ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ‘ನಕರ’

Last Updated 4 ನವೆಂಬರ್ 2018, 19:30 IST
ಅಕ್ಷರ ಗಾತ್ರ

‘ಕನ್ನಡದಲ್ಲಿ ಬಹುತೇಕ ಸಿನಿಮಾಗಳಲ್ಲಿ ಹೀರೊಗಳಿಗೆ ಮಚ್ಚು ಲಾಂಗು ಕೊಡ್ತಾರೆ. ಹೊಡೆದಾಟ ರಕ್ತಪಾತವೇ ಇರುತ್ತದೆ. ಆದರೆ ಬೆಂಗಳೂರು ಎಂದರೆ ಬರೀ ರೌಡಿಸಂ ಅಷ್ಟೆ ಅಲ್ಲ. ಈ ನಗರಕ್ಕೆ ಗಾರ್ಡನ್ ಸಿಟಿ ಎಂಬ ಹೆಸರಿದೆ. ಇಲ್ಲಿ ಹೂವಿನ ಮನಸು ಇರುವವರೂ ಇದ್ದಾರೆ. ಅಂಥ ಬೆಂಗಳೂರನ್ನು ತೋರಿಸುವ ಪ್ರಯತ್ನ ನಮ್ಮದು’ ಹೀಗೆಂದು ಹೇಳಿದ ನಿರ್ದೇಶಕ ಕೆ.ಪಿ. ಸೇಲ್ವರಾಜ್, ಕ್ಷಣದ ಹಿಂದಿನ ತಮ್ಮ ಮಾತಿಗೆ ತಾವೇ ವಿರುದ್ಧವಾಗಿ ನಿಂತು ಏರುದನಿಯಲ್ಲಿ ಮತ್ತೊಂದು ಡೈಲಾಗ್‌ ಶುರುಮಾಡಿದರು.

‘ಜಗತ್ತಿನ ಎಲ್ಲ ಕಡೆಗಳಿಂದಲೂ ಬೆಂಗಳೂರಿಗೆ ಜನ ಬರುತ್ತಾರೆ. ಯಾರೇ ಬಂದರೂ ಬೆಂಗಳೂರಿನಲ್ಲಿ ಜಾಗ ಇರುತ್ತದೆ. ಅವರಿಗೆ ಬದುಕು ಸಿಗುತ್ತದೆ. ಆದರೆ ಇಲ್ಲಿ ಬಂದು ನಮಗೇ ವಿರುದ್ಧವಾಗಿ ನಿಂತರೆ ತೊಡೆ ತಟ್ಟಿ ಮೀಸೆ ತಿರುವಿ ಹೋರಾಡಲು ಕನ್ನಡಿಗರು ಸದಾ ಸಿದ್ಧರಿರುತ್ತಾರೆ’ ಎಂದು ಅವರೇ ಹೇಳುವ ರೌಡಿಸಂ ಮಾತನ್ನು ನೆನಪಿಸುವ ಹಾಗೆಯೇ ಆರ್ಭಟಿಸಿದರು.

‘ಇದು ಬೆಂಗಳೂರು ನಗರ, ಯಾರೂ ಮಾಡಬೇಡಿ ನಕರ’ ಇದು ಅವರ ನಿರ್ದೇಶನದ ಸಿನಿಮಾದ ಹೆಸರು! ಕಾಲೇಜು ಮಕ್ಕಳ ಕಥೆ ಇಟ್ಟುಕೊಂಡು ಸಿನಿಮಾ ಕಟ್ಟಿದ್ದೇನೆ. ಇದರಲ್ಲಿ ಲಾಂಗು ಮಚ್ಚು ಇಲ್ಲ. ಕಾಡು ಅಂದ್ರೆ ಜಿಂಕೆ ಇರಬೇಕು. ಜೀವನ ಅಂದ್ರೆ ಪ್ರೇಮ ಇರಬೇಕು. ಹಾಗೆಯೇ ಕಾಲೇಜು ಅಂದ್ರೆ ಜಗಳ– ಪ್ರೇಮ ಎರಡೂ ಇರಬೇಕು. ಇದು ಬಿಇಎಸ್ ಕಾಲೇಜಿನಲ್ಲಿಯೇ ನಡೆಯುವ ಕಥೆ. ಓಂಪ್ರಕಾಶ್ ಅದೇ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿರುತ್ತಾರೆ. ನಾಯಕಿಯ ಸೋದರ ಮಾವ ಅವರು. ಕಾಲೇಜಿನ ಕಥೆಯನ್ನು ವಿಭಿನ್ನವಾಗಿ ತೋರಿಸಿದ್ದೇನೆ. ಓಂ ಪ್ರಕಾಶ್ ಅವರಲ್ಲಿ ಪ್ರಕಾಶ್ ರೈ ಕಾಣಬಹುದು ನೀವು’ ಹೀಗೆ ನಿರಂತರವಾಗಿ ಮಾತನಾಡುತ್ತಲೇ ಇದ್ದರು ಸೇಲ್ವರಾಜ್.

ಈ ಶೀರ್ಷಿಕೆ ಯಾಕೆ ಎಂಬ ಪ್ರಶ್ನೆಗೆ ‘ಹಾಡು ಕೇಳಿ ಗೊತ್ತಾಗುತ್ತೆ’ ಎಂಬ ಉತ್ತರ ಬಂತು.

ಅಂಜನ್ ಮತ್ತು ಅಂಜಲಿ ಈ ಚಿತ್ರದಲ್ಲಿ ನಾಯಕ– ನಾಯಕಿಯಾಗಿ ನಟಿಸಿದ್ದಾರೆ. ಓಂ ಪ್ರಕಾಶ್ ಅವರದ್ದು ಖಳನ ಪಾತ್ರ. ಮಚ್ಚು ಲಾಂಗ್ ಇಲ್ಲದಿದ್ದರೂ ಅವರು ಪೋಸ್ಟರಿನಲ್ಲಿ ರಿವಾಲ್ವರ್ ಹಿಡಿದು ನಿಂತಿದ್ದರು. ‘ಯಾವುದು ಸರಿ ಯಾವುದು ತಪ್ಪು ಎನ್ನುವುದನ್ನು ಸರಿಯಾಗಿ ಹೇಳಿ ಕಲಿಸಿಕೊಟ್ಟಿದ್ದಾರೆ ನಿರ್ದೇಶಕರು’ ಎಂದರು ನಾಯಕಿ ಅಂಜಲಿ.

ಅಂಜನ್ ಕೂಡ ನಿರ್ದೇಶಕರ ಹೊಗಳಿಕೆಗೇ ತಮ್ಮ ಮಾತು ಮೀಸಲಿಟ್ಟರು. ಎ.ಎಸ್.ರಾಜ್, ಕೆ.ಪಿ.ಎಸ್.ವಿಜಯ್ ರಾಜ್‌ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ನಿರ್ದೇಶನದ ಜತೆ ಕಥೆ, ಚಿತ್ರಕಥೆ, ಸಂಭಾಷಣೆ, ಸಂಗೀತ, ನಿರ್ಮಾಣವನ್ನೂ ಸೇಲ್ವರಾಜ್ ಅವರೇ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT