ಬೆಳ್ಳಿತೆರೆಗೆ ಬಂದ ‘ಹನುಮಪ್ಪ...’

7

ಬೆಳ್ಳಿತೆರೆಗೆ ಬಂದ ‘ಹನುಮಪ್ಪ...’

Published:
Updated:
Prajavani

ಪತ್ರಕರ್ತ ಹಾಗೂ ಸಾಹಿತಿ ಹನುಮಂತ ಹಾಲಿಗೇರಿ ಅವರ ‘ಊರು ಸುಟ್ಟರೂ ಹನುಮಪ್ಪ ಹೊರಗೆ’ ನಾಟಕ ಇದೀಗ ಬೆಳ್ಳಿತೆರೆಗೆ ಬರಲು ಸಿದ್ಧವಾಗಿದೆ. ದೇವರೆಂಬ ಜಿಜ್ಞಾಸೆಯ ಜತೆಗೆ, ಗ್ರಾಮೀಣ ಭಾಗದ ಸಮಕಾಲೀನ ತಲ್ಲಣಗಳನ್ನು ವಿಡಂಬನಾತ್ಮಕವಾಗಿ ನಿರೂಪಿಸಿದ್ದ ಈ ನಾಟಕ ರಾಜ್ಯದಾದ್ಯಂತ ಈಗಾಗಲೇ 250ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ. ಇಂದಿಗೂ ಕಾಣುತ್ತಲೇ ಇದೆ. ಸಾಣೇಹಳ್ಳಿಯ ‘ಶಿವಸಂಚಾರ’, ಹೂವಿನ ಹಡಗಲಿಯ ‘ರಂಗಭಾರತಿ’, ಬೆಂಗಳೂರಿನ ‘ವಿಕಸಂ’, ಧಾರವಾಡದ ‘ಆಟಮಾಟ’, ಚಿತ್ರದುರ್ಗದ ‘ಜಮುರಾ’ ತಂಡಗಳು ಊರೂರು ಸುತ್ತಿ ಪ್ರದರ್ಶನ ನೀಡಿವೆ.

ನಾಟಕಕ್ಕೆ ಸಿಕ್ಕ ಜನಪ್ರಿಯತೆ ಮತ್ತು ಪ್ರೇಕ್ಷಕರ ಮನ್ನಣೆ, ಸಿನಿಮಾ ಹೊಸ್ತಿಲಿಗೆ ತಂದು ನಿಲ್ಲಿಸಿದೆ. ‘ಜೈ ಕೇಸರಿನಂದನ’ನಾಗಿ ಹನುಮಪ್ಪ ಕಾಣಿಸಿಕೊಳ್ಳುತ್ತಿದ್ದಾನೆ. ಹಾಲಿಗೇರಿಯವರ ಜನಪ್ರಿಯ ಕಾದಂಬರಿ ‘ಕೆಂಗುಲಾಬಿ’ಯನ್ನು ತೆರೆಗೆ ತಂದಿದ್ದ ಶ್ರೀಧರ ಜಾವೂರ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ‘ಕೆಂಗುಲಾಬಿ’ ಚಿತ್ರ ರಾಜ್ಯ ಸರ್ಕಾರದ 2018ನೇ ಸಾಲಿನ ಅತ್ಯುತ್ತಮ ಕಥಾ ಪ್ರಶಸ್ತಿಗೆ ಕೊರಳೊಡ್ಡಿತ್ತು.

ತಲ್ಲಣ ಬಿಚ್ಚಿಡುವ ಹನುಮಪ್ಪ...
ಹನುಮಪ್ಪನಿಲ್ಲದ ಹಳ್ಳಿಗಳಿಲ್ಲ. ಊರ ಕಾಯುವ ಆಂಜನೇಯ ರಕ್ಷಕನೂ ಹೌದು. ಅವನಿಗಾಗಿ ಎರಡು ಗ್ರಾಮಗಳ ಜನ ನಡೆಸುವ ಕಿತ್ತಾಟವೇ ಈ ಸಿನಿಮಾದ ಕಥಾವಸ್ತು.

‘ರಾತ್ರೋರಾತ್ರಿ ಒಂದೂರಿನವರು ಹನುಮಪ್ಪನನ್ನು ಕದ್ದೊಯ್ಯುತ್ತಾರೆ. ಮಾರನೇ ದಿನ ಇನ್ನೊಂದು ಊರಿನವರು ಹುಡುಕಿಕೊಂಡು ಬರುತ್ತಾರೆ. ಎರಡೂ ಊರಿನವರು ಎದುರಾದಾಗ ದೊಡ್ಡ ಹೊಡೆದಾಟವೇ ನಡೆಯುತ್ತದೆ. ಈ ಜಗಳ ಊರಿನ ಪಂಚಾಯ್ತಿ ದಾಟಿ, ಪ್ರತಿಷ್ಠೆಯ ಪ್ರಶ್ನೆಯಾಗಿ ಪುಡಾರಿ ರಾಜಕಾರಣಿಗಳ ಮೂಲಕ ಪೊಲೀಸ್ ಠಾಣೆ ಮೆಟ್ಟಿಲೇರುತ್ತದೆ’ ಎಂದು ಹನುಮಂತ ಹಾಲಿಗೇರಿ ಕಥೆಯ ತಿರುಳನ್ನು ಹಂಚಿಕೊಂಡರು.

‘ಪೊಲೀಸರಿಗೆ ಹನುಮಪ್ಪ ಸಿಕ್ಕರೂ, ಕದ್ದವರು ಸಿಗುವುದಿಲ್ಲ. ಆದರೆ, ಯಾವ ಊರಿಗೂ ಒಪ್ಪಿಸಲಾಗದ ಅತಂತ್ರ ಸ್ಥಿತಿಯಲ್ಲಿರುವ ಪೊಲೀಸರು, ಮೂರ್ತಿಯನ್ನು ಠಾಣೆಗೆ ತಂದಿಟ್ಟುಕೊಳ್ಳುತ್ತಾರೆ. ಸಿಗದ ಕಳ್ಳರು ಮತ್ತು ಪರಿಹಾರದ ದೇವರ ವ್ಯಾಜ್ಯದಿಂದಾಗಿ ಪೊಲೀಸ್ ಠಾಣೆಯೇ ಹನುಮಪ್ಪಗೆ ಗುಡಿಯಾಗಿ, ಪೊಲೀಸರೇ ಪೂಜಾರಿಗಳಾಗುವ ಸ್ಥಿತಿ ನಿರ್ಮಾಣವಾಗುತ್ತದೆ. ಇತ್ತ ಹನುಮಪ್ಪನಿಗಾಗಿ ಎರಡೂ ಊರಿನವರು ಹತ್ತಾರು ವರ್ಷ ಕೋರ್ಟಿಗೆ ಅಲೆಯುವುದನ್ನು ಸಮಕಾಲೀನ ತಲ್ಲಣಗಳೊಂದಿಗೆ ವಿಡಂಬನಾತ್ಮಕವಾಗಿ ನಿರೂಪಿಸಲಾಗಿದೆ’ ಎಂದು ಹಾಲಿಗೇರಿ ಬಿಚ್ಚಿಟ್ಟರು.

‘ದೇವರು–ಧರ್ಮ ಜನರ ನೆಮ್ಮದಿ ಕಲಕುವ, ಕೆಲವರ ಬೇಳೆ ಬೇಯಿಸಿಕೊಳ್ಳುವ ಸಾಧನವಾಗಿವೆ. ಚಿಕ್ಕಂದಿನಿಂದಲೂ ಒಡನಾಟವಿಟ್ಟುಕೊಂಡು ಬೆಳೆದವರು, ನಿತ್ಯ ಒಬ್ಬರ ಮುಖವನ್ನು ಮತ್ತೊಬ್ಬರು ನೋಡಿಕೊಂಡು ಓಡಾಡಿಕೊಂಡಿರುವವರ ಮುಖಗಳಲ್ಲಿ ಇದೀಗ ದ್ವೇಷವನ್ನು ಬಿತ್ತಲಾಗಿದೆ. ಜಾತಿ ಮತ್ತ ಧರ್ಮ ಮೀರಿದ ಬಾಂಧವ್ಯಕ್ಕೆ ಕೊಳ್ಳಿ ಇಡುವವರ ಮನಸ್ಸಿನಲ್ಲಿ ಚಿತ್ರ ಪರಿವರ್ತನೆಯ ಚಿಗುರೊಡೆಯುವಂತೆ ಮಾಡುತ್ತದೆ’ ಎಂದು ನಿರ್ದೇಶಕ ಶ್ರೀಧರ ಜಾವೂರ ವಿಶ್ವಾಸ ವ್ಯಕ್ತಪಡಿಸಿದರು.

ಮೂಲ ನಾಟಕದಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಂಡು, ಕಲಾತ್ಮಕ ಮತ್ತು ಕಮರ್ಷಿಯಲ್ ಸೂತ್ರಗಳೆರಡನ್ನೂ ಬೆರೆಸಿ ಚಿತ್ರವನ್ನು ತೆರೆ ಮೇಲೆ ತರಲಾಗಿದೆಯಂತೆ. ಕಥೆಗೆ ಪೂರಕವಾಗಿ ಉತ್ತರ ಕರ್ನಾಟಕದ ಪ್ರತಿಭೆಗಳೇ ಪಾತ್ರಗಳಿಗೆ ಬಣ್ಣ ಹಚ್ಚಿರುವುದು ವಿಶೇಷ. ‘ಥಿಂಕ್ ಪಾಸಿಟಿವ್’ ಸಮಾನಾಸಕ್ತ ಗೆಳೆಯರು ಚಿತ್ರವನ್ನು ನಿರ್ಮಿಸಿದ್ದಾರೆ. ನಾಗೇಶ ವಿ. ಆಚಾರ್ಯ ಅವರ ಛಾಯಾಗ್ರಹಣವಿದೆ. ರಾಜಕಿಶೋರ್‌ ರಾವ್ ಸಂಗೀತ ಹಾಗೂ ಈ.ಎಸ್. ಈಶ್ವರ ಸಂಕಲನ ಜವಾಬ್ದಾರಿ ನಿಭಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !