ಸಾಯಿ ಧನ್ಸಿಕಾ ‘ಯೋಗಿ ಡಾ’ ವರಸೆ

7

ಸಾಯಿ ಧನ್ಸಿಕಾ ‘ಯೋಗಿ ಡಾ’ ವರಸೆ

Published:
Updated:
Deccan Herald

ತಮಿಳಿನ ಸೂಪರ್‌ ಸ್ಟಾರ್ ರಜನಿಕಾಂತ್‌ ನಟನೆಯ ‘ಕಬಾಲಿ’ಯಲ್ಲಿ ಯೋಗಿ ಎಂಬ ಪಾತ್ರದಲ್ಲಿ ಮಿಂಚಿದ್ದ ಸುಂದರಿ ಸಾಯಿ ಧನ್ಸಿಕಾ ನೆನಪಿರಬೇಕಲ್ಲ? ಕಬಾಲಿಯ ಮಗಳು ಹಾಗೂ ವೃತ್ತಿಪರ ಶಾರ್ಪ್‌ಶೂಟರ್‌ ‘ಯೋಗಿ’ ಪಾತ್ರವು ಇಡೀ ಚಿತ್ರಕ್ಕೆ ಶಕ್ತಿ ತುಂಬಿದ ಇನ್ನೊಂದು ಅಂಶವಾಗಿತ್ತು. ಧನ್ಸಿಕಾ ಆ ಪಾತ್ರವನ್ನು ಅಷ್ಟೇ ಸಮರ್ಥವಾಗಿ ನಿಭಾಯಿಸಿದ್ದು ಗಮನಾರ್ಹ.

ಇದೀಗ ಅದೇ ಪಾತ್ರವನ್ನು ಪ್ರಚಾರದ ಸೂತ್ರವಾಗಿಟ್ಟುಕೊಂಡು ಹೊಸ ಚಿತ್ರವೊಂದು ಬರುತ್ತಿದೆ. ಚಿತ್ರಕ್ಕೆ ಧನ್ಸಿಕಾ ನಾಯಕಿ. ಶೀರ್ಷಿಕೆಯೇ ಹೇಳುವಂತೆ ‘ಯೋಗಿ ಡಾ’ ನಾಯಕಿಪ್ರಧಾನ ಚಿತ್ರವಾಗಿರಲಿದೆ. ಅಷ್ಟೇ ಅಲ್ಲ, ಕೆಲ ದಿನಗಳ ಹಿಂದೆ ಚಿತ್ರದ ಮೊದಲ ಪೋಸ್ಟರ್‌ ಬಿಡುಗಡೆಯಾಗಿತ್ತು. ಕೈಯಲ್ಲಿ ಪಿಸ್ತೂಲು ಹಿಡಿದು ಮುನ್ನುಗ್ಗುವ ದೃಶ್ಯ, ಧನ್ಸಿಕಾ ಪಾತ್ರ ಮತ್ತು ಚಿತ್ರಕತೆಗೆ ಕನ್ನಡಿ ಹಿಡಿಯುವಂತಿದೆ.

ಧನ್ಸಿಕಾ, ಧನಾತ್ಮಕ ಚಿಂತನೆ, ಶ್ರದ್ಧೆ ಮತ್ತು ಕಠಿಣ ಪರಿಶ್ರಮದ ಮೇಲೆ ನಂಬಿಕೆಯುಳ್ಳ ನಟಿ. ‘ಹಂಬಲ್‌ ನಟಿ’ ಎನ್ನುವುದು ಅವರಿಗೆ ಅಭಿಮಾನಿಗಳು ಕೊಟ್ಟಿರುವ ಬಿರುದು. ಅವರ ಫೇಸ್‌ಬುಕ್‌ ಪುಟದಲ್ಲಿ ಒಂದು ಒಕ್ಕಣೆಯಿದೆ– ‘ನಾನು ಬೇರೆಯವರಿಗಿಂತ ಚೆನ್ನಾಗಿ ಕೆಲಸ ಮಾಡಬೇಕು ಎಂಬುದು ನನ್ನ ಗುರಿಯಲ್ಲ, ನಾನು ನಿನ್ನೆ ಮಾಡಿದ್ದಕ್ಕಿಂತ ಚೆನ್ನಾಗಿ ಕೆಲಸ ಮಾಡಬೇಕು’ ಎಂದು. ಅಂದರೆ ನಟನೆಗೆ ಪ್ರತಿ ದಿನ ಸಾಣೆ ಕೊಡುವ ಜಾಯಮಾನ ಅವರದು. ಅದು ಅವರ ಮುಂದಿನ ಸವಾಲೂ ಹೌದು!

‘ಯೋಗಿ ಡಾ’ ಚಿತ್ರದ ಸಂದರ್ಭವನ್ನೇ ನೋಡೋಣ. ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗದ ಕೆಲವು ನಟರಿಗೆ ಸಾಹಸ ಕಲೆಗಳನ್ನು ಕಲಿಸಿಕೊಟ್ಟಿರುವ ಪಾಂಡ್ಯನ್‌ ಮಾಸ್ಟರ್‌ ಅಕಾಡೆಮಿಯಲ್ಲಿ ಧನ್ಸಿಕಾ ತರಬೇತಿ ಪಡೆದಿದ್ದಾರೆ. ‘ಕಬಾಲಿ’ಯ ಯೋಗಿ ಪಾತ್ರಕ್ಕಾಗಿ 2016–17ರಲ್ಲಿ ಅದೇ ಮಾಸ್ಟರ್‌ ಬಳಿ ಸಿಲಂಬಮ್‌ನಂತಹ ಕಠಿಣ ಸಾಹಸ ಕಲೆಯನ್ನು ಕಲಿತಿದ್ದ ಧನ್ಸಿಕಾ ಇದೀಗ ಪೂರ್ಣಪ್ರಮಾಣದ ಯೋಗಿಗಾಗಿ ಒಂದೂವರೆ ತಿಂಗಳ ತರಬೇತಿ ಪೂರೈಸಿದ್ದಾರೆ. 

‘ನಮ್ಮ ಚಿತ್ರಕ್ಕಾಗಿ ಧನ್ಸಿಕಾ ಕಠಿಣ ತರಬೇತಿ ಪಡೆದಿದ್ದಾರೆ. ಹಾಗಾಗಿ ‘ಯೋಗಿ ಡಾ’ ವಿಭಿನ್ನವಾಗಿ ಮೂಡಿಬರುವುದರಲ್ಲಿ ಸಂಶಯವೇ ಇಲ್ಲ. ಅವರ ತರಬೇತಿಯ ವಿಡಿಯೊವನ್ನು ಸದ್ಯದಲ್ಲೇ ಬಿಡುಗಡೆ ಮಾಡಲಿದ್ದೇವೆ. ಇದು ಅವರ ಅಭಿಮಾನಿಗಳಿಗೆ ಖಂಡಿತಾ ಖುಷಿ ಕೊಡಲಿದೆ’ ಎಂದು ನಿರ್ದೇಶಕ ಗೌತಮ್‌ ಕೃಷ್ಣ ಹೇಳಿದ್ದಾರೆ. 

ಡಿಸೆಂಬರ್‌ 10ರಂದು ಚಿತ್ರ ಸೆಟ್ಟೇರಿದೆ. ಅಂದ ಹಾಗೆ,  ಗೌತಮ್ ಕೃಷ್ಣ ನಿರ್ದೇಶಕರ ಟೋಪಿ ಧರಿಸಿರುವುದು ಇದೇ ಮೊದಲು. ಚಿತ್ರದ ಶೀರ್ಷಿಕೆ ಮತ್ತು ಪಾತ್ರದ ಬಗ್ಗೆ ಅವರ ಸಮರ್ಥನೆ ಹೀಗಿದೆ: ‘ಕಬಾಲಿಯ ಯೋಗಿ ಪಾತ್ರ ಮನೆ ಮಾತಾಗಿತ್ತು. ಅದೇ ಹೆಸರಿನಲ್ಲಿ ಸಿನಿಮಾ ಮಾಡಲು ಕಾರಣವೂ ಅದುವೇ. ಬೇರೇನೂ ಗಿಮಿಕ್‌ ಇಲ್ಲ. ‘ಯೋಗಿ ಡಾ’ ಸಾಹಸ ಮತ್ತು ರೊಮ್ಯಾನ್ಸ್‌ನ ಸಮಪಾಕದಂತಿರುತ್ತದೆ. ಅಲ್ಲದೆ, ಯೋಗಿ ಪಾತ್ರದ ಮುಂದುವರಿಕೆಯಂತಿರುತ್ತದೆ’ ಎಂದು ಗೌತಮ್‌ ವಿವರಿಸಿದ್ದಾರೆ.

ಅಜಿತ್‌ ಕುಮಾರ್‌ ನಟನೆಯ ‘ವಿಶ್ವಂ’ನ ಸಾಹಸ ಮಾಸ್ಟರ್‌ ಸಿರುತೈ ಗಣೇಶ್‌ ಅವರೇ ‘ಯೋಗಿ ಡಾ’ದಲ್ಲಿಯೂ ತಮ್ಮ ಕೌಶಲ ಹೇಳಿಕೊಡಲಿದ್ದಾರೆ. ಸಂಗೀತ ಸಂಯೋಜನೆ ಎ.ಆರ್. ರೆಹಮಾನ್‌ ಸಹೋದರಿ ಇಷ್ರತ್‌ ಖುದ್ರಿ ಅವರದು. ಇಷ್ರತ್ ಅವರ ಸಂಗೀತಕ್ಕೆ ಹೆಜ್ಜೆ ಹಾಕುವ ಅದೃಷ್ಟ ತಮಗೆ ಸಿಕ್ಕಿದೆ ಎಂದು ಧನ್ಸಿಕಾ ತಮ್ಮ ಫೇಸ್‌ಬುಕ್‌ ಪುಟದಲ್ಲಿ ಬರೆದುಕೊಂಡಿದ್ದಾರೆ.


ಸಿಲಂಬಮ್‌ ತರಬೇತಿಯಲ್ಲಿ ಸಾಯಿ ಧನ್ಸಿಕಾ (ಚಿತ್ರ: ಫೇಸ್‌ಬುಕ್‌)

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !