ಗಾಯಕರ ನೆರವಿಗೆ ಸಜ್ಜಾದ ಇಸ್ರಾ

7
ವಾಣಿಜ್ಯ ಉದ್ದೇಶಕ್ಕೆ ಹಾಡು ಬಳಸಿದರೆ ಹಣ ಸಂದಾಯ ಕಡ್ಡಾಯ

ಗಾಯಕರ ನೆರವಿಗೆ ಸಜ್ಜಾದ ಇಸ್ರಾ

Published:
Updated:

ಬೆಂಗಳೂರು: ಕರ್ನಾಟಕದ ಗಾಯಕರಿಗೆ ಹಕ್ಕುಸ್ವಾಮ್ಯ ಕಾಯ್ದೆ ಅನ್ವಯ ಗೌರವಧನ ಕಲ್ಪಿಸಲು ಭಾರತೀಯ ಗಾಯಕರ ಹಕ್ಕುಗಳ ಸಂಘ (ಇಸ್ರಾ) ದಿಟ್ಟಹೆಜ್ಜೆ ಇಟ್ಟಿದೆ.

ವಾಣಿಜ್ಯ ಉದ್ದೇಶಗಳಿಗೆ ಚಿತ್ರಗೀತೆ, ಭಕ್ತಿಗೀತೆ, ಭಾವಗೀತೆ, ಜನಪದ ಗೀತೆ ಬಳಸಿಕೊಂಡರೆ ಸಂಬಂಧಪಟ್ಟ ಗಾಯಕರಿಗೆ ಗೌರವಧನ ನೀಡುವುದು ಕಾಯ್ದೆ ಅನ್ವಯ ಕಡ್ಡಾಯ. ಆದರೆ, ಎಫ್‌.ಎಂ. ರೇಡಿಯೊಗಳು, ದೃಶ್ಯಮಾಧ್ಯಮಗಳು, ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳು ಸೇರಿದಂತೆ ಕೆಲವು ಸಂಸ್ಥೆಗಳು ವ್ಯವಹಾರದ ಉದ್ದೇಶಕ್ಕೆ ಎಗ್ಗಿಲ್ಲದೆ ಹಾಡುಗಳನ್ನು ಬಳಸಿಕೊಳ್ಳುತ್ತಿವೆ. ಆದರೆ, ಗೌರವಧನ ನೀಡುತ್ತಿಲ್ಲ ಎನ್ನುವುದು ಗಾಯಕರ ಆರೋಪ. ಹಾಗಾಗಿ, ರಾಜ್ಯದಲ್ಲಿಯೂ ಇಸ್ರಾದ ಕಾರ್ಯ ಚಟುವಟಿಕೆ ಆರಂಭಿಸಲು ಶುಕ್ರವಾರ ನಡೆದ ಸಂಘದ ಮೊದಲ ಸಭೆಯಲ್ಲಿ ನಿರ್ಧರಿಸಲಾಯಿತು.     

‘ಇಸ್ರಾದಲ್ಲಿ 730 ಗಾಯಕರಿದ್ದಾರೆ. ಇಲ್ಲಿಯವರೆಗೆ ₹ 51 ಲಕ್ಷ ಗೌರವಧನ ವಿತರಿಸಲಾಗಿದೆ. ಮುಂಬೈಗೆ ಮಾತ್ರ ಸಂಘದ ಚಟುವಟಿಕೆ ಸೀಮಿತಗೊಂಡಿತ್ತು. ಈಗ ದೇಶದ ಎಲ್ಲಾ ರಾಜ್ಯಗಳಲ್ಲೂ ಕಾರ್ಯ ಚಟುವಟಿಕೆಯನ್ನು ವಿಸ್ತರಿಸಲಾಗುತ್ತಿದೆ. ಗಾಯಕರು ಮತ್ತು ಸಂಸ್ಥೆಗಳ ನಡುವೆ ಸಂಪರ್ಕ ಸೇತುವೆಯಾಗಿ ಸಂಘ ಕೆಲಸ ಮಾಡಲಿದೆ’ ಎಂದು ಇಸ್ರಾದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸಂಜಯ್‌ ಟಂಡನ್ ಸುದ್ದಿಗಾರರಿಗೆ ತಿಳಿಸಿದರು.

ವ್ಯವಹಾರದ ಉದ್ದೇಶಕ್ಕೆ ಹಾಡುಗಳನ್ನು ಬಳಸುವ ಸಂಸ್ಥೆಗಳಿಂದ ಏಕಾಏಕಿ ಹಣ ಪಡೆಯುವುದು ಸುಲಭವಲ್ಲ. ಮೊದಲು ಅಂತಹ ಸಂಸ್ಥೆಗಳ ಮುಖ್ಯಸ್ಥರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸುತ್ತೇವೆ. ಇದಕ್ಕೆ ಅವರು ಸಹಮತ ಸೂಚಿಸದಿದ್ದರೆ ಕಾನೂನಾತ್ಮಕ ಹೋರಾಟ ನಡೆಸುತ್ತೇವೆ ಎಂದರು. 

ರಸಮಂಜರಿ ಕಾರ್ಯಕ್ರಮಗಳಿಗೆ ಈ ನಿಯಮಾವಳಿ ಅನ್ವಯಿಸುವುದಿಲ್ಲ. ದೇವಸ್ಥಾನಗಳಲ್ಲಿ ಪ್ರಖ್ಯಾತ ಗಾಯಕರು ಹಾಡಿರುವ ಹಾಡುಗಳನ್ನು ಬಳಸಿಕೊಳ್ಳಲಾಗುತ್ತಿದೆ. ದೇವಸ್ಥಾನದ ಆಡಳಿತ ಮಂಡಳಿಯಿಂದ ಹಣ ವಸೂಲಿ ಮಾಡುವುದು ಸುಲಭವಲ್ಲ. ಸಹಜವಾಗಿ ಭಕ್ತರ ವಿರೋಧ ಎದುರಾಗುತ್ತದೆ. ಇದು ಸಂಘರ್ಷಕ್ಕೂ ಎಡೆಮಾಡಿಕೊಡಬಹುದು. ಮುಂದಿನ ದಿನಗಳಲ್ಲಿ ವಾಣಿಜ್ಯ ಉದ್ದೇಶಕ್ಕೆ ದೇಗುಲಗಳಲ್ಲಿ ಹಾಡು ಬಳಸಿದರೆ ಹಣ ವಸೂಲಿ ಮಾಡುವ ಬಗ್ಗೆ ಸಂಘದ ಸಭೆಯಲ್ಲಿ ಚರ್ಚಿಸಿ ನಿರ್ಧಾರಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಮೊದಲ ಸಭೆಗೆ 50ಕ್ಕೂ ಹೆಚ್ಚು ಗಾಯಕರು ಬಂದಿದ್ದಾರೆ. ಬಹಳಷ್ಟು ಗಾಯಕರು ದಸರಾ ಸಂಭ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗಾಗಿ, ಸಭೆಗೆ ಬರಲು ಸಾಧ್ಯವಾಗಿಲ್ಲ. ಅವರೆಲ್ಲರೂ ಸಂಘಕ್ಕೆ ಬೆಂಬಲ ನೀಡಿದ್ದಾರೆ ಎಂದು ತಿಳಿಸಿದರು. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !