ಗುರುವಾರ , ಆಗಸ್ಟ್ 11, 2022
24 °C

ಅಕ್ಷಿತ್‌ಗೆ ಅರಸಿ ಬಂದ ಅದೃಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಒಂದು ಕಾಲದ ಸ್ಟಾರ್‌ ನಟ, ‘ಸುಪ್ರೀಂ ಹೀರೋ’ ಶಶಿಕುಮಾರ್‌ ಪುತ್ರ ಅಕ್ಷಿತ್‍ ಶಶಿಕುಮಾರ್ ಬಹುಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ‘ಸೀತಾಯಣ’ ಚಿತ್ರದ ಮೂಲಕ ನಾಯಕನಾಗಿ ಬಣ್ಣದ ಲೋಕಕ್ಕೆ ಅಡಿ ಇಟ್ಟಿದ್ದಾರೆ. ಈ ಚಿತ್ರ ಪೂರ್ಣಗೊಂಡು ಬಿಡುಗಡೆಯ ಹೊಸ್ತಿಲಿನಲ್ಲಿದೆ. ಈ ಚಿತ್ರದ ಬೆನ್ನಲ್ಲೇ ಅಕ್ಷಿತ್‌ಗೆ ಮತ್ತೊಂದು ಬಹುಭಾಷೆಯ ಚಿತ್ರದಲ್ಲಿ ನಟಿಸುವ ಅವಕಾಶ ಮತ್ತು ಅದೃಷ್ಟ ಅರಸಿ ಬಂದಿದೆ. ಕನ್ನಡ ಸೇರಿ ತ್ರಿಭಾಷೆಗಳಲ್ಲಿ ನಿರ್ಮಾಣವಾಗಲಿರುವ ‘ಸಮಿತ್‌’ ಚಿತ್ರದಲ್ಲಿ ಅಕ್ಷಿತ್‌ ನಾಯಕನಾಗಿ ನಟಿಸುತ್ತಿದ್ದಾರೆ.

ಅಕ್ಷಿತ್‌ಗೆ ಈ ಚಿತ್ರದಲ್ಲಿ ಇಬ್ಬರು ನಾಯಕಿಯರು. ಚಾಂದಿನಿ ಹಾಗೂ ಅನುವರ್ಣ ನಾಯಕಿಯರಾಗಿ ಅಕ್ಷಿತ್‌ ಜತೆಗೆ ತೆರೆ ಹಂಚಿಕೊಳ್ಳಲಿದ್ದಾರೆ. ಹೈದರಾಬಾದ್‍ನಲ್ಲಿ ಚಿತ್ರದ ಮುಹೂರ್ತ ಕೂಡ ನಡೆದಿದೆ. ಬೆಂಗಳೂರು, ಹೈದರಾಬಾದ್ ಹಾಗೂ ಚೆನ್ನೈನ ಸುಂದರ ತಾಣಗಳಲ್ಲಿ ಚಿತ್ರೀಕರಣ ಸುಮಾರು ಐವತ್ತು ದಿನಗಳ ಕಾಲ ನಡೆಸಲು ಚಿತ್ರತಂಡ ಯೋಜನೆ ರೂಪಿಸಿದೆ. ಎಲ್ಲವೂ ಅಂದುಕೊಂಡಂತೆ ಸಾಗಿದರೆ ಈ ಚಿತ್ರವನ್ನು ಬರುವ ಮೇ ತಿಂಗಳಲ್ಲಿ ಪ್ರೇಕ್ಷಕರ ಮುಂದೆ ತರುವ ಲೆಕ್ಕಾಚಾರವೂ ಚಿತ್ರತಂಡದ್ದು.

ಸತ್ಯ ಘಟನೆಯನ್ನು ಆಧರಿಸಿದ ಕಥಾಹಂದರಕ್ಕೆ ಒಂದಿಷ್ಟು ಥ್ರಿಲ್ಲಿಂಗ್ ಅಂಶಗಳನ್ನು ಸೇರಿಸಿ ಪ್ರೇಕ್ಷಕರ ಕುತೂಹಲ ಹೆಚ್ಚಿಸುವ ಪ್ರಯತ್ನ ನಡೆಸುತ್ತಿದ್ದಾರಂತೆ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಸತೀಶ್‍ ಮಲೆಂಪಾಟಿ. ‘ಯಾರಿಗಾದ್ರು ಸಾವು ಎರಡು ಸಂದರ್ಭದಲ್ಲಿ ಬರುತ್ತದೆ’ ಎಂಬ ಬರಹ ಪೋಸ್ಟರ್‌ನಲ್ಲಿದ್ದು, ಕಥೆಯ ಸಾರಾಂಶವನ್ನು ಸತೀಶ್‌ ಗೋಪ್ಯವಾಗಿರಿಸಿಕೊಂಡಿದ್ದಾರೆ. ನಿರ್ದೇಶನ ಜೊತೆಗೆ ಅರುಣಾಂ ಫಿಲಂಸ್ ಬ್ಯಾನರ್‌ನಡಿ ಚಿತ್ರಕ್ಕೆ ಸ್ವತಃ ಬಂಡವಾಳವನ್ನು ಹೂಡಿದ್ದಾರೆ. ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಈ ಚಿತ್ರ ನಿರ್ಮಿಸಿ, ಮಲಯಾಳಂಗೆ ಡಬ್‌ ಮಾಡುವ ಯೋಜನೆ ಅವರದು.

ಸಂಗೀತ ಬೀಮ್ಸ್‌ ಸಿಸಿರೋಲಿಯೋ, ಛಾಯಾಗ್ರಹಣ ಸತೀಶ್‍ ಮುತ್ಯಾಲ, ಸಂಕಲನ ಬಿ.ನಾಗೇಶ್ವರ ರೆಡ್ಡಿ, ಕಲೆ ನಾರಾಯಣರಾವ್‍ ಮುಪ್ಪಲ ಅವರದು.

‘ಮೊಡವೆ’ ಹೆಸರಿನ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಡಲು ತಯಾರಿ ನಡೆಸಿದ್ದ ಅಕ್ಷಿತ್‌ಗೆ ಅದು ಕೈಗೂಡಿರಲಿಲ್ಲ. ಪ್ರಯತ್ನ ಕೈಬಿಡದ ಅಕ್ಷಿತ್‌ ಶ್ರಮಕ್ಕೆ ‘ಸೀತಾಯಣ’ ಕೈಹಿಡಿಯಿತು. ಈಗ ‘ಸಮಿತ್‌’ ಚಿತ್ರ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಭದ್ರಬುನಾದಿ ರೂಪಿಸಿಕೊಡಲಿದೆ ಎನ್ನುವ ನಿರೀಕ್ಷೆ ಅಕ್ಷಿತ್‌ಗೆ ಇದೆ.

ಅಕ್ಷಿತ್‌ ಬಹು ನಿರೀಕ್ಷೆ ಇಟ್ಟುಕೊಂಡಿರುವ ‘ಸೀತಾಯಣ’ ಚಿತ್ರದ ವಿಡಿಯೊ ಹಾಡುಗಳನ್ನು ಉಪೇಂದ್ರ ಮತ್ತು ರಶ್ಮಿಕಾ ಮಂದಣ್ಣ ಬಿಡುಗಡೆ ಮಾಡಿದ್ದರು. ಶಿವರಾಜ್‍ಕುಮಾರ್ ಮತ್ತು ತೆಲುಗು ನಟ ರವಿತೇಜಾ ಅವರು ಟೀಸರ್‌ ಬಿಡುಗಡೆ ಮಾಡಿ ಚಿತ್ರತಂಡದ ಬೆನ್ನು ತಟ್ಟಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು