ಶನಿವಾರ, ಸೆಪ್ಟೆಂಬರ್ 18, 2021
30 °C

ವಿಕ್ರಾಂತ್ ರೋಣದಲ್ಲಿ ‘ಗಡಂಗ್‌ ರಕ್ಕಮ್ಮ’ನಾಗಿ ಜಾಕ್ವೆಲಿನ್ ಫರ್ನಾಂಡಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್‌ ಬೆಡಗಿ ನಟಿ ಜಾಕ್ವೆಲಿನ್ ಫರ್ನಾಂಡಿಸ್, ಅನೂಪ್‌ ಭಂಡಾರಿ ನಿರ್ದೇಶನದ ‘ವಿಕ್ರಾಂತ್‌ ರೋಣ’ ಮುಖಾಂತರ ಚಂದನವನಕ್ಕೆ ಹೆಜ್ಜೆ ಇಟ್ಟು, ಇತ್ತೀಚೆಗೆ ನಟ ಸುದೀಪ್‌ ಜೊತೆ ಹಾಡಿಗೆ ಹೆಜ್ಜೆ ಹಾಕಿದ್ದರು. ಇದೀಗ ಚಿತ್ರತಂಡವು ಜಾಕ್ವೆಲಿನ್‌ ಅವರ ಪಾತ್ರದ ಫಸ್ಟ್‌ಲುಕ್‌ ಬಿಡುಗಡೆ ಮಾಡಿದ್ದು, ರಕೇಲ್‌ ಡಿಕೋಸ್ಟ ಉರ್ಫ್‌ ‘ಗಡಂಗ್‌ ರಕ್ಕಮ್ಮ’ನಾಗಿ ತೆರೆ ಮೇಲೆ ಅವರು ಕಾಣಿಸಿಕೊಳ್ಳಿದ್ದಾರೆ.

ಪ್ಯಾನ್ ಇಂಡಿಯಾ ಬಿಗ್‌ಬಜೆಟ್‌ ಚಿತ್ರ ‘ವಿಕ್ರಾಂತ್‌ ರೋಣ’ದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕುವುದರ ಜೊತೆಗೆ ವಿಶೇಷ ಪಾತ್ರದಲ್ಲೂ ಜಾಕ್ವೆಲಿನ್‌ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಚಿತ್ರೀಕರಣದ ಕೊನೆಯ ಹಂತದಲ್ಲಿ ಜಾಕ್ವೆಲಿನ್ ಹಾಗೂ ಸುದೀಪ್‌ ಅವರ ನೃತ್ಯದ ಭಾಗವನ್ನು ಚಿತ್ರತಂಡವು ಚಿತ್ರೀಕರಿಸಿಕೊಂಡಿತ್ತು. ಜಾನಿ ಮಾಸ್ಟರ್‌ ನೃತ್ಯ ನಿರ್ದೇಶನದಲ್ಲಿ 300 ಡ್ಯಾನ್ಸರ್‌ ನಡುವೆ, ಬೃಹತ್‌ ಸೆಟ್‌ನಲ್ಲಿ ಜಾಕ್ವೆಲಿನ್ ಹಾಗೂ ಸುದೀಪ್‌ ಹಾಡಿಗೆ ಹೆಜ್ಜೆ ಹಾಕಿದ್ದರು. ಇದಕ್ಕೆ ಸುಮಾರು ₹5 ಕೋಟಿ ವೆಚ್ಚವಾಗಿತ್ತು. ತುಳು ಭಾಷೆಯಲ್ಲಿ ‘ಗಡಂಗ್‌’ ಎಂದರೆ ಸಾರಾಯಿ ಅಂಗಡಿ. ಪೋಸ್ಟರ್‌ನಲ್ಲೂ ಗ್ಲ್ಯಾಮರಸ್‌ ಉಡುಪಿನಲ್ಲಿ ಜಾಕ್ವೆಲಿನ್‌ ಕಾಣಿಸಿಕೊಂಡಿದ್ದು ಮದ್ಯದ ಮಡಕೆಯಿಂದ ಮದ್ಯ ಸುರಿಯುತ್ತಿರುವಂತೆ ಪೋಸ್‌ ನೀಡಿದ್ದಾರೆ.    

ಫಸ್ಟ್‌ಲುಕ್‌ ಪೋಸ್ಟರ್‌ ಅನ್ನು ಟ್ವೀಟ್‌ನಲ್ಲಿ ಪೋಸ್ಟ್‌ ಮಾಡಿರುವ ನಿರ್ದೇಶಕ ಅನೂಪ್‌ ಭಂಡಾರಿ, ‘ರಕ್ಕಮ್ಮನಿಗೆ ಏನು ತಿಳಿದಿಲ್ಲವೋ, ಅದು ಅಸ್ತಿತ್ವದಲ್ಲೇ ಇಲ್ಲ’ ಎಂದು ಉಲ್ಲೇಖಿಸಿದ್ದಾರೆ. ‘ನನ್ನ ಪಾತ್ರವನ್ನು ಜನರಿಗೆ ಪರಿಚಯಿಸಲು ನನಗೆ ಸಂತೋಷವಾಗುತ್ತಿದೆ’ ಎಂದು ಜಾಕ್ವೆಲಿನ್‌ ಕೂಡಾ ಟ್ವೀಟ್‌ ಮಾಡಿದ್ದಾರೆ. 

ಲಾಕ್‌ಡೌನ್‌ ಇಲ್ಲದೇ ಇದ್ದಿದ್ದರೆ ಆಗಸ್ಟ್‌ 19ಕ್ಕೆ ‘ವಿಕ್ರಾಂತ್‌ ರೋಣ’ ತೆರೆಯ ಮೇಲೆ ಬರಬೇಕಿತ್ತು. ಈಗಾಗಲೇ ಚಿತ್ರದ ಡಬ್ಬಿಂಗ್‌ ಕೆಲಸವೂ ಪೂರ್ಣಗೊಂಡಿದ್ದು, 2ಡಿ ಹಾಗೂ 3ಡಿಯಲ್ಲಿ ಚಿತ್ರವನ್ನು ತೆರೆಯ ಮೇಲೆ ತರಲು ಚಿತ್ರತಂಡ ಅಂತಿಮ ಸಿದ್ಧತೆ ನಡೆಸುತ್ತಿದೆ. ‘ವಿಕ್ರಾಂತ್‌ ರೋಣ ಆಗಸ್ಟ್‌ 19ಕ್ಕೆ ಬಿಡುಗಡೆಯಾಗಲಿದೆ ಎಂದು ನಾವು ತೀರ್ಮಾನಿಸಿದ ಸಂದರ್ಭದಲ್ಲಿ ‘ಕೋಟಿಗೊಬ್ಬ–3’ ಏಪ್ರಿಲ್‌ನಲ್ಲಿ ಬಿಡುಗಡೆಯಾಗಬೇಕಿತ್ತು. ಲಾಕ್‌ಡೌನ್‌ ಬಂದ ಕಾರಣ, ‘ಕೋಟಿಗೊಬ್ಬ–3’ ಬಿಡುಗಡೆ ವಿಳಂಬವಾಗಿದೆ. ‘ಕೋಟಿಗೊಬ್ಬ–3’ ಬಿಡುಗಡೆಯಾದ 2–3 ತಿಂಗಳ ನಂತರ ವಿಕ್ರಾಂತ್‌ ರೋಣ ತೆರೆ ಕಾಣಲಿದೆ’ ಎಂದು ನಿರ್ಮಾಪಕ ಜಾಕ್‌ ಮಂಜು ಇತ್ತೀಚೆಗೆ ‘ಪ್ರಜಾವಾಣಿ’ಗೆ ತಿಳಿಸಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು