ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥ್ಯಾಂಕ್ಯೂ ಸಿನಿಮೋತ್ಸವ 2019: ಸಾರ್ಥಕ ಸಿನಿಮಾ ಮತ್ತೆ ಮತ್ತೆ ಬರಲಿ

Last Updated 28 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ಸಿನಿಮಾ ಮಾಡುವ ಕನಸು ಹೊತ್ತವರು, ಸಿನಿಮಾ ಸಂಭ್ರಮಿಸುವವರಷ್ಟೇ ಸಿನಿಮೋತ್ಸವದ ಸವಿಯನ್ನು ಸವಿದವರು. ಈಗಾಗಲೇ ಸಿನಿಮಾ ಯಶಸ್ಸಿನ ಮಜಾ ಉಂಡವರು, ಅದರ ಗ್ಲಾಮರ್‌ ದುಡಿಸಿಕೊಂಡು ಸ್ಟಾರ್‌ ಆದವರು, ಹಣವಂತರಾದವರು ಇಲ್ಲಿ ಅಷ್ಟಾಗಿ ಕಾಣಿಸಿಕೊಳ್ಳಲಿಲ್ಲ.

ಸಿನಿಮಾ ಅಂದರೆ ಗ್ಲಾಮರ್‌ ಎನ್ನುವ ಭ್ರಮೆಯನ್ನು ಇಲ್ಲಿ ಪ್ರದರ್ಶಿಸಲ್ಪಟ್ಟ ಸಿನಿಮಾಗಳು ಸಮರ್ಥವಾಗಿ ನಿರೂಪಿಸಿವೆ. ಮಚ್ಚು, ಲಾಂಗ್‌ನಲ್ಲಿ ಯಶದ ಗುಟ್ಟಿದೆ ಎನ್ನುವುದನ್ನು ಒಪ್ಪಿಸಹೊರಟವರು ಈ ಸಂಭ್ರಮದಿಂದ ದೂರ ಉಳಿದು ಉಪಕಾರವನ್ನೇ ಮಾಡಿದ್ದಾರೆ ಎನ್ನುತ್ತಾರೆ ಸಿನಿರಸಿಕರು.

ಯುದ್ಧದ ನಿರರ್ಥಕತೆ, ಬದುಕು, ಮನುಷ್ಯ ಸಂಬಂಧ ಹೇಳಲು ಥಳಕು ಬಳುಕಿನ ಅಗತ್ಯವಿಲ್ಲ ಎನ್ನುವುದನ್ನು ಸಿನಿಮೋತ್ಸವದ ಬಹುತೇಕ ಸಿನಿಮಾ ವಸ್ತುಗಳು ನಿರೂಪಿಸಿವೆ. ಇರಾನ್‌, ಚೀನಾ, ಜಪಾನ್‌, ಫಿಲಿಪ್ಪೀನ್‌, ಇಟಾಲಿಯನ್‌, ಕೊರಿಯಾ, ಅರೆಬಿಕ್‌ ಮತ್ತಿತರ ಸಿನಿಮಾಗಳು ಸರಳ, ಸಹಜ ನಡೆ ಮತ್ತು ಬದುಕಿಗೆ ಅತ್ಯಂತ ಹತ್ತಿರದ ವಸ್ತುಗಳನ್ನು ಇಟ್ಟುಕೊಂಡು ರೂಪಿಸಿದ್ದು ಸಾಕ್ಷಿ. ರಸಾನುಭವ, ಸ್ವಾದ, ಅರ್ಥಪೂರ್ಣ ಗ್ರಹಿಕೆಗಳನ್ನು ಕಟ್ಟಿಕೊಟ್ಟ ಸಿನಿಮೋತ್ಸವ ಮರೆಯಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಬಹುತೇಕ ಪ್ರೇಕ್ಷಕರು.

ಒರಾಯನ್ ಮಾಲ್‌ನಲ್ಲಿ ಇರುವ ಹನ್ನೊಂದು ಸ್ಕ್ರೀನ್‌ಗಳ ಲಭ್ಯ ಸೀಟ್‌ಗಳಲ್ಲಿ ನನಗೂ ಒಂದು ಸೀಟ್‌ ಸಿಕ್ಕಿತು. ಒಂದಷ್ಟು ಅರ್ಥಪೂರ್ಣ ಸಿನಿಮಾ ವೀಕ್ಷಿಸುವ ಅವಕಾಶ ದಕ್ಕಿತು. ಅದೇ ನನ್ನೊಳಗಿನ ಸಾರ್ಥಕತೆ. ಕಳೆದ ಸಿನಿಮೋತ್ಸವಕ್ಕಿಂತ ಈ ಸಿನಿಮೋತ್ಸವದ ವಿಷಯ ವೈವಿಧ್ಯ ಭಿನ್ನವಾಗಿತ್ತು ಎನ್ನುತ್ತಾರೆ ನಟ ಪ್ರವೀಣ್‌ ರಬಕವಿ.

ಮನುಷ್ಯ ಬದುಕು ಜಂಜಡಗಳಿಂದಲೇ ಕೂಡಿದೆ. ಜನಸಾಮಾನ್ಯ ಎನ್ನುವವ ಎಲ್ಲೆಡೆ ಇದ್ದಾನೆ. ಆತನ ಸ್ಥಿತಿ ಒಂದು ಪ್ರಾಂತದಿಂದ ಮತ್ತೊಂದು ಪ್ರಾಂತಕ್ಕೆ ಅಷ್ಟು ಭಿನ್ನವೇನಲ್ಲ. ಧರ್ಮಮದ ದೌರ್ಜನ್ಯ, ಆರ್ಥಿಕ ನೀತಿಗಳು ತಂದೊಡ್ಡುವ ಸವಾಲು, ರಾಜಕೀಯ ಅದ್ವಾನ ಮತ್ತು ಮುಖ್ಯವಾಗಿ ಮಿಲಿಟರಿ, ಯುದ್ಧ ಇವನ ಅಸ್ತಿತ್ವಕ್ಕೆ ಹೇಗೆ ಕಂಟಕ ಎನ್ನುವುದನ್ನು ನಿರೂಪಿಸಿದ ಸಿನಿಮಾಗಳು ಜಗದ ಸಾಕ್ಷಿಪ್ರಜ್ಞೆಯಂತಿದ್ದವು.

ಈ ಸಲದ ಸಿನಿಮೋತ್ಸವದಲ್ಲಿ ಇರಾನಿಯನ್ನರನ್ನು ಬಿಟ್ಟರೆ ಅನ್ಯ ದೇಶದ ಸಿನಿ ಪ್ರೇಕ್ಷಕರು, ತಜ್ಞರು, ಹಾಲಿವುಡ್‌ ತಾರೆಯರು ಅತ್ಯಂತ ವಿರಳ. ಬಾಲಿವುಡ್‌ ಪರಪಂಚದ ಒಂದಿಬ್ಬರು ಮುಖ್ಯ ಅತಿಥಿಗಳನ್ನು ಹೊರತುಪಡಿಸಿ ಮಿಕ್ಕವರ ಸುಳಿವಿರಲಿಲ್ಲ. ಅಷ್ಟೇ ಏಕೆ ನಮ್ಮ ಕನ್ನಡ ಸಿನಿಮಾದವರು ಕಾಣಿಸಿದ್ದು ಕೂಡ ಅಪರೂಪ.

ಸ್ಟಾರ್‌ ಎನ್ನುವ ಒಬ್ಬರೂ ಇತ್ತ ಸುಳಿಯಲಿಲ್ಲ. ಹೆಸರಾಂತ ನಿರ್ದೇಶಕರೂ ಅಷ್ಟೇ. ಸೀರಿಯಲ್‌ ನಟ, ನಟಿಯರು, ತಂತ್ರಜ್ಞರು, ನಿರ್ದೇಶಕರು ಒಂದಷ್ಟು ಕಂಡರು. ವಿಶೇಷವಾಗಿ ಕ್ಯಾಮೆರಾಮನ್‌ಗಳು, ಟೆಕ್ನಿಶಿಯನ್ಸ್‌ ಕಂಡರು. ಕ್ಯಾಮೆರಾ ಸೆನ್ಸ್‌, ಲೈಟಿಂಗ್‌ ಟೆಕ್ನಿಕ್‌, ಮೂವ್‌ಮೆಂಟ್‌ ಇತ್ಯಾದಿ ಕಲಿಯುವುದಕ್ಕೆ ಅವಕಾಶ ಎಂದುಕೊಂಡು ಬಂದ ಕೆಲವರಿದ್ದರು. ಸಿನಿಮಾವನ್ನು ಬಹುಶಿಸ್ತೀಯ ನೆಲೆಯಲ್ಲಿ ಕಲಿಯುವ ಆಸಕ್ತಿ ಇದ್ದವರು ಅಲ್ಲಲ್ಲಿ ಕಾಣಿಸಿದರು. ನಾಡಿನ ಹಿರಿಯ ಸಿನಿಮಾಟೊಗ್ರಾಫರ್‌ ಭಾಸ್ಕರ್‌ ಎಂದಿನಂತೆ ಕಾಣಿಸಿಕೊಂಡರು.

ಕನ್ನಡದ ನೆಲದಲ್ಲಿ ಅಂತರರಾಷ್ಟ್ರೀಯ ಮಟ್ಟದ ಸಿನಿಮೋತ್ಸವ ನಡೆಯುತ್ತಿದೆ ಆದರೂ ಕನ್ನಡ ಚಲನಚಿತ್ರ ರಂಗ ನಿರ್ಲಕ್ಷ್ಯ ವಹಿಸಿದ್ದು ಸ್ಪಷ್ಟವಾಗಿ ಕಾಣಿಸಿತ್ತು. ಸಮಸ್ಯೆಗಳು, ಬ್ಯುಸಿ ಶೆಡ್ಯುಲ್‌ ಏನೇ ಇರಲಿ ಜಗದ ಸಿನಿಸಾಮರಸ್ಯಕ್ಕಾದರೂ ಇಂಡಸ್ಟ್ರಿ ಉತ್ಸಾಹ ತೋರಿಸಲಿಲ್ಲ ಎನ್ನುವುದು ಇಲ್ಲಿ ಎದ್ದು ಕಾಣಿಸಿತು.

ಸಿನಿ ಕರ್ಮಿಗಳಾದ ಕೆ.ವಿ.ಜಯರಾಂ, ವರದರಾಜು ಅವರಂಥ ಹಿರಿಯರು ಹಿಂದೆಲ್ಲ ಎಲ್ಲೆಡೆ ನಡೆಯುವ ಸಿನಿಮೋತ್ಸವಗಳಿಗೆ ಉತ್ಸಾಹ
ದಿಂದ ಪಾಲ್ಗೊಂಡು ಬರುತ್ತಿದ್ದರಂತೆ. ಅಣ್ಣಾವ್ರ ಜೊತೆ ಸಿನಿಮೋತ್ಸವಗಳ ಮಜ ಅನುಭವಿಸಿದ ಬಗ್ಗೆ ಇತ್ತೀಚೆಗಷ್ಟೇ ಭಗವಾನ್‌ ಮೆಟ್ರೊ ಜೊತೆ ಅನುಭವ ಹಂಚಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಅಂಥ ಉತ್ಸಾಹ, ಆಸಕ್ತಿ ಇಂದಿನವರಲ್ಲಿ ಯಾಕಿಲ್ಲ?

ಸಿ.ಡಿ, ಪೆನ್‌ಡ್ರೈವ್‌, ಮೊಬೈಲ್‌, ಇಂಟರ್‌ನೆಟ್‌ ಏನೆಲ್ಲ ಸೌಲಭ್ಯಗಳು ಬೆರಳ ತುದಿಯಲ್ಲೇ ಜಗವನ್ನು ಇಟ್ಟಿರಬಹುದು. ಆದರೆ ಕೂಡಿ ಸಿನಿಮಾ ವೀಕ್ಷಿಸುವ,ಬೆರೆತು ಪರಸ್ಪರ ತಾಜಾ ತಾಜಾ ಅನುಭವಗಳನ್ನು ಹಂಚಿಕೊಳ್ಳುವ ಮಜವೇ ಭಿನ್ನ. ಅದು ಮೂಡಿಸುವ ಹೊಸ ಕನಸು ತುಂಬುವ ಉತ್ಸಾಹವೇ ಅನನ್ಯ ಎನ್ನುವುದು ಅನುಭವಿಗಳ ಮಾತು. ಆ ಉತ್ಸಾಹಕ್ಕೆ ಏನಾಯ್ತು?

ಪ್ರೇಕ್ಷಕರಲ್ಲಿ ಮಾತ್ರ ವಿಭಿನ್ನ ರುಚಿಯ ತುಡಿತ ಇರುವುದನ್ನು ಅದರಲ್ಲೂ ಸೃಜನಶೀಲ ಸಿನಿಮಾಗಳ ಬಗ್ಗೆ ಕುತೂಹಲ ಮತ್ತು ಆಸಕ್ತಿ ಇರುವುದನ್ನು ಸಿನಿಮೋತ್ಸವ ಮತ್ತೆ ಮತ್ತೆ ಸಾಬೀತು ಪಡಿಸಿದೆ. ನಮ್ಮವರಿಗೆ ಇಂಥ ಸಿನಿಮಾ ಮಾಡುವುದಕ್ಕೆ ಏಕೆ ಸಾಧ್ಯವಾಗುತ್ತಿಲ್ಲ, ಇರುವ ತೊಡಕುಗಳು ಏನು? ಇಂಡಸ್ಟ್ರಿ ಯಾಕೆ ಇಂಥ ಸಾಹಸಗಳನ್ನು ಮಾಡುವುದಿಲ್ಲ? ನಿರ್ಮಾಪಕರು ಇಂಥ ಸಿನಿಮಾಗಳಿಗೆ ಏಕೆ ಬಂಡವಾಳ ಹೂಡುವುದಿಲ್ಲ? ಲಾಭ ಮಾತ್ರವಲ್ಲದೇ ಸಾಂಸ್ಕೃತಿಕ ಪ್ರಜ್ಞೆಗಾಗಿ ಹಣ ಸುರಿದು ಸಾರ್ಥಕತೆ ಕಾಣಬಲ್ಲ ಶ್ರೀಮಂತ ನಿರ್ಮಾಪಕರು ಇದ್ದರೆ ಎಷ್ಟು ಚೆನ್ನಿತ್ತಲ್ಲವೇ..

ಮಾಧ್ಯಮ ಕೇಂದ್ರ: ಈ ಸಲದ ಮಾಧ್ಯಮ ಕೇಂದ್ರ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿತ್ತು. ಮಾಹಿತಿಗಳನ್ನು ನೀಡುವ ಕೆಲಸ, ಮಾಧ್ಯಮ ಪ್ರತಿನಿಧಿಗಳಿಗೆ ಅಗತ್ಯ ಸಹಕಾರ, ತಂತ್ರಜ್ಞಾನದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದು ಗಮನಾರ್ಹ. ವನಿತಾ ಸಿಂಗ್‌, ಗಣೇಶ್‌ ಶೆಟ್ಟಿ, ವೃಷಾಲಿ, ಸಂತೋಷ, ರಾಗು ಮತ್ತು ಲಿಸಿಲ್‌ ಮಾಧ್ಯಮ ಕೇಂದ್ರದಲ್ಲಿ ಅತ್ಯಂತ ಕ್ರಿಯಾಶೀಲರಾಗಿ ತೊಡಗಿಸಿಕೊಂಡಿದ್ದರು.

ಶುಭಂ: ಪಾಸ್‌ಗಳ ಅದ್ವಾನ, ಸೀಟ್‌ ಕಾಯ್ದಿರಿಸುವ ಬಗೆಗಿನ ತಕರಾರು, ಪ್ರೇಕ್ಷಕರು ಮತ್ತು ಸಂಘಟನಾ ಕಾರ್ಯಕರ್ತರ ನಡುವಿನ ವಾಗ್ವಾದದ ನಡುವೆಯೂ ಎಲ್ಲ ವಯೋಮಾನದ ಸಿನಿರಸಿಕರು ಅರ್ಥಪೂರ್ಣ ಸಿನಿಮಾಗಳ ಮಹತ್ವವನ್ನು ಮತ್ತದಕ್ಕೆ ಇರುವ ಬೇಡಿಕೆಯನ್ನು ಧ್ವನಿಸಿದ್ದಾರೆ.‌ ಈ ಅರ್ಥದಲ್ಲಿ ಸಿನಿಮೋತ್ಸವ ಬಹುತೇಕ ಯಶಸ್ವಿ.

***
ಒರಾಯನ್ ಮಾಲ್‌ನಲ್ಲಿ ಇರುವ ಹನ್ನೊಂದು ಸ್ಕ್ರೀನ್‌ಗಳ ಲಭ್ಯ ಸೀಟ್‌ಗಳಲ್ಲಿ ನನಗೂ ಒಂದು ಸೀಟ್‌ ಸಿಕ್ಕಿತು. ಒಂದಷ್ಟು ಅರ್ಥಪೂರ್ಣ ಸಿನಿಮಾ ವೀಕ್ಷಿಸುವ ಅವಕಾಶ ದಕ್ಕಿತು. ಅದೇ ನನ್ನೊಳಗಿನ ಸಾರ್ಥಕತೆ. ಕಳೆದ ಸಿನಿಮೋತ್ಸವಕ್ಕಿಂತ ಈ ಸಿನಿಮೋತ್ಸವದ ವಿಷಯ ವೈವಿಧ್ಯ ಭಿನ್ನವಾಗಿತ್ತು.
-ಪ್ರವೀಣ್‌ ರಬಕವಿ. ನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT