ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಐ ಲವ್‌ ಯು’ ನಿಜವಾದ ಟ್ರಂಪ್‌ಕಾರ್ಡ್‌!

Last Updated 14 ಜೂನ್ 2019, 13:56 IST
ಅಕ್ಷರ ಗಾತ್ರ

ಸಿನಿಮಾ: ಐ ಲವ್‌ ಯು

ನಿರ್ಮಾಣ ಮತ್ತು ನಿರ್ದೇಶನ: ಆರ್‌.ಚಂದ್ರು

ತಾರಾಬಳಗ: ಉಪೇಂದ್ರ, ರಚಿತಾ ರಾಮ್‌, ಸೋನು ಗೌಡ,‌ಬ್ರಹ್ಮಾನಂದಂ

**

‘ರಿಯಲ್‌ ಸ್ಟಾರ್‌’ ಉಪೇಂದ್ರ ಅವರ ಮ್ಯಾನರಿಸಂಗೆ ತಕ್ಕಂತೆಯೇ ಕಥೆ ಹೆಣೆದು, ಸಂಭಾಷಣೆ ಬರೆದು, ನಿರ್ದೇಶನ ಮಾಡಿದ್ದಾರೆಆರ್‌.ಚಂದ್ರು. ಬದುಕು, ಭಾವನೆಗಳ ಜತೆಗೆ ‘ಪ್ರೀತಿ’ಯೆಂಬ ಎರಡಕ್ಷರಗಳಲ್ಲಿ ಅಡಗಿರುವ ಎಲ್ಲವನ್ನೂ ಹದವಾಗಿ ಬೆರೆಸಿ ಪ್ರೇಕ್ಷಕರಿಗೆ, ಅದರಲ್ಲೂ ಹರೆಯದವರಿಗೆ ಇಷ್ಟವಾಗುವಂತೆ ಉಣಬಡಿಸಿದ್ದಾರೆ. ‘ಚಂದ್ರು ಹೃದಯ ಮತ್ತು ಉಪ್ಪಿ ಮೆದುಳು’ ಸೇರಿದ ಮೇಲೆ ಪ್ರೇಕ್ಷಕರು ‘ಐ ಲವ್‌ ಯು’ ಅನ್ನಲೇಬೇಕು– ಎನ್ನುವಂತಿದೆ ಸಿನಿಮಾ.

ಚಿತ್ರದ ನಾಯಕ ಸಂತೋಷ್ ಯಾನೆ ಸಂತು (ಉಪೇಂದ್ರ) ‘ಲವ್ ಎಂದರೆ ದೈಹಿಕ ಸಂಬಂಧಕ್ಕಾಗಿ ಹಾಕಿಕೊಂಡಿರುವ ಮುಖವಾಡ. ಆ ಗುರಿ ಸಾಧಿಸಲು ಐ ಲವ್‌ ಯು ಎನ್ನುವ ಟ್ರಂಪ್‌ ಕಾರ್ಡ್‌ ಬಳಸಿಕೊಳ್ಳುತ್ತಾರಷ್ಟೆ. ಯಾವುದೇ ಮನುಷ್ಯ ತನ್ನನ್ನು ತಾನುಪ್ರೀತಿಸುವಷ್ಟು ಬೇರೆ ಯಾರನ್ನೂ ಪ್ರೀತಿಸಲು ಸಾಧ್ಯವಿಲ್ಲ' ಎಂದೇ ವಾದಿಸುತ್ತಾನೆ. ಅದಕ್ಕೆ ಸಮರ್ಥನೆಯಾಗಿ, ಕೋತಿಯೊಂದು ನೀರು ಕುತ್ತಿಗೆಯವರೆಗೆ ಬಂದಾಗ ತನ್ನ ಮರಿಯನ್ನೂ ನೀರಿನಲ್ಲಿ ಮುಳುಗಿಸಿ ತನ್ನ ಜೀವ ಉಳಿಸಿಕೊಳ್ಳುವ ಉಪಕಥೆಯನ್ನೂ ಹೇಳುತ್ತಾನೆ.

ಇದಕ್ಕೆ ತದ್ವಿರುದ್ಧವಾಗಿ ನಾಯಕಿ ಧಾರ್ಮಿಕ ಎನ್ನುವಾಕೆ (ರಚಿತಾ ರಾಮ್‌) ‘ಪ್ರೀತಿ ಎಂದರೆ ಅಪ್ಪಟ ಭಾವನೆಗಳ ಸಮ್ಮಿಲನ, ಅದೊಂದು ಪವಿತ್ರ, ತ್ಯಾಗ’ ಎನ್ನುತ್ತಾಳೆ. ಪ್ರೀತಿ ಎಂದರೇನೆಂದು ಪಿಎಚ್‌.ಡಿ ಮಾಡುವಸಂಶೋಧನಾ ವಿದ್ಯಾರ್ಥಿನಿಯ ಪಾತ್ರ ಆಕೆಯದು. ಇಬ್ಬರದೂ ವಿಭಿನ್ನ ನಿಲುವು. ‘ಪ್ರೀತಿ ಪ್ರೇಮ ಎಲ್ಲಾ ಪುಸ್ತಕದ ಬದನೆಕಾಯಿ’ ಎನ್ನುವ ಸಂತು ಬಾಯಲ್ಲಿ, ಧಾರ್ಮಿಕ ನಿಜವಾಗಿಯೂ ಯಾರಿಗೆ ‘ಐ ಲವ್‌ ಯು’ ಹೇಳಿಸುತ್ತಾಳೆ ಎನ್ನುವುದು ಚಿತ್ರದ ಕುತೂಹಲ ಮತ್ತು ತಿರುಳು.

ನಾಯಕ ಸಂತು, ಬದುಕಿನಲ್ಲಿ ಬೆಲೆ ಕಟ್ಟಲಾಗದ ವ್ಯಕ್ತಿಗೆ ಕೊಡಬೇಕೆಂದು ಖರೀದಿಸುವ ವಜ್ರದ ಉಂಗುರವನ್ನು ಪ್ರಾಣಕ್ಕಿಂತ ಹೆಚ್ಚಾಗಿ ತಾನು ಪ್ರೀತಿಸುತ್ತಿದ್ದ ಪ್ರೇಯಸಿಗೆ ಅಥವಾ ತನ್ನ ಪತ್ನಿಗೆ ಈ ಇಬ್ಬರಲ್ಲಿ ಯಾರಿಗೆ ಕೊಡುತ್ತಾನೆ ಎನ್ನುವುದು ಚಿತ್ರದ ಕೊನೆಯಲ್ಲಿ ಗೊತ್ತಾಗುತ್ತದೆ.ಪ್ರೇಕ್ಷಕನಿಗೆ ಬೋರೆನಿಸದ ರೀತಿಯಲ್ಲಿ ಚಿತ್ರ ಸಾಗುತ್ತದೆ. ಕೆಲವು ಸಂಭಾಷಣೆಗಳು ಕಚಗುಳಿಯಿಡುವಂತಿವೆ.ಮಧ್ಯಂತರದ ವಿರಾಮ, ಕ್ಲೈಮ್ಯಾಕ್ಸ್‌ನ ಕುತೂಹಲ ನಿರ್ದೇಶಕನ ಜಾಣ್ಮೆಗೆ ಕನ್ನಡಿ ಹಿಡಿದಿದೆ.

ಉಪೇಂದ್ರ ಅವರ ಕೆಲವು ಸಂಭಾಷಣೆಗಳು ಅವರ ಈ ಹಿಂದಿನ ‘ಹಿಟ್‌’ ಸಿನಿಮಾಗಳ ನೆನಪುಗಳ ಮೆರವಣಿಗೆಯಲ್ಲಿ ಪ್ರೇಕ್ಷಕರನ್ನು ಮೀಯುವಂತೆ ಮಾಡುತ್ತದೆ.ಕಾಲೇಜು ವಿದ್ಯಾರ್ಥಿಯಾಗಿಯೂ, ಗೃಹಸ್ಥನ ಗೆಟಪ್ಪಿನಲ್ಲೂ ಉಪ್ಪಿ ನಟನೆ ಚೆನ್ನಾಗಿದೆ. ಹುರಿಗೊಳಿಸಿರುವ ಅವರ ಮೈಕಟ್ಟು ಮೂವತ್ತರ ಪ್ರಾಯದವರನ್ನೂ ನಾಚಿಸುವಂತಿದೆ. ಒಂದು ಹಾಡಿನಲ್ಲಂತೂ ಅವರು ಯುವ ನಟರಿಗೆ ಪೈಪೋಟಿ ನೀಡುವಂತೆ ಸಖತ್‌ ಸ್ಟೆಪ್‌ ಹಾಕಿದ್ದಾರೆ.

ಗುಳಿ ಕೆನ್ನೆಯ ಬೆಡಗಿ ರಚಿತಾ ರಾಮ್‌ ನಟನೆ ಮತ್ತು ಅನನ್ಯ ಸೌಂದರ್ಯದಿಂದ ಇಡೀ ಸಿನಿಮಾ ಅಷ್ಟೇ ಅಲ್ಲ,ಪ್ರೇಕ್ಷಕರ ಮನಸನ್ನು ಆವರಿಸಿಕೊಳ್ಳುತ್ತಾರೆ. ಇನ್ನು ಸೋನುಗೌಡ ಅವರದು ಗಂಡನ ಶ್ರೇಯಸ್ಸು ಬಯಸುವ, ಮುಗ್ಧ ಗೃಹಿಣಿಯ ಪಾತ್ರ. ಸಿಕ್ಕ ಅವಕಾಶದಲ್ಲಿ ಸೋನು ಗಮನ ಸೆಳೆಯುತ್ತಾರೆ.ಬ್ರಹ್ಮಾನಂದಂ ನಟನೆ ಎರಡು ದೃಶ್ಯಗಳಿಗಷ್ಟೇ ಸೀಮಿತ.

ಬಿಡುಗಡೆಗೂ ಮೊದಲೇ ಚರ್ಚೆಗೆ ಗ್ರಾಸವಾಗಿದ್ದ ಹಸಿಬಿಸಿ ದೃಶ್ಯಗಳಿರುವ ‘ಮಾತನಾಡಿ ಮಾಯವಾದೆ, ನಿಂಗೆ ಕಾದೆ ನಾ, ಬಳಿಗೆ ಬಂದು ಎದುರು ನಿಂತು, ನನ್ನಾ ಪ್ರೀತಿಸು...’ ಹಾಡುಮತ್ತೆ ಮತ್ತೆ ಗುನುಗುವಂತಿದೆ. ಈ ಹಾಡಿನಲ್ಲಿ ಉಪ್ಪಿಯ ಅರೆಬೆತ್ತಲೆ ದೃಶ್ಯ, ರಚಿತಾ ಅವರ ತೆರೆದಿಟ್ಟ ದೇಹಸಿರಿ ಮಡಿವಂತರಿಗೆ ಕಿರಿಕಿರಿ ಉಂಟುಮಾಡುವಂತಿದೆ. ಆದರೆ, ಅಭಿಮಾನಿಗಳಿಗೆ ಹಾಡು ಭರಪೂರ ರಸದೌತಣ ನೀಡುವಂತಿದೆ.

ಚಿನ್ನಿಪ್ರಕಾಶ್‌ ನೃತ್ಯ ಸಂಯೋಜನೆಗೂ ಅಂಕ ನೀಡಬಹುದು. ಕಿರಣ್‌ ಸಂಗೀತ ನೀಡಿರುವ‌ಹಾಡುಗಳು ಮತ್ತೆ ಮತ್ತೆ ಕೇಳುವಂತಿವೆ. ಸುಜ್ಞಾನ್‌ ಛಾಯಾಗ್ರಾಹಣದ ಬಹುತೇಕ ದೃಶ್ಯಗಳೂ ಕಣ್ಣಿಗೆ ಮುದ ನೀಡುತ್ತವೆ. ಕಥೆಗೆ ಅಗತ್ಯವಿರುವಲ್ಲಿ ಬರುವಮೂರು ಫೈಟ್‌ ದೃಶ್ಯಗಳೂ ನೋಡಲು ಅಡ್ಡಿ ಇಲ್ಲ.

‘ಕುಟುಂಬ ಸಮೇತ ಕಡ್ಡಾಯವಾಗಿ ಬನ್ನಿ’ ಎಂಬ ಅಡಿ ಬರಹ ನೋಡಿ, ಸಿನಿಮಾಕ್ಕೆ ಹೋದವರು ಸಿನಿಮಾದಲ್ಲಿ ಅಲ್ಲಲ್ಲಿಬರುವ ಕೆಲವು ದ್ವಂದ್ವಾರ್ಥದ ಸಂಭಾಷಣೆಗಳಿಂದ ಕಿರಿಕಿರಿಯಾದರೆ ಸಹಿಸಿಕೊಳ್ಳಬೇಕಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT