ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಕ್‌ ರೇಮೊ: ನಟ ಇಶಾನ್‌ ಸಂದರ್ಶನ

Last Updated 12 ಮೇ 2022, 19:30 IST
ಅಕ್ಷರ ಗಾತ್ರ

‘ರೋಗ್‌’ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸಿದ ನಟ ಇಶಾನ್‌, ಆ ಬಳಿಕ ವೆಬ್‌ಸರಣಿಗಳಲ್ಲೂ ಮಿಂಚಿದರು. ಸಂಗೀತಮಯ ಚಿತ್ರವಾಗಿರುವ ‘ರೇಮೊ’ದಲ್ಲಿ ಸ್ಟೈಲಿಷ್‌ ಆಗಿ ಕಾಣಿಸಿಕೊಂಡು ಹೊಸ ಭರವಸೆ ಮೂಡಿಸಿರುವ ಅವರು ಸಿನಿಬದುಕು ಮತ್ತು ತಮ್ಮ ಚಿತ್ರದ ಬಗ್ಗೆ ಮಾತನಾಡಿದ್ದು ಹೀಗೆ...

***

ಸಿನಿಪಯಣ ಹೇಗೆ ಸಾಗಿದೆ?

ತುಂಬಾ ಚೆನ್ನಾಗಿಯೇ ಸಾಗಿದೆ. ಮೊದಲ ಚಿತ್ರ ತೆಲುಗಿನ ‘ರೋಗ್‌’ ಗಳಿಕೆಯ ದೃಷ್ಟಿಯಿಂದ ಅಷ್ಟಾಗಿ ಓಡಲಿಲ್ಲ. ಆದರೆ, ನನ್ನನ್ನು ಚೆನ್ನಾಗಿ ಅಣಿಗೊಳಿಸಿತು. ಹೊಸತನಕ್ಕೆ ತೆರೆದುಕೊಂಡೆ. ಇನ್ನಷ್ಟು ಕಲಿತೆ. ಈಗಲೂ ಆ ಚಿತ್ರ ನೋಡಿದ ಪ್ರೇಕ್ಷಕರು ನನಗೆ ವೈಯಕ್ತಿಕವಾಗಿ ಪ್ರತಿಕ್ರಿಯೆ ನೀಡುತ್ತಲೇ ಇದ್ದಾರೆ. ಹಾಗೆ ನೋಡಿದರೆ ‘ಒರಟ ಐ ಲವ್‌ ಯೂ’ ಚಿತ್ರದಲ್ಲಿ ಬಾಲನಟನಾಗಿ ಅಭಿನಯಿಸಿದ್ದೆ. ಆ ದೃಶ್ಯವನ್ನು ಕೇವಲ ಪ್ರಯೋಗಕ್ಕಷ್ಟೇ ತೆಗೆದುಕೊಂಡರು. ತೆರೆಗೆ ಬರಲಿಲ್ಲ. ಆ ಬಳಿಕ ಉಪೇಂದ್ರ ಅವರ ‘ಶಿವಂ’ ಚಿತ್ರದಲ್ಲಿ ಬಣ್ಣ ಹಚ್ಚಿದೆ. ವಿಶಾಖಪಟ್ಟಣಕ್ಕೆ ಹೋಗಿ ಅಭಿನಯ ತರಬೇತಿ ಪಡೆದೆ. ವೆಬ್‌ ಸರಣಿಗಳಾದ ‘ಪರಂಪರಾ’ ಮತ್ತು ‘3 ರೋಸಸ್‌’ನಲ್ಲಿಯೂ ಅವಕಾಶಗಳು ಹುಡುಕಿಕೊಂಡು ಬಂದವು. ಹೀಗೆ
2013 ರಿಂದ ಸಿನಿಪಯಣ ಸಾಗಿದೆ.

ಸಿನಿಗುರು ಯಾರು?

ತುಂಬಾ ಜನ ಇದ್ದಾರೆ. ವಿಶೇಷವಾಗಿ ಹೆಚ್ಚು ಒಡನಾಡಿದ್ದು ಪೂರಿ ಜಗನ್ನಾಥ್‌ ಅವರ ಬಳಿ. ಅವರು ನನ್ನನ್ನು ಬದಲಾಯಿಸಿಬಿಟ್ಟರು. ನನ್ನನ್ನು ಬ್ಯಾಂಕಾಕ್‌ಗೆ ಕರೆದುಕೊಂಡು ಹೋಗಿ ಸಾಕಷ್ಟು ತರಬೇತಿ ಕೊಡಿಸಿದರು. ದೇಹಭಾಷೆ, ನೃತ್ಯ, ಫೈಟ್‌... ಹೀಗೆ ಹತ್ತಾರು ಬಗೆಯ ಕೌಶಲಗಳನ್ನು ಕಲಿಸಿದರು. ಅದರ ಪರಿಣಾಮವಾಗಿಯೇ ನನ್ನ ಲುಕ್‌ ಹೀಗಿದೆ. ಈಗ ‘ರೇಮೊ’ ಚಿತ್ರಕ್ಕೆ ಬೇಕಾದಂತೆಯೇ ಹೊಂದಿಕೊಂಡುಬಿಟ್ಟಿದ್ದೇನೆ.

‘ರೇಮೊ’ ಯಾರು? ಚಿತ್ರದಲ್ಲಿ ಏನು ಹೇಳುತ್ತಿದ್ದೀರಿ?

ಈ ಪಾತ್ರವೇ ಒಂಥರಾ ಔಟ್‌ ಆಫ್‌ ಬಾಕ್ಸ್‌ ಚಿಂತನೆ. ರೇಮೊ ಪಾತ್ರವೇ ಎಲ್ಲವನ್ನೂ ಮಾಡುತ್ತದೆ. ಮಾತು, ನಗು, ಅಳು, ಹೊಡೆದಾಟ ಎಲ್ಲವೂ ಇದೆ. ‘ರೇಮೊ’ನದ್ದೇ ಒಂದು ಭಿನ್ನಶೈಲಿಯ ಜೀವನ. ರಾಕ್‌ ಕಲಾವಿದ ಹೇಗೆಲ್ಲಾ ಸ್ಟೈಲಿಷ್‌ ಆಗಿರುತ್ತಾನೋ ಅದೆಲ್ಲವನ್ನೂ ತೋರಿಸಿದ್ದೇವೆ. ರಾಕ್‌ ಕಲಾವಿದನ ಮನೋಸ್ಥಿತಿ, ವರ್ತನೆಗಳು ಈ ಚಿತ್ರದಲ್ಲಿವೆ. ಪಾತ್ರ ರೂಪಿಸಲು ನಿರ್ದೇಶಕರು ಸಾಕಷ್ಟು ಕಸರತ್ತು ಮಾಡಿದ್ದಾರೆ. ಚಿತ್ರ ಪ್ರೇಕ್ಷಕನಿಗೆ ಇಷ್ಟವಾಗುತ್ತದೆ ಎಂಬ ನಂಬಿಕೆಯಿದೆ. ನಾಯಕನ ಕಚೇರಿಯೇ ಗಾಜಿನ ಮನೆ. ಅವನ ಕ್ಯಾಬಿನ್‌ ಒಳಗೂ ಕಾರು ಹೋಗುತ್ತದೆ. ಅಂಥ ಒಂದು ಗಾಜಿನ ಮನೆಯ ಸೆಟ್ಟನ್ನು ವಿಜಯನಗರದಲ್ಲಿ ಹಾಕಿದ್ದೆವು. ಹೀಗೆ ಚಿತ್ರದಲ್ಲಿ ಸೃಜನಶೀಲ ಆಯಾಮ ತುಂಬಾ ಇದೆ.

ಈ ಸಿನಿಮಾ ಒಂದು ಟ್ರೆಂಡ್‌ ಸೆಟ್ಟರ್‌ ಆಗಬೇಕು. ಇದರಲ್ಲಿ ತಾಜಾತನ ಇದೆ. ಹಾಗಾಗಿ ಇದು ಕನ್ನಡದ ಮಟ್ಟಿಗೆ ಬೇರೆಯೇ ಅನ್ನಬಹುದಾದ ಸಿನಿಮಾ. ಸಹಜವಾಗಿ ನಮಗೆ ನಿರೀಕ್ಷೆಗಳೂ ಇವೆ. ಜನ ‘ರೇಮೊ’ವನ್ನು ಚಿತ್ರಮಂದಿರಗಳಲ್ಲೇ ನೋಡಬೇಕು.

ನಿಮ್ಮ ಮತ್ತು ಪವನ್‌ ಒಡೆಯರ್‌ ಕಾಂಬಿನೇಷನ್‌ ಬಗ್ಗೆ?

ಹೌದು, ‘ರೇಮೊ’ದಲ್ಲಿ ಪವನ್‌ ಅವರ ಆಲೋಚನೆ, ಸೃಜನಶೀಲತೆ ತುಂಬಾ ಇದೆ. ಅದೊಂದು ಅದ್ಭುತವಾದ ಕಾಂಬಿನೇಷನ್‌. ಅವರು, ನಟಿ ಆಶಿಕಾ ರಂಗನಾಥ್‌, ತಂತ್ರಜ್ಞರು ಮತ್ತು ಇಡೀ ತಂಡದ ಜೊತೆ ಕೆಲಸ ಮಾಡುವುದೇ ವಿಶೇಷ ಅನುಭವ. ಹಾಗಾಗಿ ಈ ತಂಡದ ಜೊತೆಗೆ ಮತ್ತೆ ಮತ್ತೆ ಸಿನಿಮಾ ಮಾಡುತ್ತೇವೆ.

‘ರೇಮೊ’ದಲ್ಲಿ ಗಿಟಾರ್‌ ಹಿಡಿದಿದ್ದೀರಿ. ಸಂಗೀತದ ಹಿನ್ನೆಲೆ ಇತ್ತೇ?

ಸಂಗೀತ ಅಷ್ಟಾಗಿ ಗೊತ್ತಿಲ್ಲ. ಆದರೆ, ಚಿತ್ರಕ್ಕೆ ಬೇಕಾಗುವಷ್ಟು ಗಿಟಾರ್‌ ಹಿಡಿಯುವುದನ್ನು ಕಲಿತಿದ್ದೇನೆ. ಕಲಿಯುವ ಆಸಕ್ತಿ ಇದೆ. ಮುಂದೆ ನೋಡೋಣ.

ಕೃಷಿ– ಸಿನಿಮಾ ಕೃಷಿ ಯಾವುದು ಹೆಚ್ಚು ಇಷ್ಟ?

ಎರಡೂ ಇಷ್ಟವೇ. ನಮ್ಮ ತಂದೆ ರೈತರು. ಅಣ್ಣ, ನಿರ್ಮಾಪಕ ಸಿ.ಆರ್‌. ಚಂದ್ರಶೇಖರ್‌ ಅವರೂ ಹೂವು ಬೆಳೆದೇ ಮುಂದೆ ಬಂದವರು. ನಾನೂ ಕೃಷಿಯತ್ತ ಒಲವು ಹೊಂದಿದ್ದೇನೆ. ನಾವೇನೇ ಮಾಡಲಿ ಕೊನೆಗೆ ಬರಬೇಕಾದದ್ದು ಕೃಷಿಯ ಕಡೆಗೇ ಅಲ್ವಾ. ಹಾಗಾಗಿ ಕೃಷಿ ಬದುಕನ್ನು ಪ್ರೀತಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT