ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀತ್‌... ಗೆಲುವಿನ ನಾಗಾಲೋಟ

Last Updated 25 ಡಿಸೆಂಬರ್ 2018, 15:52 IST
ಅಕ್ಷರ ಗಾತ್ರ

ಬಂಗಾಲಿ ಸಿನಿಮಾ ಪ್ರಿಯರಿಗೆ ಜೀತ್‌ ಪರಿಚಿತ ಹೆಸರು. ಯಶಸ್ವಿ ಚಿತ್ರಗಳ ನಾಯಕ ಎಂಬುದು ಅವರ ಹೆಗ್ಗಳಿಕೆ. ಹಿಟ್ ಚಿತ್ರಗಳ ನಿರ್ದೇಶಕ ರಾಜ್‌ ಚಕ್ರವರ್ತಿ ಅವರ ಆದ್ಯತೆಯ ಹೀರೊ. ಜೀತೇಂದ್ರ ಮದ್ನಾನಿ ಎಂಬ ಹೆಸರನ್ನು ಮೊಟಕುಗೊಳಿಸಿ ಜೀತ್‌ ಆದವರು.

ಕಿರುತೆರೆ, ಮಾಡೆಲಿಂಗ್‌, ಸಿನಿಮಾ, ಜಾಹೀರಾತು ಮಾತ್ರವಲ್ಲದೆ, ಕ್ರಿಕೆಟ್‌ ಕ್ಷೇತ್ರದಲ್ಲಿಯೂ ಜೀತ್‌ ಹೆಸರುವಾಸಿ. ಸೆಲೆಬ್ರಿಟಿ ಕ್ರಿಕೆಟ್‌ ಲೀಗ್ (ಸಿಸಿಎಲ್)ನಲ್ಲಿ ‘ಬೆಂಗಾಲ್‌ ಟೈಗರ್ಸ್‌’ ತಂಡದ ಮಾಜಿ ನಾಯಕ ಅವರು. ಜೀ ಬಾಂಗ್ಲಾ ವಾಹಿನಿಯಲ್ಲಿ ರಿಯಾಲಿಟಿ ಶೋಗಳ ಹೋಸ್ಟ್‌ ಆಗಿ ಜೀತ್‌ ವೀಕ್ಷಕರ ಮನಗೆದ್ದವರು. ಕಲರ್ಸ್‌ ಬಾಂಗ್ಲಾ ವಾಹಿನಿಯಲ್ಲಿ ‘ಬಿಗ್‌ಬಾಸ್‌ ಬಾಂಗ್ಲಾ’ ಶೋವನ್ನು ನಡೆಸಿಕೊಟ್ಟು ಮನೆಮಾತಾಗಿದ್ದರು.

ಜೀತ್‌ಗೆ ಈಗ 40ರ ಹರೆಯ. ‘ಆವಾರ’, ‘ದಿ ರಾಯಲ್‌ ಬೆಂಗಾಲ್‌ ಟೈಗರ್‌’, ‘ಬಾಸ್‌’ (ಎರಡೂ ಆವೃತ್ತಿ) ಮತ್ತು ‘ಸುಲ್ತಾನ್‌: ದಿ ಸೇವಿಯರ್‌’ ಚಿತ್ರಗಳು ಅವರಿಗೆ ಯಶಸ್ವಿ ಚಿತ್ರಗಳ ನಾಯಕ ಎಂಬ ಹೆಗ್ಗಳಿಕೆ ತಂದುಕೊಟ್ಟವು. ಆದರೆ ಯಶಸ್ಸಿನ ಪಯಣ ಶುರುವಾಗಿದ್ದು ಮೊದಲ ಚಿತ್ರ ‘ಸಾಥಿ’ ಮೂಲಕ. 2002ರಲ್ಲಿ ತೆರೆಕಂಡ ಈ ಚಿತ್ರದಲ್ಲಿ ಜೀತ್‌ಗೆ ಜೋಡಿಯಾಗಿದ್ದವರುಪ್ರಿಯಾಂಕಾ ಉಪೇಂದ್ರ (ಆಗ ಪ್ರಿಯಾಂಕಾ ತ್ರಿವೇದಿ). ಇಬ್ಬರೂ ಬಂಗಾಲಿ ಚಿತ್ರರಂಗದ ಮುದ್ದಿನ ಕೂಸುಗಳಾಗಿದ್ದು ‘ಸಾಥಿ’ ಮೂಲಕವೇ.

ಅದೇ ವರ್ಷ ‘ಜೋ ಜೀತಾ ವಹೀ ಸಿಕಂದರ್‌’ನ ಬಂಗಾಲಿ ಅವತರಣಿಕೆಯಲ್ಲಿಯೂ ಜೀತ್‌ ನಾಯಕರಾಗಿ ನಟಿಸಿದರು. ಅದೂ ಗೆದ್ದಿತು. ಆದರೆ ಮುಂದಿನ ಕೆಲವು ಸಿನಿಮಾಗಳು ಸರಣಿಯಂತೆ ಸೋಲುತ್ತಾ ಹೋದಾಗ ಜೀತ್‌ ಸಿನಿಮಾ ಭವಿಷ್ಯ ಮುಗಿದೇ ಹೋಯಿತು ಎಂದು ಎಲ್ಲರೂ ಭಾವಿಸಿದರು. ಆದರೆ ಪ್ರತಿಭೆ ಕೈಕೊಡಲಿಲ್ಲ.

2010, ಜೀತ್‌ ಪಾಲಿಗೆ ಸುವರ್ಣ ವರ್ಷವಾಗಿತ್ತು. ಎಫ್‌ಐಸಿಸಿಐ ಮತ್ತು ಡೆಲಾಯ್ಟಿ ನಡೆಸಿದ ಒಂದು ಅಧ್ಯಯನದ ಪ್ರಕಾರ, ‘ವಾಂಟೆಡ್‌’ ಮತ್ತು ‘ದುಯ್‌ ಪ್ರಿತಿಭಿ’ಯ ಗಳಿಕೆ ಬಂಗಾಲಿ ಚಿತ್ರರಂಗದಲ್ಲಿ ದಾಖಲೆ ಬರೆದಿತ್ತು. 2013ರಲ್ಲಿ ಮತ್ತೆ ಅಂತಹುದೇ ಖ್ಯಾತಿ ತಂದುಕೊಟ್ಟ ಚಿತ್ರ ‘ಬಾಸ್‌: ಬಾರ್ನ್‌ ಟು ರೂಲ್‌’. ವಿದೇಶಗಳಲ್ಲಿಯೂ ದಾಖಲೆ ನಿರ್ಮಿಸಿದ ಈ ಚಿತ್ರ ಜೀತ್‌ಗೆ ಮೊದಲ ಬಾರಿಗೆ ಫಿಲಂಫೇರ್‌ ಪ್ರಶಸ್ತಿ ತಂದುಕೊಟ್ಟಿತು. ಅಲ್ಲಿಂದೀಚೆ ಇದುವರೆಗೂ ಜೀತ್‌ ಗೆಲುವಿನ ಗ್ರಾಫ್‌ ಏರುತ್ತಲೇ ಇದೆ.

‘ಮಸ್ತಾನ್‌’ ಚಿತ್ರೀಕರಣದ ವೇಳೆ, ನಾಯಕಿ ಸ್ವಸ್ತಿಕಾ ಮುಖರ್ಜಿ ಜೊತೆ ಸಹಬಾಳ್ವೆ ನಡೆಸುತ್ತಿದ್ದಾರೆ ಎಂದು ಗುಲ್ಲೆದ್ದಿತ್ತು. ಆದರೆ ಮೋಹನಾ ರಾಟ್ಲಾನಿ ಎಂಬ, ಲಖನೌ ಮೂಲದ ಶಿಕ್ಷಕಿಯೊಂದಿಗೆ ಜೀತ್‌ ಮದುವೆಯಾದರು. ಚಿತ್ರರಂಗದ ಜೊತೆಗೇ ನಿರ್ಮಾಣ ಮತ್ತು ಆಲ್ಬಂ ರಚನೆಯಲ್ಲೂ ಜೀತ್‌ ತೊಡಗಿಸಿಕೊಂಡಿದ್ದಾರೆ.

ಚಿತ್ರರಂಗದಲ್ಲಿ ನಿರಂತರ ಗೆಲುವು, ಸ್ವಲ್ಪ ಸೋಲಿನ ಅನುಭವದೊಂದಿಗೆ ಜೀತ್‌ ಪಯಣ ಸಾಗುತ್ತಲೇ ಇದೆ. ಪ್ರತಿಭೆಯೊಂದನ್ನೇ ನಂಬಿ ಸಾಗುತ್ತಿರುವ ಪಯಣಿಗ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT