ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೀಟೂ’ ಅಭಿಯಾನದ ಭಿನ್ನದನಿ ಹರ್ಷಿಕಾ

Last Updated 1 ನವೆಂಬರ್ 2018, 19:46 IST
ಅಕ್ಷರ ಗಾತ್ರ

‘ಮೀಟೂ’ ಅಭಿಯಾನ ಕನ್ನಡ ಸಿನಿಮಾ ರಂಗದಲ್ಲಿ ತಲ್ಲಣ ಸೃಷ್ಟಿಸಿದಾಗ ಭಿನ್ನ ನಿಲುವು ತಳೆದವರು ನಟಿ ಹರ್ಷಿಕಾ ಪೂಣಚ್ಚ. ಫೇಸ್‌ಬುಕ್‌ ಮೂಲಕ ಕೆಲವು ಕಟು ಮಾತುಗಳನ್ನೂ ಆಡಿದವರು – ಈ ಅಭಿಯಾನದ ಕುರಿತು. ಅವರು ‘ಸಿನಿಮಾ ಪುರವಣಿ’ಗೆ ಮಾತಿಗೆ ಸಿಕ್ಕಿದ್ದರು. ‘ಮೀಟೂ’ ಬಗ್ಗೆ ಕೆಲವು ಅನಿಸಿಕೆಗಳನ್ನು ಹಂಚಿಕೊಂಡರು. ಅವರ ಜೊತೆಗಿನ ಮಾತುಕತೆಯ ಆಯ್ದ ಭಾಗ ಇಲ್ಲಿದೆ:

‘ಮೀಟೂ’ ಬಗ್ಗೆ ಮಾತನಾಡಿದ ನಂತರ ಬೆದರಿಕೆ ಕರೆಗಳು ಬಂದವು ಎಂದು ಬರೆದಿದ್ದೀರಿ. ಯಾವ ರೀತಿಯ ಬೆದರಿಕೆ?

ನನಗೆ ಬಂದಿದ್ದು ಜೀವ ಬೆದರಿಕೆ ಅಲ್ಲ! ಆದರೆ, ‘ದಯವಿಟ್ಟು ನಮ್ಮ ವಿರುದ್ಧ ಮಾತಾಡಬೇಡಿ’ ಎಂಬ ಮನವಿ ಇರುವ ಕರೆಗಳು ಬಂದವು. ವಾಸ್ತವದಲ್ಲಿ, ನಾನು ಯಾರ ವಿರುದ್ಧವೂ ಮಾತನಾಡಿಲ್ಲ. ಆದರೆ ಮೀಟೂ ಎಂಬುದು ಕೆಲವರ ಪ್ರಚಾರಕ್ಕೆ ಬಳಕೆ ಆಗಬಾರದು, ಒಳ್ಳೆಯದಕ್ಕೆ ಮಾತ್ರ ಬಳಕೆ ಆಗಬೇಕು ಎಂದು ಹೇಳಿದ್ದೇನೆ ಎಂಬ ಉತ್ತರ ನೀಡಿದೆ ಅವರಿಗೆ. ಈ ಅಭಿಯಾನ ಪಬ್ಲಿಸಿಟಿಗೆ ಬಳಕೆ ಆದರೆ, ಅಭಿಯಾನವನ್ನು ದುರ್ಬಳಕೆ ಮಾಡಿಕೊಂಡಂತೆ ಆಗುತ್ತದೆ ಎಂದು ಹೇಳಿದೆ.

ಕರೆ ಮಾಡಿದ್ದು ಯಾರು?

ಯಾರ ಕಡೆಯಿಂದ ಆ ಕರೆ ಬಂದಿದ್ದು ಎಂಬುದು ಗೊತ್ತಿಲ್ಲ. ನನಗೆ ಬಾಲಿವುಡ್‌ನಿಂದ ಒಂದು ಆಫರ್‌ ಹಿಂದೊಮ್ಮೆ ಬಂದಿತ್ತು. ಆ ಸಿನಿಮಾದಲ್ಲಿ ಸರಿಯಲ್ಲದ್ದು ಏನೋ ಆಗುತ್ತದೆ ಎಂಬುದು ಅನಿಸಿದ ತಕ್ಷಣ, ತಂದೆಯವರಿಗೆ ಕರೆ ಮಾಡಿ ಪ್ಯಾಕ್‌ ಮಾಡಿ, ವಾಪಸ್ ಹೋಗೋಣ ಎಂದು ಹೇಳಿದೆ. ವಾಪಸ್‌ ಬೆಂಗಳೂರಿಗೆ ಬಂದುಬಿಟ್ಟೆ. ನಾನು ನನ್ನ ನಿಲುವುಗಳನ್ನು ಬಿಟ್ಟುಕೊಡಲಿಲ್ಲ. ನಾನು ಕಷ್ಟಪಟ್ಟು ಇಲ್ಲಿ ಬೆಳೆದವಳು. ನನಗೆ ಯಾವುದೇ ಸಿನಿಮಾ ಹಿನ್ನೆಲೆ ಇಲ್ಲ. ನಾನಾಗಿಯೇ ನನಗೊಂದು ಅಸ್ಮಿತೆ ಗಳಿಸಿದ್ದೇನೆ. ನನ್ನ ಎಥಿಕ್ಸ್‌ಗಳನ್ನು ಬಿಡಬಾರದು ಎಂಬ ಕಾರಣಕ್ಕೆ ಆ ಸಿನಿಮಾವನ್ನೇ ಬಿಟ್ಟೆ.

ಕೆಲವರಿಗೆ ಸಿನಿಮಾನೂ ಬೇಕು, ಅದರಿಂದ ಬರುವ ಹಣವೂ ಬೇಕು. ಕೊನೆಗೆ ಎಷ್ಟೋ ವರ್ಷಗಳ ನಂತರ ನಟನ ‘ಹೆಸರು ಹೇಳುವುದು ಸರಿಯಲ್ಲ’ ಎಂದಷ್ಟೇ ನಾನು ಹೇಳಿದ್ದು. ನಾನು ಬಾಲಿವುಡ್‌ ಸಿನಿಮಾ ವಿಚಾರದಲ್ಲಿ ಮಾಡಿದಂತೆ ನೀವೂ ಏಕೆ ಮಾಡಬಾರದು ಎಂಬುದು ನಾನು ಕೇಳುವ ಪ್ರಶ್ನೆ.

ನಿಮ್ಮ ಬೆಂಬಲ ಯಾರಿಗೆ ಈ ಅಭಿಯಾನದಲ್ಲಿ?

ನೀವು ಪುರುಷರಿಗೆ ಬೆಂಬಲ ಕೊಡುವುದು ಎಷ್ಟು ಸರಿ ಎಂದು ಒಬ್ಬರು ಕೇಳಿದ್ದರು. ಆ ಪ್ರಶ್ನೆಯೇ ಸರಿಯಲ್ಲ. ನಾನು ಪುರುಷರಿಗೇನೂ ಬೆಂಬಲ ಕೊಟ್ಟಿಲ್ಲ. ಎರಡೂ ಕೈ ಸೇರಿದರೆ ಮಾತ್ರ ಚಪ್ಪಾಳೆ ಎಂಬುದು ನನ್ನ ಮಾತು. ನಾನು ಸತ್ಯವನ್ನು ಮಾತನಾಡಿದೆ. ಅದಕ್ಕೆ ನನಗೆ ಖುಷಿಯಿದೆ. ಸತ್ಯದ ಪರವಾಗಿ ನಿಂತಿದ್ದಕ್ಕೆ ಹೆಮ್ಮೆ ಇದೆ. ಕೆಲವರು ನನಗೆ ಕರೆ ಮಾಡಿ ಒಳ್ಳೆಯ ಮಾತು ಹೇಳಿದ್ದೀರಿ ನೀವು ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ಹಾಗಾದರೆ, ಸಮಸ್ಯೆ, ಕಿರುಕುಳ ಎದುರಾದಾಗ ಏನು ಮಾಡಬೇಕು?

ನಮ್ಮ ಸಿನಿಮಾ ಉದ್ಯಮಕ್ಕೆ ಒಂದು ಛೇಂಬರ್‌ (ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ) ಇದೆ. ಅದಲ್ಲದಿದ್ದರೆ ಪೊಲೀಸರು ಇದ್ದಾರೆ. ಅವೆಲ್ಲಕ್ಕೂ ಮಿಗಿಲಾಗಿ ಕೋರ್ಟ್ ಇದೆ. ಈ ಮೂರೂ ಸಂಸ್ಥೆಗಳನ್ನು ಬಿಟ್ಟು ಆನ್‌ಲೈನ್‌ ಮೂಲಕ ಎಲ್ಲವನ್ನೂ ಹೇಳಿಕೊಳ್ಳುವುದು ಅಂದರೆ? ಪಬ್ಲಿಸಿಟಿಗಾಗಿಯಾ ಇದು, ಇದರ ಅರ್ಥ ಏನು? ಇದು ನನ್ನ ಪ್ರಶ್ನೆ.

ಹಿಂದಿನ ಕಾಲದ ನಟಿಯರು ಬಹಳ ನೇರವಂತಿಕೆ ಇರುವವರಾಗಿದ್ದರು. ತಮಗೆ ಇಷ್ಟವಿಲ್ಲದ್ದನ್ನು ಇಷ್ಟವಿಲ್ಲ ಎಂದು ಹೇಳುತ್ತಿದ್ದರು.

ಸ್ಟಾರ್‌ ನಟರು ಕೂಡ ಆ ಹಂತ ತಲುಪಲು ಹತ್ತು–ಹದಿನೈದು ವರ್ಷ ಕಷ್ಟಪಟ್ಟಿರುತ್ತಾರೆ. ಒಂದೇ ಮಾತಿನಿಂದ ಅವರನ್ನು ಕೆಳಕ್ಕೆ ತಳ್ಳಬಾರದು. ಮೀಟೂ ಎಂಬುದು ನಿಜವಾಗಿ ಕಿರುಕುಳ ಅನುಭವಿಸಿದವರಿಗೆ ಬೆಂಬಲ ಆಗಬೇಕಿತ್ತು. ಆದರೆ ಇದು ನಕಾರಾತ್ಮಕ ಆಗಿಬಿಟ್ಟಿದೆ. ಅಭಿಯಾನದ ಉದ್ದೇಶವೇ ಹಾಳಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT