ನಟರು, ನಿರ್ಮಾಪಕರ ಮನೆ ಮೇಲೆ ಐಟಿ ದಾಳಿ: ₹120 ಕೋಟಿ ಅಘೋಷಿತ ಆಸ್ತಿ ಪತ್ತೆ

7
25 ಕೆ.ಜಿ ಚಿನ್ನ, ₹ 2.8 ಕೋಟಿ ಹಣ ಪತ್ತೆ; ಅಘೋಷಿತ ಆಸ್ತಿ ಇನ್ನೂ ಅಧಿಕ!

ನಟರು, ನಿರ್ಮಾಪಕರ ಮನೆ ಮೇಲೆ ಐಟಿ ದಾಳಿ: ₹120 ಕೋಟಿ ಅಘೋಷಿತ ಆಸ್ತಿ ಪತ್ತೆ

Published:
Updated:

ಬೆಂಗಳೂರು: ಶಿವರಾಜ್‌ ಕುಮಾರ್‌, ಪುನೀತ್‌ ರಾಜ್‌ಕುಮಾರ್‌, ಯಶ್‌ ಮತ್ತು ಕಿಚ್ಚಾ ಸುದೀಪ್‌ ಸೇರಿದಂತೆ ‘ಸ್ಯಾಂಡಲ್‌ವುಡ್‌’ನ ತಾರಾವರ್ಚಸ್ಸಿನ ನಾಲ್ವರು ನಟರು ಮತ್ತು ದೊಡ್ಡ ಬಜೆಟ್‌ ಸಿನಿಮಾಗಳ ನಾಲ್ವರು ನಿರ್ಮಾಪಕರ ಮನೆಗಳ ಮೇಲೆ ಗುರುವಾರ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ (ಐ.ಟಿ) ಅಧಿಕಾರಿಗಳು ₹ 120 ಕೋಟಿ ಮೌಲ್ಯದ ಅಘೋಷಿತ ಆಸ್ತಿಪಾಸ್ತಿ ಪತ್ತೆ ಹಚ್ಚಿದ್ದಾರೆ.

25ಕೆ.ಜಿಗೂ ಅಧಿಕ ಚಿನ್ನ ಹಾಗೂ ₹ 2.8 ಕೋಟಿ ನಗದು ಇದರಲ್ಲಿ ಸೇರಿದೆ. ತೆರಿಗೆ ಪಾವತಿಸದೆ ಬಚ್ಚಿಟ್ಟ ಆಸ್ತಿ ಮೌಲ್ಯ ಇನ್ನೂ ಅಧಿಕವಾಗಿದ್ದು, ನಟರು, ನಿರ್ಮಾ‍ಪಕರು ಒಪ್ಪಿಕೊಳ್ಳದೆ ಇರುವುದರಿಂದ ಜಾರಿ ನಿರ್ದೇಶನಾಲಯ (ಇ.ಡಿ) ಮತ್ತಿತರ ಹಣಕಾಸು ತನಿಖಾ ಸಂಸ್ಥೆಗಳ ತನಿಖೆಗೆ ಪ್ರಕರಣ ವಹಿಸಲಾಗುವುದು ಎಂದು ಐ.ಟಿ ಪ್ರಕಟಣೆ ತಿಳಿಸಿದೆ.

ಯಾರ ಮನೆಯಲ್ಲಿ ಎಷ್ಟು ಅಘೋಷಿತ ಆಸ್ತಿಪಾಸ್ತಿ ಸಿಕ್ಕಿದೆ ಎಂಬ ವಿವರಗಳನ್ನು ಐ.ಟಿ ನೀಡಿಲ್ಲ. ಶೀಘ್ರ ಈ ಬಗ್ಗೆ ಮಾಹಿತಿ ನೀಡುವುದಾಗಿ ಮೂಲಗಳು ಹೇಳಿವೆ.

180 ಅಧಿಕಾರಿಗಳ ತಂಡ ಗುರುವಾರ ಬೆಳಿಗ್ಗೆಯೇ ನಟರು ಮತ್ತು ನಿರ್ಮಾಪಕರ ಮನೆಗಳೂ ಸೇರಿದಂತೆ 21 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿತ್ತು. ನಿರ್ಮಾಪಕರಾದ ರಾಕ್‌ಲೈನ್‌ ವೆಂಕಟೇಶ್‌, ಸಿ.ಆರ್‌. ಮನೋಹರ್‌,  ವಿಜಯ್‌ ಕಿರಗಂದೂರು ಮತ್ತು ಜಯಣ್ಣ ಅವರ ಮನೆ ಮತ್ತು ಕಚೇರಿಗಳ ಮೇಲೂ ದಾಳಿ ಆಗಿತ್ತು.

ಸತತ ಎರಡು– ಮೂರು ದಿನಗಳ ಶೋಧ ಮತ್ತು ವಿಚಾರಣೆ ಬಳಿಕ ₹ 120 ಕೋಟಿ ಮೌಲ್ಯದ ಅಘೋಷಿತ ಆಸ್ತಿ ಪತ್ತೆಯಾಗಿದೆ. ಮೂರು ತಿಂಗಳ ಹಿಂದಿನಿಂದಲೂ ಅನೇಕ ನಟರು, ನಿರ್ಮಾಪಕರು, ಹೂಡಿಕೆದಾರರ ವಹಿವಾಟುಗಳ ಮೇಲೆ ಆರ್ಥಿಕ ಗುಪ್ತದಳ ನಿಗಾ ಇಟ್ಟಿತ್ತು. ಅದು ನೀಡಿದ ಮಾಹಿತಿ ಆಧರಿಸಿ ದಾಳಿ ನಡೆದಿದೆ.

* ಇದನ್ನೂ ಓದಿ: ಸ್ಯಾಂಡಲ್‌ವುಡ್‌ಗೆ ಐ.ಟಿ ‘ಈಟಿ’

ಸಿನಿಮಾಗಳ ನಿರ್ಮಾಣಕ್ಕೆ ಕಪ್ಪು ಹಣ ಬಳಕೆಯಾಗಿದೆ. ವಿತರಣೆ ಹಾಗೂ ಪ್ರದರ್ಶನದಿಂದ ಬಂದಿರುವ ಆದಾಯಕ್ಕೆ ತೆರಿಗೆ ತಪ್ಪಿಸಲಾಗಿದೆ. ಆಸ್ತಿಪಾಸ್ತಿ ಖರೀದಿಗೂ ಭಾರಿ ಹಣ ಬಳಕೆಯಾಗಿದೆ. ಇದ್ಯಾವುದಕ್ಕೂ ಲೆಕ್ಕ ಕೊಟ್ಟಿಲ್ಲ. ಆಡಿಯೋ ಹಾಗೂ ಸ್ಯಾಟಲೈಟ್‌ ಹಕ್ಕುಗಳ ಮಾರಾಟ ವಹಿವಾಟಿಗೂ ತೆರಿಗೆ ಪಾವತಿಸಿಲ್ಲ. ಇವುಗಳಿಗೆ ಸಂಬಂಧಿಸಿದ ದಾಖಲೆ ವಶಪಡಿಸಿಕೊಳ್ಳಲಾಗಿದೆ.

ಚಿತ್ರಮಂದಿರಗಳು ಸಿನಿಮಾ ಪ್ರದರ್ಶನದಿಂದ ಪಡೆದಿರುವ ಹಣವನ್ನು ಬೇರೆಡೆ ವರ್ಗಾವಣೆ ಮಾಡಲಾಗಿದೆ. ನಿಯಮ ಪಾಲಿಸದೆ ವಹಿವಾಟು ನಡೆಸಿರುವ ಕೆಲವರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಐ.ಟಿ. ಸ್ಪಷ್ಟಪಡಿಸಿದೆ.

ಚಿತ್ರರಂಗದ ಗಣ್ಯರು ಸರಿಯಾದ ಲೆಕ್ಕ ನಿರ್ವಹಣೆ ಮಾಡುವಂತೆ ಐ.ಟಿ. ಹಿರಿಯ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಐ.ಟಿ ದಾಳಿಗೆ ಭಯ ಪಡಲ್ಲ: ಸುದೀಪ್‌

‘ನಾನು ಎಲ್ಲ ಲೆಕ್ಕ ಇಟ್ಟಿದ್ದೇನೆ. ಹೀಗಾಗಿ, ಐ.ಟಿ ದಾಳಿಗೆ ಭಯ ಪಡಲ್ಲ’ ಎಂದು ನಟ ಸುದೀಪ್‌ ಹೇಳಿದರು. 

ಚಲನಚಿತ್ರ ನಿರ್ದೇಶಕರ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿದ್ದ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.

‘ಯಾವುದೇ ನಿರ್ದಿಷ್ಟ ಕಾರಣ ಇಲ್ಲದೆ ಐ.ಟಿ ದಾಳಿ ನಡೆಯುವುದಿಲ್ಲ. ಆದರೆ, ಕಾರಣ ಏನೆಂದು ಗೊತ್ತಿಲ್ಲ. ಕೆಜಿಎಫ್‌, ದಿ ವಿಲನ್‌, ನಟ ಸಾರ್ವಭೌಮದಂಥ ಅಧಿಕ ಬಜೆಟ್‌ ಸಿನಿಮಾ ನಿರ್ಮಾಣದ ಹಿನ್ನೆಲೆಯಲ್ಲಿ ದಾಳಿ ನಡೆದಿರಬಹುದು ಎಂಬ ಊಹೆ ಇದೆ. ನಾನು ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ’ ಎಂದರು.

ನಟರಾದ ಶಿವರಾಜ್‌ ಕುಮಾರ್, ಪುನೀತ್‌ ರಾಜ್‌ಕುಮಾರ್‌, ಯಶ್‌, ರಾಕ್‌ಲೈನ್‌ ವೆಂಕಟೇಶ್‌, ವಿಜಯ್‌ ಕಿರಗಂದೂರು ಸೇರಿದಂತೆ ಉಳಿದವರು ಪ್ರತಿಕ್ರಿಯೆಗೆ ಸಿಗಲಿಲ್ಲ. 

ಮುಖ್ಯಾಂಶಗಳು

* ಪ್ರಕರಣ ಇ.ಡಿ ಮತ್ತಿತರ ಸಂಸ್ಥೆಗಳ ತನಿಖೆಗೆ

* ಚಿತ್ರಮಂದಿರಗಳ ಆದಾಯ ಬೇರೆಡೆ ವರ್ಗಾವಣೆ

* ಆಸ್ತಿಪಾಸ್ತಿ ಖರೀದಿಗೂ ಅಧಿಕ ಹಣ ಹೂಡಿಕೆ

ಬರಹ ಇಷ್ಟವಾಯಿತೆ?

 • 22

  Happy
 • 0

  Amused
 • 2

  Sad
 • 3

  Frustrated
 • 3

  Angry

Comments:

0 comments

Write the first review for this !