ಗುರುವಾರ , ಏಪ್ರಿಲ್ 9, 2020
19 °C

ಜಯತೀರ್ಥರ ಬನಾರಸ್ ಸವಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಬೆಲ್‌ ಬಾಟಂ’ ಚಿತ್ರದಲ್ಲಿ ಡಿಟೆಕ್ಟಿವ್‌ ದಿವಾಕರನ ಕಥೆ ಹೇಳಿದ್ದ ನಿರ್ದೇಶಕ ಜಯತೀರ್ಥ ‘ಬನಾರಸ್‌’ ಮೂಲಕ ಕಾಶಿಯ ಹೂಕುಂಡದಲ್ಲಿ ಪ್ರೀತಿ ಅರಳಿಸಲು ಅಣಿಯಾಗಿದ್ದಾರೆ. ಕಾಶಿ ಯಾತ್ರೆಯ ಕ್ಯಾನ್ವಾಸ್‌ನಲ್ಲಿ ಸಂಗೀತ, ಬಣ್ಣ, ಕಥೆಗಳೊಟ್ಟಿಗೆ ಪಾತ್ರಗಳನ್ನು ಜೋಡಿಸಿಟ್ಟಿದ್ದಾರಂತೆ. ಕೊರೊನಾ ಸೋಂಕಿನ ಭೀತಿಯಿಂದಾಗಿ ಸದ್ಯಕ್ಕೆ ಈ ಸಿನಿಮಾದ ಚಿತ್ರೀಕರಣ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ಶೂಟಿಂಗ್‌ ಮಧ್ಯೆ ಜಯತೀರ್ಥ ಅವರಿಗೆ ಈಗ ಬಿಡುವು ಸಿಕ್ಕಿದೆ. ‘ಬನಾರಸ್’ ಚಿತ್ರದ ವೈಶಿಷ್ಟ್ಯ ಕುರಿತು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದ್ದು ಹೀಗೆ: ‘ಪ್ರೀತಿ, ಭಾವುಕತೆ ಮತ್ತು ದೈವಿಕತೆಯೇ ಈ ಚಿತ್ರದ ಜೀವಾಳ. ಇದರಲ್ಲಿ ಪ್ರೀತಿಯನ್ನು ದೈವಿಕವಾಗಿ ಕಾಣುತ್ತಿದ್ದೇವೆ. ಎಲ್ಲಾ ದೃಶ್ಯಗಳನ್ನು ಭಾವುಕ ಹಾಗೂ ಸಂಗೀತಮಯವಾಗಿ ತೋರಿಸುತ್ತಿದ್ದೇವೆ. ‘ಕಾಶಿ’ ಎಂಬ ಸ್ಥಳವೇ ಈ ಸಿನಿಮಾದಲ್ಲಿ ಉಳಿದೆಲ್ಲವುಗಳಿಗಿಂತ ದೊಡ್ಡ ವೈಶಿಷ್ಟ್ಯ’ ಎನ್ನುತ್ತಾರೆ ಅವರು.

‘ಬನಾರಸ್‌’ನದ್ದು ಪ್ರೀತಿ–ಪ್ರೇಮದ ಕಥೆ. ಈಗಾಗಲೇ, ಶೇಕಡ 85ರಷ್ಟು ಶೂಟಿಂಗ್‌ ಪೂರ್ಣಗೊಂಡಿದೆ. ಎರಡು ಹಾಡುಗಳ ಚಿತ್ರೀಕರಣವಷ್ಟೇ ಬಾಕಿ ಇದೆ. ಒಂದು ಹಾಡನ್ನು ವಿದೇಶದಲ್ಲಿ ಚಿತ್ರೀಕರಿಸುವ ಯೋಜನೆ ಚಿತ್ರತಂಡದ್ದು. ಇನ್ನೊಂದನ್ನು ಭಾರತದಲ್ಲಿಯೇ ಚಿತ್ರೀಕರಿಸಲು ನಿರ್ಧರಿಸಿದೆ. ಡಬ್ಬಿಂಗ್ ಕೆಲಸವೂ ಪೂರ್ಣಗೊಂಡಿದೆಯಂತೆ.

‘ಬನಾರಸ್‌’ ಚಿತ್ರದ ಶೂಟಿಂಗ್‌ ನಡುವೆಯೇ ಜಯತೀರ್ಥ ‘ಬೆಲ್ ಬಾಟಂ 2’ ಚಿತ್ರದ ಸ್ಕ್ರಿಪ್ಟ್‌ ಕೆಲಸವನ್ನೂ ಶುರು ಮಾಡಿದ್ದಾರೆ.

‘ಈ ಸ್ಕ್ರಿಪ್ಟ್‌ ಬಗ್ಗೆ ನನಗೆ ವಿಶ್ವಾಸ ಮೂಡಿದ ತಕ್ಷಣ, ಸಿನಿಮಾ ಕೆಲಸಗಳ ಬಗ್ಗೆ ಘೋಷಣೆ ಮಾಡುತ್ತೇನೆ. ಎರಡನೇ ಭಾಗದಲ್ಲಿ ಪತ್ತೆದಾರಿ ಕಥೆಯೇ ಇರಲಿದೆ. ಮೊದಲ ಚಿತ್ರದಲ್ಲಿ ಇದ್ದ ಎಲ್ಲಾ ಪಾತ್ರಗಳು ಎರಡನೆಯ ಅಧ್ಯಾಯದಲ್ಲೂ ಮುಂದುವರಿಯಲಿವೆ. ಈ ಕಥೆಯೂ 80ರ ದಶಕದಲ್ಲಿಯೇ ನಡೆಯಲಿದೆ. ಮೊದಲಿನದ್ದಕ್ಕಿಂತ ಹೆಚ್ಚು ರಂಜನೀಯ ಆಗಿರಲಿದೆ’ ಎಂದು ಕಥೆಯ ಬಗ್ಗೆ ಕುತೂಹಲ ಹೆಚ್ಚಿಸುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)