ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ಚಿತ್ರೀಕರಣಕ್ಕೆ ಹೊಸಪೇಟೆ ಆಯಿತು ಹಾಟ್‌ಸ್ಪಾಟ್‌

ಸಾಲು ಸಾಲು ಚಿತ್ರಗಳ ಪ್ರಚಾರ
Last Updated 19 ಅಕ್ಟೋಬರ್ 2022, 9:33 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ವಿಶ್ವಪ್ರಸಿದ್ಧ ಹಂಪಿ ಮೊದಲಿನಿಂದಲೂ ಸಿನಿಮಾ ಚಿತ್ರೀಕರಣಕ್ಕೆ ಹೇಳಿ ಮಾಡಿಸಿದ ಸ್ಥಳ. ಆದರೆ, ಈಗ ಹೊಸಪೇಟೆ ನಗರ ಕೂಡ ಸಿನಿಮಾ ಮಂದಿಯ ಇಷ್ಟದ ಸ್ಥಳವಾಗಿ ಮಾರ್ಪಟ್ಟಿದೆ.

ನಗರದಲ್ಲಿ ನಡೆಯುತ್ತಿರುವ ಸಾಲು ಸಾಲು ಚಿತ್ರಗಳ ಚಿತ್ರೀಕರಣ, ಪ್ರಚಾರವೇ ಇದಕ್ಕೆ ಸಾಕ್ಷಿ. ಒಂದರ್ಥದಲ್ಲಿ ಹೊಸಪೇಟೆ ‘ಫಿಲ್ಮ್‌ ಪ್ರಮೋಷನ್‌ ಹಬ್‌’ ಆಗಿ ಬದಲಾಗುತ್ತಿದೆ.

ದೊಡ್ಡ ಸೆಟ್‌ಗಳಿಲ್ಲದೇ ನಿಸರ್ಗದತ್ತವಾದ ಸ್ಥಳಗಳಲ್ಲಿ ಸಿನಿಮಾ ಚಿತ್ರೀಕರಣಕ್ಕಾಗಿ ಬೆಂಗಳೂರು, ಮೈಸೂರು ಸಿನಿಮಾ ಮಂದಿಯ ಅಚ್ಚುಮೆಚ್ಚಿನ ಸ್ಥಳಗಳಾಗಿದ್ದವು. ಈಗ ಅವರೆಲ್ಲ ಹೊಸಪೇಟೆಯತ್ತ ಮುಖ ಮಾಡಿದ್ದಾರೆ. ಇತ್ತೀಚೆಗೆ ನಟ, ನಿರ್ಮಾಪಕ ಉಪೇಂದ್ರ ಅವರ ‘ಯುಐ’ ಸಿನಿಮಾದ ಮೂರು ದಿನಗಳ ಚಿತ್ರೀಕರಣ ಕಾರ್ಯ ನಗರದ ಮೀರ್‌ ಆಲಂ ಚಿತ್ರ ಮಂದಿರದಲ್ಲಿ ನಡೆಯಿತು. ಅದಕ್ಕೂ ಮುನ್ನ ಉಪೇಂದ್ರ ಹಾಗೂ ಚಿತ್ರ ತಂಡದವರು ದಿವಂಗತ ನಟ ಡಾ. ಪುನೀತ್‌ ರಾಜಕುಮಾರ್‌ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅದರ ಬಗ್ಗೆ ಪ್ರಚಾರವೂ ಕೈಗೊಂಡರು.

ಇದಕ್ಕೂ ಮುನ್ನ ಹಲವು ದಿನಗಳವರೆಗೆ ‘ನಿಶಾ’ ಚಿತ್ರದ ಚಿತ್ರೀಕರಣ ನಡೆಯಿತು. ‘ಲವ್‌ 360 ಡಿಗ್ರಿ’, ‘ಗಜಕೇಸರಿ’ ಸೇರಿದಂತೆ ಇತರೆ ಸಿನಿಮಾಗಳ ಪ್ರಮೋಷನ್‌ ಕಾರ್ಯ ಜರುಗಿತು. ಎಲ್ಲ ಸಿನಿಮಾಗಳ ನಟ, ನಟಿ ಸೇರಿದಂತೆ ಇಡೀ ಚಿತ್ರತಂಡವೇ ನಗರಕ್ಕೆ ಬಂದಿತ್ತು. ಹೀಗೆ ಒಂದಾದ ನಂತರ ಒಂದು ಸಿನಿಮಾಗಳ ಚಿತ್ರೀಕರಣ, ಪ್ರಮೋಷನ್‌ ನಡೆಯುತ್ತಿದೆ.

ಇಷ್ಟೇ ಅಲ್ಲ, ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್‌ ಸೇರಿದಂತೆ ಇತರೆ ವೃತ್ತಿಪರ ಕೋರ್ಸ್‌ ಮಾಡುತ್ತಿರುವ ವಿದ್ಯಾರ್ಥಿಗಳೆಲ್ಲ ಸಿನಿಮಾ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಇರುವ ಸಾಧನಗಳಲ್ಲಿಯೇ ಅವರೆಲ್ಲ ಕಿರು ಚಿತ್ರಗಳನ್ನು ತಯಾರಿಸಿ, ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಇದನ್ನೆಲ್ಲ ಗಮನದಲ್ಲಿ ಇಟ್ಟುಕೊಂಡು ಸ್ಥಳೀಯರಿಗೆ ಸಿನಿಮಾದಲ್ಲಿ ಅವಕಾಶ ಕೊಟ್ಟು ಚಿತ್ರೀಕರಣ ನಡೆಸಲಾಗುತ್ತಿದೆ. ಖರ್ಚು ಕೂಡ ಕಡಿಮೆ ಇರುವುದರಿಂದ ಸಿನಿಮಾ ನಿರ್ಮಾಪಕರು ಹೊಸಪೇಟೆಯನ್ನು ಆಯ್ಕೆ ಮಾಡುತ್ತಿದ್ದಾರೆ.

ಹೊಸಪೇಟೆ ನಗರವೇಕೆ ಆಯ್ಕೆ?

ಸಿನಿಮಾ ಚಿತ್ರೀಕರಣ, ಪ್ರಮೋಷನ್‌ಗಾಗಿ ಹೊಸಪೇಟೆ ನಗರವೇಕೆ ಆಯ್ಕೆ ಮಾಡಲಾಗುತ್ತಿದೆ? ಇಂಥದ್ದೊಂದು ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಸ್ಥಳೀಯರು ಸಿನಿಮಾ ಮಂದಿಯ ಜೊತೆಗೆ ಹೊಂದಿರುವ ನಿಕಟ ಸಂಪರ್ಕ, ಸಿನಿಮಾಗಳಿಗೆ ಹಣ ಹೂಡಿಕೆ ಮಾಡುತ್ತಿರುವುದು ಇದಕ್ಕೆ ಮುಖ್ಯ ಕಾರಣ.

‘ಸಣ್ಣಪುಟ್ಟ ಸನ್ನಿವೇಶದ ದೃಶ್ಯಗಳ ಚಿತ್ರೀಕರಣವನ್ನು ಬೆಂಗಳೂರು, ಮೈಸೂರು ಸುತ್ತಮುತ್ತ ಮಾಡಬಹುದು. ಆದರೆ, ಉತ್ತರ ಕರ್ನಾಟಕದಲ್ಲಿ ದೊಡ್ಡ ಮಾರುಕಟ್ಟೆಯಿದೆ. ಅದನ್ನು ಆಕರ್ಷಿಸಲು ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ಕೊಂಡಿಯಂತಿರುವ ಹೊಸಪೇಟೆ ನಗರವನ್ನು ಆಯ್ಕೆ ಮಾಡಲಾಗುತ್ತಿದೆ. ಪುನೀತ್‌ ರಾಜಕುಮಾರ್‌ ಅವರಿಗೆ ಪ್ರಿಯವಾದ ಊರು ಇದು. ಅವರ ಮರಣ ನಂತರ ಈ ಊರಿನ ಮಹತ್ವ ಹೆಚ್ಚಿನವರಿಗೆ ಗೊತ್ತಾಗಿದೆ. ಅದಕ್ಕಾಗಿಯೇ ಸಿನಿಮಾದವರು ಹೊಸಪೇಟೆ ಕಡೆಗೆ ಮುಖ ಮಾಡಿದ್ದಾರೆ’ ಎನ್ನುತ್ತಾರೆ ಪತ್ರಕರ್ತ, ಸಿನಿಮಾ ನಿರ್ಮಾಣದ ಉಸ್ತುವಾರಿ ಸತೀಶ್‌ ಬಿಲ್ಲಾಡಿ.

‘ಹಂಪಿಯಲ್ಲಿ ಜಾಕಿ ಚಾನ್‌ ಅವರಿಂದ ಹಿಡಿದು ಹೆಸರಾಂತ ನಟ, ನಟಿಯರ ಚಿತ್ರಗಳಚಿತ್ರೀಕರಣವಾಗಿದೆ. ಈ ಹಿಂದೆ ಅಲ್ಲಿ ಚಿತ್ರೀಕರಣಕ್ಕೆ ಬಹಳ ಕಡಿಮೆ ಶುಲ್ಕವಿತ್ತು. ಈಗ ದಿನಕ್ಕೆ ₹1 ಲಕ್ಷ ಇದೆ. ಚಿತ್ರೀಕರಣಕ್ಕೆ ಸಬ್ಸಿಡಿಯೂ ಇಲ್ಲ. ಹಂಪಿ ಬದಲು ಹೊಸಪೇಟೆ ನಗರದಲ್ಲಿ ಚಿತ್ರೀಕರಣಕ್ಕೆ ಹೆಚ್ಚು ಒತ್ತು ಕೊಡುವುದಕ್ಕೆ ಇದು ಕೂಡ ಒಂದು ಕಾರಣ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT