ಗೌರಿ ಖಾನ್ ದಿವಾಲಿ ಸಡಗರ

7

ಗೌರಿ ಖಾನ್ ದಿವಾಲಿ ಸಡಗರ

Published:
Updated:
Deccan Herald

ಮುಂಬೈನ ಬಾಂದ್ರಾ ಬ್ಯಾಂಡ್‌ಸ್ಟ್ಯಾಂಡ್‌ನಲ್ಲಿರುವ ‘ಮನ್ನತ್‌’ ಎಂಬ ಆ ವಿಲಾಸಿ ಬಂಗಲೆ ವಿದ್ಯುತ್ ದೀಪಗಳಿಂದ ಸಿಂಗಾರಗೊಂಡಿತ್ತು. ದೀಪಗಳ ಹಬ್ಬಕ್ಕೆ ಇನ್ನೂ ವಾರವಿದೆ ಎನ್ನುವಾಗಲೇ ಅಲ್ಲಿ ಹಬ್ಬದ ಖದರು ಮನೆ ಮಾಡಿತ್ತು. ಒಂದೊಂದು ವಿಲಾಸಿ ಕಾರುಗಳು ಪಾರ್ಕಿಂಗ್‌ ತಾಣದಲ್ಲಿ ನಿಂತಾಗಲೂ ಒಬ್ಬರೋ ಇಬ್ಬರೋ ಸೆಲೆಬ್ರಿಟಿಗಳು ನಿಧಾನವಾಗಿ ಇಳಿದು ಆ ಬಂಗಲೆಯೊಳಗೆ ಹೋಗುತ್ತಿದ್ದರು. ಪ್ರತಿಯೊಬ್ಬರೂ ವಿಶೇಷ ಅತಿಥಿಗಳೇ. ಹಾಗಾಗಿ ಎಲ್ಲರಿಗೂ ವಿವಿಐಪಿ ಸತ್ಕಾರ.

ಅಲ್ಲಿ ನಡೆದಿದ್ದು ದೀಪಾವಳಿ ಪಾರ್ಟಿ. ಹಬ್ಬಕ್ಕೂ ಮೊದಲೇ ಆಪ್ತೇಷ್ಟರೊಂದಿಗೆ ಮೋಜಿನ ಕೂಟ ನಡೆಸುವುದು ಆ ಮನೆಯ ಒಡೆಯರ ಸ್ಟೈಲು. ಬಾಲಿವುಡ್‌ ಬಾದ್‌ಷಾ ಶಾರುಕ್‌ ಖಾನ್‌–ಗೌರಿ ಖಾನ್‌ ಅವರ ಬಂಗಲೆಯಲ್ಲಿ ಕಳೆದ ವಾರಾಂತ್ಯ ನಡೆದ ದೀಪಾವಳಿ ಪಾರ್ಟಿಯ ನೋಟವಿದು.

ಬಾಲಿವುಡ್‌ ಸೆಲೆಬ್ರಿಟಿಗಳು ಈಗ ದೀಪಾವಳಿ ಪಾರ್ಟಿಗಳಲ್ಲಿ ಬ್ಯುಸಿ. ಹಬ್ಬಕ್ಕೂ ಮುನ್ನವೇ ಹಬ್ಬದ ಝಲಕ್‌ನಲ್ಲಿ ಅವರು ಮಿಂಚುತ್ತಿದ್ದಾರೆ.

ಶಾರುಕ್‌–ಗೌರಿ ದಂಪತಿ ಹಮ್ಮಿಕೊಂಡಿದ್ದ ಪಾರ್ಟಿಯ ಸಂಭ್ರಮವನ್ನು ಗೌರಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆಕಾಶದ ನಕ್ಷತ್ರಗಳನ್ನೆಲ್ಲ ಕಪ್ಪು ಗೋಡೆಯ ಮೇಲೆ ರಂಗೋಲಿ ಚುಕ್ಕಿಗಳಂತೆ ಜೋಡಿಸಿದ ಹಾಗಿತ್ತು ಆ ಮನೆಯ ದೀಪಾಲಂಕಾರ. ದಂಪತಿ ಧರಿಸಿದ್ದೂ ಕಪ್ಪು–ಬಿಳಿ ಸಂಯೋಜನೆಯ ಉಡುಪು. ಮಗಳು ಸುಹಾನಾ ಖಾನ್‌ ಜೊತೆಗಿನ ಫೋಟೊವನ್ನೂ ಗೌರಿ ಹಂಚಿಕೊಂಡಿದ್ದಾರೆ.

ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ ಗಣೇಶ ಚತುರ್ಥಿ ಮತ್ತು ದೀಪಾವಳಿ ಹಬ್ಬದ ಖುಷಿಯನ್ನು ಸಂಭ್ರಮಿಸುವುದು ಚಿತ್ರರಂಗದ ತಮ್ಮ ಆಪ್ತೇಷ್ಟರೊಂದಿಗೆ. ಖಾನ್ ಮನೆಯಲ್ಲಿ ನಡೆಯುವ ಗಣೇಶ ಚತುರ್ಥಿ ಆಚರಣೆಗೆ ತಮಗೆ ಆಹ್ವಾನ ಬರಲೆಂದು ಹಾರೈಸುವ ನಟ ನಟಿಯರು, ನಿರ್ದೇಶಕ, ನಿರ್ಮಾಪಕರಿದ್ದಾರೆ. ಗೌರಿ– ಗಣೇಶ ಹಬ್ಬ ಮುಗಿದರೆ ಖಾನ್‌ಗೆ ಬೆಳಕಿನ ಹಬ್ಬದ ದಿನಗಣನೆ ಮಾಡುವ ಕೆಲಸ. 

ಸಲ್ಲೂ ಭಾಯ್‌ ಕಳೆದ ದೀಪಾವಳಿಗೆ ಮೋಜಿನ ಕೂಟ ಏರ್ಪಡಿಸಿದ್ದು ಮುಂಬೈನಲ್ಲಿರುವ ತಂಗಿ ಅರ್ಪಿತಾ ಖಾನ್‌ ನಿವಾಸದಲ್ಲಿ. ಸಲ್ಲೂ ಗೆಳತಿ ಕತ್ರಿನಾ ಕೈಫ್‌ ಪ್ರಮುಖ ಆಕರ್ಷಣೆಯಾಗಿದ್ದರೆ, ಅವರಿಗೆ ಸಡ್ಡು ಹೊಡೆಯುವಂತೆ ಜಾಕ್ವೆಲಿನ್‌ ಫರ್ನಾಂಡಿಸ್‌ ಕೂಡಾ ಮಿಂಚುತ್ತಿದ್ದರು. ಬಿ ಟೌನ್‌ನ ದಿಗ್ಗಜರಾದ ಶಾರುಕ್‌ ಖಾನ್‌, ಕರಣ್‌ ಜೋಹರ್‌, ಶಿಲ್ಪಾ ಶೆಟ್ಟಿ– ರಾಜ್‌ ಕುಂದ್ರಾ ದಂಪತಿ ಪ್ರಮುಖವಾಗಿ ಪಾಲ್ಗೊಂಡಿದ್ದರು. ಸಂಜಯ್‌ ದತ್‌ ತಮ್ಮ ಪತ್ನಿ ಮಾನ್ಯತಾ ಮತ್ತು ಮಕ್ಕಳೊಂದಿಗೆ ಪಾಲ್ಗೊಂಡಿದ್ದುದು ವಿಶೇಷವಾಗಿತ್ತು. ಸಲ್ಲೂ ಭಾಯ್‌ ಈ ವರ್ಷದ ದೀಪಾವಳಿ ಪಾರ್ಟಿಯನ್ನು ಇನ್ನೂ ಹಮ್ಮಿಕೊಂಡಿಲ್ಲ.

ಬಾಲಿವುಡ್‌ನ ಹೆಚ್ಚು ಚರ್ಚಿತ ಮತ್ತು ಪ್ರತಿಷ್ಠೆಯ ದೀಪಾವಳಿ ಪಾರ್ಟಿಗಳಲ್ಲಿ ಬಚ್ಚನ್‌ ಕುಟುಂಬದ ಪಾರ್ಟಿಯೂ ಒಂದು. ಅಮಿತಾಭ್‌–ಜಯಾ– ಅಭಿಷೇಕ್‌ ಮತ್ತು ಐಶ್ವರ್ಯಾ ರೈ ಬಚ್ಚನ್‌ ಅವರ ಆತಿಥ್ಯ ಸ್ವೀಕರಿಸಲು ಹಿಂದಿ ಚಿತ್ರರಂಗ ತುದಿಗಾಲಲ್ಲಿ ಕಾದಿರುತ್ತದೆ.

ಜೈಲಿನಲ್ಲೇ ಬಹುಕಾಲ ಕಳೆದ ಸಂಜಯ್‌ ದತ್‌ ಕಳೆದ ವರ್ಷ ಬೆಳಕಿನ ಹಬ್ಬದ ನೆಪದಲ್ಲಿ ತಮ್ಮ ಚಿತ್ರರಂಗದ ಗೆಳೆಯರನ್ನು ಮನೆಗೆ ಆಹ್ವಾನಿಸಿದ್ದರು. ಮುಂಚೂಣಿ ನಟ ನಟಿಯರು ಅಂದು ದತ್‌ ಕುಟುಂಬದೊಂದಿಗೆ ಹಾಡಿ ಕುಣಿದು ಉಡುಗೊರೆ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು. ಈ ಬಾರಿಯ ಹಬ್ಬವನ್ನು ಅವರು ಹೇಗೆ ಆಚರಿಸುತ್ತಾರೋ ಕಾದು ನೋಡಬೇಕಿದೆ. 

ಜಾವೇದ್‌ ಅಖ್ತರ್‌ ಮತ್ತು ಶಬನಾ ಆಜ್ಮಿ ದಂಪತಿ ಕೂಡಾ ಅದ್ದೂರಿ ಪಾರ್ಟಿಯೊಂದಿಗೆ ಹಬ್ಬವನ್ನು ಬರಮಾಡಿಕೊಳ್ಳುತ್ತಾರೆ. ಅಲ್ಲಿ ಅಮಿತಾಭ್‌ ಬಚ್ಚನ್‌ ಕಾಯಂ ಅತಿಥಿ. ಹಿರಿಯ ನಟಿ ಶ್ರೀದೇವಿ ಅವರೂ ಈ ಕೂಟವನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ.

ಬಂಧು ಮಿತ್ರರಿಗಿಂತಲೂ ವೃತ್ತಿಕ್ಷೇತ್ರದ ಸ್ನೇಹಿತರೊಂದಿಗೆ ಹಬ್ಬವನ್ನು ಬರಮಾಡಿಕೊಳ್ಳುವ ಈ ಪರಿಪಾಠ ಬಾಲಿವುಡ್‌ನ ಇನ್ನಷ್ಟು ಮಂದಿಗೆ ಪ್ರೇರಣೆಯಾಗಿದೆಯಂತೆ. ಆದರೆ ಅದಿನ್ನೂ ಹೆಚ್ಚು ಪ್ರಚಾರ ಗಿಟ್ಟಿಸಿಕೊಂಡಿಲ್ಲ. ಅಲ್ಲಿ ಸಮಾವೇಶಗೊಳ್ಳುವ ಅತಿಥಿಗಳು, ಆತಿಥೇಯರ ಪ್ರತಿಷ್ಠೆಯ ಪ್ರತೀಕವಾಗಿರುವುದು ಗಮನಾರ್ಹ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !