ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಫ್ತಾ‘ಗಾಗಿ ಗನ್ನು, ಲಾಂಗಿನದೇ ಸದ್ದು

Last Updated 22 ಜೂನ್ 2019, 19:45 IST
ಅಕ್ಷರ ಗಾತ್ರ

ಭೂಗತ ಜಗತ್ತಿನ ವಸೂಲಿ ದಂಧೆ, ಸುಪಾರಿ ಹತ್ಯೆಗಳಸುತ್ತವೇ ಹೆಣೆದ ಕಥಾವಸ್ತುವಿನ ‘ಹಫ್ತಾ’ವನ್ನು ನಿರ್ದೇಶಕ ಪ್ರಕಾಶ್‌ ಹೆಬ್ಬಾಳ್‌ ತೆರೆಯ ಮೇಲೆ ತರಲು ಸಾಕಷ್ಟು ಬೆವರು ಹರಿಸಿದಂತೆ ಕಾಣುತ್ತದೆ. ಚಿತ್ರಕಥೆಯಲ್ಲಿನ ಬಹುತೇಕ ಎಲ್ಲ ಪಾತ್ರಗಳ ಕೈಗೂ ಲಾಂಗು, ಮಚ್ಚು, ಗನ್ನು, ಸುತ್ತಿಗೆ ಕೊಡಿಸಿ ಸಿಕ್ಕಾಪಟ್ಟೆ ಬಡಿದಾಡಿಸಿದ್ದಾರೆ. ರೌಡಿಸಂ ವಿಜೃಂಭಣೆಗೆ ಹರಿಯುವ ರಕ್ತಪಾತ, ಬೀಳುವ ರಾಶಿ ಹೆಣಗಳಿಗೆ ಲೆಕ್ಕವೇ ಇಲ್ಲ. ಪಾತಕಲೋಕ ಮಟ್ಟ ಹಾಕಬೇಕಾದ ಪೊಲೀಸ್‌ ಅಧಿಕಾರಿಯದ್ದು ಎಂದಿನಂತೆ,ಹಫ್ತಾ ಕೀಳುವ ಪಾತಕಿಗಳ ಎರಡು ಗ್ಯಾಂಗುಗಳ ನಡುವೆ ಬಡಿದಾಡಿಸುವಸೂತ್ರಧಾರಿ ಪಾತ್ರ.

‘ಸೆಂಟಿಮೆಂಟ್‌ ನಾಟ್‌ ಅಲೋವ್ಡ್‌’ ಅಡಿಬರಹಚಿತ್ರದಲ್ಲಿ ಇದ್ದರೂ ಕಥೆಯೊಳಗೆ ಪ್ರೀತಿ, ಪ್ರೇಮ, ಕರುಣೆ, ಸ್ನೇಹ ಸಂಬಂಧಗಳ ಗಟ್ಟಿತನದಲ್ಲಿ ಕೊರತೆಯೇನು ಕಾಣಿಸುವುದಿಲ್ಲ. ಬರೀ ಪಾತಕ ಲೋಕದ ಬಡಿದಾಟವೇ ಪ್ರಧಾನವಾಗಿದ್ದರೆ‘ಹಫ್ತಾ’ ಕೂಡ ಹತ್ತರೊಳಗೆಮತ್ತೊಂದು ಆಗುತ್ತಿತ್ತು. ಆದರೆ, ಚಿತ್ರದ ಇಬ್ಬರು ನಾಯಕರಲ್ಲಿ ಪ್ರಮುಖನಾದ ಕುಡ್ಲ ಅಲಿಯಾಸ್‌ ಕೃಷ್ಣ (ವರ್ಧನ್‌ ತೀರ್ಥಹಳ್ಳಿ) ಮೂರು ವಿಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ವರ್ಧನ್‌, ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಭೂಗತಪಾತಕಿ, ಲವರ್‌ ಬಾಯ್‌ ಹಾಗೂ ಮಂಗಳಮುಖಿಯ ಛಾಯೆಯಲ್ಲಿ ಅವರ ನಟನೆ ಪ್ರೇಕ್ಷಕರಿಗೆ ಮೆಚ್ಚುಗೆಯಾಗುವಂತಿದೆ.

ಚಿತ್ರದ ಕಥಾ ನಾಯಕಿ ಬಿಂಬಶ್ರೀ ನೀನಾಸಂ ಅವರದು ಭರತನಾಟ್ಯ ವಿದ್ಯಾರ್ಥಿನಿಯ ಪಾತ್ರ. ಬಿಂಬಶ್ರೀಯ ಪ್ರೇಮಿಯಾದಕುಡ್ಲಹಸೆಮಣೆ ಏರುವಾಗ ಮಂಗಳಮುಖಿಯಾಗುವುದು ಕಥೆಗೆ ಮತ್ತೊಂದು ತಿರುವು ಕೊಡುತ್ತದೆ. ಮಂಗಳಮುಖಿ ಪಾತ್ರವು ಚಿತ್ರದ ಬಗ್ಗೆ ಕುತೂಹಲ ಕಾಯ್ದುಕೊಳ್ಳುವ ಜತೆಗೆ ಚಿತ್ರದ ತಿರುಳು ಕೂಡ ಆಗಿದೆ. ಕುಡ್ಲನಿಗೆ ಜೀವದ ಗೆಳೆಯನಾದಸೈಲೆಂಟ್‌ ಕಿಲ್ಲರ್‌ ಶಂಕರ್‌ ಯರವಾಡ (ರಾಘವ್‌ ನಾಗ್‌)ಕುಡ್ಲನಿಗೆ ಸರಿಸಮಾನಾದ ಪಾತ್ರ.ಕುಡ್ಲ ನಾಟ್ಯ ಶಿಕ್ಷಕನನ್ನು ಕೊಂದು ಪಾತಕಲೋಕಕ್ಕೆ ಅಡಿ ಇಟ್ಟರೆ, ಶಂಕರ್‌ ಯರವಾಡ ಪೊಲೀಸ್‌ ಅಧಿಕಾರಿ ಕೊಂದು ಬಂದಿರುತ್ತಾನೆ.ಎಂ.ಟೆಕ್‌ ಪದವೀಧರನಾದ ಯರವಾಡನದು ಭೂಗತ ಲೋಕಕ್ಕೆ ಕಾರ್ಪೊರೇಟ್‌ ಟಚ್‌ ಕೊಟ್ಟು ಆಳಬೇಕೆಂಬ ಗುರಿ. ಈ ಜೋಡಿ ಭೂಗತ ಲೋಕದಲ್ಲಿ ಹಫ್ತಾ ಹೇಗೆ ನಡೆಸುತ್ತದೆ ಎನ್ನುವುದನ್ನು ತೋರಿಸುವಾಗನಿರ್ದೇಶಕ ಕಥೆಯ ನಿರೂಪಣೆಯನ್ನು ಕಲಸುಮೇಲೋಗರ ಮಾಡಿದ್ದಾರೆ.

ಪಾತ್ರದಲ್ಲಿ ಬಿಂಬಶ್ರೀ ನೃತ್ಯ ಕಲಿಯುವ ವಿದ್ಯಾರ್ಥಿನಿಯಾಗಿದ್ದರೂತೆರೆಮೇಲೆ ಶಿಕ್ಷಕಿಗಿಂತಲೂ ಹೆಚ್ಚುವಯಸ್ಸಿನವರಂತೆ, ಮುಖ ಬಿಳಚಿಕೊಂಡಂತೆ ಕಾಣುತ್ತಾರೆ. ಇನ್ನೂ ಸೌಮ್ಯಾತಿತಿರ ಅವರನ್ನು ಅವರ ಮಾಡರ್ನ್‌ ಡ್ರೆಸ್‌ನಿಂದಾಗಿಯಷ್ಟೇ ಅವರದ್ದು ವೇಶ್ಯೆಯ ಪಾತ್ರವಿರಬಹುದೆಂದು ಪ್ರೇಕ್ಷಕ ಊಹಿಸಿಕೊಳ್ಳಬೇಕು.ಮುಖ್ಯ ಖಳನಾಯಕನಾಗಿ ನಟಿಸಿರುವ ಬಾಲರಜವಾಡಿ ಅಭಿನಯದಲ್ಲಿ ಇನ್ನಷ್ಟು ಮಾಗಬೇಕಿದೆ. ಇನ್ನು ಕೆಲವು ಸಂಭಾಷಣೆಗಳಲ್ಲಿ ಪಂಚ್‌ ಇದ್ದರೆ, ಕೆಲವು ಸಂಭಾಷಣೆಗಳು ಪೇಲವ.ಸೂರಿ ಸಿನಿಟೆಕ್ಛಾಯಾಗ್ರಹಣ ಕೆಲವು ದೃಶ್ಯಗಳಿಗಷ್ಟೇ ಸಹ್ಯ. ಎರಡು ಹಾಡುಗಳು ಮಾತ್ರ ಕೇಳುವಂತಿವೆ. ಹಿನ್ನೆಲೆ ಶಬ್ದ ಎದೆ ಮತ್ತು ತಲೆಗೂ ಗುದ್ದುವಂತಿದೆ. ಸಂಕಲನ ಇನ್ನಷ್ಟು ಯೋಜಿತವಾಗಿದ್ದರೆ ಪ್ರೇಕ್ಷಕನ ಸಮಯವೂ ಉಳಿಯುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT