ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಕನ್ನಡ ಮಕ್ಕಳ ‘ಇಸ್ಕೂಲು’

ಕಿರುದಾರಿ
Last Updated 19 ನವೆಂಬರ್ 2018, 19:30 IST
ಅಕ್ಷರ ಗಾತ್ರ

ಕನ್ನಡ ಶಾಲೆಗಳ ದುಃಸ್ಥಿತಿ ಮತ್ತು ಇಂಗ್ಲಿಷ್ ಕಾನ್ವೆಂಟ್‌ಗಳ ವ್ಯಾಮೋಹ ನಿನ್ನೆಮೊನ್ನೆಯದಲ್ಲ. ಇಂಥ ತಾಕಲಾಟದಲ್ಲಿರುವ ಪೋಷಕರು ಮತ್ತು ವಿದ್ಯಾರ್ಥಿಗಳ ಮನಸ್ಥಿತಿಗೆ ಕೈಗನ್ನಡಿಯಂತಿದೆ ‘ಇಸ್ಕೂಲು’ ಕಿರುಚಿತ್ರ.

ನಿರ್ದೇಶಕ ಗೋಪಾಲನಾಯ್ಕ ಗೋವಿಂದಪುರ ಅವರ ಮೊದಲ ಕಿರುಚಿತ್ರವಿದು. ಮೊದಲ ಪ್ರಯತ್ನದಲ್ಲೇ ಕಥೆಯ ಕಾರಣಕ್ಕಾಗಿ ಗೋಪಾಲ ನಾಯ್ಕ ಗಮನ ಸೆಳೆಯುತ್ತಾರೆ. ರಾಜ್ಯದಲ್ಲಿ ಮುಚ್ಚಿಹೋಗುತ್ತಿರುವ ಸರ್ಕಾರಿ ಕನ್ನಡ ಶಾಲೆಗಳ ಸ್ಥಿತಿಯನ್ನು ಈ ಕಿರುಚಿತ್ರದಲ್ಲಿ ಅವರು, ಸರಳವಾಗಿಯೇ ನಿರೂಪಿಸಿದ್ದಾರೆ. ತಾಂತ್ರಿಕ ಕೌಶಲದ ಕೊರತೆಯ ನಡುವೆಯೂ ‘ಇಸ್ಕೂಲು’ ಕನ್ನಡ ಪ್ರೇಮಿಗಳನ್ನು ಸೆಳೆಯುತ್ತದೆ.

ಇರುವ ಮೂರು ಎಕರೆ ಜಮೀನನ್ನು ನಂಬಿಕೊಂಡ ರಾಜಪ್ಪ–ಇಂದ್ರವ್ವ ದಂಪತಿಗೆ ತಮ್ಮ ಮಗ ಉಮೇಶನಿಗೆ ಒಳ್ಳೆಯ ಶಾಲೆಗೆ ಸೇರಿಸುವಾಸೆ. ಕಾನ್ವೆಂಟ್ ಮಕ್ಕಳಂತೆ ತಮ್ಮ ಮಗನೂ ಒಳ್ಳೆಯ ಸಮವಸ್ತ್ರ, ಟೈ ಕಟ್ಟಿಕೊಂಡು ಶೂ ಹಾಕ್ಕೊಂಡು ಟಸ್ಸುಪುಸ್ಸು ಅಂತ ಇಂಗ್ಲಿಷ್‌ನಲ್ಲಿ ಮಾತನಾಡಬೇಕೆಂಬ ಆಸೆ.

ಹಳ್ಳಿಯ ಕನ್ನಡ ಶಾಲೆಯ ಬಿಡಿಸಿ, ಪಟ್ಟಣದ ಕಾನ್ವೆಂಟ್‌ಗೆ ಸೇರಿಸುವ ದಂಪತಿ ಮಗನಿಗಾಗಿ ದೊಡ್ಡ ತ್ಯಾಗವನ್ನೇ ಮಾಡುತ್ತಾರೆ. ಒಂದೆಕರೆ ಜಮೀನು ಮಾರಿ ತಾವೂ ಪಟ್ಟಣ ಸೇರಿಕೊಳ್ಳುವ ದಂಪತಿಗೆ ಒಂದು ಹಂತದಲ್ಲಿ ಪಟ್ಟಣಕ್ಕಿಂತ ತಮ್ಮ ಹಳ್ಳಿಯ ಕನ್ನಡ ಶಾಲೆಯ ವಾಸಿ ಎನ್ನವ ಮನಸ್ಥಿತಿ ಮೂಡುತ್ತದೆ. ಹಳ್ಳಿಗೆ ವಾಪಸ್ ಬರುವ ಆ ದಂಪತಿ ತಮ್ಮ ಮಗನನ್ನು ಮತ್ತೆ ಹಳ್ಳಿ ಶಾಲೆಗೆ ಸೇರಿಸಲು ಸಾಧ್ಯವಾಗುತ್ತದೆಯೇ ಎಂಬುದೇ ಕಿರುಚಿತ್ರದ ಕುತೂಹಲಕರ ಅಂಶ.

ಹಳ್ಳಿಯ ಸಹಜ ಸೊಬಗಿನ ನಡುವೆ ಕಲಾವಿದರ ಸಹಜ ನಟನೆ ‘ಇಸ್ಕೂಲು’ನ ಅಂದ ಹೆಚ್ಚಿಸಿದೆ. ರಾಜಪ್ಪ ಪಾತ್ರಧಾರಿ ಪಕ್ಕಾ ಹಳ್ಳಿ ರೈತನ ಪ್ರತಿರೂಪದಂತೆ ಕಂಡರೆ, ರಾಜಪ್ಪನ ಪತ್ನಿ ಇಂದ್ರವ್ವ ಪಾತ್ರಧಾರಿ, ಮಗ ಉಮೇಶನ ಪಾತ್ರ ಮತ್ತಷ್ಟು ಟ್ಯೂನ್ ಆಗಬೇಕಿತ್ತು.

ಸರ್ಕಾರಿ ಶಾಲೆಗೆ ಬರುವ ಮಕ್ಕಳು ದಡ್ಡರು, ಕೊಳಕರು, ಅವರಿಗೆ ಭವಿಷ್ಯವೇ ಇಲ್ಲ. ಅವರಿಗೆ ಉತ್ತಮ ನೌಕರಿ ದೊರಕುವುದು ಅಷ್ಟಕಷ್ಟೆ ಅನ್ನುವ ಮಿಥ್ಯೆಗಳನ್ನು ಮುರಿಯುವ ಕೆಲಸವನ್ನು ಈ ಕಿರುಚಿತ್ರ ಮಾಡುತ್ತದೆ. ಹಳ್ಳಿಯ ಸರ್ಕಾರಿ ಕನ್ನಡ ಶಾಲೆಯಲ್ಲಿ ಓದಿ ವೈದ್ಯರು, ಎಂಜಿನಿಯರ್, ವಿಜ್ಞಾನಿ ಆಗಿರುವವರ ಕಥನಗಳನ್ನು ಹಳ್ಳಿಗರ ಬಾಯಲ್ಲೇ ಹೇಳಿಸುವಲ್ಲಿ ನಿರ್ದೇಶಕರು ಜಾಣ್ಮೆ ಮೆರೆದಿದ್ದಾರೆ.

ಪಟ್ಟಣದ ಬೆರಗು ಮತ್ತು ಇಂಗ್ಲಿಷ್ ಕಾನ್ವೆಂಟ್‌ಗಳ ವ್ಯಾಮೋಹಕ್ಕೆ ಮರುಳಾಗುವ ಪೋಷಕರು ತಮ್ಮ ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟವಾಡುವ ಕುರಿತು ಸೂಕ್ಷ್ಮ ಸಂದೇಶವೂ ಈ ಚಿತ್ರದಲ್ಲಿದೆ. ಕನ್ನಡ ಮಾಧ್ಯಮದ ವಿದ್ಯಾರ್ಥಿ ಪಟ್ಟಣದ ಶಾಲೆಗೆ ಸೇರಿ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲಾಗದೇ, ಇತ್ತ ಇಂಗ್ಲಿಷ್‌ ಭಾಷೆಯನ್ನೂ ಕಲಿಯಲಾರದೇ ಮಾನಸಿಕವಾಗಿ ಗೊಂದಲಕ್ಕೀಡಾಗುವ ಚಿತ್ರಣವನ್ನೂ ಕಟ್ಟಿಕೊಡಲಾಗಿದೆ. ಖಾಸಗಿ ಶಾಲೆಗೆ ಸೇರಿಸಿದರೆ ಮಾತ್ರ ತಮ್ಮ ಮಕ್ಕಳು ಉದ್ಧಾರವಾಗುತ್ತಾರೆ. ಇಂಗ್ಲಿಷ್ ಕಲಿತರೆ ಮಾತ್ರ ನೌಕರಿ ದೊರೆಯುತ್ತದೆ ಎನ್ನುವ ಮೂಢನಂಬಿಕೆಗಳು ಸಮಾಜವನ್ನು ಆವರಿಸುವ ಬಗೆಯನ್ನು ನವಿರಾಗಿ ನಿರೂಪಿಸಲಾಗಿದೆ.

ಹಳ್ಳಿ ತೊರೆದು ಪಟ್ಟಣಕ್ಕೆ ಹೋಗುವವರು ಅತ್ತ ಹಳ್ಳಿಯನ್ನೂ ಬಿಟ್ಟಿಲಾರದೇ, ಇತ್ತ ಪಟ್ಟಣದ ಜೀವನಶೈಲಿಗೂ ಹೊಂದಿಕೊಳ್ಳಲಾರದೇ ಪಡುವ ಪಡಿಪಾಟಲು ಇಲ್ಲಿದೆ. ಖಾಸಗಿ ಶಾಲೆಗಳ ದುಡ್ಡು ಬಾಕತನ, ಪ್ರಾದೇಶಿಕ ಆಹಾರ ಗೇಲಿ ಮಾಡುವ ವೈಖರಿ, ಶಿಕ್ಷಣವನ್ನೇ ವ್ಯಾಪಾರೀಕರಣ ಮಾಡಿಕೊಂಡಿರುವ ಶಾಲೆಗಳ ನೈಜ ಮುಖವನ್ನು ಚಿತ್ರ ತೆರೆದಿಡುತ್ತದೆ.

ಮೊದಲ ಪ್ರಯತ್ನದಲ್ಲೇ ಕನ್ನಡ ಶಾಲೆಗಳ ಕುರಿತ ಕಥೆ ಆರಿಸಿಕೊಂಡು ವಾಸ್ತವತೆಗೆ ಕನ್ನಡಿ ಹಿಡಿಯುವ ಕೆಲಸ ಮಾಡಿರುವ ನಿರ್ದೇಶಕರ ಪ್ರಯತ್ನ ಮೆಚ್ಚುವಂಥದ್ದು.

ನಿರ್ದೇಶಕರ ಕುರಿತು
ಬೆಂಗಳೂರಿನ ಎಚ್‌ಎಎಲ್‌ನಲ್ಲಿ ಏರ್‌ಕ್ರಾಫ್ಟ್ ಟೆಕ್ನಿಷಿಯನ್ ಆಗಿರುವ ಗೋಪಾಲನಾಯ್ಕ, ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕು ಗೋವಿಂದಪುರದವರು. ಎಚ್‌ಎಎಲ್‌ನಲ್ಲಿ ಕನ್ನಡ ಸಂಘ ಕಟ್ಟಿ 12 ವರ್ಷಗಳಿಂದ ರಾಜ್ಯೋತ್ಸವದಂದು ಕನ್ನಡ ನಾಟಕಗಳನ್ನು ಪ್ರದರ್ಶಿಸುವ ಕಾಯಕವನ್ನೂ ಮಾಡುತ್ತಿದ್ದಾರೆ.

ಗೋವಿಂದಪುರದಲ್ಲಿ ತಾವು ಓದಿದ್ದ ಸರ್ಕಾರಿ ಕನ್ನಡ ಶಾಲೆ ವಿದ್ಯಾರ್ಥಿಗಳಿಲ್ಲದೇ ಮುಚ್ಚಿಹೋದದ್ದು, ಈ ಕಿರುಚಿತ್ರ ತೆಗೆಯಲು ಪ್ರೇರಣೆಯಾಯಿತು ಎನ್ನುತ್ತಾರೆ ಅವರು. ಖಾಸಗಿ ಶಾಲೆಗಳಿಗೆ ಮಣೆ ಹಾಕುವ ಬದಲು ಸರ್ಕಾರವೇ ಖಾಸಗಿ ಶಾಲೆಯಷ್ಟು ಮೂಲ ಸೌಕರ್ಯಗಳನ್ನು ಸರ್ಕಾರಿ ಶಾಲೆಗೆ ಕಲ್ಪಿಸಿದರೆ ಹಳ್ಳಿಯ ಮಕ್ಕಳೂ ಸ್ಪರ್ಧಾಜಗತ್ತಿನಲ್ಲಿ ಮುನ್ನಡೆಯುತ್ತಾರೆ ಎನ್ನುವ ಆಶಯ ಅವರದ್ದು.

‘ಇಸ್ಕೂಲು’ ನಂತರ ‘ನೆಲಗಡಲೆ’ ಎನ್ನುವ ಕಿರುಚಿತ್ರವನ್ನೂ ನಿರ್ಮಿಸಿರುವ ಗೋಪಾಲನಾಯ್ಕ, ಅದನ್ನು ಕಿರುಚಿತ್ರೋತ್ಸವಗಳಲ್ಲಿ ಪ್ರದರ್ಶಿಸುವ ಹಂಬಲ ಹೊಂದಿದ್ದಾರೆ. ಮುಂಬರುವ ದಿನಗಳಲ್ಲಿ ಹಾಸ್ಯಪ್ರಧಾನ ಸಿನಿಮಾವೊಂದನ್ನು ನಿರ್ದೇಶಿಸುವ ಆಸೆಯೂ ಅವರಿಗಿದೆ.

ಕಿರುಚಿತ್ರ: ಇಸ್ಕೂಲು
ನಿರ್ಮಾಪಕಿ: ಲಲಿತಾ ರಾಜಶೇಖರ ಶಿರಹಟ್ಟಿ
ಚಿತ್ರಕತೆ, ನಿರ್ದೇಶನ: ಗೋಪಾಲನಾಯ್ಕ ಗೋವಿಂದಪುರ
ಸಹನಿರ್ದೇಶನ: ಸತ್ಯಪ್ರಮೋದ್
ಬಳಸಿದ ಕ್ಯಾಮೆರಾ:ನಿಕಾನ್ ಡಿ3300
ಕ್ಯಾಮೆರಾ ನಿರ್ವಹಣೆ: ಅನಿಲ್
ಸಂಕಲನ: ಶಿವಕುಮಾರ ಸ್ವಾಮಿ
ಕಲಾವಿದರು: ರಾಘವೇಂದ್ರ ಬಾಬು ಎಂ., ಗಾಯತ್ರಿ, ಮಾ.ನಿಖಿಲೇಶ್, ಗಂಗಾಚಾರಿ, ಅಣ್ಣಪ್ಪ ಮತ್ತಿತರರು
ಕೊಂಡಿ:ioljdSYOXQE

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT