‘ಬುಲ್ ಬುಲ್’, ‘ಕೃಷ್ಣ’, ‘ಚೆಲ್ಲಾಟ’ ಮೊದಲಾದ ಸಿನಿಮಾಗಳನ್ನು ನಿರ್ದೇಶಿಸಿದ್ದ ಜನಪ್ರಿಯ ನಿರ್ದೇಶಕ ಎಂ.ಡಿ. ಶ್ರೀಧರ್ ಒಂದು ವಿರಾಮದ ಬಳಿಕ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ಅವರ ನಿರ್ದೇಶನದ ‘ಜಂಬೂ ಸರ್ಕಸ್’ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ.
ಹಾಸ್ಯದೊಂದಿಗೆ ಡ್ರಾಮಾ ಕಥೆ ಹೊಂದಿರುವ ಚಿತ್ರಕ್ಕೆ ಹೆಚ್.ಸಿ.ಸುರೇಶ್ ಅವರು ಮಹತಿ ಕಂಬೈನ್ಸ್ ಮೂಲಕ ಬಂಡವಾಳ ಹೂಡಿದ್ದಾರೆ. ಪ್ರವೀಣ್ ತೇಜ್ ನಾಯಕನಾಗಿದ್ದು, ಅಂಜಲಿ ಎಸ್.ಅನೀಶ್ ನಾಯಕಿಯಾಗಿದ್ದಾರೆ.
‘ಒಡೆಯ’ ಚಿತ್ರದ ನಂತರ ಗ್ಯಾಪ್ ತೆಗೆದುಕೊಂಡು ಈ ಚಿತ್ರ ಮಾಡಿದ್ದೇನೆ. ‘ಜಂಬೂ ಸರ್ಕಸ್’ ಸಿನಿಮಾ ಆಗಲು ಕಾರಣ ನಿರ್ಮಾಪಕರು. ಕೆಲ ವರ್ಷಗಳ ಹಿಂದೆ ಬೇರೆ ಸಿನಿಮಾಗಾಗಿ ಅಡ್ವಾನ್ಸ್ ಕೊಟ್ಟಿದ್ದರು. ಆ ಚಿತ್ರ ಆಗಿರಲಿಲ್ಲ. ಆ ಕಮಿಟ್‌ಮೆಂಟ್ ಮೇಲೆ ಈ ಸಿನಿಮಾ ಮಾಡಿದ್ದೇವೆ. ಇದು ಗೆಳೆಯರಿಬ್ಬರ ಕಥೆ. ಒಂದೇ ಶಾಲೆ, ಕಾಲೇಜ್‌ನಲ್ಲಿ ಓದಿ, ಒಂದೇ ಮಂಟಪದಲ್ಲಿ ಒಂದೇ ದಿನ ಮದುವೆ ಆಗುತ್ತಾರೆ. ನಂತರ ಏನೆಲ್ಲ ಆಗುತ್ತದೆ ಎಂಬುದನ್ನು ಚಿತ್ರದಲ್ಲಿಯೇ ನೋಡಬೇಕು’ ಎಂದರು ನಿರ್ದೇಶಕರು.
‘ನನಗೆ ‘ಜಾಲಿ ಡೇಸ್’ ಸಿನಿಮಾ ದಿನಗಳು ನೆನಪಿಗೆ ಬರುತ್ತಿದೆ. ನಾನು ಚಿತ್ರರಂಗಕ್ಕೆ ಬಂದು 15 ವರ್ಷ ಆಯ್ತು. ನನ್ನ ಮೊದಲ ಸಿನಿಮಾ ನಿರ್ದೇಶಕರ ಜೊತೆ ಮತ್ತೆ ಸಿನಿಮಾ ಮಾಡಿದ್ದು ಒಂದು ರೀತಿ ವಿಶೇಷ’ ಎಂದರು ಪ್ರವೀಣ್ ತೇಜ್.
ವಾಸುಕಿ ವೈಭವ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಕೃಷ್ಣ ಕುಮಾರ್ (ಕೆ.ಕೆ) ಛಾಯಾಚಿತ್ರಗ್ರಹಣ, ಜ್ಞಾನೇಶ್ ಸಂಕಲನವಿದೆ.