್ಯೂರಿ ಪುರಸ್ಕಾರಕ್ಕೆ ಚೆಳಿಯನ್‌ ರಾ ನಿರ್ದೇಶನದ ತಮಿಳು ಚಿತ್ರ ‘ಟು ಲೆಟ್‌’ ಹಾಗೂ ಬಲ್ಗೇರಿಯಾ ದೇಶದ ಯಾಕುಟ್‌ ಭಾಷೆಯ ಚಿತ್ರ ‘ಆಗಾ’ ಪಡೆದುಕೊಂಡವು. ‘ಆಗಾ’ ಚಿತ್ರದ ನಿರ್ದೇಶಕರು ಮಿಲ್ಕೊ ಲಾಝರೊವ್‌. ₹ 15 ಲಕ್ಷ ನಗದು ಪ್ರಶಸ್ತಿಯನ್ನು ಈ ಎರಡೂ ಚಿತ್ರಗಳ ನಿರ್ದೇಶಕರು ಸಮಾನವಾಗಿ ಹಂಚಿಕೊಂಡರು.

ಹಿಂದಿ ಚಿತ್ರರಂಗದ ಪ್ರಸಿದ್ಧ ಚಿತ್ರಕಥಾ ಲೇಖಕ ಸಲೀಂ ಖಾನ್‌ ಅವರಿಗೆ ಅವರ ಜೀವಮಾನ ಸಾಧನೆಯನ್ನು ಪರಿಗಣಿಸಿ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಯಿತು. ₹ 10 ಲಕ್ಷ ನಗದು ಹಾಗೂ ರಜತ ಮಯೂರ ಸ್ಮರಣಿಕೆಯನ್ನು ಸಲೀಂ ಖಾನ್‌ ಅವರ ಪುತ್ರ ನಟ ಅರ್ಬಾಜ್‌ ಖಾನ್‌ ಅವರು ರಾಜ್ಯಪಾಲರಾದ ಮೃದುಲಾ ಸಿನ್ಹಾ ಅವರಿಂದ ಸ್ವೀಕರಿಸಿದರು.

ಲಡಾಖಿ ಭಾಷೆಯ ‘ವಾಕಿಂಗ್‌ ವಿತ್‌ ದ ವಿಂಡ್‌’ ಚಿತ್ರ ಐಸಿಎಫ್‌ಟಿ ಯುನೆಸ್ಕೊ ಗಾಂಧಿ ಚಿನ್ನದ ಪದಕಕ್ಕೆ ಭಾಜನವಾಯಿತು. ಪ್ರವೀಣ್‌ ಮೋರ್ಚಾಲೆ ಈ ಚಿತ್ರದ ನಿರ್ದೇಶಕರಾಗಿದ್ದಾರೆ.

ಸಮಾರಂಭದಲ್ಲಿ ಚಿತ್ರನಟರಾದ ಅನಿಲ್‌ ಕಪೂರ್‌, ಕಬೀರ್‌ ಬೇಡಿ, ಇಸ್ರೇಲ್‌ ಚಿತ್ರ ನಿರ್ದೇಶಕ ಡಾನ್‌ ವೋಲ್ಮನ್‌, ಕೇಂದ್ರ ಆಯುಷ್‌ ಖಾತೆ ಸಚಿವ ಶ್ರೀಪಾದ್‌ ನಾಯಕ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT