ಬುಧವಾರ, ಮೇ 18, 2022
28 °C

ಸರ್ಕಾರದ ಆದೇಶಕ್ಕೆ ಕಾದುಕುಳಿತ ಇನ್‌ಸ್ಪೆಕ್ಟರ್‌ ವಿಕ್ರಂ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಳೆದ ಫೆಬ್ರುವರಿಯಲ್ಲಿ ತೆರೆಕಂಡ ‘ಜಂಟಲ್‌ಮನ್‌’ ಚಿತ್ರವು ಕಥಾವಸ್ತು ಮತ್ತು ಪ್ರಜ್ವಲ್‌ ದೇವರಾಜ್‌ ಅವರ ನಟನೆಯಿಂದ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಸ್ಲೀಪಿಂಗ್‌ ಬ್ಯೂಟಿ ಸಿಂಡ್ರೋಮ್ ಮತ್ತು ಮಾನವ ಕಳ್ಳಸಾಗಣೆ ಸುತ್ತ ಇದರ ಕಥೆ ಹೆಣೆಯಲಾಗಿತ್ತು. ವೃತ್ತಿಬದುಕಿನಲ್ಲಿ ಸವಾಲಿನ ಪಾತ್ರ ನಿಭಾಯಿಸಿದ ಬಳಿಕ ಪ್ರಜ್ವಲ್, ಪರದೆ ಮೇಲೆ ‘ಇನ್‌ಸ್ಪೆಕ್ಟರ್‌ ವಿಕ್ರಂ’ನ ಅವತಾರದಲ್ಲಿ ನಗಿಸಲು ಸಜ್ಜಾಗಿದ್ದರು. ಆದರೆ, ಇದಕ್ಕೆ ಕೊರೊನಾ ಅಡ್ಡಿಪಡಿಸಿತು.

ಈಗಾಗಲೇ, ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿವೆ. ಇದಕ್ಕೆ ಸಿಕ್ಕಿರುವ ಜನರ ಪ್ರತಿಕ್ರಿಯೆಗೆ ಚಿತ್ರತಂಡ ಖುಷಿಯಾಗಿದೆ. ‘ಕೊರೊನಾ ಲಾಕ್‌ಡೌನ್‌ ಶುರುವಾಗುವುದಕ್ಕೂ ಮೊದಲೇ ಶೂಟಿಂಗ್‌ ಪೂರ್ಣಗೊಂಡಿತ್ತು. ಜೊತೆಗೆ, ಪೋಸ್ಟ್‌ ಪ್ರೊಡಕ್ಷನ್‌ನ ಪ್ರಮುಖ ಕೆಲಸಗಳು ಪೂರ್ಣಗೊಂಡಿವೆ. ಸಣ್ಣಪುಟ್ಟ ಕೆಲಸವಷ್ಟೇ ಬಾಕಿ ಉಳಿದಿದೆ. ಇನ್ನೊಂದು ಹಾಡು ಬಿಡುಗಡೆಯಾಗಬೇಕಿದೆ’ ಎಂದು ಚಿತ್ರದ ನಿರ್ದೇಶಕ ಶ್ರೀನರಸಿಂಹ ‘ಪ್ರಜಾ ಪ್ಲಸ್‌’ಗೆ ತಿಳಿಸಿದರು.

‘ಮುಂದಿನ ತಿಂಗಳು ಪ್ರಜ್ವಲ್‌ ಅವರ ಹುಟ್ಟುಹಬ್ಬವಿದೆ. ಅಂದು ವಿಶೇಷ ಪೋಸ್ಟರ್‌ ಬಿಡುಗಡೆಗೆ ಚಿಂತನೆ ನಡೆಸಿದ್ದೇವೆ. ಟೀಸರ್‌ ಬಿಡುಗಡೆ ಮಾಡುವುದಿಲ್ಲ. ಕಳೆದ ತಿಂಗಳೇ ಸಿನಿಮಾ ಬಿಡುಗಡೆಗೆ ತೀರ್ಮಾನಿಸಿದ್ದೆವು. ರಾಜ್ಯ ಸರ್ಕಾರ ಯಾವಾಗ ಚಿತ್ರಮಂದಿರಗಳ ಪ್ರದರ್ಶನಕ್ಕೆ ಅನುಮತಿ ನೀಡುತ್ತದೆ ಎಂಬುದು ಗೊತ್ತಿಲ್ಲ. ಲಾಕ್‌ಡೌನ್‌ ಮುಗಿದ ಬಳಿಕ ಸರ್ಕಾರದ ಮಾರ್ಗಸೂಚಿ ನೋಡಿಕೊಂಡು ಥಿಯೇಟರ್‌ಗೆ ಬರಲು ಚಿತ್ರತಂಡ ನಿರ್ಧರಿಸಿದ್ದೇವೆ’ ಎಂದು ವಿವರಿಸಿದರು.

ಅಂದಹಾಗೆ ಈ ಚಿತ್ರದ ಮೂಲಕ ಶ್ರೀನರಸಿಂಹ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್‌ ಧರಿಸಿದ್ದಾರೆ. ತಮ್ಮ ಮೊದಲ ಪ್ರಯತ್ನದಲ್ಲಿಯೇ ನಟ ದರ್ಶನ್‌ಗೆ ಈ ಚಿತ್ರದಲ್ಲಿ ಆ್ಯಕ್ಷನ್‌ ಕಟ್‌ ಹೇಳಿದ ಸಂತಸದಲ್ಲಿದ್ದಾರೆ. ದರ್ಶನ್‌ ಅವರದು ಕಥೆಗೆ ತಿರುವು ನೀಡುವ ಪಾತ್ರವಂತೆ ಎಲ್ಲಿಯೂ ಅವರ ಪಾತ್ರದ ಬಗ್ಗೆ ಚಿತ್ರತಂಡ ಗುಟ್ಟುಬಿಟ್ಟುಕೊಟ್ಟಿಲ್ಲ.

1989ರಲ್ಲಿ ನಟ ಶಿವರಾಜ್‌ಕುಮಾರ್‌ ನಾಯಕರಾಗಿದ್ದ ‘ಇನ್‌ಸ್ಪೆಕ್ಟರ್‌ ವಿಕ್ರಂ’ ಸಿನಿಮಾ ತೆರೆ ಕಂಡಿತ್ತು. ಪ್ರಜ್ವಲ್‌ ನಟನೆಯ ’ಇನ್‌ಸ್ಪೆಕ್ಟರ್‌ ವಿಕ್ರಂ’ ಅದರ ಮುಂದುವರಿದ ಭಾಗವಲ್ಲವಂತೆ. ಆದರೆ, ಶಿವರಾಜ್‌ಕುಮಾರ್‌ ಪರದೆ ಮೇಲೆ ಪೋಷಿಸಿದ ಪಾತ್ರವನ್ನು ಆಧರಿಸಿಯೇ ನಿರ್ದೇಶಕರು ಇದರಲ್ಲಿ ಹೊಸದೊಂದು ಕಥೆಯನ್ನು ಪ್ರೇಕ್ಷಕರ ಮುಂದೆ ತೆರೆದಿಡಲು ಸಜ್ಜಾಗಿದ್ದಾರೆ.

ಪಕ್ಕಾ ಕಾಮಿಡಿ ಚಿತ್ರ ಇದು. ಪ್ರಜ್ವಲ್‌ ಎರಡು ವಿಭಿನ್ನ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಭಾವನಾ ಮೆನನ್‌ ಜೋಡಿಯಾಗಿದ್ದಾರೆ. ರಘು ಮುಖರ್ಜಿ ಖಳನಟನಾಗಿ ನಟಿಸಿದ್ದಾರೆ. ಗೋಕರ್ಣ, ಬೆಂಗಳೂರು, ಪಾಂಡವಪುರ, ಕಾರವಾರದ ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ.

ಜೆ. ಅನೂಪ್‌ ಸೀಳಿನ್‌ ಸಂಗೀತ ಸಂಯೋಜಿಸಿದ್ದಾರೆ. ನವೀನ್‌ಕುಮಾರ್‌ ಐ. ಅವರ ಛಾಯಾಗ್ರಹಣವಿದೆ. ಹರೀಶ್‌ ಕೊಮ್ಮೆ ಸಂಕಲನ ನಿರ್ವಹಿಸಿದ್ದಾರೆ. ಎ.ಆರ್‌. ವಿಖ್ಯಾತ್‌ ಬಂಡವಾಳ ಹೂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು