ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸ್ಯ ಸಾಮ್ರಾಟ, ನವಿರು ಸಂಭಾಷಣೆಕಾರ ಖಾದರ್ ಖಾನ್‌

Last Updated 1 ಜನವರಿ 2019, 20:15 IST
ಅಕ್ಷರ ಗಾತ್ರ

ನವದೆಹಲಿ/ಮುಂಬೈ: ಎಂಬತ್ತು ಮತ್ತು ತೊಂಬತ್ತರ ದಶಕದಲ್ಲಿ ನಟ ಗೋವಿಂದ ಮತ್ತು ಹಾಸ್ಯನಟ ಖಾದರ್‌ ಖಾನ್‌ ಹಿಂದಿ ಚಿತ್ರರಂಗದ ಅತ್ಯಂತ ಯಶಸ್ವಿ ಜೋಡಿ ಎನಿಸಿಕೊಂಡಿತ್ತು.

ಹಿಟ್‌ ಮೇಲೆ ಹಿಟ್‌ ಚಿತ್ರ ನೀಡಿದ ಈ ಜೋಡಿ ತೆರೆಯ ಮೇಲೆ ಕಾಣಿಸಿ ಕೊಂಡರೆ ಸಾಕು ಪ್ರೇಕ್ಷಕರಿಗೆ ಕಚಗುಳಿ ಇಟ್ಟಂತಾಗುತ್ತಿತ್ತು. ಸಿನಿಮಾ ಮಂದಿರಗಳಲ್ಲಿ ಶಿಳ್ಳೆ, ಚಪ್ಪಾಳೆಗಳ ಸುರಿಮಳೆಯಾಗುತ್ತಿತ್ತು.

ಇಬ್ಬರ ಹಾಸ್ಯ ಸಂಭಾಷಣೆಯ ಜುಗಲ್‌ಬಂದಿ ಕೆಳಲಿಕ್ಕಾಗಿಯೇ ಜನರು ಥಿಯೇಟರ್‌ಗಳಿಗೆ ಬರುತ್ತಿದ್ದರು. ಅವರು ಕೊಟ್ಟ ಕಾಸಿಗೆ ಮೋಸ ಆಗುತ್ತಿರಲಿಲ್ಲ. ಪಡ್ಡೆ ಹುಡುಗರಷ್ಟೇ ಅಲ್ಲ, ಎಲ್ಲ ವಯೋಮಾನದವರು ಹೊಟ್ಟೆ ಹುಣ್ಣಾಗುವಂತೆ ನಕ್ಕು ಮನೆಗೆ ತೆರಳುತ್ತಿದ್ದರು. ಎಲ್ಲಿಯೂ ಅಶ್ಲೀಲ ಸಂಭಾಷಣೆಗಳಿರುತ್ತಿರಲಿಲ್ಲ. ಎಲ್ಲವೂ ನವಿರಾದ ಕಚಗುಳಿ ಇಡುವ ಹಾಸ್ಯ. ಬಹುತೇಕ ಚಿತ್ರಗಳಿಗೆ ನವೀರಾದ ಹಾಸ್ಯ ಸಂಭಾಷಣೆಗಳನ್ನು ಬರೆದದ್ದು ಸ್ವತಃ ಖಾದರ್‌ ಖಾನ್‌.

90ರ ದಶಕದಲ್ಲಿ ಖಾದರ್‌ ಖಾನ್‌, ಗೋವಿಂದ ಮತ್ತು ನಿರ್ದೇಶಕ ಡೇವಿಡ್‌ ಧವನ್‌ ಜೋಡಿ ‘ಕೂಲಿ ನಂ. 1’, ‘ರಾಜಾ ಬಾಬು’, ‘ಸಾಜನ್‌ ಚಲೇ ಸಸುರಾಲ್‌’, ‘ದುಲ್ಹೆ ರಾಜಾ’ ಹೀಗೆ ಒಂದಾದ ಮೇಲೆ ಒಂದರಂತೆ ಹಿಟ್‌ ಚಿತ್ರಗಳನ್ನು ನೀಡಿದರು.

ಗೋವಿಂದ –ಖಾದರ್‌ ಖಾನ್‌ ಜೋಡಿಯಾಗಿ ನಿರ್ವಹಿಸಿದ ಮಾವ–ಅಳಿಯ, ತಂದೆ– ಮಗ, ಮಾಲೀಕ– ನೌಕರ ಹೀಗೆ ವೈವಿಧ್ಯಮಯವಾದ ಪಾತ್ರಗಳು ಹಾಸ್ಯವನ್ನು ಉಣಬಡಿಸಿವೆ.

ಬಾಲಿವುಡ್‌ ಪ್ರವೇಶಿಸುವ ಮೊದಲು ಖಾದರ್‌ ಖಾನ್‌ ಮುಂಬೈನ ಎಂ.ಎಚ್‌. ಸಾಬೂ ಸಿದ್ದಿಕ್‌ ಎಂಜಿನಿಯರಿಂಗ್‌ ಕಾಳೇಜಿನಲ್ಲಿ ಸಿವಿಲ್‌ ಎಂಜಿನಿಯರಿಂಗ್ ಪ್ರಾಧ್ಯಾಪಕರಾಗಿದ್ದರು.

70ರ ದಶಕದಲ್ಲಿ ಸಂಭಾಷಣಾಕಾರನಾಗಿ ಸಿನಿಮಾ ಜಗತ್ತು ಪ್ರವೇಶಿಸಿದ ಅವರು ನಂತರದಲ್ಲಿ ಚಿತ್ರಕಥೆ ಬರೆದರು. ಖಳನಟನಾಗಿಯೂ ಮಿಂಚಿದ್ದರು.

300ಕ್ಕೂ ಹೆಚ್ಚು ಚಿತ್ರಗಳಲ್ಲಿ ಖಳನಟನಾಗಿ, ಹಾಸ್ಯ ನಟನಾಗಿ ವೈವಿಧ್ಯಮಯ ಪೋಷಕ ಪಾತ್ರಗಳಿಗೆ ಜೀವ ತುಂಬಿದ ಅವರು 250ಕ್ಕೂ ಹೆಚ್ಚು ಚಿತ್ರಗಳಿಗೆ ಸಂಭಾಷಣೆ, ಚಿತ್ರಕಥೆ ಬರೆದಿದ್ದರು.

ಖಾದರ್‌ ಖಾನ್‌ ಅವರನ್ನು ಬಾಲಿವುಡ್‌ಗೆ ಪರಿಚಯಿಸಿದ್ದು ನಟ ದಿಲಿಪ್‌ ಕುಮಾರ್‌. 1970ರಲ್ಲಿ ಜಯಾ ಭಾಧುರಿ–ರಣಧೀರ್‌ ಕಪೂರ್‌ ನಟಿಸಿದ ’ಜವಾನಿ ದಿವಾನಿ’ ಚಿತ್ರಕ್ಕೆ ಚಿತ್ರಕಥೆ ಬರೆಯುವ ಅವಕಾಶ ಸಿಕ್ಕಿತು. ಆ ನಂತರ ತೆರೆಕಂಡ ‘ಅಮರ್‌ ಅಕ್ಬರ್‌ ಅಂತೋನಿ’, ‘ಶೋಲಾ ಔರ್‌ ಶಬನಂ’ ಚಿತ್ರಗಳಿಗೆ ಅವರು ಬರೆದ ಡೈಲಾಗ್‌ ಎಲ್ಲರ ನಾಲಿಗೆ ಮೇಲೆ ನಲಿದಾಡಿದವು.

ಸಲೀಂ–ಜಾವೇದ್‌ ಜೋಡಿ ಬೇರೆಯಾದ ನಂತರ ಅಮಿತಾಬ್‌ ಬಚ್ಚನ್‌ ಅವರ ‘ಆ್ಯಂಗ್ರಿ ಯಂಗ್‌ಮ್ಯಾನ್‌’ ಇಮೇಜಿಗೆ ಹೊಂದಾಣಿಕೆಯಾಗುವಂತೆ ಸಂಭಾಷಣೆ ಬರೆಯುವ ಹೊಣೆ ಖಾದರ್‌ ಖಾನ್‌ ಹೆಗಲೇರಿತು. ‘ಶರಾಬಿ’, ‘ಲಾವಾರಿಸ್‌‘, ‘ಮುಕದ್ದರ್‌ ಕಾ ಸಿಕಂದರ್‌’, ‘ನಸೀಬ್‌’ ಮತ್ತು ‘ಅಗ್ನಿಪಥ್‌’ ಮೊದಲಾದ ಚಿತ್ರಗಳು ಅಮಿತಾಬ್‌ ಮತ್ತು ಖಾದರ್‌ ಖಾನ್‌ ಅವರಿಗೆ ಹೆಸರು ತಂದುಕೊಟ್ಟವು.

1973ರಲ್ಲಿ ರಾಜೇಶ್‌ ಖನ್ನಾ ಅವರ ‘ದಾಗ್‌’ ಚಿತ್ರದ ಪೋಷಕ ಪಾತ್ರದ ಮೂಲಕ ಖಾದರ್‌ ಖಾನ್‌ ನಟನೆಗೆ ಕಾಲಿಟ್ಟರು. ಅಮಿತಾಬ್‌ ಬಚ್ಚನ್‌ ಜತೆ ‘ದೊ ಔರ್‌ ದೊ ಪಾಂಚ್‌, ‘ಸುಹಾಗ್’, ‘ಕೂಲಿ’, ‘ಮಿಸ್ಟರ್‌ ನಟವರ್‌ ಲಾಲ್‌’, ‘ದಿವಾನಾ‘, ‘ಮುಕದ್ದರ್‌ ಕಾ ಸಿಕಂದರ್‌’ ಚಿತ್ರಗಳಲ್ಲಿಯ ಅವರ ನಟನೆ ಸದಾ ನೆನಪಿನಲ್ಲಿ ಉಳಿಯುತ್ತದೆ.

90 ದಶಕದಲ್ಲಿ ಖಾದರ್‌ ಖಾನ್ ಇಲ್ಲದ ಹಿಂದಿ ಚಿತ್ರಗಳಿರುತ್ತಿರಲಿಲ್ಲ. ಅವರಿದ್ದರೆ ಹಾಸ್ಯಕ್ಕೆ ಕೊರತೆ ಇರುತ್ತಿರಲಿಲ್ಲ. ‘ಕಿಶನ್ ಕನ್ಹಯ್ಯಾ’, ‘ಬೋಲ್‌ ರಾಧಾ ಬೋಲ್‌’, ‘ಆಂಖೆ‘, ‘ಕೂಲಿ ನಂ.1’, ‘ಹೀರೊ ನಂ. 1‘, ‘ದುಲ್ಹೆ ರಾಜಾ‘ ಚಿತ್ರಗಳಲ್ಲಿ ಅವರು ಮನೋಜ್ಞ ಅಭಿನಯ ನೀಡಿದ್ದರು.

‘ಮುಕದ್ದರ್‌ ಕಾ ಸಿಕಂದರ್‌’ ಚಿತ್ರದ ಸೂಫಿ ಸಂತನ ಪಾತ್ರ, ‘ತಕದೀರ್‌ವಾಲಾ’ ಚಿತ್ರದಲ್ಲಿಯ ಯಮರಾಜ, ‘ಖೂನ್‌ ಭರಿ ಮಾಂಗ್‌’ನ ಆಸೆಬುರುಕ ನೌಕರ, ‘ಹೀರೊ ನಂ. 1’ ಚಿತ್ರದ ತಂದೆಯ ಪಾತ್ರ ಮತ್ತು ‘ಮುಜಸೇ ಶಾದಿ ಕರೋಗೆ’ ಚಿತ್ರದ ದುಗ್ಗಲ್‌ ಸಾಬ್‌ ಪಾತ್ರಗಳು ಚಿರಕಾಲ ಪ್ರೇಕಕರ ಮನಸಿನಲ್ಲಿ ನಿಲ್ಲುತ್ತವೆ.

1991ರಲ್ಲಿ ಬಿಡುಗಡೆಯಾದ ’ಬಾಪ್‌ ನಂಬರಿ ಬೇಟಾ ದಸ್‌ ನಂಬರಿ’ ಚಿತ್ರದಲ್ಲಿ ತಂದೆಯ ಪಾತ್ರಕ್ಕೆ ಉತ್ತಮ ಹಾಸ್ಯನಟ ಪ್ರಶಸ್ತಿ ಸಂದಿತ್ತು. 1982ರಲ್ಲಿ ಬಿಡುಗಡೆಯಾದ ‘ಮೇರಿ ಆವಾಜ್‌ ಸುನೊ’ ಮತ್ತು 1993ರಲ್ಲಿ ಬಿಡುಗಡೆಯಾದ ‘ಅಂಗಾರ್’ ಸಿನಿಮಾ ಸಂಭಾಷಣೆಗಾಗಿ ಫಿಲ್ಮ್‌ಫೇರ್‌ ಪ್ರಶಸ್ತಿ ಪಡೆದಿದ್ದರು.

2017ರಲ್ಲಿ ತೆರೆಕಂಡ ‘ಮಸ್ತಿ ನಹಿ ಸಸ್ತಿ’ ಖಾದರ್‌ ಖಾನ್‌ ಬಣ್ಣ ಹಚ್ಚಿದ ಕೊನೆಯ ಚಿತ್ರವಾಗಿತ್ತು. ಅದಕ್ಕೂ ಮೊದಲು 2015ರಲ್ಲಿ ‘ತೇವರ್‌’ ಎಂಬ ಚಿತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು. ‌ಆ ನಂತರ ಮತ್ತೆಂದೂ ಅವರು ಬಣ್ಣ ಹಚ್ಚಲಿಲ್ಲ. ಪೆನ್ನೂ ಹಿಡಿಯಲಿಲ್ಲ.

ಕಾಲ ಸರಿದಂತೆ ಖಾದರ್‌ ಖಾನ್‌ ಕೂಡ ತೆರೆಯ ಮರೆಗೆ ಸರಿದು ಹೋದರು. ಮುಪ್ಪು ಅವರನ್ನು ಆವರಿಸಿತ್ತು. ಲೇಖನಿ ಮೊದಲಿನ ಹರಿತ ಕಳೆದುಕೊಂಡಿತ್ತು. ಅನಾರೋಗ್ಯ ಇನ್ನಿಲ್ಲದಂತೆ ಕಾಡಿತ್ತು. ದೇಹದ ಶಕ್ತಿಯೂ ಕುಂದಿತ್ತು. ಇದರಿಂದಾಗಿ ಚಿತ್ರಗಳ ಸಂಖ್ಯೆ ಕೂಡ ಕಡಿಮೆಯಾಗಿತ್ತು.

ಕೆಲವು ವರ್ಷಗಳ ಹಿಂದೆ ಕೆನಡಾದಲ್ಲಿದ್ದ ಮಗನ ಬಳಿ ತೆರಳಿದ್ದರು. ಹೊಸ ವರ್ಷಕ್ಕೂ ಮುನ್ನ ಕೋಮಾಕ್ಕೆ ಜಾರಿದ್ದ ಖಾದರ್‌ ಖಾನ್‌ ಸುರ್ಯೋದಯವನ್ನು ನೋಡಲೇ ಇಲ್ಲ.

ಹಲವು ದಶಕಗಳ ಕಾಲ ಚಿತ್ರರಸಿಕರನ್ನು ನಗೆಗಡಲಲ್ಲಿ ತೇಲಿಸಿದ್ದ ಹಾಸ್ಯನಟನೊಬ್ಬ ದೂರದ ಟೊರೆಂಟೊದಲ್ಲಿ ಸದ್ದಿಲ್ಲದೆ ತೆರೆಯ ಮರೆಗೆ ಸರಿದು ಹೋದ. ಮುಖಕ್ಕೆ ಮತ್ತೆ ಬಣ್ಣ ಹಚ್ಚುವ, ಪೆನ್ನು ಸಾಣೆ ಹಿಡಿಯುವ ಅವರ ಕನಸು ಕೊನೆಗೂ ನನಸಾಗಲೇ ಇಲ್ಲ. ಆ ಕೊರಗು ಅವರನ್ನು ಕೊನೆಯವರೆಗೂ ಕಾಡುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT