ಶನಿವಾರ, ಅಕ್ಟೋಬರ್ 31, 2020
27 °C

ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣ ಸಿಬಿಐಗೆ ಒಪ್ಪಿಸಿ: ಇಂದ್ರಜಿತ್‌ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸ್ಯಾಂಡಲ್‌ವುಡ್‌ನ ಡ್ರಗ್ಸ್‌ ಮಾಫಿಯಾ ಪ್ರಕರಣದಲ್ಲಿ ಸಿಸಿಬಿಯ ತನಿಖೆ ಹಾದಿ ತಪ್ಪುತ್ತಿದೆ ಎಂದು ಬೇಸರ ವ್ಯಕ್ತಪಡಿಸಿರುವ ನಿರ್ದೇಶಕ ಮತ್ತು ಪತ್ರಕರ್ತ ಇಂದ್ರಜಿತ್‌ ಲಂಕೇಶ್‌, ಈ ಪ್ರಕರಣದ ತನಿಖೆಯನ್ನು ರಾಜ್ಯಸರ್ಕಾರ ಸಿಬಿಐಗೆ ವಹಿಸುವುದು ಸೂಕ್ತ ಎಂದಿದ್ದಾರೆ. 

ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ನಂತರ ‘ಸ್ಯಾಂಡಲ್‌ವುಡ್‌ನಲ್ಲೂ ಡ್ರಗ್ಸ್‌ ಮಾಫಿಯಾ ಇದೆ, ಸ್ಯಾಂಡಲ್‌ವುಡ್‌ನ ಕೆಲವು ನಟ–ನಟಿಯರು ಡ್ರಗ್ಸ್‌ ದಂಧೆಯಲ್ಲಿ ಭಾಗಿಯಾಗಿದ್ದಾರೆ’ ಎಂದು ಆರೋಪಿಸಿ, ಸಿಸಿಬಿಗೆ ಒಂದಿಷ್ಟು ಮಾಹಿತಿಗಳನ್ನು ಇಂದ್ರಜಿತ್‌ ಒದಗಿಸಿದ್ದರು.

ಸೋಮವಾರ ತಮ್ಮ ಹುಟ್ಟುಹಬ್ಬವನ್ನು ಚಿತ್ರರಂಗದ ಹಿರಿಯ ಕಲಾವಿದರನ್ನು ಸನ್ಮಾನಿಸಿ, ಅವರಿಗೆ ಕೈಲಾದ ಆರ್ಥಿಕ ನೆರವು ಒದಗಿಸುವ ಮೂಲಕ ಆಚರಿಸಿಕೊಂಡ ಅವರು, ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಪೊಲೀಸರು ರಾಜ್ಯದ ಅಲ್ಲಲ್ಲಿ ಡ್ರಗ್ಸ್‌ ಮತ್ತು ಗಾಂಜಾ ಪತ್ತೆ ಹಚ್ಚಿ, ವಶಪಡಿಸಿಕೊಂಡು ಈ ಜಾಲ ಮಟ್ಟಹಾಕಲು ಪ್ರಯತ್ನಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಸ್ಯಾಂಡಲ್‌ವುಡ್‌ ಡ್ರಗ್ಸ್‌ ಮಾಫಿಯಾ ಸಂಬಂಧ ಇಬ್ಬರು ಪ್ರಮುಖ ಆರೋಪಿಗಳನ್ನು ಇನ್ನೂ ಬಂಧಿಸಿಯೇ ಇಲ್ಲ. ನಿಜವಾದ ಡ್ರಗ್ಸ್‌‌ ಪೆಡ್ಲರ್‌ಗಳನ್ನು ಹೆಡೆಮುರಿ ಕಟ್ಟದೆ, ಸುಮ್ಮನೇ ಯಾರ‍್ಯಾರನ್ನೋ ಕರೆತಂದು ವಿಚಾರಣೆಯ ನೆಪದಲ್ಲಿ ಕಾಲಹರಣ ಮಾಡುವ ಜತೆಗೆ ರಾಜಕಾರಣ ಬೆರಸುತ್ತಿರುವಂತೆ ಕಾಣಿಸುತ್ತಿದೆ. ಈ ಪ್ರಕರಣಕ್ಕೆ ಕೋಮುವಾದ ಮತ್ತು ಲವ್‌ ಜಿಹಾದ್‌ ಬಣ್ಣ ಲೇಪಿಸುವುದೂ ನಡೆಯುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಸ್ಯಾಂಡಲ್‌ವುಡ್‌ನಲ್ಲಿ ಬರೀ ಇಬ್ಬರು ನಟಿಯರು ಮಾತ್ರವೇ ಡ್ರಗ್ಸ್‌ ತೆಗೆದುಕೊಳ್ಳುತ್ತಿರುವುದು? ಬೇರೆ ನಟರು, ನಟರ ಮಕ್ಕಳು ಹಾಗೂ ನಿರ್ದೇಶಕರು ಡ್ರಗ್ಸ್‌ ತೆಗೆದುಕೊಳ್ಳುತ್ತಿಲ್ಲವೇ?’ ಎಂದು ಅವರು ಪಶ್ನಿಸಿದ್ದಾರೆ.

ಅಮಿತ್‌ ಶಾ ಅನಾರೋಗ್ಯ ಡ್ರಗ್ಸ್‌ ಮಾಫಿಯಾಕ್ಕೆ ವರವಾಯಿತೇ

‘ಡ್ರಗ್ಸ್‌ ದಂಧೆಯಲ್ಲಿ ಸಿಕ್ಕಿಬಿದ್ದು ವಿಚಾರಣೆ ಎದುರಿಸುತ್ತಿರುವ ಆರೋಪಿಗಳ ರಕ್ಷಣೆಗೆ ಕೆಲ ರಾಜಕಾರಣಿಗಳು ಮತ್ತು ‍ಪ್ರಭಾವಿಗಳು ಸಿಸಿಬಿ ಮೇಲೆ ಪ್ರಭಾವ ಬೀರುತ್ತಿದ್ದಾರೆ. ತನಿಖಾಧಿಕಾರಿಗಳ ಮೇಲೆ ಬೀಳುತ್ತಿರುವ ಒತ್ತಡದಿಂದಾಗಿಯೇ ತನಿಖೆಯ ದಿಕ್ಕು ತಪ್ಪುತ್ತಿರುವಂತೆ ಕಾಣಿಸುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಅನಾರೋಗ್ಯದಲ್ಲಿರುವುದು ಸಹ ಇಲ್ಲಿ ಡ್ರಗ್ಸ್‌ ದಂಧೆಕೋರರ ರಕ್ಷಣೆಗೆ ನಿಂತಿರುವವರಿಗೆ ವರದಾನವಾಗಿರಲೂಬಹುದು. ಕೇಂದ್ರ ಗೃಹ ಸಚಿವಾಲಯ ರಾಜ್ಯದಲ್ಲಿನ ಈ ಬೆಳವಣಿಗೆ ಬಗ್ಗೆ ತಕ್ಷಣ ಗಮನ ಹರಿಸಿ, ಸ್ಯಾಂಡಲ್‌ವುಡ್‌ ಡ್ರಗ್ಸ್‌ ದಂಧೆಯ ಪ್ರಕರಣವನ್ನು ಸಿಬಿಐ ತನಿಖೆಯ ಸುಪರ್ದಿಗೆ ತೆಗೆದುಕೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

ನಟ–ನಟಿಯರು ಹಿರಿಯ ಕಲಾವಿದರಿಗೆ ನೆರವಾಗಲಿ:

‘ಕೋವಿಡ್‌ –19 ಕಾರಣಕ್ಕೆ 60 ವರ್ಷ ಮೇಲ್ಪಟ್ಟ ಕಲಾವಿದರು ಸಿನಿಮಾ ಸಂಬಂಧಿ ಕೆಲಸಗಳಲ್ಲಿ ಭಾಗವಹಿಸಲು ಆಸ್ಪದ ಇಲ್ಲದಂತಾಗಿದೆ. ಹಾಗಾಗಿ ಕೈಯಲ್ಲಿ ಕೆಲಸವಿಲ್ಲದೆ ಹಿರಿಯ ಕಲಾವಿದರು ನಿಜಕ್ಕೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನುಕೂಲಸ್ಥ ನಟ–ನಟಿಯರು, ನಿರ್ಮಾಪಕರು ತಮ್ಮ ಕೈಲಾದ ಸಹಾಯ ಮಾಡಿ, ಕಷ್ಟದಲ್ಲಿರುವ ಚಲನಚಿತ್ರ ಕಲಾವಿದರು ಮತ್ತು ಕಾರ್ಮಿಕರ ನೆರವಿಗೆ ನಿಲ್ಲಬೇಕು’ ಎಂದು ಇಂದ್ರಜಿತ್‌ ಮನವಿ ಮಾಡಿದರು.

ಇದೇ ಸಂದರ್ಭ ಅವರು ಹಿರಿಯ ನಟರಾದ ಉಮೇಶ್‌, ಬೆಂಗಳೂರು ನಾಗೇಶ್‌, ನಟಿಯರಾದ ಆರ್‌.ಟಿ.ರಮಾ, ಶೈಲಶ್ರೀ ಸುದರ್ಶನ್, ಜಯಲಕ್ಷ್ಮಿ ಪಾಟೀಲ್‌ ಅವರನ್ನು ಸನ್ಮಾನಿಸಿ, ಆರ್ಥಿಕ ನೆರವು ಒದಗಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು