ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಸ್ಟ್ರಿಗೆ ಕೂಡಿ ಬಾಳೋದು ಗೊತ್ತಿಲ್ಲ!

Last Updated 25 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

‘ನನ್ನನ್ನು ನಾನು ಹುಡುಕುತ್ತಿದ್ದೇನೆ. ನಾನು ಯಾರು? ಎಂದು ನನ್ನೊಳಗೆಯೇ ಪ್ರಶ್ನಿಸಿಕೊಳ್ಳುತ್ತಿದ್ದೇನೆ. ಆ ಹುಡುಕಾಟದಲ್ಲಿ ಖುಷಿಯಿದೆ’

–ನವರಸ ನಾಯಕ ಜಗ್ಗೇಶ್‌ ಅವರ ಮಾತಿನಲ್ಲಿ ಸ್ಪಷ್ಟತೆ ಇತ್ತು. ಬದುಕಿನ ಫಿಲಾಸಫಿಯೂ ದಟ್ಟವಾಗಿತ್ತು. ಇನ್ನೊಂದೆಡೆ ಆಳವಾದ ವಿಷಾದವೂ ಎದ್ದು ಕಾಣುತ್ತಿತ್ತು.

‘ಜಗತ್ತು ಅರ್ಥವಾಗುವುದಿಲ್ಲ. ಅದು ಅರಿವಿಗೂ ದಕ್ಕುವುದಿಲ್ಲ. ಅಲ್ಲಿ ನೂರಾರು ಕ್ಯಾರೆಕ್ಟರ್‌ಗಳಿವೆ. ಜಗದ ತತ್ವ ಅರಿಯುವ ಮೊದಲು ನಮ್ಮನ್ನು ನಾವು ಅರಿಯಬೇಕು’ ಎಂದು ಮಾತು ವಿಸ್ತರಿಸಿದರು.

‘ತೊಟ್ಟಿಲಿನಿಂದ ಚಟ್ಟದವರೆಗೂ ಕಲಿಯುವುದೇ ಬದುಕು. ಆ ಚಟ್ಟದ ಮೇಲೆ ಕೂತಾಗ ಶ್ರೇಷ್ಠ ಕಲಿಕೆ ಮಾತ್ರ ನಿಮ್ಮ ಸ್ವತ್ತು. ಮಿಕ್ಕಿದ್ದೆಲ್ಲವೂ ನಗಣ್ಯ. ಬದುಕು ಒಂದು ಪಯಣ. ಅಲ್ಲಿ ಒಳ್ಳೆಯದನ್ನಷ್ಟೇ ಕಲಿಯೋಣ. ಈ ಮೊದಲು ನನಗೆ ಅನಿಸಿದ್ದನ್ನು ನಾನು ನೇರವಾಗಿ ಹೇಳುತ್ತಿದ್ದೆ. ಅದು ಬಹುತೇಕರಿಗೆ ಇಷ್ಟವಾಗುತ್ತಿತ್ತು. ಕೆಲವರಿಗೆ ಕುಹಕವಾಗುತ್ತಿತ್ತು. ಜಗದ ಡೊಂಕು ತಿದ್ದುವ ಮೊದಲು ನಮ್ಮನ್ನು ನಾವು ತಿದ್ದಿಕೊಳ್ಳಬೇಕು’ ಎಂದು ಹೇಳಿ ಕೆಲಹೊತ್ತು ಮೌನಕ್ಕೆ ಜಾರಿದರು.

ಬಳಿಕ ಅವರ ಮಾತು ಕನ್ನಡ ಸಿನಿಮಾ ಇಂಡಸ್ಟ್ರಿಯ ಒಗ್ಗಟ್ಟಿನತ್ತ ಹೊರಳಿತು. ‘ನಮ್ಮಲ್ಲಿ ಕೂಡಿ ಬಾಳೋಣ ಎನ್ನುವ ತತ್ವ ಮಾಯವಾಗಿದೆ. ತೆಲುಗಿನಲ್ಲಿ ಒಂದು ಸಣ್ಣ ಸಮಸ್ಯೆಯಾದರೆ ಎಲ್ಲಾ ಕಲಾವಿದರು ಜೇನುಗೂಡಿನಂತೆ ಒಂದಾಗುತ್ತಾರೆ. ಮಲಯಾಳದಲ್ಲಿ ಇಡೀ ಇಂಡಸ್ಟ್ರಿ ಬಂದ್‌ ಮಾಡಿ ಒಟ್ಟಾಗಿ ಸೇರುತ್ತಾರೆ. ನಾನು ಪ್ರೀತಿಯಿಂದ ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯಲು ಪ್ರಯತ್ನಿಸಿದೆ. ಅದು ಕಷ್ಟ ಎಂದು ಅರ್ಥವಾಯಿತು. ಕೊನೆಗೊಂದು ದಿನ ಇದು ನನಗ್ಯಾಕೆ ಬೇಕು ಅನಿಸಿತು. ನನ್ನ ಪಾಡಿಗೆ ನಾನಿರೋಣ ಎಂದುಕೊಂಡೆ. ಹಾಗಾಗಿ, ನಾನೂ ಸುಮ್ಮನಾದೆ’ ಎಂದ ಜಗ್ಗೇಶ್‌ ಮಾತಿನಲ್ಲಿ ವಿಷಾದದ ಛಾಯೆ ಕಾಣಿಸಿತು.

‘ಪ್ರೀಮಿಯರ್ ಪದ್ಮಿನಿ’ಯಲ್ಲಿ ಕುಳಿತುಕೊಳ್ಳಲು ಕಾರಣವೇನು?

ಪ್ರೇಕ್ಷಕರಿಗೆ ಖುಷಿ ಕೊಡಲು ಕಾಮಿಡಿ, ಫೈಟಿಂಗ್‌ ಮಾಡುವುದು ಸಾಮಾನ್ಯ ಸಿನಿಮಾ. ‘ಪ್ರೀಮಿಯರ್‌ ಪದ್ಮಿನಿ’ ಚಿತ್ರದ ಕಥೆ ಅ‍‍ಪರೂಪಕ್ಕೆ ಹುಟ್ಟಿದೆ. ಜನರ ನೈಜ ಬದುಕಿಗೆ ಹತ್ತಿರವಾಗಿದೆ. ಚಿತ್ರದ ನಾಯಕ ಚೆನ್ನಾಗಿ ದುಡಿಮೆ ಮಾಡುತ್ತಾನೆ. ಅವನದು ಭಾವನಾತ್ಮಕವಾದ ಸಂಸಾರ. ಅವನ ಬದುಕಿನಲ್ಲಿ ಎಲ್ಲವೂ ಸರಿ ಇರುತ್ತದೆ. ಕೊನೆಗೊಂದು ದಿನ ಎಲ್ಲರೂ ಅವರವರ ಕೆಲಸ ಮಾಡಿಕೊಂಡು ಜಾರಿಕೊಳ್ಳುತ್ತಾರೆ. ಹೆಸರಿಗೆ ಮಾತ್ರ ಆತನಿಗೆ ಬಂಧುಬಳಗ ಇರುತ್ತಾರೆ. ಆತನದು ಮಾತ್ರ ಏಕಾಂಗಿ ಬದುಕು. ಮಕ್ಕಳು ಜೊತೆಗಿಲ್ಲ ಎನ್ನುವುದೇ ಅವನ ವೇದನೆ. ಅವನೊಟ್ಟಿಗೆ ಯಾರೊಬ್ಬರೂ ಬರುವುದಿಲ್ಲ. ಆಗ ಬದುಕಿನ ಅರ್ಥ ಹುಡುಕಲು ಪ್ರೀಮಿಯರ್‌‍ಪದ್ಮಿನಿ ಕಾರಿನಲ್ಲಿ ಕುಳಿತುಕೊಳ್ಳುತ್ತಾನೆ.

ಜನರು ಏಕೆ ಈ ಚಿತ್ರ ನೋಡಬೇಕು?

ಸಮಾಜವನ್ನು ಗಮನದಲ್ಲಿಟ್ಟುಕೊಂಡು ಹೊಸೆದಿರುವ ಸ್ಕ್ರಿಪ್ಟ್‌ ಇದು. ಆತ ಪಯಣ ಆರಂಭಿಸಿದಾಗಸಮಾಜದಲ್ಲಿರುವ ಕ್ಯಾರೆಕ್ಟರ್‌ಗಳು ಪರಿಚಯವಾಗುತ್ತವೆ. ಬದುಕಿನಲ್ಲಿ ಯಾರ‍್ಯಾರು ನಮ್ಮ ಜೊತೆಯಲ್ಲಿ ಇದ್ದಾರೆಯೋ ಅವರು ನಮ್ಮವರಲ್ಲ. ನಮ್ಮೊಂದಿಗೆ ಇರುತ್ತಾರೋ ಅವರೇ ನಮ್ಮವರು. 6ರಿಂದ 60 ವರ್ಷದವರಿಗೂ ಸ್ಕ್ರಿಪ್ಟ್‌ ಇಷ್ಟವಾಗುತ್ತದೆ.

ನಟ, ನಟಿಯರ ರಾಜಕೀಯ ಮೇಲಾಟ ಇಂಡಸ್ಟ್ರಿಯ ಒಗ್ಗಟ್ಟಿಗೆ ಪೆಟ್ಟು ನೀಡುವುದಿಲ್ಲವೇ?

ಪ್ರತಿಯೊಬ್ಬ ಮತದಾರನಿಗೂ ಒಂದು ಪಕ್ಷದ ಸಿದ್ಧಾಂತದ ಮೇಲೆ ನಂಬಿಕೆ ಇರುತ್ತದೆ. ಹಾಗೆಯೇ, ಕಲಾವಿದರು ತಮಗೆ ಇಷ್ಟವಾದ ಪಕ್ಷದತ್ತ ಹೋಗುತ್ತಾರೆ. ಇದರಲ್ಲಿ ತಪ್ಪಿಲ್ಲ ಎನ್ನುವುದು ನನ್ನ ಭಾವನೆ. ನಾವು ಸಿನಿಮಾ ಮಂದಿ ಎಂದಾಕ್ಷಣ ಒಂದೇ ದಿಕ್ಕಿನಲ್ಲಿ ಸಾಗಬೇಕು ಎನ್ನುವುದೂ ಸರಿಯಲ್ಲ. ಅದು ನಿಯಮವೂ ಅಲ್ಲ. ಮತದಾರ ಕೂಡ ಒಂದೇ ಪಕ್ಷಕ್ಕೆ ಮತ ಚಲಾಯಿಸುವುದಿಲ್ಲ. ಅಂತೆಯೇ, ಕೆಲವು ಕಾರಣಗಳು, ಸಿದ್ಧಾಂತ ಇಷ್ಟಪಟ್ಟು ಕಲಾವಿದರು ರಾಜಕೀಯ ಪಕ್ಷಗಳಿಗೆ ಸೇರ್ಪಡೆಗೊಳ್ಳುತ್ತಾರೆ. ನನಗೆ ಇಷ್ಟವಾದ ಸಿದ್ಧಾಂತದ ಪಕ್ಷದಲ್ಲಿ ನಾನಿದ್ದೇನೆ. ಬೇರೆ ನಟರ ಪಕ್ಷ ಸಿದ್ಧಾಂತವನ್ನು ಪ್ರಶ್ನಿಸುವ ಹಕ್ಕು ನನಗಿಲ್ಲ.

ಹಾಗಾದರೆ, ಕಲಾವಿದರ ನಡುವೆ ಒಗ್ಗಟ್ಟು ಮೂಡಿಸುವುದೇ ಹೇಗೆ?

ಮೂರೂವರೆ ದಶಕದಿಂದಲೂ ಇಂಡಸ್ಟ್ರಿಯನ್ನು ಬಲ್ಲೆ. ಈ ಹಿಂದೆಯೂ ಗುಂಪುಗಾರಿಕೆ ಇತ್ತು. ಹೀರೊಗಳು ಬೇರೆ ಬೇರೆಯಾಗಿಯೇ ಇದ್ದರು. ಸ್ಕ್ರಿಪ್ಟ್‌, ಅಭಿಮಾನಿಗಳ ವಿಚಾರದಲ್ಲಿ ಅಭಿಪ್ರಾಯ ಭಿನ್ನತೆ ಇತ್ತು. ಆದರೆ, ವರನಟ ರಾಜ್‌ಕುಮಾರ್‌ ಮೇಲೆ ಎಲ್ಲರಿಗೂ ಅಗಾಧವಾದ ಗೌರವವಿತ್ತು. ರಾಜ್‌ಕುಮಾರ್‌ ಎಂಬ ಶಕ್ತಿಯ ಮುಂದೆ ಎಲ್ಲರೂ ಕರಗಿ ಹೋಗುತ್ತಿದ್ದರು. ಮನಸ್ಸಿನಲ್ಲಿದ್ದ ಎಲ್ಲ ಭಾವನೆ ತೊರೆದು ಒಂದಾಗುತ್ತಿದ್ದರು. ಅದೇ ಅಣ್ಣಾವ್ರ ಶಕ್ತಿ. ಅಂಬರೀಷ್‌ ಜೊತೆಗೆ ಆ ಶಕ್ತಿಯೂ ಹೊರಟುಹೋಯಿತು. ಈಗ ಅಂತಹ ಶಕ್ತಿ ಸೃಷ್ಟಿಯಾಗಬೇಕಷ್ಟೇ. ಇಂಡಸ್ಟ್ರಿಯನ್ನು ಒಟ್ಟಾಗಿ ಕರೆದೊಯ್ಯುವವರು ಇಚ್ಛಾಶಕ್ತಿ ಪ್ರದರ್ಶಿಸಬೇಕು.

ಇಂಡಸ್ಟ್ರಿಯ ಒಗ್ಗಟ್ಟು ಛಿದ್ರವಾಗಲು ಕಾರಣವೇನು?

ಹಣವೇ ಮೂಲ ಕಾರಣ. ಇದು ಬಲಿಷ್ಠವಾದ ವಸ್ತುವಾಗಿ ಕುಳಿತಿದೆ. ಎಲ್ಲಾ ಕ್ಷೇತ್ರದಲ್ಲೂ ಇದೇ ಚಿತ್ರಣ ಇದೆ. ಮತ್ತೆ ಒಗ್ಗಟ್ಟು ಮೂಡಬೇಕು. ಇದು ಚಿತ್ರರಂಗದ ಅಭಿವೃದ್ಧಿಗೂ ಸಹಕಾರಿ.

ನೀವು ಚಿತ್ರರಂಗದ ನಾಯಕತ್ವ ಹೊರಲು ಸಿದ್ಧವೇ?

ನನಗೆ ಅದರ ಬಗ್ಗೆ ಆಸಕ್ತಿಯೇ ಇಲ್ಲ. ಕುಟುಂಬದೊಟ್ಟಿಗೆ ಸುಖವಾಗಿದ್ದೇನೆ. ನನ್ನದೇ ಆದ ಖಾಸಗಿ ಬದುಕಿದೆ. ನನ್ನನ್ನು ನಂಬಿಕೊಂಡಿರುವ ಕುಟುಂಬಗಳಿವೆ. ಅವುಗಳಿಗೆ ನಾನು ಸಮಯ ಮೀಸಲಿಡಲು ನನಗೆ ಪುರಸೊತ್ತಿಲ್ಲ.

ಹೊಸಬರ ಸಿನಿಮಾಗಳಿಗೆ ಸರಿಯಾದ ಪ್ರೋತ್ಸಾಹ ಸಿಗುತ್ತಿಲ್ಲ ಎಂದು ಅನಿಸುತ್ತಿದೆಯೇ?

ಕಲೆಕ್ಷನ್‌ ಜಾಸ್ತಿ ಬರುವ ನಟನಿಗೆ ಥಿಯೇಟರ್‌ನವರ ಮೊದಲ ಆದ್ಯತೆ. ಇದರಿಂದ ಹೊಸಬರು, ಹೊಸ ಕಂಟೆಂಟ್‌ ಜನರಿಗೆ ತಲುಪುತ್ತಿಲ್ಲ. ಇಡೀ ಇಂಡಸ್ಟ್ರಿ ಒಂದೆಡೆ ಕುಳಿತು ಚರ್ಚಿಸಿದಾಗ ಮಾತ್ರ ಈ ಸಮಸ್ಯೆ ಬಗೆಹರಿಯುತ್ತದೆ. ನಾವೆಲ್ಲಾ ಒಂದೇ ಎಂಬ ಭಾವನೆ ಮೂಡಬೇಕು. ಆಗಷ್ಟೇ ಈ ಸಮಸ್ಯೆ ಬಗೆಹರಿಯುತ್ತದೆ. ಪ್ರಸ್ತುತ ಸಿನಿಮಾ ಉದ್ಯಮ ಇಬ್ಭಾಗವಾಗಿದೆ. ಒಬ್ಬ ಸ್ಟಾರ್ ನಟ, ಆತನ ಸಿನಿಮಾ ಮತ್ತು ಅವನಿಗೊಬ್ಬ ಪ್ರೊಡ್ಯೂಸರ್‌ ಎಂಬ ವಾತಾವರಣವಿದೆ. ಉಳಿದ ಕಲಾವಿದರ ಬಗ್ಗೆ ಯಾರೊಬ್ಬರಿಗೂ ಚಿಂತೆಯಿಲ್ಲ. ಒಬ್ಬರಿಗೊಬ್ಬರು ಬೆಂಬಲ, ಸಹಕಾರ ನೀಡುತ್ತಿಲ್ಲ. ಕೂಡಿ ಬಾಳೋಣ ಎನ್ನುವ ಮನೋಭಾವ ಬರಬೇಕು.ತಮಿಳುನಾಡಿನಲ್ಲಿ ಹೊಸಬರು, ಹೊಸ ಸ್ಕ್ರಿಪ್ಟ್‌ಗಳನ್ನು ಬಾಚಿ ತಬ್ಬಿಕೊಳ್ಳುತ್ತಾರೆ. ಇದರಿಂದ ಅಲ್ಲಿನ ಸ್ಟಾರ್‌ ನಟರಿಗೆ ನಡುಕ ಉಂಟಾಗಿದೆ.

ಸಿನಿಮಾ ನೋಡುವವರ ಅಭಿರುಚಿಯೂ ಬದಲಾಗಿದೆಯಲ್ಲವೇ?

ಹೌದು. ಹಿಂದೆ ಜನರು ಥಿಯೇಟರ್‌ಗೆ ಬಂದು ಸಿನಿಮಾ ನೋಡಿ ಸಂಭ್ರಮಿಸುತ್ತಿದ್ದರು. ಅಂಥ ಜನರು ಈಗಿಲ್ಲ. ಕರ್ನಾಟಕದಲ್ಲಿ ಮಾತ್ರ ಎಲ್ಲಾ ಭಾಷೆಗಳನ್ನು ಗೌರವಿಸಲಾಗುತ್ತಿದೆ. ಬೆಂಗಳೂರಿನಲ್ಲಿ ವಲಸಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮಲಯಾಳ ಸಿನಿಮಾಗಳು ಇಲ್ಲಿ ಒಳ್ಳೆಯ ಬ್ಯುಸಿನೆಸ್ ಮಾಡುತ್ತಿವೆ. ₹ 5 ಕೋಟಿಯಿಂದ 6 ಕೋಟಿ ವ್ಯವಹಾರ ನಡೆಸುತ್ತಿವೆ. ಇಲ್ಲಿ ಕೆಲಸ ಮಾಡುವ ಮಲಯಾಳಿ, ಹಿಂದಿ ಭಾಷಿಕರು ತಮ್ಮ ಮಾತೃಭಾಷೆಯ ಸಿನಿಮಾವನ್ನಷ್ಟೇ ನೋಡುತ್ತಾರೆ.
ಸಿನಿಮಾ ನೋಡಲು ಬರುತ್ತಿರುವುದು ಯುವಜನರು ಮಾತ್ರ. ಅವರದು ಭಿನ್ನಹಾದಿಯ ಬದುಕು. ಕೌಟುಂಬಿಕ ಪ್ರೇಕ್ಷಕರು ಟಿ.ವಿ ಮುಂದೆ ಕುಳಿತಿದ್ದಾರೆ. ಈ ಪ್ರಬುದ್ಧ ನೋಡುಗರಿಗೆ ಥಿಯೇಟರ್‌ಗಳೆಂದರೆ ಅಪಥ್ಯ. ಇದು ದೊಡ್ಡ ದುರಂತ. ಮೂರ್ಖರ ಪೆಟ್ಟಿಗೆ ಮುಂದೆ ಕುಳಿತ ಅವರನ್ನು ಹೊರತರುವುದು ಕಷ್ಟ. ಥಿಯೇಟರ್‌ನಲ್ಲಿ ಸಿನಿಮಾ ನೋಡುವವರ ಸಂಖ್ಯೆ 8ರಿಂದ 10 ಲಕ್ಷ ಅಷ್ಟೇ. ಸಿನಿಮಾವೊಂದು ಯಶಸ್ಸು ಕಂಡಾಗ ಆರು ಕೋಟಿ ಜನರೂ ಚಿತ್ರ ನೋಡಿದ್ದಾರೆಂದು ಅರ್ಥೈಸಿಕೊಳ್ಳುವುದು ಭ್ರಮೆ.

ಡಬ್ಬಿಂಗ್‌ ರೇಟ್‌ ಏರಿಕೆಗೆ ಜನರ ಟಿ.ವಿ ವ್ಯಾಮೋಹ ಕಾರಣವೇ?

ಕನ್ನಡ ಸಿನಿಮಾಗಳ ಡಬ್ಬಿಂಗ್‌ ರೇಟ್‌ ಏರಿಕೆಗೆ ಪ್ರೇಕ್ಷಕರ ಟಿ.ವಿ ನೋಡುವ ಅಭಿರುಚಿಯೇ ಮೂಲ ಕಾರಣ. ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಟಿ.ವಿ ಮುಂದೆ ಕುಳಿತವರಿಗೆ ಕಂಟೆಂಟ್‌ ಪೂರೈಸಲು ಸಾಕಾಗುತ್ತಿಲ್ಲ. ಹಾಗಾಗಿಯೇ, ದಕ್ಷಿಣ ಭಾರತದ ಸಿನಿಮಾಗಳಿಗೆ ದುಬಾರಿ ಡಬ್ಬಿಂಗ್‌ ರೇಟ್ ಸಿಗುತ್ತಿದೆ. ಅಲ್ಲಿನ ಸ್ಥಳೀಯ ಭಾಷೆಗೆ ಡಬ್ಬಿಂಗ್‌ ಮಾಡಿ, ಪ್ರೇಕ್ಷಕರಿಗೆ ಉಣ ಬಡಿಸುತ್ತಾರೆ. ಇದರ ಪರಿಣಾಮ ಡಬ್ಬಿಂಗ್‌ ಮಾರುಕಟ್ಟೆಯ ವ್ಯಾಪ್ತಿ ವಿಸ್ತಾರಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT