ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್‌ ಜತೆ ಹೋರಾಡಿ, ಬದುಕಿ ಬರುವೆ...

ಇರ್ಫಾನ್ ಖಾನ್
Last Updated 29 ಏಪ್ರಿಲ್ 2020, 8:56 IST
ಅಕ್ಷರ ಗಾತ್ರ

‘ಮೈಯೊಳಗಿನ ಶಕ್ತಿ ಎಲ್ಲವನ್ನೂ ಕಳೆದುಕೊಂಡು ದಯನೀಯ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ದಾಖಲಾದ ದಿನ ನನಗಿನ್ನೂ ಚೆನ್ನಾಗಿ ನೆನಪಿದೆ. ನಾನು ವಾಸವಿರುವ ವಾರ್ಡ್‌ನ ಎದುರು ಲಾರ್ಡ್ಸ್‌ ಕ್ರೀಡಾಂಗಣವಿದೆ. ನನ್ನೊಳಗಿನ ನೋವಿನ ಮಧ್ಯೆಯೂ ಕ್ರೀಡಾಂಗಣದಲ್ಲಿದ್ದ ವಿವಿಯನ್‌ ರಿಚರ್ಡ್ಸ್ ಮುಗುಳ್ನಗೆಯ ಪೋಸ್ಟರ್ ನೋಡಿದೆ. ಎಂಥದ್ದು ಅನ್ನಿಸಲಿಲ್ಲ. ಯಾಕೋ ಒಂದು ಕ್ಷಣ, ಈ ಜಗತ್ತು ನನಗೆ ಸೇರಿದ್ದಲ್ಲ ಎಂದು ಅನ್ನಿಸಿತು’.

-ಕ್ಯಾನ್ಸರ್ ಆವರಿಸಿಕೊಂಡಿದೆ ಎಂದು ದೃಢಪಟ್ಟ ನಂತರ ಇರ್ಫಾನ್ ಖಾನ್ ಬರೆದ ಪತ್ರದ ಮೊದಲ ಸಾಲುಗಳಿವು. ಇದು 2018 ಡಿಸೆಂಬರ್‌ 19ರಂದು ಪ್ರಕಟವಾದ ಲೇಖನ.

*****

ನಿರೀಕ್ಷೆ ಅನುಸಾರ ಎಲ್ಲವೂ ಅಂದ್ಕೊಂಡಂತೆ ನೆರವೇರಿದ್ದರೆ, ಈ ಹೊತ್ತಿಗೆ ಇರ್ಫಾನ್ ಖಾನ್ ‘ಹಿಂದಿ ಮೀಡಿಯಂ 2’ ಚಿತ್ರೀಕರಣದಲ್ಲಿ ಪಾಲ್ಗೊಳ್ಳಬೇಕಿತ್ತು. ಇನ್ನಷ್ಟು ಬಾಲಿವುಡ್‌ ಮತ್ತು ಹಾಲಿವುಡ್ ಚಿತ್ರಗಳಿಗೆ ಅಭಿನಯಿಸಲು ಒಪ್ಪಿ ಸಹಿ ಹಾಕಬೇಕಿತ್ತು. ಮನದಾಳದಲ್ಲಿ ಬೇರು ಬಿಟ್ಟ ಕನಸುಗಳನ್ನು ಸಾಕಾರಗೊಳಿಸಲು ಹತ್ತು ಹಲವು ಯೋಜನೆಗಳನ್ನು ರೂಪಿಸಿಕೊಂಡಿದ್ದರು. ಅದಕ್ಕಾಗಿ ಅವರು ಸಕಲ ಸಿದ್ಧತೆಯನ್ನೂ ನಡೆಸಿದ್ದರು.

ಆದರೆ, ದೇಹದೊಳಗೆ ಗೊತ್ತಿಲ್ಲದೇ ಸೇರಿಕೊಂಡು ನಿಧಾನವಾಗಿ ಎಲ್ಲೆಡೆ ಆವರಿಸಿಕೊಂಡ ‘ನ್ಯೂರೊಎಂಡೊಕ್ರೈನ್ ಕ್ಯಾನ್ಸರ್‌‘, ಇರ್ಫಾನ್ ಖಾನ್‌ಗೆ ಯಾವುದಕ್ಕೂ ಅವಕಾಶ ಕೊಡಲಿಲ್ಲ. ಅವರು ಲಂಡನ್‌ನಿಂದ ಭಾರತಕ್ಕೆ ಬರುವುದಿರಲಿ, ಹಾಸಿಗೆಯಿಂದ ಒಂದು ಕ್ಷಣ ಕೂಡ ಮುಗುಳ್ನಗೆಯೊಂದಿಗೆ ಮೇಲೇಳಲು ಆಸ್ಪದ ನೀಡಲಿಲ್ಲ. ಅಷ್ಟೇ ಅಲ್ಲ, 10 ತಿಂಗಳಲ್ಲಿ ಅವರ ದೇಹವನ್ನು ಹಣ್ಣಾಗಿಸಿದೆ. ಕನಸುಗಳನ್ನು ಕಸಿದುಕೊಂಡು ಸಣ್ಣ ಭಯ ಮೂಡಿಸಿದೆ.

ಬಾಲಿವುಡ್‌ ನಟರ ಸಾಲಿನಲ್ಲಿ ಭಿನ್ನವಾಗಿ ಕಾಣುವ ಇರ್ಫಾನ್ ಕಳೆದ ವರ್ಷದಾಂತ್ಯವರೆಗೂ ಆರೋಗ್ಯವಾಗಿಯೇ ಇದ್ದರು. ತಮ್ಮ ಅಭಿನಯದ ಬ್ಲ್ಯಾಕ್‌ಮೇಲ್, ಕ್ಯಾರವಾನ್ ಚಿತ್ರಗಳ ಪ್ರೊಮೋಷನ್‌ಗೆ ದಿನಾಂಕ ನಿಗದಿ ಪಡಿಸಿಕೊಂಡಿದ್ದರು. ಆದರೆ ಜನವರಿ– ಫೆಬ್ರುವರಿಯಲ್ಲಿ ಇದ್ದಕ್ಕಿದ್ದಂತೆಯೇ ಅವರ ಆರೋಗ್ಯದಲ್ಲಿ ಏರುಪೇರು ಆಯಿತು. ವೈದ್ಯರ ಬಳಿ ತಪಾಸಣೆ ನಡೆಸಿದಾಗಲೂ, ಅನಾರೋಗ್ಯದ ಬಗ್ಗೆ ಸಂಪೂರ್ಣ ಮಾಹಿತಿ ದೊರೆಯಲಿಲ್ಲ.

’ತುಂಬಾ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದೇನೆ. ಏನೆಂದು ಸರಿಯಾಗಿ ಗೊತ್ತಿಲ್ಲ. ಚಿಕಿತ್ಸೆ ಪಡೆದ ಬಳಿಕ ನಿಮಗೆ ಎಲ್ಲವನ್ನೂ ಹೇಳುವೆ’ ಎಂಬ ಸಂದೇಶವನ್ನು ಹರಿಬಿಟ್ಟು ಅವರು ಲಂಡನ್ ಆಸ್ಪತ್ರೆಯಲ್ಲಿ ದಾಖಲಾದರು. ಎರಡು– ಮೂರು ತಿಂಗಳ ಬಳಿಕ ಅವರು ಕ್ಯಾನ್ಸರ್‌ನಿಂದ ಬಳಲುತ್ತಿರುವ ಅಂಶವನ್ನು ಬಹಿರಂಗಪಡಿಸಿದರು. ‘ಕ್ಯಾನ್ಸರ್ ಜೊತೆ ಹೋರಾಟ ನಡೆಸಿದ್ದೇನೆ. ಧೈರ್ಯ, ಆತ್ಮವಿಶ್ವಾಸ ಕಳೆದುಕೊಂಡಿಲ್ಲ’ ಎಂದು ಹೇಳಿದರು.

ಕ್ಯಾನ್ಸರ್‌ ಎಷ್ಟು ಬಿರುಸಾಗಿ ವಶಪಡಿಸಿಕೊಳ್ಳಲು ಯತ್ನಿಸುತ್ತಿದೆಯೋ, ಅಷ್ಟೇ ಗಟ್ಟಿಯಾಗಿ ಅದರಿಂದ ಬಿಡುಗಡೆ ಹೊಂದಲು ಇರ್ಫಾನ್ ಪ್ರಯತ್ನ ನಡೆಸಿದ್ದಾರೆ. ನಾಲ್ಕು ಹಂತದ ಕಿಮೊಥೆರಪಿ ಪೂರ್ಣಗೊಳಿಸಿರುವ ಅವರು ಕಳೆದ ದೀಪಾವಳಿ ಬಳಿಕ ಭಾರತಕ್ಕೆ ಭೇಟಿ ನೀಡಲು ಯೋಜಿಸಿದ್ದರು. ಆದರೆ ನಿತ್ರಾಣಗೊಂಡ ಅವರಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಚೇತರಿಕೆ ಕಾಣದ ಕಾರಣ ವೈದ್ಯರು ಅವರಿಗೆ ಭಾರತಕ್ಕೆ ಹೋಗದಂತೆ ಸೂಚಿಸಿದರು.

ಕಿರುತೆರೆಯಿಂದ ಹಿರಿತೆರೆಗೆ ಲಗ್ಗೆಯಿಟ್ಟು ನಾಯಕ ನಟರಾಗಿ ಯಶಸ್ಸು ಕಂಡವರಲ್ಲಿ ಇರ್ಫಾನ್ ಪ್ರಮುಖರು. ಪರ್ಯಾಯ ವಿಚಾರಧಾರೆಯ ಸಿನಿಮಾಗಳು ಅಲ್ಲದೇ ಕಮರ್ಷಿಯಲ್ ಚಿತ್ರಗಳಲ್ಲಿ ಪ್ರಮುಖ ಮತ್ತು ಸವಾಲಿನ ಪಾತ್ರಗಳನ್ನು ನಿಭಾಯಿಸಿರುವ ಅವರು ಹಾಲಿವುಡ್‌ನಲ್ಲೂ ತಮ್ಮದೇ ಆದ ಛಾಪು ಮೂಡಿಸಿರುವುದು ವಿಶೇಷ. ಅವರು ಸಾಧ್ಯವಾದಷ್ಟು ಬೇಗ ಗುಣಮುಖರಾಗಿ, ಚಿತ್ರರಂಗದ ಮೂಲಕ ಸಮಾಜಕ್ಕೆ ಇನ್ನಷ್ಟು ಕೊಡುಗೆ ನೀಡಲಿ ಎಂಬುದು ದೇಶದ ಜನರ ಆಶಯ.

‘ಎಲೆಯ ಚಿಗುರಿನಿಂದ ನಾ ಪುಟಿದೇಳುವೆ...’

‘ಮೈಯೊಳಗಿನ ಶಕ್ತಿ ಎಲ್ಲವನ್ನೂ ಕಳೆದುಕೊಂಡು ದಯನೀಯ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ದಾಖಲಾದ ದಿನ ನನಗಿನ್ನೂ ಚೆನ್ನಾಗಿ ನೆನಪಿದೆ. ನಾನು ವಾಸವಿರುವ ವಾರ್ಡ್‌ನ ಎದುರು ಲಾರ್ಡ್ಸ್‌ ಕ್ರೀಡಾಂಗಣವಿದೆ. ನನ್ನೊಳಗಿನ ನೋವಿನ ಮಧ್ಯೆಯೂ ಕ್ರೀಡಾಂಗಣದಲ್ಲಿದ್ದ ವಿವಿಯನ್‌ ರಿಚರ್ಡ್ಸ್ ಮುಗುಳ್ನಗೆಯ ಪೋಸ್ಟರ್ ನೋಡಿದೆ. ಎಂಥದ್ದು ಅನ್ನಿಸಲಿಲ್ಲ. ಯಾಕೋ ಒಂದು ಕ್ಷಣ, ಈ ಜಗತ್ತು ನನಗೆ ಸೇರಿದ್ದಲ್ಲ ಎಂದು ಅನ್ನಿಸಿತು’.

ಕ್ಯಾನ್ಸರ್ ಆವರಿಸಿಕೊಂಡಿದೆ ಎಂದು ದೃಢಪಟ್ಟ ನಂತರ ಇರ್ಫಾನ್ ಖಾನ್ ಬರೆದ ಪತ್ರದ ಮೊದಲ ಸಾಲುಗಳಿವು. ಆಸ್ಪತ್ರೆಯ ಹಾಸಿಗೆಯ ಮೇಲೆ ನೋವಿನಿಂದ ನರಳಾಟದ ಮಧ್ಯೆಯೂ ಅಲ್ಲಿನ ಚಿತ್ರಣವನ್ನು ಹೇಳಲು ಪ್ರಯತ್ನಿಸಿದರು. ದೇಶ– ವಿದೇಶದಲ್ಲಿ ಸಣ್ಣಪುಟ್ಟ ಗಲ್ಲಿಗಳಲ್ಲಿ ಮತ್ತು ಮನೆಗಳಲ್ಲಿ ತಮಗಾಗಿ ಪ್ರಾರ್ಥಿಸುವವರನ್ನು ಸ್ಮರಿಸಿದರು. ಅವರೆಲ್ಲರ ಪ್ರಾರ್ಥನೆಯೂ ಒಂದು ಸರ್ವಶಕ್ತಿಯಾಗಿ ರೂಪುಗೊಂಡು ತಮ್ಮನ್ನು ಈ ನರಕಯಾತನೆಯಿಂದ ಪಾರು ಮಾಡಬಹುದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಬದುಕು ಮೇಲಿನ ಭರವಸೆ ಅವರು ಕಳೆದುಕೊಂಡಿಲ್ಲ.

ಪತ್ರದಲ್ಲಿ ಪುತ್ರನನ್ನು ನೆನಪಿಸಿಕೊಳ್ಳುತ್ತ, ‘ನನ್ನನ್ನು ಭೇಟಿಯಾಗಲು ಸುಮಾರು ಜನರು ಬರುತ್ತಾರೆ. ನನ್ನ ಸ್ಥಿತಿ ಬಗ್ಗೆ ಅನುಕಂಪ ಪಡುತ್ತಾರೆ. ಚೇತರಿಕೆಗೆ ಹಾರೈಸುತ್ತಾರೆ. ನಾನು ಮತ್ತೇನನ್ನೂ ಬಯಸುವುದಿಲ್ಲ. ನನ್ನ ಕಾಲುಗಳ ಮೇಲೆ ನಿಲ್ಲಲು ಇಚ್ಛಿಸುತ್ತೇನೆ. ಆತಂಕ ಮತ್ತು ಭಯ ಎಂಬುದು ಎರಡೂ ನನ್ನನ್ನು ವಶಕ್ಕೆ ತೆಗೆದುಕೊಳ್ಳಬಾರದು ಎಂದು ಕೋರುತ್ತೇನೆ. ನಾನು ದಯನೀಯ ಸ್ಥಿತಿಯಲ್ಲಿ ಇರಲು ಇಚ್ಛಿಸುವುದಿಲ್ಲ‘ ಎಂದು ಬರೆದಿದ್ದಾರೆ.

ಬದುಕುವ ಮತ್ತು ಇನ್ನಷ್ಟು ಸಾಧನೆ ಮಾಡುವ ಸಾಗರದಷ್ಟು ಆಕಾಂಕ್ಷೆ ಹೊಂದಿರುವ ಅವರು ಸುಲಭವಾಗಿ ಸೋಲು ಒಪ್ಪಲು ಸಿದ್ಧರಿಲ್ಲ. ಅವರಿಗೆ ಒಂದೊಂದು ಎಲೆ, ಚಿಗುರು ಅಲ್ಲದೆ ಪುಟ್ಟ ಪುಟ್ಟ ಅಂಶಗಳು ಸ್ಫೂರ್ತಿ ನೀಡುತ್ತಿವೆ. ‘ನಿಸರ್ಗದೊಳಗಿನ ಪುಟ್ಟ ಪುಟ್ಟ ಬೆಳವಣಿಗೆಯು ನನ್ನಲ್ಲಿ ಅಚ್ಚರಿ ಮೂಡಿಸುತ್ತದೆ. ಸಂತಸ ತರುತ್ತದೆ. ಅವುಗಳನ್ನು ನೋಡುತ್ತ ನನ್ನೊಳಗೆ ಬದುಕುವ, ಮತ್ತೆ ಪುಟಿದೇಳುವ ಮೊಳಕೆ ಒಡೆಯುತ್ತದೆ‘ ಎನ್ನುತ್ತಾರೆ ಅವರು.

ಜನಪರ ಹೋರಾಟಕ್ಕೆ ಸದಾ ಬೆಂಬಲ

2015ರ ಏಪ್ರಿಲ್‌ನಲ್ಲಿ ಮೈಸೂರು ಸಮೀಪದ ನಂಜನಗೂಡು ಬಳಿ ಬದನವಾಳು ಗ್ರಾಮದ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಹಿರಿಯ ಚಿಂತಕ, ರಂಗಕರ್ಮಿ ಪ್ರಸನ್ನ ಅವರು ಸುಸ್ಥಿರ ಬದುಕಿಗಾಗಿ ಸತ್ಯಾಗ್ರಹ ಆರಂಭಿಸಿದಾಗ, ಅವರನ್ನು ಬೆಂಬಲಿಸಲು ಇರ್ಫಾನ್‌ ಖಾನ್ ಗ್ರಾಮಕ್ಕೆ ಭೇಟಿ ನೀಡಿದರು.

ಅಲ್ಲಿಯೇ ಒಂದೆರಡು ದಿನ ವಾಸ್ತವ್ಯ ಮಾಡಿದರು. ಸಾಮಾನ್ಯ ವ್ಯಕ್ತಿಯಂತೆಯೇ ಎಲ್ಲರೊಂದಿಗೆ ಬೆರೆತ ಅವರು ಎಲ್ಲಿಯೂ ಸಹ ಖ್ಯಾತನಾಮ ನಟ ಎಂಬ ಹಮ್ಮುಬಿಮ್ಮು ತೋರಿಸಲಿಲ್ಲ. ಸಾಮಾನ್ಯನರಲ್ಲಿ ಸಾಮಾನ್ಯರಾಗಿ ಉಳಿದು ಎಲ್ಲರೊಂದಿಗೆ ಮಾತನಾಡಿದರು. ತಮ್ಮ ಭಾವನೆಗಳನ್ನು ಹಂಚಿಕೊಂಡರು.

ಪ್ರಸನ್ನ ಅವರು ಕೈಉತ್ಪನ್ನದ ಕಾರ್ಮಿಕರು, ದೇಶ ಮತ್ತು ಜನರ ಪರವಾಗಿ ವಿಶೇಷ ಅಭಿಯಾನ ಕೈಗೊಂಡಾಗಲೆಲ್ಲ, ಅವರನ್ನು ಬೆಂಬಲಿಸಲು ಇರ್ಫಾನ್ ಖಾನ್ ಹಾಜರಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT