ಗಣಪನ ಹಾಡಿಗೆ ಜಾನ್ಸಿಯ ಕುಣಿತ

7

ಗಣಪನ ಹಾಡಿಗೆ ಜಾನ್ಸಿಯ ಕುಣಿತ

Published:
Updated:
Deccan Herald

‘ಇದೂ ಬೆಂಗಳೂರಿನ ಭಾಗವಾ?’ ಎಂಬ ಸಂದೇಹ ಹುಟ್ಟುವ ಹಾಗೆ ಹಸಿರು ಹೊಲ, ಅದರ ಬದುವಿನಲ್ಲಿ ಜೋಪಡಿಗಳು, ದೂರದ ಗುಡ್ಡದ ಎದೆಯೆತ್ತರದ ಮೇಲೆ ಕಾಲೊತ್ತಿ ನಿಂತಿರುವ ಬಹುಮಹಡಿ ಕಟ್ಟಡ... ಅಲ್ಲೇ ಸಣ್ಣ ಮೈದಾನದಂಥ ಜಾಗದಲ್ಲಿ ಗಣಪನನ್ನು ಇರಿಸಿ ಒಂದಿಷ್ಟು ಹುಡುಗರು ಕುಣಿಯುತ್ತಿದ್ದರು. ಅರೆ, ಗಣೇಶನ ಹಬ್ಬ ಇನ್ನೂ ದೂರವಿದೆಯಲ್ಲ, ಈಗಲೇ ಶುರುವಾಯ್ತೆ ಎಂದು ಅಚ್ಚರಿಪಡುವಷ್ಟರಲ್ಲಿ ‘ಕಟ್’ ಎಂಬ ಮೈಕ್‌ ಕೂಗು.

ಅದು ಪಿ.ವಿ.ಎಸ್. ಗುರುಪ್ರಸಾದ್ ‘ಜಾನ್ಸಿ’ ಚಿತ್ರದ ಹಾಡಿನ ಚಿತ್ರೀಕರಣ ಸಂದರ್ಭ. ಮೈಗೆ ಬಣ್ಣ ಬಳಿದುಕೊಂಡು ಕುಣಿಯುತ್ತಿದ್ದ ಹುಡುಗರ ಮಧ್ಯ ಅವರಿಗೆ ಸಮಸಮವಾಗಿ ಹೆಜ್ಜೆ ಹಾಕುತ್ತಿದ್ದ ಲಕ್ಷ್ಮಿ ರೈ ಕೂಡ ಇದ್ದರು.

ಚಿತ್ರೀಕರಣದ ನಡುವೆ ಬಿಡುವು ಮಾಡಿಕೊಂಡು ಪತ್ರಕರ್ತರ ಎದುರು ಬಂದು ಕೂತ ನಿರ್ದೇಶಕ ಗುರುಪ್ರಸಾದ್, ‘ಇದು ನಾಯಕಿಯ ಇಂಟ್ರೊಡಕ್ಷನ್ ಹಾಡು. ಬೆಂಗಳೂರಿನಲ್ಲಿ ಸ್ಲಂನಲ್ಲಿರುವ ಜನರನ್ನು ಒಕ್ಕಲೆಬ್ಬಿಸಿ ಆ ಜಾಗವನ್ನು ಕಬಳಿಸಲು ಕೆಲವರು ಸಂಚು ರೂಪಿಸಿರುತ್ತಾರೆ. ಆ ಜಾಗದಲ್ಲಿ ಬಾಂಬ್ ಹಾಕಿ ಅವರನ್ನು ಓಡಿಸಬೇಕು ಎಂಬುದು ಅವರ ಯೋಜನೆಯಾಗಿರುತ್ತದೆ. ಆ ಜಾಗಕ್ಕೆ ಜಾನ್ಸಿ ಬಂದು ಅವರ ಪ್ರಯತ್ನವನ್ನು ವಿಫಲಗೊಳಿಸಿ ಜನರಿಗೆ ಧೈರ್ಯ ತುಂಬುವ ಸನ್ನಿವೇಶ’ ಎಂದು ವಿವರಿಸಿದರು.

‘ಇದೊಂದು ಕಾಲ್ಪನಿಕ ಕತೆಯೇ ಆದರೂ ಹಲವು ನೈಜಘಟನೆಗಳನ್ನು ಈ ಚಿತ್ರದಲ್ಲಿ ಅಳವಡಿಸಿಕೊಂಡಿದ್ದೇವೆ. ಲಕ್ಷ್ಮಿ ರೈ ತುಂಬ ಬದ್ಧತೆಯಿಂದ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ’ ಎಂದೂ ಅವರು ಹೇಳಿದರು.

‘ನಾನು ಗಣೇಶನ ಭಕ್ತೆ. ಗಣೇಶನ ಹಾಡಿಗೆ ನೃತ್ಯ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಹಾಗಾಗಿಯೇ ಕೊಂಚ ಕಷ್ಟವಾದರೂ ಖುಷಿಯಿಂದಲೇ ಈ ಹಾಡಿನ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದೇನೆ’ ಎಂದರು ಲಕ್ಷ್ಮಿ. ಇದು ಸಂಪೂರ್ಣ ಆ್ಯಕ್ಷನ್ ಸಿನಿಮಾ. ಆದ್ದರಿಂದ ಅದಕ್ಕೆ ಪೂರಕವಾಗಿ ಫೈಟ್, ಸ್ಟಂಟ್‌ಗಳ ತರಬೇತಿಯನ್ನೂ ಅವರು ಪಡೆದುಕೊಳ್ಳುತ್ತಿದ್ದಾರಂತೆ.

ಮುಂಬೈನ ರಾಜೇಶ್ ಕುಮಾರ್ ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ಧನ ಕುಮಾರ್ ನೃತ್ಯ ಸಂಯೋಜನೆ, ಎಂ.ಎನ್. ಪ್ರಭಾಕರ್ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !