ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡ್ಡಪ್ಪನ ಜರ್ಕ್‌

Last Updated 23 ಜುಲೈ 2019, 13:07 IST
ಅಕ್ಷರ ಗಾತ್ರ

ಗಡ್ಡಪ್ಪ ದ್ವಿಪಾತ್ರದಲ್ಲಿ ಅಭಿನಯಿಸಿರುವ ‘ಜರ್ಕ್’ ಸಿನಿಮಾ ಈ ವಾರ (ಜುಲೈ 26) ತೆರೆಗೆ ಬರುತ್ತಿದೆ. ಅಂದಹಾಗೆ, ಜರ್ಕ್‌ ಅಂದರೆ ಏನು? ಹಾಗಂದರೆ ಎಲ್ಲರ ಜೀವನದಲ್ಲೂ ಎದುರಾಗಬಹುದಾದ ಒಂದು ಶಾಕ್‌ ಎಂದು ಹೇಳಿದೆ ಚಿತ್ರತಂಡ.

ಈ ಸಿನಿಮಾ ನಿರ್ದೇಶನ ಮಹಾಂತೇಶ್ ಮದಕರಿ ಅವರದ್ದು. ‘ಚಿತ್ರದಲ್ಲಿ ಅರವತ್ತೆರಡು ದೃಶ್ಯಗಳು ಇವೆ. ಜೀವನದಲ್ಲಿ ಅಡೆತಡೆಗಳು ಎದುರಾಗುತ್ತಿರುತ್ತವೆ. ಆದರೆ ಅಂಥವನ್ನೆಲ್ಲ ಮೀರಿ ಮುಂದೆ ಸಾಗುತ್ತಿರಬೇಕು ಎನ್ನುವುದು ಸಿನಿಮಾ ನೀಡುವ ಸಂದೇಶ’ ಎಂದರು ಮಹಾಂತೇಶ್.

ನೆ.ಲ. ನರೇಂದ್ರ ಬಾಬು ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ಚಿತ್ರದ ದ್ವಿತೀಯಾರ್ಧಕ್ಕೆ ಅವರೇ ನಾಯಕರಂತೆ. ‘ಸಿನಿಮಾ ಕಥೆ ಕೇಳಿದಾಗ ತುಸು ವಿಚಿತ್ರ ಅನಿಸಿತು. ಈ ರೀತಿಯ ಸಿನಿಮಾ ಮಾಡಲು ಸಾಧ್ಯವೇ ಎಂದು ನಿರ್ದೇಶಕರನ್ನು ಕೇಳಿದ್ದೆ. ಸಾಧ್ಯವಿದೆ ಎಂದು ಅವರು ಉತ್ತರಿಸಿದ್ದರು’ ಎಂದು ಮೈಕ್‌ ಕೈಗೆತ್ತಿಕೊಂಡ ತಕ್ಷಣ ಹೇಳಿದರು ಬಾಬು.

ಅವರದ್ದು ಇದರಲ್ಲಿ ರಾಮನಗರ ತಾಲ್ಲೂಕಿನ ಒಂದು ಊರಿನ ಪ್ರಮುಖನ ಪಾತ್ರ. ಆತ ಒಂದಿಷ್ಟು ಆದರ್ಶಗಳನ್ನು ಇರಿಸಿಕೊಂಡು ಬದುಕುವವ. ‘ಹೊಸಬರನ್ನು ಇಟ್ಟುಕೊಂಡು ಸಿನಿಮಾ ಮಾಡಿ ವೀಕ್ಷಕರನ್ನು ಮೆಚ್ಚಿಸುವುದು ಸುಲಭದ ಕೆಲಸ ಅಲ್ಲ. ಆದರೆ ಈ ಸಿನಿಮಾ ಚೆನ್ನಾಗಿ ಮಾಡಿದ್ದಾರೆ’ ಎಂದು ಮೆಚ್ಚುಗೆ ಸೂಚಿಸಿದರು.

ಮಹಾಂತೇಶ್ ಅವರು ಮೊದಲು ಬಾಬು ಅವರನ್ನು ಭೇಟಿಯಾದಾಗ, ‘ಕಥೆಯ ರೂಪದಲ್ಲಿ ಹೇಳಿದ್ದನ್ನೆಲ್ಲ ತೆರೆಯ ಮೇಲೆ ತೋರಿಸುತ್ತೀರಾ’ ಎಂದು ಕೇಳಿದ್ದರಂತೆ. ಅವರ ಪ್ರಶ್ನೆಯನ್ನೇ ಮಹಾಂತೇಶ್ ಅವರು ಸವಾಲಾಗಿ ಸ್ವೀಕರಿಸಿದರಂತೆ. ಬಾಬು ಅವರು ಈ ಸಿನಿಮಾದಲ್ಲಿ ನಟಿಸಿರುವುದನ್ನು ಬಹಿರಂಗಪಡಿಸಬಾರದು ಅಂದುಕೊಂಡಿದ್ದರಂತೆ. ‘ರಂಗಿತರಂಗ’ ಚಿತ್ರದಲ್ಲಿ ಸಾಯಿಕುಮಾರ್ ನಟಿಸಿದ್ದನ್ನು ಗುಟ್ಟಾಗಿ ಇರಿಸಿದಂತೆ ಈ ಚಿತ್ರದಲ್ಲಿಯೂ ಮಾಡಬೇಕು ಎಂಬುದು ಅವರ ಆಲೋಚನೆ ಆಗಿತ್ತು.

ಚಿತ್ರದ ನಾಯಕ ಕೃಷ್ಣರಾಜು. ಆಶಾ ಭಂಡಾರಿ ಮತ್ತು ನಿತ್ಯಾ ರಾಜ್ ನಾಯಕಿಯರು. ‘ಕೆಎಎಸ್‌ ಮಾಡಲು ದಾವಣಗೆರೆಯಿಂದ ಬರುವ ಯುವಕನ ಪಾತ್ರ ನನ್ನದು’ ಎಂದರು ಕೃಷ್ಣರಾಜು. ‘ನನ್ನದು ಸನ್ನಿಧಿ ಎಂಬ ಪಾತ್ರ. ಸಾಮಾಜಿಕ ಜಾಗೃತಿ ಮೂಡಿಸಲು ಕೆಲಸ ಮಾಡುವ ‍ಪಾತ್ರ ಇದು’ ಎಂದರು ನಿತ್ಯಾ. ಆಶಾ ಅವರಿದೆ ಇದು ಮೊದಲ ಸಿನಿಮಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT