ಶುಕ್ರವಾರ, ಆಗಸ್ಟ್ 6, 2021
24 °C
ಅಮಿತಾಭ್, ವಿದ್ಯಾ ಚಿತ್ರಗಳ ಸಾಲಿಗೆ ಕರಣ್ ನಿರ್ಮಾಣದ ಸಿನಿಮಾ

ಗುಂಜನ್ ಸಕ್ಸೇನಾ ನೆಟ್‌ಫ್ಲಿಕ್ಸ್‌ ಮೂಲಕ ತೆರೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕರಣ್ ಜೋಹರ್ ನಿರ್ಮಾಣದ ‘ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್’ ಸಿನಿಮಾ ನೇರವಾಗಿ ನೆಟ್‌ಫ್ಲಿಕ್ಸ್‌ ಮೂಲಕ ಬಿಡುಗಡೆ ಆಗಲಿದೆ. ಇದರಲ್ಲಿ ಜಾಹ್ನವಿ ಕಪೂರ್ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ಸಿನಿಮಾ ಮಂದಿರಗಳಲ್ಲಿ ಬಿಡುಗಡೆ ಆಗುವುದಿಲ್ಲ.

1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ, ಯುದ್ಧ ನಡೆಯುತ್ತಿದ್ದ ಸ್ಥಳಕ್ಕೆ ಹೆಲಿಕಾಪ್ಟರ್ ಒಯ್ದಿದ್ದ ಮೊದಲ ಭಾರತೀಯ ಮಹಿಳೆ ಗುಂಜನ್ ಸಕ್ಸೇನಾ. ಗುಂಜನ್ ಅವರ ಜೀವನದ ಕಥೆಯನ್ನು ತೋರಿಸುವ ಒಂದು ನಿಮಿಷದ ವಿಡಿಯೊವನ್ನು ಜೋಹರ್ ಅವರು ತಮ್ಮ ಟ್ವಿಟರ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.

‘ಈಕೆಯ ಸ್ಫೂರ್ತಿದಾಯಕ ಪಯಣ ಇತಿಹಾಸ ಸೃಷ್ಟಿಸಿತು. ಇದು ಆಕೆಯ ಕಥೆ. ಗುಂಜನ್ ಸಕ್ಸೇನಾ ಕಥೆ ನೆಟ್‌ಫ್ಲಿಕ್ಸ್‌ ಮೂಲಕ ಶೀಘ್ರವೇ ಬರಲಿದೆ’ ಎಂದು ಕರಣ್ ಬರೆದಿದ್ದಾರೆ. ಈ ಚಿತ್ರದ ಬಿಡುಗಡೆಯ ದಿನಾಂಕ ಇನ್ನೂ ಪ್ರಕಟವಾಗಿಲ್ಲ.

‌ಜೀ ಸ್ಟುಡಿಯೋಸ್ ಮತ್ತು ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್‌ ಸಂಸ್ಥೆಗಳು ಜೊತೆಯಾಗಿ ಇದರ ನಿರ್ಮಾಣ ಮಾಡಿವೆ. ಇದು ಮಾರ್ಚ್‌ 13ರಂದು ತೆರೆಗೆ ಬರಲಿದೆ ಎಂದು ಹೇಳಲಾಗಿತ್ತು. ಆದರೆ, ಕೊರೊನಾ ವೈರಾಣು ಹಾವಳಿಯ ಕಾರಣದಿಂದಾಗಿ, ಬಿಡುಗಡೆ ದಿನಾಂಕವನ್ನು ಏಪ್ರಿಲ್‌ 24ಕ್ಕೆ ನಿಗದಿ ಮಾಡಲಾಗಿತ್ತು. ನಂತರ, ಈ ಚಿತ್ರವನ್ನು ಸಿನಿಮಾ ಮಂದಿರಗಳ ಮೂಲಕ ಬಿಡುಗಡೆ ಮಾಡುವ ಆಲೋಚನೆ ಕೈಬಿಡಲಾಯಿತು ಎನ್ನಲಾಗಿದೆ.

ಈಗ ಈ ಚಿತ್ರವು ಒಟಿಟಿ ವೇದಿಕೆ ಮೂಲಕ ತೆರೆಗೆ ಬರುವುದು ಖಚಿತವಾಗಿದ್ದು, ಅಮಿತಾಭ್ ಬಚ್ಚನ್ ಅಭಿನಯದ ‘ಗುಲಾಬೊ ಸಿತಾಬೊ’, ವಿದ್ಯಾ ಬಾಲನ್ ಅಭಿನಯದ ‘ಶಕುಂತಲಾ ದೇವಿ’ಯಂತಹ ಚಿತ್ರಗಳ ಸಾಲಿಗೆ ಸೇರಲಿದೆ. ‘ಗುಲಾಬೊ...’ ಹಾಗೂ ‘ಶಕುಂತಲಾ ದೇವಿ’ ಚಿತ್ರಗಳು ಅಮೆಜಾನ್‌ ಪ್ರೈಮ್‌ ಮೂಲಕ ತೆರೆಗೆ ಬರಲಿವೆ.

ಗುಂಜನ್ ಸಕ್ಸೇನಾ ಸಿನಿಮಾ ಬಿಡುಗಡೆ ಕುರಿತ ಸುದ್ದಿಯನ್ನು ನೆಟ್‌ಫ್ಲಿಕ್ಸ್‌ ಕೂಡ ತನ್ನ ಟ್ವಿಟರ್ ಖಾತೆಯ ಮೂಲಕ ಪ್ರಕಟಿಸಿದೆ. ‘ವಿಮಾನವನ್ನು ಯುವಕ ಹಾರಿಸಲಿ ಅಥವಾ ಯುವತಿ ಹಾರಿಸಲಿ. ವಿಮಾನ ಹಾರಿಸುವವರನ್ನು ಪೈಲಟ್‌ ಅಂತಾನೇ ಕರೆಯುತ್ತಾರೆ’ ಎಂದು ಆ ಟ್ವೀಟ್‌ನಲ್ಲಿ ಬರೆಯಲಾಗಿದೆ. 

ನಾಯಕಿಯ ಪಾತ್ರ ನಿಭಾಯಿಸಿರುವ ಜಾಹ್ನವಿ ಕಪೂರ್, ‘ಈ ಸಿನಿಮಾ ನನ್ನ ಪಾಲಿಗೆ ಸಿನಿಮಾಕ್ಕಿಂತಲೂ ದೊಡ್ಡದಾಗಿತ್ತು’ ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ. ‘ಇದು ನನ್ನ ಪಾಲಿಗೆ ಸಿನಿಮಾ ಮಾತ್ರವೇ ಅಲ್ಲ. ಇದು ನನ್ನ ಬಗ್ಗೆ ನನ್ನಲ್ಲಿ ನಂಬಿಕೆ ಮೂಡಿಸಿದ ಒಂದು ಪಯಣ’ ಎಂದು ಜಾಹ್ನವಿ ಹೇಳಿದ್ದಾರೆ.

ಕರಣ್ ನಿರ್ಮಾಣದ ‘ಧಡಕ್’ ಚಿತ್ರದ ಮೂಲಕ ಜಾಹ್ನವಿ ಅವರು 2018ರಲ್ಲಿ ಬಾಲಿವುಡ್‌ ಪ್ರವೇಶಿಸಿದರು. ‘ಗುಂಜನ್ ಸಕ್ಸೇನಾ’ ಚಿತ್ರವನ್ನು ಶರಣ್ ಶರ್ಮ ನಿರ್ದೇಶಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು