ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಪ್ರಿಯಾ ಹವಾ!

ಅಕ್ಷರ ಗಾತ್ರ

ಕನ್ನಡ ಚಿತ್ರರಂಗದಲ್ಲಿ ಈಗಿನ ನಟಿಯರ ಪೈಕಿಬಹುಭಾಷೆಯ ತಾರೆ ಹರಿಪ್ರಿಯಾ ಅವರದ್ದೇ ಹವಾ! ಚಿಕ್ಕಬಳ್ಳಾಪುರದ ಈ ಚೆಲುವೆ ಅಭಿನಯಿಸಿದ ಸಿನಿಮಾಗಳುಒಂದರ ನಂತರ ಒಂದು ಭರ್ಜರಿ ಹಿಟ್‌ ಆಗುತ್ತಿವೆ. ಈ ನಟಿಯ ಕಾಲ್‌ಶೀಟ್‌ ಪಡೆಯಲು ನಿರ್ದೇಶಕರು,ನಿರ್ಮಾಪಕರು ಸರದಿಯಲ್ಲಿ ಕಾಯುತ್ತಿದ್ದಾರೆ!

ಈ ನಟಿಗೆ ತನ್ನ ಸಿನಿ ಜರ್ನಿಯ ಆರಂಭದಲ್ಲಿ ಅಷ್ಟೇನು ಯಶಸ್ಸು ದಕ್ಕದಿದ್ದರೂ ಸತತ ಪರಿಶ್ರಮದಿಂದ ಕೀರ್ತಿಯ ಶಿಖರ ಏರಿರುವ ಪರಿಯನ್ನು ಗಾಂಧಿ ನಗರ ಈಗ ಬೆರಗುಗಣ್ಣಿನಿಂದ ನೋಡುತ್ತಿದೆ. ತುಳುವಿನಿಂದ ಸಿನಿಮಾ ರಂಗ ಪ್ರವೇಶಿಸಿ, ಟಾಲಿವುಡ್‌ ನೋಡಿಬಂದು ಈಗ ಕನ್ನಡದಲ್ಲಿ ಭದ್ರ ನೆಲೆ ಕಂಡುಕೊಂಡಿರುವಹರಿಪ್ರಿಯಾ ಕನ್ನಡದ ಮಟ್ಟಿಗೆ ಬಹುಬೇಡಿಕೆಯ ನಟಿ.

ಕನ್ನಡ ಸಿನಿರಸಿಕರ ಗಮನವನ್ನು ‘ನೀರ್‌ ದೋಸೆ’ಯಿಂದ ತನ್ನ ಕಡೆಗೆ ತಿರುಗಿಸಿಕೊಂಡ ಈ ಬೆಡಗಿ ‘ಬೆಲ್‌ ಬಾಟಂ’ ಧರಿಸಿ ನಿಂತಾಗ ಪ್ರೇಕ್ಷಕರಿಂದ ಭಲೇ ಎನಿಸಿಕೊಂಡರು. ಈಗ ತೆರೆಗೆ ಬರಲು ಸಜ್ಜಾಗಿರುವ ‘ಸೂಜಿದಾರ’ದಲ್ಲೂ ಮೈಮನಪೋಣಿಸಿದಂತಿರುವ ಅವರ ಅಭಿನಯವನ್ನು ಮತ್ತು ಅವರೊಳಗಿನ ಒಬ್ಬ ಅಪ್ಪಟ ಅಭಿನೇತ್ರಿಯನ್ನು ಕಣ್ತುಂಬಿಕೊಳ್ಳಲು ಸಿನಿ ರಸಿಕರು ಕಾತರರಾಗಿದ್ದಾರೆ.

ಹರಿಪ್ರಿಯಾ ಅಭಿನಯದ ‘ಡಾಟರ್‌ ಆಫ್‌ ಪಾರ್ವತಮ್ಮ’ ಕೂಡ ಇದೇ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ. ಇನ್ನು ಅವರ ಅಭಿನಯದ ‘ಕಥಾ ಸಂಗಮ’, ‘ಕನ್ನಡ್‌ ಗೊತ್ತಿಲ್ಲ’, ‘ಕುರುಕ್ಷೇತ್ರ’, ‘ಬಿಚ್ಚುಗತ್ತಿ’, ‘ಎಲ್ಲಿದ್ದೆ ಇಲ್ಲಿತನಕ’ ಸಾಲು ಸಾಲು ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಈ ವರ್ಷ ಸದ್ದು ಮಾಡಲು ಸಜ್ಜಾಗಿವೆ.

ತಮ್ಮ ಅಭಿನಯದ ಎಂಟು ಸಿನಿಮಾಗಳುಒಂದೇ ವರ್ಷದಲ್ಲಿ ಬಿಡುಗಡೆ ಕಾಣುತ್ತಿರುವ ಸಂಭ್ರಮದಲ್ಲಿರುವ ಹರಿಪ್ರಿಯಾ ಅವರನ್ನು ‘ಸಿನಿಮಾ ಪುರವಣಿ’ ಮಾತಿಗೆಳೆದಾಗ, ತಮ್ಮ ಸಿನಿ ಜರ್ನಿಯ ಬಗ್ಗೆ ಹಲವು ಸಂಗತಿಗಳನ್ನು ಅವರು ಇಲ್ಲಿ ತೆರೆದಿಟ್ಟಿದ್ದಾರೆ.

‘ಸೂಜಿದಾರ’ ಸಿನಿಮಾದ ಬಗ್ಗೆ ಏನು ನಿರೀಕ್ಷೆ ಇದೆ ಎಂದು ಕೇಳಿದರೆ, ‘ಇದು ಕಮರ್ಷಿಯಲ್‌ ಸಿನಿಮಾ ಅಲ್ಲ, ಇದೊಂದು ಕಲಾತ್ಮಕ ಸಿನಿಮಾ. ಪ್ರೇಕ್ಷಕರು ಯಾವ ರೀತಿ ಸ್ವೀಕರಿಸುತ್ತಾರೊ ನೋಡಬೇಕು. ನಾನು ಯಾವ ಸಿನಿಮಾದ ಬಗ್ಗೆಯೂ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದಿಲ್ಲ. ಸಿನಿಮಾ ಇಂಡಸ್ಟ್ರಿಗೆ ಹೊಸದಾಗಿ ಬಂದಾಗ ನನ್ನ ಅಭಿನಯದ ಸಿನಿಮಾ ಯಾವಾಗ ರಿಲೀಸ್‌ ಆಗುತ್ತದೆ ಎನ್ನುವ ಬಗ್ಗೆ ಒಂದು ರೀತಿಯ ಎಕ್ಸೈಟ್‌ಮೆಂಟ್‌ ಮತ್ತು ಭರವಸೆಗಳನ್ನು ಇಟ್ಟುಕೊಂಡಿರುತ್ತಿದ್ದೆ. ನಾನೊಬ್ಬ ಕಲಾವಿದೆಯಾಗಿ ಒಳ್ಳೆಯ ಪಾತ್ರ ಆಯ್ಕೆ ಮಾಡಿಕೊಂಡಿದ್ದೀನಾ? ಆ ಪಾತ್ರಕ್ಕೆ ಶೇಕಡ ನೂರರಷ್ಟು ನ್ಯಾಯ ಒದಗಿಸಿದ್ದೀನಾ? ನನ್ನ ಅಭಿನಯನನಗೆ ತೃಪ್ತಿ ನೀಡಿದೆಯಾ? ಎನ್ನುವ ಬಗ್ಗೆಯಷ್ಟೇ ಈಗ ಯೋಚಿಸುತ್ತೇನೆ’ ಎನ್ನುತ್ತಾರೆ ಹರಿಪ್ರಿಯಾ.

ಜನರಿಗೆ ಇಷ್ಟವಾದರೆ ‘ಸೂಜಿದಾರ’ ಸಿನಿಮಾ ಖಂಡಿತಾ ಗೆದ್ದೇ ಗೆಲ್ಲುತ್ತದೆ. ನಾನು ಸಿನಿಮಾದಲ್ಲಿ ಗುರುತಿಸಿಕೊಂಡಿದ್ದೇ ಪರ್ಫಾಮೆನ್ಸ್‌ ಮೂಲಕ. ನನಗೆ ಯಶಸ್ಸು ಬಂದಿದ್ದು ಆ ನಂತರದಲ್ಲಿ. ಹಾಗಾಗಿ ಪರ್ಫಾಮೆನ್ಸ್‌ ಮೂಲಕವೇ ಗುರುತಿಸಿಕೊಳ್ಳಲು ಇಷ್ಟಪಡುತ್ತೇನೆ ಎನ್ನುತ್ತಾರೆ ಅವರು.

‘ಸೂಜಿದಾರ’ ಸಿನಿಮಾದಲ್ಲಿ ಅಭಿನಯಿಸುವಾಗ ನನಗೆ ಹೈ ಫೀವರ್‌ ಇತ್ತು. ಚಿತ್ರ ತಂಡ ಸ್ವಲ್ಪ ಬಿಡುವು ತೆಗೆದುಕೊಂಡು ಶೂಟಿಂಗ್‌ ಮಾಡೋಣ ಎಂದಿತ್ತು. ಆದರೆ, ಈ ಸಿನಿಮಾದ ನಾಯಕಿಯ ಪಾತ್ರ ತುಂಬಾ ಅಪ್‌ಸೆಟ್‌ ಆದಂತೆ ಮತ್ತು ಸೊರಗಿದಂತೆ ಕಾಣಿಸಿಕೊಳ್ಳಬೇಕಿತ್ತು. ಶೂಟಿಂಗ್‌ಗೆ ಇನ್ನು ಹನ್ನೆರಡು ದಿನಗಳು ಮಾತ್ರ ಇತ್ತು. ಹಾಗಾಗಿ ನಾನು ಪರಾವಾಗಿಲ್ಲ, ಶೂಟಿಂಗ್‌ ಮಾಡಿಯೇ ಬಿಡೋಣ ಎಂದು ಜ್ವರದಲ್ಲೇ ಅಭಿನಯಿಸಿದೆ. ಔಟ್‌ಪುಟ್‌ ನೋಡಿದಾಗ ಆ ಕಥೆಗೆ ಮತ್ತು ಪಾತ್ರಕ್ಕೆ ಏನು ಬೇಕಿತ್ತೋ ಅದು ತುಂಬಾ ಚೆನ್ನಾಗಿ ಮೂಡಿಬಂದಿದೆ. ಜ್ವರದಲ್ಲೂ ಶೂಟಿಂಗ್‌ ಮಾಡಿರುವುದು ಸಾಧನೆಯೇನಲ್ಲ. ಸಿನಿಮಾ ಮತ್ತು ಕಥೆಗೆ ಏನು ಬೇಕೋ ಅದನ್ನು ಮಾಡಿದ್ದೇನೆ ಅಷ್ಟೆ’ ಎನ್ನುವ ಹರಿಪ್ರಿಯಾ ಅವರ ಮಾತಿನಲ್ಲಿ ಅವರ ಹಾರ್ಡ್‌ವರ್ಕ್‌ ಮತ್ತು ಡೆಡಿಕೇಷನ್‌ ವ್ಯಕ್ತವಾಗುತ್ತಿತ್ತು.

‘ಡಾಟರ್‌ ಆಫ್‌ ಪಾರ್ವತಮ್ಮ’ ಕನ್ನಡದಲ್ಲಿ ನನಗೆ 25ನೇ ಸಿನಿಮಾ. ಬೇರೆ ಭಾಷೆಗಳಲ್ಲಿ ನಾನು ಅಭಿನಯಿಸಿರುವ ಸಿನಿಮಾಗಳನ್ನು ಸೇರಿಸಿಕೊಂಡರೆ ನನ್ನ ಸಿನಿ ಜರ್ನಿಯಲ್ಲಿ 37 ಸಿನಿಮಾಗಳಾಗುತ್ತವೆ ಎನ್ನುವ ಹರಿಪ್ರಿಯಾಗೆ 2020 ಒಳಗೆಅರ್ಧಶತಕ ಹೊಡೆಯುತ್ತೀರಾ ಎಂದರೆ, ಪ್ರೇಕ್ಷಕರ ಬಾಯಿಹರಕೆಯಿಂದ ಅದು ನೆರವೇರಿದರೆ ತುಂಬಾ ಖುಷಿ ಎನ್ನುವ ಮಾತು ಸೇರಿಸಿದರು.

ನಾನು ಈ ಸಿನಿಮಾ ರಂಗಕ್ಕೆ ಬಂದು 12 ವರ್ಷಗಳು ಆಯಿತು. ನನಗಾಗಿ ಕಥೆ ಬರೆಯುತ್ತಾರೆ, ಪಾತ್ರಗಳನ್ನು ಸೃಷ್ಟಿಸುತ್ತಾರೆಂದರೆ ತುಂಬಾ ಖುಷಿಯಾಗುತ್ತದೆ.ತುಂಬಾ ಜನ ಲೇಖಕರು ‘ನಿಮ್ಮನ್ನು ತಲೆಯಲ್ಲಿಟ್ಟುಕೊಂಡೇ ಈ ಕಥೆ ಬರೆದಿದ್ದೇವೆ. ನೀವೇ ಅಭಿನಯಿಸಬೇಕು’ ಎಂದು ಕೇಳಿದಾಗ ಕಲಾವಿದೆಯಾದದ್ದು ಸಾರ್ಥಕ ಎನಿಸುತ್ತದೆ. ಪುಟ್ಟಣ್ಣ ಕಣಗಾಲ್‌ ಅವರು ಆರತಿಗಾಗಿಯೇ ಕಥೆಗಳನ್ನು ಬರೆಸಿ ಆರತಿಯವರಿಂದಲೇ ಅಭಿನಯ ಮಾಡಿಸುತ್ತಿದ್ದರು ಎನ್ನುವುದನ್ನು ಕೇಳಿದ್ದೇನೆ. ನಮ್ಮನ್ನು ಮನಸಿನಲ್ಲಿಟ್ಟುಕೊಂಡು ಕಥೆ ಬರೆಯುತ್ತಾರೆಂದರೆ ಅಂತಹ ಅವಕಾಶ ಎಷ್ಟು ಜನರಿಗೆ ಸಿಗುತ್ತದೆ ಹೇಳಿ? ಎನ್ನುವ ಹರಿಪ್ರಿಯಾ ಅವರದ್ದುಸಂತೃಪ್ತಿಭಾವ.

ಡಾಕ್ಟರ್‌ ಆಗಬೇಕೆಂದು ಆರಂಭದಲ್ಲಿ ಕನಸು ಇಟ್ಟುಕೊಂಡಿದ್ದೆ. ರಕ್ತ ನೋಡಿದರೆ ನಾನುಭಯಬೀಳುತ್ತಿದ್ದೆ. ಆಗ ಎಲ್ಲರೂ ಇಷ್ಟೊಂದು ಹೆದರಿಕೊಳ್ಳುವ ನೀನು ಡಾಕ್ಟರ್‌ ಆಗ್ತೀಯಾ? ಅಂಥ ನನ್ನನ್ನು ಆಡಿಕೊಳ್ಳುತ್ತಿದ್ದರು. ಆಗ ಉದ್ಯಮಿಯಾಗಲು ಪಿಯುಸಿಯಲ್ಲಿ ಕಾಮರ್ಸ್‌ ತೆಗೆದುಕೊಂಡೆ. ಆಗಲೇ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು, ಸಿನಿಮಾಕ್ಕೆ ಬರುವ ಆಸಕ್ತಿ ಇರಲಿಲ್ಲ. ಶಾಲೆ, ಕಾಲೇಜು ದಿನಗಳಲ್ಲಿ ತುಂಬಾ ಚೆನ್ನಾಗಿ ಡಾನ್ಸ್‌ ಮಾಡುತ್ತಿದ್ದೆ. ನನ್ನ ಡಾನ್ಸ್‌ ನೋಡಿಯೇ ಸಿನಿಮಾಕ್ಕೆ ಆಯ್ಕೆ ಮಾಡಿಕೊಂಡಿದ್ದರು. ನಾನು ಸಿನಿಮಾ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವುದಕ್ಕಿಂತ ಈ ಪ್ರೊಫೆಷನ್‌ ನನ್ನನ್ನು ಆಯ್ಕೆ ಮಾಡಿಕೊಂಡಿತು. ನಾನು ಆಯ್ಕೆ ಮಾಡಿಕೊಂಡ ವೃತ್ತಿ ನನಗೆ ಒಳ್ಳೆಯ ಸ್ಥಾನ ತಂದುಕೊಟ್ಟಿದೆ. ಡಾಕ್ಟರ್‌ ಆಗುವ ಕನಸು ಈಡೇರದಿದ್ದರೂ ನನ್ನದು ಉದ್ಯಮದ ಹಿನ್ನೆಲೆಯ ಕುಟುಂಬ ಆಗಿರುವುದರಿಂದ ಮುಂದೊಂದು ದಿನ ಉದ್ಯಮ ಆರಂಭಿಸಿ, ಉದ್ಯಮಿಯಾಗುವ ಕನಸು, ಗುರಿಯಂತೂ ಇದ್ದೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT