ಕುಯ್ದು ಹಾಕೋಕೆ ನಾನೇನು ಕೋಳಿನಾ?: ‘ಕೊಲೆಗೆ ಸುಪಾರಿ’ ಸುದ್ದಿಗೆ ಯಶ್ ಪ್ರತಿಕ್ರಿಯೆ

ಶುಕ್ರವಾರ, ಮಾರ್ಚ್ 22, 2019
24 °C

ಕುಯ್ದು ಹಾಕೋಕೆ ನಾನೇನು ಕೋಳಿನಾ?: ‘ಕೊಲೆಗೆ ಸುಪಾರಿ’ ಸುದ್ದಿಗೆ ಯಶ್ ಪ್ರತಿಕ್ರಿಯೆ

Published:
Updated:

ಬೆಂಗಳೂರು: ‘ನಟ ಯಶ್ ಅವರ ಕೊಲೆಗೆ ಸುಪಾರಿ ನೀಡಲಾಗಿತ್ತು’ ಎಂದು ಕೆಲವು ಮಾಧ್ಯಮಗಳಲ್ಲಿ ಶನಿವಾರ ಪ್ರಸಾರವಾದ ಕಾರ್ಯಕ್ರಮಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯಶ್, ‘ಸಮಾಜ ಘಾತುಕ ವ್ಯಕ್ತಿಗಳ ಬಂಧನ ಆದಾಗಲೆಲ್ಲ ನನ್ನ ಹೆಸರು ತರುವುದು ತಪ್ಪು. ಯಾರೋ ಬಂದು ನನ್ನ ಕುಯ್ದು ಹಾಕೋಕೆ ನಾನೇನು ಕೋಳಿನಾ, ಕುರಿನಾ’ ಎಂದು ಪ್ರಶ್ನಿಸಿದರು.

ಶನಿವಾರ ದಿಢೀರ್ ಸುದ್ದಿಗೋಷ್ಠಿ ಕರೆದ ಯಶ್, ‘ಯಶ್ ಕೊಲೆಗೆ ಸುಪಾರಿ ಎಂಬ ಅರ್ಥದಲ್ಲಿ ಪ್ರಸಾರ ಆಗುತ್ತಿರುವ ಸುದ್ದಿಗಳಿಂದ ಬೇಸರವಾಗಿದೆ. ಯಶ್‌ನ ಮರ್ಡರ್ ಮಾಡ್ತಾರಂತೆ ಎಂದು ಪದೇ ಪದೇ ತೋರಿಸುವುದರಿಂದ ನನ್ನ ಹತ್ತಿರದವರಿಗೂ ಬೇಸರ ಆಗುತ್ತದೆ’ ಎಂದರು.

‘ಈ ರೀತಿಯ ಸುದ್ದಿಗಳು ಪ್ರಸಾರ ಆಗುತ್ತಿರುವುದು ಇದೇ ಮೊದಲಲ್ಲ. ಹಿಂದೆಯೂ ಹಲವಾರು ಬಾರಿ ಇಂತಹ ಸುದ್ದಿಗಳು ಪ್ರಸಾರ ಆಗಿವೆ. ಆದರೆ, ಇನ್ನಾದರೂ ಇಂತಹ ಸುದ್ದಿ ಪ್ರಸಾರ ಮಾಡುವುದನ್ನು ದಯವಿಟ್ಟು ನಿಲ್ಲಿಸಿ. ನನ್ನ ಹತ್ಯೆಗೆ ಯಾರಾದರೂ ಸುಪಾರಿ ಕೊಟ್ಟಿರುವ ಖಚಿತ ಮಾಹಿತಿ ಇದ್ದರೆ ನನಗೆ ತಿಳಿಸಿ. ಅದನ್ನು ಪೊಲೀಸರಿಗೂ ತಿಳಿಸೋಣ. ಇನ್ನೊಬ್ಬರಿಗೆ ಸುಪಾರಿ ನೀಡುವಂತಹ ಮನಃಸ್ಥಿತಿ ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಯಾರಲ್ಲೂ ಇಲ್ಲ’ ಎಂದರು.

‘ಮಾಧ್ಯಮಗಳಿಗೆ ಇಂತಹ ಸುದ್ದಿಗಳೆಲ್ಲ ಎಲ್ಲಿ ಸಿಗುತ್ತವೆ? ನಾನು ಇಂದು ಪೊಲೀಸರ ಜೊತೆ ಕೂಡ ಮಾತನಾಡಿದೆ. ಅವರು ಕೂಡ ನನ್ನ ಕೊಲೆಗೆ ಸುಪಾರಿ ನೀಡಲಾಗಿದೆ ಎಂಬುದು ಸುಳ್ಳು ಎಂಬುದನ್ನು ಸ್ಪಷ್ಟಪಡಿಸಿದರು. ಗೃಹ ಸಚಿವ ಎಂ.ಬಿ. ಪಾಟೀಲರ ಜೊತೆಯೂ ಮಾತನಾಡಿದೆ. ಅವರೂ ಸುದ್ದಿ ಸುಳ್ಳು ಎಂದರು. ಈ ರೀತಿ ಸುದ್ದಿ ಪ್ರಸಾರ ಮಾಡುವುದು ತಮಾಷೆಯ ವಿಚಾರ ಅಲ್ಲ. ಪದೇ ಪದೇ ಈ ರೀತಿ ಸುದ್ದಿ ತೋರಿಸುವುದು ತಪ್ಪಲ್ಲವೇ’ ಎಂದು ಪ್ರಶ್ನಿಸಿದರು.

ಬರಹ ಇಷ್ಟವಾಯಿತೆ?

 • 29

  Happy
 • 3

  Amused
 • 2

  Sad
 • 0

  Frustrated
 • 1

  Angry

Comments:

0 comments

Write the first review for this !