ಗುರುವಾರ , ನವೆಂಬರ್ 21, 2019
21 °C

ಚಂದ್ರು-ಉಪೇಂದ್ರ ಜೋಡಿಯ ಹೊಸ ಸಿನಿಮಾ ‘ಕಬ್ಜ’

Published:
Updated:
Prajavani

ನಿರ್ದೇಶಕ ಆರ್. ಚಂದ್ರು ಮತ್ತು ನಟ ಉಪೇಂದ್ರ ಜೋಡಿ ಇನ್ನೊಂದು ಸಿನಿಮಾ ಮಾಡಲಿದೆ. ಇದು ಕನ್ನಡ ಸೇರಿದಂತೆ ಭಾರತದ ಏಳು ಭಾಷೆಗಳಲ್ಲಿ ಸಿದ್ಧವಾಗಲಿದೆ.

ಚಂದ್ರು ನಿರ್ದೇಶನದ, ಉಪೇಂದ್ರ ನಾಯಕನಾಗಿ ಅಭಿನಯಿಸಿರುವ ‘ಐ ಲವ್ ಯು’ ಚಿತ್ರದ ಶತದಿನೋತ್ಸವ ಆಚರಣೆಯ ಸಂದರ್ಭದಲ್ಲಿ ಹೊಸ ಸಿನಿಮಾ ಘೋಷಣೆ ಹಾಗೂ ಅದರ ಶೀರ್ಷಿಕೆ ಅನಾವರಣ ಕೂಡ ನಡೆಯಿತು. ಹೊಸ ಸಿನಿಮಾಕ್ಕೆ ‘ಕಬ್ಜ’ ಎಂದು ಹೆಸರಿಡಲಾಗಿದೆ.

ಶೀರ್ಷಿಕೆಯ ಪೋಸ್ಟರ್‌ನಲ್ಲಿ ಉಪೇಂದ್ರ ಅವರು ಲಾಂಗ್ ಹಿಡಿದುಕೊಂಡು, ನಡೆದುಬರುತ್ತಿರುವ ಚಿತ್ರ ಇದೆ. ಹಾಗಾಗಿ, ರೌಡಿಸಂ ಅಂಶ ಇರುವ ಚಿತ್ರ ಇದು ಎಂದು ಊಹಿಸಲು ಅಡ್ಡಿಯಿಲ್ಲ. ಕಥೆಯ ಎಳೆ ಏನು ಎಂಬುದನ್ನು ಚಂದ್ರು ಮತ್ತು ಉಪೇಂದ್ರ ಗುಟ್ಟಾಗಿಯೇ ಇರಿಸಿದ್ದಾರೆ.

ರೌಡಿಸಂ ಜೊತೆಯಲ್ಲೇ ಇದರಲ್ಲಿ ಒಂದು ಪ್ರೇಮಕಥೆ ಕೂಡ ಇರಬಹುದು ಎಂಬ ಸೂಚನೆ ನೀಡಿದರು ಚಂದ್ರು. ಕುತೂಹಲದ ಅಂಶವೆಂದರೆ, ಉಪೇಂದ್ರ ನಿರ್ದೇಶನದ ‘ಓಂ’ ಚಿತ್ರದಲ್ಲಿ ಕೂಡ ರೌಡಿಸಂ ಮತ್ತು ಪ್ರೀತಿಯ ಕಥೆ ಇತ್ತು. ಅದರಲ್ಲಿ ಶಿವರಾಜ್ ಕುಮಾರ್ ಅವರು ನಾಯಕನಾಗಿ ಅಭಿನಯಿಸಿದ್ದರು. ಇದು ಹಿಟ್ ಸಿನಿಮಾಗಳಲ್ಲಿ ಒಂದು.

‘ಕಬ್ಜ’ ಚಿತ್ರವು ಕನ್ನಡ, ತೆಲುಗು, ಮಲಯಾಳ, ತಮಿಳು, ಮರಾಠಿ, ಹಿಂದಿ ಮತ್ತು ಬಂಗಾಳಿ ಭಾಷೆಗಳಲ್ಲಿ ಸಿದ್ಧವಾಗಲಿದೆ. ಇಷ್ಟೇ ಅಲ್ಲ, ಚಿತ್ರವನ್ನು ಚೈನೀಸ್ ಭಾಷೆಯಲ್ಲಿ ಸಿದ್ಧಪಡಿಸುವ ಆಲೋಚನೆ ಕೂಡ ಚಂದ್ರು ಅವರಲ್ಲಿ ಇದೆ.

ಪ್ರತಿಕ್ರಿಯಿಸಿ (+)