ಎಂಡೋ ಪೀಡಿತರ ಕಥನ

ಶುಕ್ರವಾರ, ಮೇ 24, 2019
28 °C

ಎಂಡೋ ಪೀಡಿತರ ಕಥನ

Published:
Updated:
Prajavani

ಅದು ಮೂರು ದಶಕದ ಹಿಂದಿನ ಕಥೆ. ಗಗನದಲ್ಲಿ ಹೆಲಿಕಾಪ್ಟರ್‌ ಹಾರಾಟ ನೋಡಿದ ಮಕ್ಕಳು, ಮಹಿಳೆಯರಲ್ಲಿ ಕುತೂಹಲದ ರೆಕ್ಕೆ ಬಿಚ್ಚಿಕೊಂಡಿತ್ತು. ಅಂದು ಕಾಪ್ಟರ್‌ ಮೂಲಕ ಗೇರು ಗಿಡಕ್ಕೆ ಸಿಂಪಡಿಸಿದ ಎಂಡೋಸಲ್ಫಾನ್‌ ಕೀಟನಾಶಕ ನೂರಾರು ಚಿಣ್ಣರು, ಕುಟುಂಬಗಳ ಬದುಕಿಗೆ ಕಂಟಕವಾಗಿದೆ. ಇಂದಿಗೂ ಕೇರಳ, ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಅದರ ದುಷ್ಪರಿಣಾಮ ತಟ್ಟುತ್ತಿದೆ.

ಎಂಡೋ ಪೀಡಿತ ಮಕ್ಕಳ ಬದುಕು ‘ಜಕಣಾಚಾರಿ ಅವನ ತಮ್ಮ ಶುಕ್ಲಾಚಾರಿ’ ಹೆಸರಿನಲ್ಲಿ ಇದೇ ಶುಕ್ರವಾರ ತೆರೆಗೆ ಬರುತ್ತಿದೆ. ಅಂದಹಾಗೆ ಸಂತ್ರಸ್ತ ಮಕ್ಕಳೇ ಇದರಲ್ಲಿ ಬಣ್ಣ ಹಚ್ಚಿರುವುದು ವಿಶೇಷ. ಈ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿಗೆ ಹಾಜರಾಗಿತ್ತು. 

ಹಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ದುಡಿದಿರುವ ರಾಜ ರವಿವರ್ಮ ಮಕ್ಕಳ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ಧರಿಸಿದ್ದ ಖುಷಿಯಲ್ಲಿದ್ದರು. ‘ಇದು ನನ್ನ ಮೊದಲ ಪ್ರಯತ್ನ. ನನ್ನೊಳಗೆ ಭಯ ಇರುವುದು ಸಹಜ. ಜನರಿಗೆ ಸಂತ್ರಸ್ತರ ನೋವನ್ನು ಮನದಟ್ಟು ಮಾಡಬೇಕು ಎನ್ನುವುದಷ್ಟೇ ನನ್ನ ಉದ್ದೇಶ’ ಎಂದರು.

‘ಎಂಡೋಸಲ್ಫಾನ್‌ನಿಂದ ತೊಂದರೆಗೆ ಸಿಲುಕಿದವರಿಗೆ ಇಂದಿಗೂ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿಲ್ಲ. ಈ ಕೀಟನಾಶಕ ಗಾಳಿ, ಆಹಾರದಲ್ಲಿ ಬೆರತು ಹೋಗಿದ್ದು ಮಕ್ಕಳು ಅಂಗವೈಕಲ್ಯರಾಗಿ ಹುಟ್ಟುತ್ತಿದ್ದಾರೆ’ ಎಂದು ವಿಷಾದಿಸಿದರು.

ಹಿರಿಯ ಪೋಷಕ ನಟ ಮನ್‌ದೀಪ್ ರಾಯ್‌ ಸಂತ್ರಸ್ತ ಮಕ್ಕಳ ದೊಡ್ಡಪ್ಪನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ‘ಮಕ್ಕಳು ನಟನೆಯ ತರಬೇತಿ ಪಡೆದಿಲ್ಲ. ಆದರೆ, ನಟನೆ ಅವರಿಗೆ ಸಿದ್ಧಿಸಿದೆ’ ಎಂದು ಹೊಗಳಿದರು.

ಮಾಸ್ಟರ್‌ ಜಯ್ಯದ್‌ ಜಕಣಾಚಾರಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾನೆ. ದೃಷ್ಟಿದೋಷ ಹೊಂದಿರುವ ಮಾಸ್ಟರ್‌ ಮಹೇಶ್‌ ಶುಕ್ಲಾಚಾರಿಯಾಗಿ ಕಾಣಿಸಿಕೊಂಡಿದ್ದಾನೆ. ‘ಟಿ.ವಿಯಲ್ಲಿ ಸಿನಿಮಾ ಬರುತ್ತದೆಂದು ಕಾಯಬಾರದು. ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ’ ಎಂದು ಪ್ರೇಕ್ಷಕರಿಗೆ ಮಹೇಶ್‌ ಮನವಿ ಮಾಡಿದ್ದು ವಿಶೇಷವಾಗಿತ್ತು.

ಛಾಯಾಗ್ರಹಣ ಸಾಮ್ರಾಟ್‌ ಎಸ್. ಅವರದು. ಸಿ.ಜೆ. ಅನಿಲ್‌ ಸಂಗೀತ ಸಂಯೋಜಿಸಿದ್ದಾರೆ. ಮಾಸ್ಟರ್ ಎಸ್‌. ವಿನಯ್ ಸೂರ್ಯ, ಮಾಸ್ಟರ್‌ ಕಿರಣ್‌, ಮುನಿ, ಮೂಗು ಸುರೇಶ್, ನೀನಾಸಂ ಅಶ್ವಥ್‌, ಗಿರೀಶ್‌ ಜೆಟ್ಟಿ, ಪಂಕಜಾ ರವಿಶಂಕರ್‌ ತಾರಾಗಣದಲ್ಲಿದ್ದಾರೆ. ನಿರ್ದೇಶಕ ವಿ. ನಾಗೇಂದ್ರ‍ಪ್ರಸಾದ್‌ ಚಿತ್ರತಂಡಕ್ಕೆ ಶುಭಾಶಯ ಕೋರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !