ಹಿರಿಯೂರು: ಸೋರುತ್ತಿದ್ದ ಮನೆ. ಕಟ್ಟಿಗೆ ಬಳಸಿ ಹೊಗೆ ಮುತ್ತಿದ ಮನೆಯಲ್ಲಿ ಅಡುಗೆ ಬೇಯಿಸುತ್ತಿದ್ದ ಅವ್ವ, ದಿನವಿಡೀ ಹೊಲದಲ್ಲಿ ದುಡಿದರೂ ಕಾಸು ಕೈಗೆ ಹತ್ತದ ಅಪ್ಪ. ಹೇಗಾದರೂ ಸರಿ ಇಂತಹ ಜಂಜಾಟದ ಬದುಕಿನಿಂದ ಬಿಡುಗಡೆ ಪಡೆಯಬೇಕೆಂದು 17 ವರ್ಷಗಳ ಹಿಂದೆ ಊರು ಬಿಟ್ಟು ಬೆಂಗಳೂರು ಸೇರಿದ ಯುವಕನೊಬ್ಬ ತನ್ನ ಕ್ಯಾಮೆರಾ ಕೈಚಳಕದಿಂದ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ ಪಡೆಯುವ ಮೂಲಕ ಅಚ್ಚರಿಮೂಡಿಸಿದ್ದಾರೆ.
ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ತಾಲ್ಲೂಕಿನ ಕಳವಿಭಾಗಿ ಗ್ರಾಮದ ರಂಗಜ್ಜ– ಭಾಗ್ಯಮ್ಮ ದಂಪತಿಯ ಹಿರಿಯ ಪುತ್ರ ಜೀವನ್ ಗೌಡ ಅವರಿಗೆ ‘ಅನಿರೀಕ್ಷಿತ’ ಚಲನಚಿತ್ರಕ್ಕೆ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ ಲಭಿಸಿದೆ. ಕೇರಳದ ಏಳನೇ ಆರ್ಟ್ ಇಂಡಿಪೆಂಡೆಂಟ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಹಾಗೂ ಅಮೆರಿಕಾದ ನ್ಯೂಜೆರ್ಸಿಯಲ್ಲಿ ನಡೆದ ಸ್ಟಾರ್ ಹಾಲಿವುಡ್ ಅವಾರ್ಡ್ಸ್ ಅಂತರರಾಷ್ಟ್ರೀಯ ಫೀಲ್ಡ್ ಫೆಸ್ಟಿವಲ್‌ನಲ್ಲಿ ಜೀವನ್ ಗೌಡ ಅವರನ್ನು ಅತ್ಯುತ್ತಮ ಛಾಯಾಗ್ರಾಹಕ ಎಂದು ಗುರುತಿಸಿ ಪ್ರಶಸ್ತಿ ನೀಡಲಾಗಿದೆ.
‘ಪ್ರಾಥಮಿಕ ಶಿಕ್ಷಣವನ್ನು ಕಳವಿಬಾಗಿಯಲ್ಲಿ, ಪ್ರೌಢಶಾಲೆಯನ್ನು ಹಿರಿಯೂರಿನಲ್ಲಿ, ಪಿಯು ಶಿಕ್ಷಣವನ್ನು ಚಿತ್ರದುರ್ಗದ ಬೃಹನ್ಮಠದಲ್ಲಿ ಮುಗಿಸಿದ ನಂತರ ಓದು ಮುಂದುವರಿಸುವ ಆಸಕ್ತಿ ಇರಲಿಲ್ಲ. ನನ್ನ ತಮ್ಮ ನಾಗಾರ್ಜುನ ಎಚ್.ಡಿ. ಕೋಟೆಯಲ್ಲಿ ಪ್ರಾಥಮಿಕ ಶಾಲೆ ಶಿಕ್ಷಕರಾಗಿದ್ದು, ನಾನು ಬೇರೆಯದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಬಯಸಿದ್ದೆ. ಕ್ಯಾಮರಾ ಹಿಂದೆ ಕೆಲಸ ಮಾಡುವ ಅವಕಾಶ ಹುಡುಕಿ ಬಂದಿತು. ಅದೊಂದು ದೊಡ್ಡ ಕತೆ. ಇನ್ನೂ ಬದುಕಿನ ಹೋರಾಟ ನಿಂತಿಲ್ಲ’ ಎನ್ನುತ್ತಾರೆ ಜೀವನ್.
ಹಲವು ಸಿನಿಮಾಗಳು: ‘ಪುಟಾಣಿ ಸಫಾರಿ’ ನನ್ನ ಮೊದಲ ಚಿತ್ರ. ನಂತರ ‘ಕೈವಲ್ಯ’, ‘ವರ್ಣಮಯ’, ‘ಕ್ಲಿಕ್’, ‘ಅನಿರೀಕ್ಷಿತ’ (ಪ್ರಶಸ್ತಿ ತಂದುಕೊಟ್ಟಿರುವ ಚಿತ್ರ), ‘ಮಠ’ ಮತ್ತು ‘ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ’( ಸೆನ್ಸಾರ್‌ಗೆ ಹೋಗಿವೆ).‘ಅಂಜಲಿ’, ‘ರಾಧಾಕಲ್ಯಾಣ’, ‘ಸಾಗರಸಂಗಮ’, ‘ಒಗ್ಗರಣೆ ಡಬ್ಬಿ’, ‘ಮುರಳಿ ಮಿಲ್ಟ್ರಿ ಹೋಟೆಲ್’ ಧಾರಾವಾಹಿಗಳಿಗೆ, ಹಲವು ರಿಯಾಲಿಟಿ ಶೋಗಳಿಗೆ ಕೆಲಸ ಮಾಡಿದ್ದೇನೆ. ಲಾಕ್‌ಡೌನ್ ಅವಧಿಯಲ್ಲಿ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದು, 18 ದಿನಗಳ ಹೆಣ್ಣು ಮಗು ಇದೆ. ಪತ್ನಿ ಗೃಹಿಣಿ’ ಎಂದು ಅವರು ತಮ್ಮ ಬದುಕಿನ ವಿವರಗಳನ್ನುಬಿಚ್ಚಿಟ್ಟಿದ್ದಾರೆ.
‘ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಪ್ರಶಸ್ತಿ ವಿತರಣೆ ಸಮಾರಂಭಕ್ಕೆ ಹೋಗಲು ಆಗದ ಕಾರಣ, ಕೊರಿಯರ್‌ನಲ್ಲಿ ಬಹುಮಾನ ಹಾಗೂ ಪ್ರಶಸ್ತಿ ಪತ್ರ ಕಳಿಸಲಿದ್ದಾರೆ. ಪ್ರಶಸ್ತಿ ಬಂದಿರುವುದು ಜವಾಬ್ದಾರಿ ಹೆಚ್ಚಿಸಿದೆ. ಇನ್ನೂ ಸಾಧಿಸಬೇಕಾದ್ದು ಸಾಕಷ್ಟಿದೆ’ ಎನ್ನುತ್ತಾರೆಜೀವನ್.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.