ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತೆಸೆರೆಯ ವ್ಯೂಹದೊಳಗೆ...

Last Updated 11 ಜುಲೈ 2019, 19:30 IST
ಅಕ್ಷರ ಗಾತ್ರ

‘ಹೋ ಸ್ಟೇಜಸ್’. ಇದು ಆನ್‌ಲೈನ್ ವೇದಿಕೆಯಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಹಾಟ್‌ಸ್ಟಾರ್‌ನ ಹಿಂದಿ ವೆಬ್ ಸರಣಿ. ಇದೇ ಹೆಸರಿನಲ್ಲಿ ಪ್ರಸಾರಗೊಂಡಿದ್ದ ಇಸ್ರೇಲ್‌ನ ಕ್ರೈಂ ಥ್ರಿಲ್ಲರ್ ವೆಬ್ ಸರಣಿಯಿಂದ ಪ್ರೇರಣೆಗೊಂಡು ಇದನ್ನು ನಿರ್ಮಿಸಲಾಗಿದೆ.

ಮುಸುಕುಧಾರಿಗಳ ಒತ್ತೆ ಸೆರೆಗೆ ಸಿಲುಕಿ ಅದರಿಂದ ಹೊರಬರಲು ಪ್ರಯತ್ನಿಸುವ ವೈದ್ಯೆಯೊಬ್ಬರ ಕುಟುಂಬದ ಚಿತ್ರಣವೇ ಈ ಸರಣಿಯ ಕಥಾಹಂದರ. ಸುಧೀರ್ ಮಿಶ್ರಾ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸರಣಿಯ ಮೊದಲ ಸೀಸನ್ 10 ಕಂತುಗಳಲ್ಲಿ ಈಗಾಗಲೇ ಪ್ರಸಾರವಾಗಿದೆ. 30 ನಿಮಿಷಗಳ ಅವಧಿಯ ಪ್ರತಿ ಕಂತು ಕೂಡ ಉತ್ತಮವಾಗಿ ಮೂಡಿ ಬಂದಿದೆ. ಬಂದೂಕುಧಾರಿಗಳು ನಾಲ್ವರನ್ನು ಒತ್ತೆಯಾಗಿಟ್ಟುಕೊಂಡಿರುವ ರಂಗದಿಂದ ಇದರ ಮೊದಲ ಕಂತು ಆರಂಭವಾಗುತ್ತದೆ. ಮುಂದೆ ಫ್ಲ್ಯಾಷ್ ಬ್ಯಾಕ್ ಕಥನತಂತ್ರದಲ್ಲಿ ಕಥೆ ಸಾಗುತ್ತದೆ.

ಡಾ.ಮೀರಾ ಆನಂದ್ ಪ್ರತಿಷ್ಠಿತ ಆಸ್ಪತ್ರೆಯೊಂದರ ವೈದ್ಯೆ. ಆ ಆಸ್ಪತ್ರೆಗೆ ಶಸ್ತ್ರಚಿಕಿತ್ಸೆಗಾಗಿ ಮುಖ್ಯಮಂತ್ರಿ ದಾಖಲಾಗುತ್ತಾರೆ. ಅವರ ಶಸ್ತ್ರಚಿಕಿತ್ಸೆಯ ಜವಾಬ್ದಾರಿಯನ್ನು ಮೀರಾ ಅವರಿಗೆ ವಹಿಸಲಾಗುತ್ತದೆ. ಈ ಜವಾಬ್ದಾರಿಯನ್ನು ನಿಭಾಯಿಸುವ ಆತ್ಮವಿಶ್ವಾಸದೊಂದಿಗೆ ಮನೆಗೆ ಮರಳುವ ಆಕೆಗೆ ಆಘಾತವೊಂದು ಕಾದಿರುತ್ತದೆ. ಆಕೆಯ ಪತಿ, ಪುತ್ರ ಹಾಗೂ ಪುತ್ರಿಯನ್ನು ಬಂದೂಕಿನ ಅಂಚಿನಲ್ಲಿ ನಿಲ್ಲಿಸಿ ದುಷ್ಕರ್ಮಿಗಳು ವಿಚಿತ್ರ ಬೇಡಿಕೆಯನ್ನು ಮುಂದಿರಿಸುತ್ತಾರೆ. ಶಸ್ತ್ರಚಿಕಿತ್ಸೆ ನಡೆದ ಬಳಿಕ ಮುಖ್ಯಮಂತ್ರಿ ಬದುಕಿರಬಾರದು, ಹಾಗಿದ್ದರೆ ಮಾತ್ರ ನಿನ್ನ ಕುಟುಂಬದವರ ಜೀವ ಉಳಿಯುತ್ತದೆ ಎನ್ನುತ್ತಾರೆ. ಅಪಹರಣಕಾರರ ಬೇಡಿಕೆಗಳಿಗೆ ವೈದ್ಯೆ ಬಗ್ಗುತ್ತಾರಾ... ಈ ಸುಳಿಯಿಂದ ಅವರು ಹೊರ ಬರುತ್ತಾರಾ ಎನ್ನುವುದು ಈ ವೆಬ್ ಸರಣಿಯ ಕಥಾಸಾರ.

ಇದರಲ್ಲಿ ಬರುವ ಪ್ರತಿ ಪಾತ್ರಗಳಿಗೂ ಇನ್ನೊಂದು ಮುಖವಿದೆ ಎಂಬುದು ಕಥೆ ಮುಂದೆ ಸಾಗಿದಂತೆ ಅರಿವಾಗುತ್ತದೆ. ಆರಂಭದ ಎರಡು ಕಂತುಗಳನ್ನು ಗಮನಿಸಿದರೆ ಭಯೋತ್ಪಾದಕರು ತಮ್ಮ ಉದ್ದೇಶ ಸಾಧನೆಗಾಗಿ ಮುಖ್ಯಮಂತ್ರಿಯನ್ನು ಕೊಲ್ಲಲು ಬಯಸಿದ್ದಾರೆ ಎಂದು ನಮಗೆ ಅನಿಸಿದರೂ ಕಥೆ ಸಾಗಿದಂತೆ ಇವರು ಯಾರಿಂದಲೋ ನಿಯಂತ್ರಿಸಲ್ಪಡುತ್ತಾರೆ ಮತ್ತು ಅವರಿಗೆ ಇನ್ಯಾವುದೋ ಗೂಢ ಲಕ್ಷ್ಯ ಇದೆ ಎಂಬುದು ಅರ್ಥವಾಗುತ್ತದೆ. ಆದರೆ ಸರಣಿ ಅಂತ್ಯಗೊಂಡರೂ ನಮಗೆ ಇದಕ್ಕೆ ಸ್ಪಷ್ಟ ಉತ್ತರ ಸಿಗುವುದಿಲ್ಲ.

ಡಾ. ಮೀರಾ ಆನಂದ ಪಾತ್ರದಲ್ಲಿ ನಟಿಸಿರುವ ಟಿಸ್ಕಾ ಚೋಪ್ರಾ ತಮ್ಮ ಮನೋಜ್ಞ ಅಭಿನಯದ ಮೂಲಕ ಮೋಡಿ ಮಾಡುತ್ತಾರೆ. ಮುಖ್ಯಪಾತ್ರದಲ್ಲಿ ನಟಿಸಿರುವ ರೋನಿತ್ ರಾಯ್ ಕೂಡ ಅದ್ಭುತವಾಗಿ ನಟಿಸಿದ್ದಾರೆ. ಪರ್ವಿನ್ ದಬಸ್, ಹಾಶಿಂ ಗುಲಾಟಿ, ಮೋಹನ್ ಕಪೂರ್ ಮತ್ತಿತರರು ಮುಖ್ಯ ಭೂಮಿಕೆಯಲ್ಲಿದ್ದಾರೆ.

ಸರಣಿಯ ಪ್ರತಿ ಕಂತಿನ ಕೊನೆಯಲ್ಲಿ ರೋಚಕತೆಯನ್ನು ಉಳಿಸುವಲ್ಲಿ ನಿರ್ದೇಶಕರು ವಿಫಲರಾಗಿದ್ದಾರೆ ಎನ್ನಬಹುದು. ಹಲವು ಸನ್ನಿವೇಶಗಳು ಪ್ರೇಕ್ಷಕರಲ್ಲಿ ಗೊಂದಲವುಂಟು ಮಾಡುತ್ತವೆ. ಕೆಲವೊಮ್ಮೆ ಮುಖ್ಯ ಕಥೆಯ ಕೊಂಡಿಯಿಂದ ಕಳಚಿದಂತೆ ಭಾಸವಾಗುತ್ತದೆ. ಮೊದಲ ಸೀಸನ್ ಎಲ್ಲ ಕಂತುಗಳೂ ಒತ್ತೆಸೆರೆಯ ಚೌಕಟ್ಟಿನೊಳಗೆ ಕೇಂದ್ರೀಕೃತವಾಗಿದೆ. ಈ ನಡುವೆ ಅಲ್ಲಲ್ಲಿ ಇತರ ಸನ್ನಿವೇಶಗಳು ಕೂಡ ಮೂಡಿ ಬಂದರೂ ಇವುಗಳು ಕೂಡ ಅದರ ಸುತ್ತವೇ ಗಿರಕಿ ಹೊಡೆಯುತ್ತವೆ. ಕೊನೆಯ ಕಂತು ನಮ್ಮಲ್ಲಿ ಹಲವು ಪ್ರಶ್ನೆಗಳನ್ನು ಬಾಕಿ ಉಳಿಸುವ ಮೂಲಕ ಕೊನೆಗೊಳ್ಳುತ್ತದೆ. ಈ ಮೂಲಕ ನಿರ್ದೇಶಕರು ಸೀಕ್ವೆಲ್‌ನ ಸುಳಿವು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT