ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಜೊಯ್‌ ಕಂಡ ಬದುಕಿನ ಸತ್ಯ

Last Updated 17 ಮಾರ್ಚ್ 2019, 19:45 IST
ಅಕ್ಷರ ಗಾತ್ರ

‘ನಿರಾಕರಣೆಯಿಂದ ನಾನು ಬದುಕಿನ ಹಲವು ಸತ್ಯಗಳನ್ನು ಕಲಿತೆ’ –ಬಂಗಾಳದ ಸುಜೊಯ್ ಘೋಷ್ ಹೀಗೆ ಹೇಳಿದ್ದು ಐದು ವರ್ಷಗಳ ಹಿಂದೆ. ಇವತ್ತು ಅವರನ್ನು ಮಾತಿಗೆಳೆದರೂ ಇದನ್ನೇ ಹೇಳುವುದು.

ಭೊವಾನಿಪುರದಲ್ಲಿ ಬಾಲ್ಯ ಸವೆಸಿದ ಸುಜೊಯ್ ಲಂಡನ್ ಗಲ್ಲಿಗಳನ್ನು ತಲುಪಿದಾಗ ವಯಸ್ಸಿನ್ನೂ ಹದಿಮೂರು. ಕ್ವೀನ್ ಎಲಿಜಬೆತ್ ಕಾಲೇಜಿನಲ್ಲಿ ‘ಎ’ ಲೆವೆಲ್ ಓದನ್ನು ಮುಗಿಸಿದ ಅವರು ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್ ಓದಲು ಬಯಸಿದರು. ಮೊದಲು ಅಲ್ಲಿ ಅನುಭವಿಸಿದ್ದು ನಿರಾಕರಣೆ. ಸೀಟು ಸಿಗದೇಹೋದಾಗ ಹತಾಶರಾಗದ ಅವರು ಮರಳಿ ಯತ್ನವ ಮಾಡಿದರು. ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದರು. ಎಂಬಿಎ ಮುಗಿಸಿದ್ದೂ ಆಯಿತು. ಕೆಲಸಕ್ಕಾಗಿಯೂ ಅವರು ಅರ್ಜಿಗಳನ್ನು ಗುಜರಾಯಿಸಿದ್ದೇ ಬಂತು. ಅವರೇ ಹೇಳಿಕೊಂಡಂತೆ ನೂರಾರು ಸಂದರ್ಶನಗಳಲ್ಲಿ ಅವರು ಫೇಲಾದದ್ದಿದೆ.

ರಾಯಿಟರ್ಸ್ ಕಂಪನಿಯ ಮೀಡಿಯಾ ವಿಭಾಗದ ದಕ್ಷಿಣ ಏಷ್ಯಾ ಮುಖ್ಯಸ್ಥರಾಗಿದ್ದ ಅವರು 1999ರಲ್ಲಿ ಅದಕ್ಕೆ ರಾಜೀನಾಮೆ ಕೊಟ್ಟರು. ಸಿನಿಮಾ ಕನಸನ್ನು ನನಸು ಮಾಡಿಕೊಳ್ಳುವುದು ಅವರ ಹೆಬ್ಬಯಕೆಯಾಗಿತ್ತು.

ಸುಜೊಯ್‌ ಘೋಷ್‌, 2003ರಲ್ಲಿ ಸಣ್ಣ ಬಜೆಟ್‌ನಲ್ಲಿ ‘ಝಂಕಾರ್ ಬೀಟ್ಸ್’ ಹಿಂದಿ ಸಿನಿಮಾ ನಿರ್ದೇಶಿಸಿದರು. ಸಿನಿಮಾ ಸಂಗೀತ ದಿಗ್ಗಜ ಆರ್.ಡಿ. ಬರ್ಮನ್ ಅವರಿಗೆ ಸಲ್ಲಿಸಿದ ಸಿನಿಮಾ ನಮನ ಅದಾಗಿತ್ತು. ಆ ಸಿನಿಮಾ ಹಿಟ್ ಆದದ್ದೇ ಖುದ್ದು ಸುಜೊಯ್ ಅವರಿಗೂ ಅಚ್ಚರಿಯಾಯಿತು. ಆದರೆ, ಆಮೇಲೆ ಅವರು ಸೃಜನಶೀಲತೆಯನ್ನು ಒರೆಗೆಹಚ್ಚಿದ ‘ಹೋಮ್ ಡೆಲಿವರಿ’, ‘ಅಲ್ಲಾದಿನ್’ ಸರಿಯಾಗಿ ಓಡಲಿಲ್ಲ. ಆ ಸಂದರ್ಭದಲ್ಲಿ ಅವರು ಸ್ಕ್ರಿಪ್ಟ್ ಬರೆಯುವುದನ್ನು ಆತ್ಮತೃಪ್ತಿಗೆಂದು ಮಾಡಲಾರಂಭಿಸಿದರು. ಆಗಲೂ ಎಷ್ಟೋ ನಿರ್ಮಾಪಕರು ಒಂದು ಹೆಜ್ಜೆ ಮುಂದೆ ಬಂದು, ಎರಡು ಹೆಜ್ಜೆ ಹಿಂದಕ್ಕೆ ಹೋದರು. ನಿರಾಕರಣೆ ಅಭ್ಯಾಸವಾಗಿದ್ದರಿಂದ ಆಗೆಲ್ಲ ಏನೂ ಅನಿಸುತ್ತಿರಲಿಲ್ಲ ಎಂದು ಸೊಜೊಯ್ ನೆನಪಿಸಿಕೊಳ್ಳುತ್ತಾರೆ. 2012ರಲ್ಲಿ ತೆರೆಕಂಡ ‘ಕಹಾನಿ’ ಥ್ರಿಲ್ಲರ್ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಯಿತು. ಅದು ನಟಿ ವಿದ್ಯಾ ಬಾಲನ್ ವೃತ್ತಿಬದುಕಿಗೆ ಇಂಧನವಾಯಿತು. ಆದರೆ, ಅಲ್ಲಿಂದ ಮುಂದೆ ತಮ್ಮ ನಿರ್ದೇಶನದ ಬದುಕು ಜಿಗಿತ ಕಂಡೀತು ಎಂದೇನೂ ಸುಜೊಯ್ ಅವರಿಗೆ ಅನಿಸಲಿಲ್ಲ. ಜನರು ಮೆಚ್ಚಿದರೂ, ಮತ್ತೊಂದು ಸಿನಿಮಾ ಆಹ್ವಾನವನ್ನು ಯಾರೂ ತಟ್ಟೆಯಲ್ಲಿಟ್ಟು ಕೊಡಲು ಮುಂದೆ ಬರಲಿಲ್ಲ. ಮನೆಯವರೆಲ್ಲ ಆ ಸಿನಿಮಾ ಯಶಸ್ಸು ನೋಡಿ ಸಂಭ್ರಮಿಸಿದಾಗ ಸೊಜೊಯ್ ಮುಖದಲ್ಲೂ ನಗು ಮಿಂಚಿ ಮಾಯವಾಯಿತಷ್ಟೆ.

ಅಜ್ಜಿ ಹಾಗೂ ಅಮ್ಮನ ಬದುಕನ್ನು ಬಹಳ ಹತ್ತಿರದಿಂದ ಕಂಡಿರುವ, ಕಷ್ಟಗಳನ್ನು ಅವರು ನಿಭಾಯಿಸುತ್ತಿದ್ದ ರೀತಿಯ ಭಾಗವೂ ಆಗಿರುವ ಸೊಜೊಯ್ ಮೊದಲಿನಿಂದಲೂ ಮಹಿಳೆಯರನ್ನು ಪುರುಷರಿಗಿಂತ ಪ್ರತ್ಯೇಕ ಎನ್ನುವಂತೆ ನೋಡುವುದೇ ಇಲ್ಲವಂತೆ. ಅವರ ಈ ಗುಣವನ್ನು ವಿದ್ಯಾ ಬಾಲನ್ ಕೂಡ ವಿಶೇಷವಾಗಿ ಹೊಗಳಿದ್ದರು.

‘ಅಹಲ್ಯಾ’ ಎಂಬ ಕಿರುಚಿತ್ರದ ಮೂಲಕವೂ ಅನೇಕ ವೀಕ್ಷಕರನ್ನು ಮುಟ್ಟಿದ ಸೊಜೊಯ್, ಈಗ ‘ಬದ್ಲಾ’ ಹಿಂದಿ ಸಿನಿಮಾ ನಿರ್ದೇಶಿಸಿದ್ದಾರೆ. ಇದು ಅವರ ಸ್ವತಂತ್ರ ಸಿನಿಮಾ ಅಲ್ಲ. ಸ್ಪೇನ್ ಭಾಷೆಯ ‘ದಿ ಇನ್ವಿಸಿಬಲ್ ಗೆಸ್ಟ್’ ಚಿತ್ರದ ರೀಮೇಕ್. ನಟಿ ತಾಪ್ಸಿ ಪನ್ನು ಪದೇ ಪದೇ ಈ ಸಿನಿಮಾದ ಪ್ರಸ್ತಾಪ ಮಾಡುತ್ತಿದ್ದರಂತೆ. ಅದರಿಂದ ಪ್ರೇರಿತರಾಗಿ ಇದನ್ನು ನಿರ್ದೇಶಿಸಿದ್ದಾಗಿ ಸುಜೊಯ್ ಹೇಳುತ್ತಾರೆ. ಪ್ರಮುಖ ಪಾತ್ರಕ್ಕೆ ಅಮಿತಾಭ್ ಬಚ್ಚನ್ ಒಪ್ಪಿದ ಮೇಲಷ್ಟೆ ಅವರು ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದು.

‘ನಮ್ಮ ಬದುಕಿನಲ್ಲೂ ಸ್ತ್ರೀ ಜಗತ್ತು ತುಂಬಾ ಗಟ್ಟಿಯಾಗಿದೆ. ಅವರ ಮನೋಬಲ ದೊಡ್ಡದು. ಅದನ್ನು ಗಮನಿಸುವ ವಿಷಯದಲ್ಲೂ ನಮ್ಮ ಮನಸ್ಸಿಗೆ ಮಂಕು ಕವಿದಿರುತ್ತದೆ. ಆ ದೂಳನ್ನು ಕೊಡವಿಕೊಂಡರೆ ನಾವು ಅವರನ್ನು ನೋಡುವ ಕ್ರಮವೇ ಬದಲಾಗುತ್ತದೆ’ ಎನ್ನುತ್ತಾರೆ ಸುಜೊಯ್. ‘ಬದ್ಲಾ’ ಸಿನಿಮಾದಲ್ಲಿಯೂ ಹೆಣ್ಣಿನ ಪಾತ್ರ ತುಂಬಾ ಸಶಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT