ಶನಿವಾರ, ಡಿಸೆಂಬರ್ 7, 2019
21 °C

ಕಬ್ಜದಲ್ಲಿ ‘ಓಂ’ ಛಾಯೆ?!

Published:
Updated:
Prajavani

ನಿರ್ದೇಶಕ ಆರ್. ಚಂದ್ರು ಅವರಿಗೆ ‘ಓಂ’ ತರಹದ ಮಾಸ್‌ ಸಿನಿಮಾ ಮಾಡುವ ಆಸೆ ಇತ್ತು. ಅವರು ಮಾಡಬೇಕು ಎಂದು ತೀರ್ಮಾನಿಸಿದ್ದ ಚಿತ್ರದ ಕಥೆ ಕೂಡ ಸಿದ್ಧವಾಗಿತ್ತು. ಅದನ್ನು ಅವರು ಉಪೇಂದ್ರ ಅವರಲ್ಲಿ ಮೂರು ವರ್ಷಗಳ ಹಿಂದೆಯೇ ಹೇಳಿದ್ದರು ಕೂಡ.

ಈಗ ಆ ಹೊಸ ಸಿನಿಮಾ ಮಾಡಲು ಕಾಲ ಕೂಡಿ ಬಂದಿದ್ದು, ಹೊಸ ಸಿನಿಮಾಕ್ಕೆ ‘ಕಬ್ಜ’ ಎಂಬ ಹೆಸರು ನೀಡಲಾಗಿದೆ. ‘ಓಂ’ ಸಿನಿಮಾದಲ್ಲಿ ಇರುವಂತೆಯೇ ‘ಕಬ್ಜ’ದಲ್ಲಿ ಕೂಡ ರೌಡಿಸಂ ಮತ್ತು ಭಾವುಕ ಪ್ರೀತಿಯ ಕಥೆಯ ಮಿಶ್ರಣ ಇರಲಿದೆ ಎಂದು ಚಂದ್ರು ಹೇಳಿಕೊಂಡಿದ್ದಾರೆ. ತಾವು ನಿರ್ದೇಶಿಸಿರುವ, ಉಪೇಂದ್ರ ಅಭಿನಯದ ‘ಐ ಲವ್ ಯು’ ಚಿತ್ರ ಪ್ರದರ್ಶನ ಕಾಣುತ್ತಿರುವಾಗಲೇ ಹೊಸ ಸಿನಿಮಾ ಘೋಷಣೆಯನ್ನೂ ಮಾಡಿದ್ದಾರೆ ಚಂದ್ರು.

ಹೊಸ ಸಿನಿಮಾ ‘ಕಬ್ಜ’ ಕುರಿತು ವಿವರಣೆಯನ್ನು ಚಂದ್ರು ಅವರು ನೀಡಿದ್ದು ‘ಐ ಲವ್ ಯು’ ಚಿತ್ರದ ಶತದಿನೋತ್ಸವ ಸಂಭ್ರಮದ ಸಂದರ್ಭದಲ್ಲಿ.

ಅವರು ಉಪೇಂದ್ರ ಜೊತೆ ಸೇರಿ ಮಾಡಿದ್ದ ‘ಬ್ರಹ್ಮ’ ಸಿನಿಮಾ ಹಿಟ್ ಆಗಿತ್ತು. ‘ಐ ಲವ್ ಯು’ ಕೂಡ ಹಿಟ್ ಆಗಿದೆ. ಹಾಗಾಗಿ, ಮತ್ತೆ ಉಪೇಂದ್ರ ಜೊತೆ ಸೇರಿ ಸಿನಿಮಾ ಮಾಡುತ್ತಿರುವುದಾಗಿ ಹೇಳಿದರು ಚಂದ್ರು.

‘ಉಪೇಂದ್ರ ಅವರಲ್ಲಿ ತಾವು ಮಾಡಬೇಕಿರುವ ಕೆಲಸಗಳ ಕುರಿತು ಸ್ಪಷ್ಟತೆ ಇದೆ’ ಎಂದು ಹೊಗಳಿದರು.

ಕಬ್ಜ ಚಿತ್ರ ಏಳು ಭಾಷೆಗಳಲ್ಲಿ ಸಿದ್ಧವಾಗಲಿದೆ. ಇದಕ್ಕೆ ಕಾರಣ ಏನು ಎಂಬುದನ್ನೂ ಚಂದ್ರು ಹೇಳಿದ್ದಾರೆ. ‘ಐ ಲವ್ ಯು ಚಿತ್ರವು ತೆಲುಗು ಭಾಷಿಗರ ಪ್ರದೇಶಗಳಲ್ಲಿ ಒಳ್ಳೆಯ ಆದಾಯ ಗಳಿಸಿದೆ. ಹಾಗಾಗಿಯೇ, ಹೊಸ ಸಿನಿಮಾವನ್ನು ಕನ್ನಡ, ತೆಲುಗು ಸೇರಿದಂತೆ ಏಳು ಭಾಷೆಗಳಲ್ಲಿ ಸಿದ್ಧಪಡಿಸುವ ತೀರ್ಮಾನಕ್ಕೆ ಬಂದೆವು’ ಎಂದರು.

‘ಇಂದಿನ ಸಿನಿಮಾಗಳಲ್ಲಿ ವೇಗ ಇದೆ. ಈಗ ಹೊಸ ಬಗೆಯ ಸಿನಿಮಾಗಳು ಬರುತ್ತಿವೆ. ಹಾಗಾಗಿ ನಾವು ಭಿನ್ನ ರೀತಿಯಲ್ಲಿ ಸಿನಿಮಾ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ. ಇದು ಬಹಳ ದೊಡ್ಡ ಯೋಜನೆ’ ಎಂದು ಖುಷಿಯಿಂದ ಹೇಳಿಕೊಂಡರು ಉಪ್ಪಿ.

‘ಓಂ’ ಚಿತ್ರವನ್ನು ನಿರ್ದೇಶಿಸಿದ್ದು ಉಪೇಂದ್ರ. ಇದು ಅವರ ನಿರ್ದೇಶನದ, ಬಾಕ್ಸ್ ಆಫೀಸ್ ಹಿಟ್ ಚಿತ್ರಗಳ ಪೈಕಿ ಒಂದು. ಶಿವರಾಜ್ ಕುಮಾರ್ ಮತ್ತು ಪ್ರೇಮಾ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು