ಬುಧವಾರ, ಮಾರ್ಚ್ 29, 2023
27 °C
ಮತ್ತೆ ನಟನೆಯತ್ತ ನಟಿ ರಮ್ಯಾ?

ಕೊರೊನಾಗೂ ಮುಂಚೆಯೇ ಕ್ವಾರಂಟೈನ್‌: ಮೋಹಕ ತಾರೆ ರಮ್ಯಾ ಕಾಲೆಳೆದ ಅಭಿಮಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟಿ ರಮ್ಯಾ ಕನ್ನಡದಲ್ಲಿ ಅಭಿನಯಿಸಿದ ಕೊನೆಯ ಚಿತ್ರ ‘ನಾಗರಹಾವು’. ಇದು ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿದ್ದು ಎಲ್ಲರಿಗೂ ತಿಳಿದ ಸಂಗತಿ. ಬಣ್ಣದಲೋಕದಲ್ಲಿ ಇದ್ದಾಗಲೇ ರಾಜಕಾರಣದ ನಂಟು ಬೆಳೆಸಿಕೊಂಡಿದ್ದ ಆಕೆ, 2013ರಲ್ಲಿ ನಡೆದ ಮಂಡ್ಯ ಲೋಕಸಭೆಯ ಉಪ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿ ಅಧಿಕೃತವಾಗಿ ರಾಜಕೀಯ ಕ್ಷೇತ್ರಕ್ಕೂ ಕಾಲಿಟ್ಟರು. ಬಳಿಕ ಮರುವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ ರಮ್ಯಾ, ಕಾಂಗ್ರೆಸ್‌ ಪಕ್ಷದಲ್ಲಿ ಸೋಷಿಯಲ್‌ ಮೀಡಿಯಾದ ಉಸ್ತುವಾರಿಯ ಹೊಣೆ ಹೊತ್ತರು. ಈ ಜವಾಬ್ದಾರಿಯಿಂದ ಕೆಳಗಿಳಿದ ಆಕೆ ಈಗ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬುದು ನಿಗೂಢವಾಗಿಯೇ ಉಳಿದಿದೆ.

ರಮ್ಯಾ ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ದಿಢೀರನೇ ಅಭಿಮಾನಿಗಳ ಸಂಪರ್ಕದಿಂದಲೂ ದೂರ ಸರಿದು ಬಿಡುತ್ತಾರೆ. ಈಗ ಆಕೆ ಇನ್‌ಸ್ಟಾಗ್ರಾಮ್‌ನಲ್ಲಿ ಸೆಲ್ಫಿ ಫೋಟೊಗಳ ಮೂಲಕ ಕಾಣಿಸಿಕೊಂಡಿದ್ದಾರೆ. ಹಾಗಾಗಿ, ಆಕೆ ಮತ್ತೆ ನಟನೆಯತ್ತ ಹೊರಳುತ್ತಾರೆಯೇ ಎಂಬ ಕುತೂಹಲ ಆಕೆಯ ಅಭಿಮಾನಿಗಳಲ್ಲಿ ಗರಿಗೆದರಿದೆ.

‘ದಿಲ್‌ ಕಾ ರಾಜ’ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್‌ ಅವರಿಗೆ ರಮ್ಯಾ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಸುದ್ದಿ ಕಳೆದ ವರ್ಷ ಹಬ್ಬಿತ್ತು. ಆದರೆ, ಈ ಸಿನಿಮಾ ಮಾತ್ರ ಸೆಟ್ಟೇರಲಿಲ್ಲ. ಈಗ ರಮ್ಯಾ ಇನ್‌ಸ್ಟಾಗ್ರಾಮ್‌ನಲ್ಲಿ ಕಾಣಿಸಿಕೊಂಡಿರುವುದರಿಂದ ಅವರು ಮತ್ತೆ ನಟನೆಯತ್ತ ಮುಖ ಮಾಡಬಹುದು ಎಂಬುದು ಆಕೆಯ ಅಭಿಮಾನಿಗಳ ಲೆಕ್ಕಾಚಾರ.

‘ನಾನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ಗಳನ್ನು ಹಂಚಿಕೊಂಡು ಒಂದು ವರ್ಷ ಕಳೆಯಿತು. ಗಿಡಗಳು, ಪಕ್ಷಿಗಳು, ಪುಸ್ತಕಗಳು ಮತ್ತು ನನ್ನ ಪ್ರೀತಿಯ ನಾಯಿಯ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ಮತ್ತೆ ನಿಧಾನವಾಗಿ ಸಕ್ರಿಯಳಾಗಲು ನಿರ್ಧರಿಸಿರುವೆ. ಈಗ ಸೆಲ್ಫಿ ಫೋಟೊಗಳನ್ನು ಫೋಸ್ಟ್‌ ಮಾಡಿರುವೆ. ಕ್ಯಾಮೆರಾದ ಮುಂದೆ ನಿಂತು ಹಲವು ಪ್ರಯತ್ನಗಳ ಬಳಿಕ ಈ ಫೋಟೊಗಳನ್ನು ಕ್ಲಿಕ್ಕಿಸಿಕೊಂಡಿರುವೆ’ ಎಂದು ರಮ್ಯಾ ಬರೆದುಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹಲವು ದಿನಗಳ ಬಳಿಕ ರಮ್ಯಾ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆಕೆಯ ಅಭಿಮಾನಿ ನಾಗೇಶ್‌ ವಡ್ಡಿ, ‘ಕೊರೊನಾ ಬರುವುದಕ್ಕೂ ಮುಂಚೆನೆ ನೀವು ಕ್ವಾರಂಟೈನ್‌ ಆಗಿದ್ದೀರಲ್ಲ. ಸೂಪರ್‌ ಮೇಡಂ ನೀವು’ ಎಂದು ಕಾಲೆಳೆದಿದ್ದಾರೆ. ಇದಕ್ಕೆ ರಮ್ಯಾ ನಗುವಿನ ಮೂಲಕ ಪ್ರತಿಕ್ರಿಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು